ಕಳೆದ ಮೂರು ವರ್ಷಗಳಲ್ಲಿ ವಿದೇಶಗಳಲ್ಲಿ 1,900ಕ್ಕೂ ಹೆಚ್ಚು ಭಾರತೀಯರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪೈಕಿ ಗಲ್ಫ್ ರಾಷ್ಟ್ರಗಳಲ್ಲೇ 1,340 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಸಂಯುಕ್ತ ಅರಬ್ ಸಂಸ್ಥಾನದಲ್ಲಿ (ಯುಎಇ) ಅತಿ ಹೆಚ್ಚು ಅಂದರೆ 511 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಸಂಸತ್ತಿಗೆ ಮಾಹಿತಿ ನೀಡಿದೆ.
ಪ್ರಸ್ತುತ ಸುಮಾರು ಒಂದು ಕೋಟಿ ಭಾರತೀಯರು ಹಾಗೂ ಭಾರತೀಯ ಮೂಲದವರು ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿದ್ದಾರೆ. 2023ರಿಂದ 2025ರವರೆಗಿನ ಅವಧಿಯಲ್ಲಿ ವಿದೇಶಗಳಲ್ಲಿ ಒಟ್ಟು 1,900ಕ್ಕೂ ಹೆಚ್ಚು ಭಾರತೀಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪೈಕಿ ಶೇಕಡ 70ಕ್ಕೂ ಹೆಚ್ಚು ಪ್ರಕರಣಗಳು ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ರಾಷ್ಟ್ರಗಳಲ್ಲೇ ಸಂಭವಿಸಿವೆ. ಗಲ್ಫ್ ರಾಷ್ಟ್ರಗಳ ಅಂಕಿ-ಅಂಶಗಳನ್ನು ಗಮನಿಸಿದರೆ, ಯುಎಇಯಲ್ಲಿ 511, ಸೌದಿ ಅರೇಬಿಯಾದಲ್ಲಿ 354, ಕುವೈತ್ ನಲ್ಲಿ 162, ಒಮಾನ್‌ನಲ್ಲಿ 146, ಬಹರೇನ್‌ನಲ್ಲಿ 101 ಹಾಗೂ ಕತಾರ್‌ನಲ್ಲಿ 66 ಭಾರತೀಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಗಲ್ಫ್ ಹೊರತುಪಡಿಸಿ, ಮಲೇಷಿಯಾದಲ್ಲಿ 131 ಮತ್ತು ಅಮೆರಿಕದಲ್ಲಿ 62 ಮಂದಿ ಜೀವ ಕಳೆದುಕೊಂಡಿದ್ದರೆ, ಇಟಲಿ, ಕೆನಡಾ ಹಾಗೂ ಬ್ರಿಟನ್‌ನಲ್ಲಿ ತಲಾ 30ಕ್ಕೂ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.
ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರಾದ ಸತ್ಪಾಲ್ ಬ್ರಹ್ಮಚಾರಿ ಮತ್ತು ಜೈ ಪ್ರಕಾಶ್ ಅವರು ‘ವಿದೇಶಗಳಲ್ಲಿ ಭಾರತೀಯರ ಸಾವಿನ ಪರಿಶೀಲನೆ’ ಕುರಿತು ಕೇಳಿದ ಪ್ರಶ್ನೆಗೆ, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಅವರು ಈ ಅಂಕಿ-ಅಂಶಗಳನ್ನು ಒದಗಿಸಿದ್ದಾರೆ. ಸರ್ಕಾರದ ಹಿಂದಿನ ದತ್ತಾಂಶಗಳಿಗೆ ಹೋಲಿಸಿದರೆ ವಿದೇಶದಲ್ಲಿ ವಾಸಿಸುತ್ತಿರುವ ಭಾರತೀಯರ ಆತ್ಮಹತ್ಯೆ ಪ್ರಕರಣಗಳ ಸರಾಸರಿ ಸಂಖ್ಯೆಯಲ್ಲಿ ಏರಿಕೆಯಾಗಿದೆ. 2014ರಿಂದ 2022ರವರೆಗಿನ ಎಂಟು ವರ್ಷಗಳ ಅವಧಿಯಲ್ಲಿ ಒಟ್ಟು 4,005 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು ಎಂದು 2022ರಲ್ಲಿ ಸಚಿವಾಲಯ ಮಾಹಿತಿ ನೀಡಿತ್ತು.
