ಲೋಕಸಭೆ ಚುನಾವಣೆಯ ಹೊತ್ತಲ್ಲೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ನ ಹಿರಿಯ ನಾಯಕ ಎಂ ವೀರಪ್ಪ ಮೊಯ್ಲಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ವೀರಪ್ಪ ಮೊಯ್ಲಿ ಅವರು ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಹೈಕಮಾಂಡ್ ಕೊನೆ ಕ್ಷಣದಲ್ಲಿ ವೀರಪ್ಪ ಮೊಯ್ಲಿ ಬದಲಿಗೆ ಯುವ ನಾಯಕ ರಕ್ಷಾ ರಾಮಯ್ಯಗೆ ಟಿಕೆಟ್ ನೀಡಿತ್ತು. ಇದರಿಂದ ನಿರಾಸೆಗೊಂಡಿರುವ ಮೊಯ್ಲಿ, ಇದೀಗ ಅಂತಿಮವಾಗಿ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದು, ರಕ್ಷಾ ರಾಮಯ್ಯಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ವೀರಪ್ಪ ಮೊಯ್ಲಿ, “ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಟಿಕೆಟ್ ನೀಡಬೇಕೆಂದು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದೆ. ಆದರೆ, ಹೈಕಮಾಂಡ್ ಸ್ಪರ್ಧೆಯಿಂದ ಹಿಂದೆ ಸರಿಯಲು ಮನವಿ ಮಾಡಿತ್ತು. ಹೈಕಮಾಂಡ್ಗೆ ಗೌರವ ಕೊಟ್ಟು ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ. ನನ್ನ ಬೆಂಬಲಿಗರು ನಮ್ಮ ಅಭ್ಯರ್ಥಿ ರಕ್ಷಾ ರಾಮಯ್ಯ ಅವರಿಗೆ ಬೆಂಬಲಿಸಬೇಕು” ಎಂದು ತಿಳಿಸಿದ್ದಾರೆ.
ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ವೀರಪ್ಪ ಮೊಯ್ಲಿ, ಅಂತಿಮವಾಗಿ ಪಕ್ಷದ ಅಭ್ಯರ್ಥಿ ರಕ್ಷಾ ರಾಮಯ್ಯಗೆ ಬೆಂಬಲ ಘೋಷಿಸಿದರು.
1972ರಿಂದ ರಾಜಕೀಯದಲ್ಲಿರುವ ವೀರಪ್ಪ ಮೊಯ್ಲಿಯವರು, 1992ರಿಂದ 1994ರವರೆಗೆ ಕರ್ನಾಟಕದ 13ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ, ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರದ ಸಚಿವರಾಗಿಯೂ ಕೆಲಸ ಮಾಡಿದ್ದರು.
ಇದನ್ನು ಓದಿದ್ದೀರಾ? ಚುನಾವಣಾ ಪ್ರಚಾರದ ವೇಳೆ ಶೋಭಾ ಕರಂದ್ಲಾಜೆ ಕಾರು ಅಪಘಾತ: ಬಿಜೆಪಿ ಕಾರ್ಯಕರ್ತ ಸಾವು
ರಾಜಕಾರಣದ ಜೊತೆಗೆ ಸಾಹಿತ್ಯದಲ್ಲೂ ಗುರುತಿಸಿಕೊಂಡಿರುವ ಮೊಯ್ಲಿ, ಹಲವು ಕೃತಿಗಳನ್ನು ಕೂಡ ಬರೆದಿದ್ದಾರೆ. 2020ರಲ್ಲಿ ಶ್ರೀ ಬಾಹುಬಲಿ ಅಹಿಂಸಾದಿಗ್ವಿಜಯ ಮಹಾಕಾವ್ಯಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಕೂಡ ಭಾಜನರಾಗಿದ್ದರು. ಇವರ ಪತ್ನಿ ಮಾಲತಿ ಮೊಯ್ಲಿ ಕೂಡ ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ.