ಹಾಸನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸುವ ಮುಖಾಂತರ ಹಾಸನವನ್ನು ಉಳಿಸಬೇಕು ಎಂದು ಸಿಪಿಐಎಂ ಹಾಸನ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ ಕರೆ ನೀಡಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ʼಬಿಜೆಪಿ-ಜೆಡಿಎಸ್ ಸೋಲಿಸಿ, ಹಾಸನ ಉಳಿಸಿ ಅಭಿಯಾನʼದ ಅಂಗಾಗಿ ಹಾಸನ ಜಿಲ್ಲೆಯ ಸಕಲೇಶಪುರದ ನಂಜಮ್ಮ ಮಹಿಳಾ ಸಮಾಜದಲ್ಲಿ ಹಮ್ಮಿಕೊಂಡಿದ್ದ ಸಮಾನ ಮನಸ್ಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
“ಪ್ರಸ್ತುತದ ದಿನಗಳಲ್ಲಿ ದೇಶದಲ್ಲಿ ಭ್ರಷ್ಟ, ಲೂಟಿಕೋರ ಸರ್ಕಾರ ಆಡಳಿತ ನಡೆಸುತ್ತಿದೆ. ಬಿಜೆಪಿ ದೇಶದಲ್ಲಿ ದೊಡ್ಡ ದೊಡ್ಡ ಬಂಡವಾಳಿಗರ ಪರವಾಗಿ ಕೆಲಸಮಾಡುತ್ತಿದ್ದೆ. ಉದಾಹರಣೆಗೆ ಇತ್ತೀಚೆಗಷ್ಟೇ ಎಲೆಕ್ಟೋರಲ್ ಬಾಂಡ್‌ಗಳನ್ನು ಬಿಡಿಗಡೆ ಮಾಡಿದ ಎಸ್‌ಬಿಐ ಬಿಜಿಪಿಯ ಭ್ರಷ್ಟಾಚಾರವನ್ನು ಹೊರಗೆಳೆದು ಅವರ ಮುಖವಾಡವನ್ನು ಬಯಲು ಮಾಡಿದೆ” ಎಂದರು.
“ಬಿಜೆಪಿಯವರು ಈಗಾಗಲೇ ವಿರೋಧ ಪಕ್ಷಗಳ ಶಕ್ತಿಯನ್ನು ದಿನೇ ದಿನೆ ಕುಸಿಯುವಂತೆ ಮಾಡುತ್ತಿದ್ದಾರೆ. ನಾಯಕರನ್ನು ಸರ್ಕಾರಿ ಸಂಸ್ಥೆಗಳನ್ನು ಬಳಸಿ ಜೈಲಿಗಟ್ಟುತ್ತಿದ್ದಾರೆ. ಹೀಗೆ ಚುನಾವಣೆಗಾಗಿ, ಅವರ ಲಾಭಕ್ಕಾಗಿ ಎಲ್ಲ ಶಕ್ತಿಯನ್ನು ಬಳಸಿ ಮತ್ತೊಮ್ಮೆ ಅಧಿಕಾರವನ್ನು ಹಿಡಿಯಲು ಮುನ್ನುಗುತ್ತಿದ್ದಾರೆ. ದೇವೇಗೌಡರಿಗೆ 95 ವರ್ಷಗಳಾದರೂ ಮಕ್ಕಳ, ಮೊಮ್ಮಕ್ಕಳ ಅಧಿಕಾರಕ್ಕಾಗಿ ಬೀದಿಗಳಲ್ಲಿ ಜನರನ್ನು ಅಂಗಲಾಚುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ʼಜ್ಯಾತ್ಯತೀತʼವೆಂದು ಹೇಳಿಕೊಂಡು ಜಾತಿವಾರು, ಧರ್ಮವಾರು ರಾಜಕರಣ ಮಾಡಿ ಕೊಳಕು ಮಾಫೀಯಾ ಪಕ್ಷ ಬಿಜಪಿ ಜತೆಗೆ ಕೈಜೋಡಿಸಿ ಸಂವಿಧಾನ ವಿರೋಧಿಯಾಗಿ ಕೆಲಸ ಮಾಡುತ್ತಿದೆ” ಎಂದು ಆರೋಪಿಸಿದರು.