ಆತ್ಮಹತ್ಯೆ ಪ್ರಕರಣಗಳ ಈ ಹೆಚ್ಚಳಕ್ಕೆ ನಿರ್ದಿಷ್ಟ ಕಾರಣಗಳನ್ನು ತಿಳಿಸದಿದ್ದರೂ, “ವಿದೇಶದಲ್ಲಿರುವ ಭಾರತೀಯ ಕಾರ್ಮಿಕರ ಯೋಗಕ್ಷೇಮ ಮತ್ತು ರಕ್ಷಣೆಗಾಗಿ ಪ್ರವಾಸಿ ಭಾರತೀಯ ವಿಮಾ ಯೋಜನೆ (PBBY) ಸೇರಿದಂತೆ ಹಲವು ಮಹತ್ವದ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ” ಎಂದು ಸಚಿವರು ತಿಳಿಸಿದ್ದಾರೆ. ‘ಎಮಿಗ್ರೇಷನ್ ಚೆಕ್ ರಿಕ್ವೈರ್ಡ್’ (ECR) ವರ್ಗದಡಿ ವಿದೇಶಕ್ಕೆ ತೆರಳುವ ಎಲ್ಲಾ ಕಾರ್ಮಿಕರಿಗೆ ಈ ವಿಮಾ ಯೋಜನೆಯು ಕಡ್ಡಾಯವಾಗಿದೆ. ಕೇವಲ 275 ರೂ. (ಎರಡು ವರ್ಷಗಳಿಗೆ) ಅಥವಾ 375 ರೂ. (ಮೂರು ವರ್ಷಗಳಿಗೆ) ನಾಮಮಾತ್ರದ ಪ್ರೀಮಿಯಂ ಪಾವತಿಸುವ ಮೂಲಕ, ಆಕಸ್ಮಿಕ ಸಾವು ಅಥವಾ ಶಾಶ್ವತ ಅಂಗವೈಕಲ್ಯ ಸಂಭವಿಸಿದಲ್ಲಿ 10 ಲಕ್ಷ ರೂಪಾಯಿಗಳ ವಿಮಾ ರಕ್ಷಣೆಯನ್ನು ಹಾಗೂ ಇತರೆ ಪ್ರಯೋಜನಗಳನ್ನು ಈ ಯೋಜನೆ ಒದಗಿಸುತ್ತದೆ.
ಸರ್ಕಾರ ಒದಗಿಸಿರುವ ದತ್ತಾಂಶದಲ್ಲಿ ನೈಸರ್ಗಿಕ ಸಾವು, ಕೆಲಸದ ಸ್ಥಳದಲ್ಲಿನ ಅಪಘಾತಗಳು, ಆತ್ಮಹತ್ಯೆ, ಅಪರಾಧ ಸೇರಿದಂತೆ ವಿವಿಧ ಕಾರಣಗಳಿಂದ ಸಂಭವಿಸಿದ ಸಾವುಗಳನ್ನು ಪ್ರತ್ಯೇಕವಾಗಿ ವಿಂಗಡಿಸಲಾಗಿದೆ. ಕೆಲಸದ ಸ್ಥಳದಲ್ಲಿ ಸಂಭವಿಸಿದ ಅಪಘಾತಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಸಾವುಗಳು ವರದಿಯಾಗಿವೆ. ಸೌದಿ ಅರೇಬಿಯಾದಲ್ಲಿ 182 ಹಾಗೂ ಯುಎಇಯಲ್ಲಿ 128 ಕಾರ್ಮಿಕರು ಕೆಲಸದ ವೇಳೆ ಮೃತಪಟ್ಟಿದ್ದಾರೆ. ಇದಲ್ಲದೆ, ಕೆನಡಾದಲ್ಲಿ 40, ಮಾಲ್ಡೀವ್ಸ್‌ನಲ್ಲಿ 13, ಸಿಂಗಾಪುರದಲ್ಲಿ 32 ಮತ್ತು ಅಮೆರಿಕದಲ್ಲಿ 46 ಭಾರತೀಯರು ಕೆಲಸದ ಸ್ಥಳದಲ್ಲಿ ಸಂಭವಿಸಿದ ದುರಂತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ವಿದೇಶಗಳಲ್ಲಿ ವಿವಿಧ ಕಾರಣಗಳಿಂದಾಗಿ ಸಾವನ್ನಪ್ಪಿದ ಭಾರತೀಯರ ಒಟ್ಟು ಸಂಖ್ಯೆ 39,000 ದಾಟಿದೆ ಎಂಬ ಆಘಾತಕಾರಿ ಅಂಶವೂ ಈ ವರದಿಯಿಂದ ಬಹಿರಂಗವಾಗಿದೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.





