ಇದೇ ಜೂನ್ 21 ರಂದು ನಡೆಯಲಿರುವ NEET-UG 2026 ಮರುಪರೀಕ್ಷೆಯ ಹಿನ್ನೆಲೆಯಲ್ಲಿ, ಪ್ರಶ್ನೆ ಪತ್ರಿಕೆ ಸೋರಿಕೆ ವದಂತಿ ಹಾಗೂ ವಂಚನೆ ಜಾಲಕ್ಕೆ ಕಡಿವಾಣ ಹಾಕಲು ಜನಪ್ರಿಯ ಮೆಸೆಜಿಂಗ್ ಆ್ಯಪ್ ‘ಟೆಲಿಗ್ರಾಮ್’ ಬಳಕೆಯ ಮೇಲೆ ಭಾರತದಲ್ಲಿ ತಾತ್ಕಾಲಿಕ ನಿಷೇಧ ಹೇರಲಾಗಿದೆ.
NTA ಶಿಫಾರಸಿನ ಮೇರೆಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಜೂನ್ 30 ರವರೆಗೆ ಟೆಲಿಗ್ರಾಮ್‌ನಲ್ಲಿರುವ ‘ಮೆಸೇಜ್ ಎಡಿಟಿಂಗ್’ (ಸಂದೇಶ ತಿದ್ದುಪಡಿ) ವೈಶಿಷ್ಟ್ಯವನ್ನು ಭಾರತದಲ್ಲಿ ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುವಂತೆ ಆ್ಯಪ್ ಸಂಸ್ಥೆಗೆ ಸೂಚನೆ ನೀಡಿದೆ.
ಪರೀಕ್ಷಾ ಅಕ್ರಮ ಎಸಗುವ ಸಂಘಟಿತ ಜಾಲಗಳು ಟೆಲಿಗ್ರಾಮ್‌ನ ಮೆಸೇಜ್ ಎಡಿಟಿಂಗ್ ವೈಶಿಷ್ಟ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಎನ್‌ಟಿಎ ನೀಡಿರುವ ಮಾಹಿತಿ ಪ್ರಕಾರ, ಪರೀಕ್ಷೆ ಮುಗಿದ ನಂತರ ಚಾನೆಲ್ ಅಡ್ಮಿನ್‌ಗಳು ಹಳೆಯ ಪೋಸ್ಟ್‌ಗಳನ್ನು ಎಡಿಟ್ ಮಾಡಿ, ಅದರಲ್ಲಿದ್ದ ಫೈಲ್‌ಗಳ ಜಾಗದಲ್ಲಿ ಅಸಲಿ ಪ್ರಶ್ನೆ ಪತ್ರಿಕೆಯನ್ನು ಅಪ್‌ಲೋಡ್ ಮಾಡುತ್ತಿದ್ದರು. ಹೀಗೆ ಎಡಿಟ್ ಮಾಡಿದಾಗ ಆ ಪೋಸ್ಟ್‌ನ ಹಳೆಯ ಸಮಯ (Timestamp) ಹಾಗೇ ಇರುತ್ತಿತ್ತು. ಇದನ್ನು ತೋರಿಸಿ, “ನೋಡಿ, ಪರೀಕ್ಷೆಗೂ ಮುನ್ನವೇ ನಮ್ಮ ಬಳಿ ಪ್ರಶ್ನೆ ಪತ್ರಿಕೆ ಲೀಕ್ ಆಗಿತ್ತು” ಎಂದು ವಿದ್ಯಾರ್ಥಿಗಳನ್ನು ನಂಬಿಸಿ ವಂಚಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಪರೀಕ್ಷೆಯ ನಂತರದ ದಿನಗಳಲ್ಲಿ ಇಂತಹ ನಕಲಿ ಸಾಕ್ಷಿಗಳನ್ನು ಸೃಷ್ಟಿಸುವುದನ್ನು ತಡೆಯಲು ಜೂನ್ 30ರವರೆಗೆ ಈ ಫೀಚರ್ ಅನ್ನು ಲಾಕ್ ಮಾಡಲಾಗಿದೆ.
‘ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್’ (I4C) ನೇತೃತ್ವದಲ್ಲಿ ಟೆಲಿಗ್ರಾಮ್ ಆಧಾರಿತ ನಕಲಿ ಚಾನೆಲ್‌ಗಳು ಮತ್ತು ಬಾಟ್‌ಗಳ (Bots) ವಿರುದ್ಧ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆದಿದೆ. ಈಗಾಗಲೇ ನಕಲಿ ಪ್ರಶ್ನೆ ಪತ್ರಿಕೆ ನೀಡುವುದಾಗಿ ನಂಬಿಸಿದ್ದ ನೂರಾರು ಲಿಂಕ್‌ಗಳನ್ನು ಬ್ಲಾಕ್ ಮಾಡಲಾಗಿದೆ.