“ಗೌಡರ ಕುಟುಂಬ ಕೇವಲ ಮೂರು ಕ್ಷೇತ್ರಗಳ ಉಳಿವಿಗಾಗಿ ಅವರ ಸಂಪತ್ತನ್ನು ಕಾಪಾಡಿಕೊಳ್ಳಲು ಆಳುವ ವರ್ಗಗಳೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯಂತಹ ಕೋಮುವಾದಿಗಳ ಜತೆಗೆ ಕೈಜೋಡಿಸಿರುವುದು ಅಪಾಯಕಾರಿ ಬೆಳವಣಿಗರಯಾಗಿದೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಿಸುತ್ತೆವೆಂದು ಈಗಾಗಲೇ ಘೋಷಣೆ ಮಾಡಿದ್ದಾರೆ. ಜತೆಗೆ ಹಾಸನದಲ್ಲಿ ರೇವಣ್ಣ ಕುಟುಂಬದ ದಬ್ಬಾಳಿಕೆ, ಪಾಳೇಗಾರಿಕೆ ಹೆಚ್ಚಾಗಿರುವುದರಿಂದ ಇಂದು ನಾವು ಇವರ ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಸೋಲಿಸುವ ಅನಿವಾರ್ಯತೆ ಎದುರಾಗಿದೆ” ಎಂದು ಕರೆ ಕೊಟ್ಟರು.
“ಸಕಲೇಶಪುರದಲ್ಲಿ ಎಲ್ಲ ಸಮುದಾಯಗಳು ಇಂದು ಒಗ್ಗಟ್ಟಾಗಿ ಈ ಕೋಮುವಾದಿ ಜಾತಿವಾದಿ ಜೆಡಿಎಸ್-ಬಿಜೆಪಿಯನ್ನು ಒಟ್ಟಾಗಿ ಸೋಲಿಸುವ ಕೆಲಸ ಮಾಡಬೇಕಿದೆ. ದಲಿತ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸಮುದಾಯಗಳು ಇಂದು ಇಂಡಿಯಾ ಒಕ್ಕೂಟದ ಪರವಾಗಿ ಇದ್ದಾರೆ. ಅದರೆ ಅವರನ್ನು ಮನವೊಲಿಸಿ ಇಂಡಿಯಾ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರ ಪರವಾಗಿ ಮತ ಚಲಾಯಿಸಬೇಕು” ಎಂದು ಮಾನವ ಬಂಧುತ್ವ ವೇದಿಯ ಜಿಲ್ಲಾ ಸಂಚಾಲಕ ಸತೀಶ್ ಕುಮಾರ್ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಿಎಂ ಭೇಟಿ ಬಳಿಕವೂ ಕಾಂಗ್ರೆಸ್ ವಿರುದ್ಧ ಬಂಡಾಯ ಘೋಷಿಸಿದ ವಿನಯ್ ಕುಮಾರ್
ಸಭೆಯಲ್ಲಿ ದಲಿತ ಮುಖಂಡ ಎಚ್ ಕೆ ಸಂದೇಶ್, ದಸಂಸ ಮುಖಂಡ ರಾಜಶೇಖರ್ ಹುಲಿಕಲ್, ಸಿಐಟಿಯು ಮುಖಂಡರುಗಳಾದ ಎಚ್ ಎಸ್ ಮಂಜುನಾಥ್, ಎಸ್ ಎನ್ ಮಲ್ಲಪ್ಪ, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಪೃಥ್ವಿ ಎಂ ಜಿ, ಎಸ್ಎಫ್ಐ ಹಾಸನ ಜಿಲ್ಲಾ ಕಾರ್ಯದರ್ಶಿ ರಮೇಶ್ ಹಾಸನ್ ಇದ್ದರು.