ಪರಿಶಿಷ್ಟ ಜಾತಿಯ ಮತಗಳನ್ನು ಕದಿಯಲು ಎಸ್ಐಆರ್ ಮಾಡುತ್ತಿದ್ದಾರೆ. ಅಕ್ರಮ ನಿವಾಸಿಗಳನ್ನು ಪತ್ತೆ ಹಚ್ಚುವ ನೆಪದಲ್ಲಿ ಈ ದೇಶದ ಮೂಲ ನಿವಾಸಿಗಳ ಮತದಾನದ ಹಕ್ಕನ್ನು ಕದಿಯುತ್ತಿದ್ದೀರಿ ಎಂದು ಮಾನವ ಬಂಧುತ್ವ ವೇದಿಕೆಯ ಮುಖಂಡ ಸೋಮಶೇಖರ್ ಬಣ್ಣದಮನೆ ಕಳವಳ ವ್ಯಕ್ತಪಡಿಸಿದರು.
ಎದ್ದೇಳು ಕರ್ನಾಟಕ ವತಿಯಿಂದ ಎಸ್ಐಆರ್ ವಿರೋಧಿ ಜನಜಾಗೃತ ಜಾಥಾವನ್ನು ಹಮ್ಮಿಕೊಳ್ಳಲಾಗಿದ್ದು, ಎಸ್ಐಆರ್ ವಿರೋಧಿ ಕರ್ನಾಟಕದ ಮಾರ್ಗ 1ರ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಜಾಗೃತ ಜಾಥಾ ನಡೆಯುತ್ತಿದ್ದು, ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಈ ಜಾಥಾಗೆ ಅಧಿಕೃತ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸೋಮಶೇಖರ್ ಬಣ್ಣದಮನೆ “ಕಳೆದ ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷೆ ಮಾಡಿದಷ್ಟು ಸೀಟ್ ಬರಲಿಲ್ಲ ಎಂದು ಎಸ್ಐಆರ್ ತಂದಿದ್ದಾರೆ. ಬುದ್ಧ, ಬಸವ ಹಾಗೂ ಅಂಬೇಡ್ಕರ್ ನಾಡಿನಲ್ಲಿ ನಿಮ್ಮ ಎಸ್ಐಆರ್ ನಾಟಕ ನಡೆಯದು” ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಎದ್ದೇಳು ಕರ್ನಾಟಕ ಸಂಘಟನೆಯ ದುರ್ಗೇಶ್ ಮಾತನಾಡಿ, “ಎಸ್ಐಆರ್ ವಿರೋಧಿಸಿ ನಮ್ಮ ಮತದಾನದ ಹಕ್ಕನ್ನು ರಕ್ಷಿಸಲು ಒಗ್ಗಟ್ಟಾಗೋಣ, 20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಪ್ರತಿರೋಧ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ” ಎಂದು ಕರೆ ನೀಡಿದರು.
ಸಾಹಿತಿಗಳಾದ ಬಿ.ಪೀರ್ ಭಾಷಾ ಅವರು ಮಾತನಾಡಿ “ಬಿಜೆಪಿಯವರಿಗೆ ಬೇಕಾಗಿದ್ದು ಸರ್ವಾಧಿಕಾರ. ಅದನ್ನು ಉಳಿಸಿಕೊಳ್ಳಲು ಈ ಎಸ್ಐಆರ್ ತಂದಿದ್ದಾರೆ. ಬಡವರು, ಹಿಂದುಳಿದವರು, ಮುಸಲ್ಮಾನ, ದಲಿತರ ಮತದಾನದ ಹಕ್ಕು ಕಿತ್ತುಕೊಂಡು ಸರ್ವಾಧಿಕಾರ ಧೋರಣೆ ಮಾಡುತ್ತಿದ್ದಾರೆ. ಎಸ್ಐಆರ್ ಎನ್ನುವುದು ಪ್ರಜಾಪ್ರಭುತ್ವಕ್ಕೆ ಉಣಿಸುವ ವಿಷ” ಎಂದು ಟೀಕಿಸಿದರು.
ಎಸ್ಡಿಪಿಐ ಜಿಲ್ಲಾಧ್ಯಕ್ಷರಾದ ಸದ್ದಾಂ ಅವರು ಮಾತನಾಡಿ, “ಎಸ್ಐಆರ್ ಎನ್ನುವುದು ಎನ್ಆರ್‌ಸಿ ಪ್ರಕ್ರಿಯೆಯ ಹಿಂಬಾಗಿಲು. ಸಮಾಜ ಒಡೆಯುವ ಶಕ್ತಿಗಳಿಗೆ ಬುದ್ದಿ ಕಲಿಸಿಯೇ ತೀರುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಜನಶಕ್ತಿ ಸಂಘಟನೆಯ ಚೆನ್ನಮ್ಮ ಮಾತನಾಡಿ, “ಅಮಾಯಕರನ್ನು ಮತದಾನದ ಹಕ್ಕಿನಿಂದ ದೂರ ಮಾಡುತ್ತಿರುವವರನ್ನು ಅಧಿಕಾರದಿಂದ ಇಳಿಸಬೇಕು” ಎಂದು ಅಭಿಪ್ರಾಯಿಸಿದರು.
ಈ ಸಂದರ್ಭದಲ್ಲಿ ಜನಶಕ್ತಿ, ಮಾನವ ಬಂಧುತ್ವ ವೇದಿಕೆ, ಎದ್ದೇಳು ಕರ್ನಾಟಕ, ದಲಿತ ಸಂಘಟನೆಗಳು ಸೇರಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.