ಬಿಹಾರ ಪೊಲೀಸರು ಈಗಾಗಲೇ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇತ್ತ ಅಹಮದಾಬಾದ್ ನಗರದ ಸೈಬರ್ ಕ್ರೈಮ್ ಬ್ರಾಂಚ್ ಪೊಲೀಸರು ಅಂತರರಾಜ್ಯ ಸೈಬರ್ ವಂಚಕರ ಗ್ಯಾಂಗ್ ಒಂದನ್ನು ಬಂಧಿಸಿದ್ದಾರೆ. ಈ ಜಾಲವು ಕೇವಲ ಒಂದು ತಿಂಗಳ ಅವಧಿಯಲ್ಲಿ ಸುಮಾರು 1,000 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಿ, ಬರೋಬ್ಬರಿ 1.5 ಕೋಟಿ ರೂಪಾಯಿಗಳಷ್ಟು ಹಣದ ವಹಿವಾಟು ನಡೆಸಿರುವುದಾಗಿ ತಿಳಿಸಿದೆ.
ಇದನ್ನೂ ಓದಿ: 1250 ಅಷ್ಟಧಾತು ರಾಮಶಿಲೆಗಳು ನಾಪತ್ತೆ; ರಾಮನ ಹೆಸರಲ್ಲಿ 1989ರಿಂದಲೇ ಶುರುವಿತ್ತಾ ಚಂದಾ ಕಳ್ಳತನ?
ಮರುಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಒದಗಿಸುವುದಾಗಿ ನಂಬಿಸಿ ಕೆಲವು ಟೆಲಿಗ್ರಾಮ್ ಚಾನೆಲ್‌ಗಳು ಭರ್ಜರಿ ದಂಧೆಗೆ ಇಳಿದಿದ್ದವು. ವಿದ್ಯಾರ್ಥಿಗಳಿಂದ ಕೆಲವು ಸಾವಿರ ರೂಪಾಯಿಗಳಿಂದ ಹಿಡಿದು ಲಕ್ಷಾಂತರ ರೂಪಾಯಿಗಳವರೆಗೆ ಹಣದ ಬೇಡಿಕೆ ಇಡಲಾಗಿತ್ತು. ಆದರೆ ಇವೆಲ್ಲವೂ ಸಂಪೂರ್ಣ ನಕಲಿ ಮತ್ತು ವಂಚನೆಯ ಜಾಲ ಎಂದು ಎನ್‌ಟಿಎ ಎಚ್ಚರಿಸಿದೆ. ಸುರಕ್ಷಿತ ಪರೀಕ್ಷಾ ಪ್ರಕ್ರಿಯೆಯನ್ನು ಹೊರತುಪಡಿಸಿ ಬೇರೆಲ್ಲೂ ನೀಟ್ ಪ್ರಶ್ನೆ ಪತ್ರಿಕೆ ಲಭ್ಯವಿರಲು ಸಾಧ್ಯವಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಈ ಬ್ಯಾನ್‌ನಿಂದಾಗಿ ಸಾಮಾನ್ಯ ಟೆಲಿಗ್ರಾಮ್ ಬಳಕೆದಾರರಿಗೆ ತಾತ್ಕಾಲಿಕವಾಗಿ ತೊಂದರೆಯಾಗಲಿದ್ದು, ಪರೀಕ್ಷಾ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಜೂನ್ 22 ರ ನಂತರ ಎಂದಿನಂತೆ ಆ್ಯಪ್ ಲಭ್ಯವಾಗಲಿದೆ. ಅಲ್ಲದೆ ಮೆಸೇಜ್ ಎಡಿಟಿಂಗ್ ಬ್ಯಾನ್ ಆಗಿರುವುದರಿಂದ ಹೊಸದಾಗಿ ಸಂದೇಶ ಕಳುಹಿಸಲು ಅಥವಾ ಸ್ವೀಕರಿಸಲು ಯಾವುದೇ ತೊಂದರೆಯಾಗುವುದಿಲ್ಲ ಎಂದು ಎನ್‌ಟಿಎ ತಿಳಿಸಿದೆ.




