ಜಂತರ್ ಮಂತರ್‌ನಲ್ಲಿ ನಡೆದ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಪ್ರತಿಭಟನೆ ವೇಳೆ ವಿದ್ಯಾರ್ಥಿ ಹೋರಾಟಗಾರ್ತಿಯ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಲಪಂಥೀಯ ಯೂಟ್ಯೂಬರ್ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿ ನ್ಯಾಯಾಲಯ 3 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಪಾಟಿಯಾಲಾ ಹೌಸ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸೌರಭ್ ಪ್ರತಾಪ್ ಸಿಂಗ್ ಲಾಲರ್ ಅವರು ಮಂಗಳವಾರ ಈ ಆದೇಶ ನೀಡಿದ್ದಾರೆ. ಭಾರದ್ವಾಜ್ ಅವರು ನಿಯಮಿತ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಜುಲೈನಲ್ಲಿ ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆ ವೇಳೆ ದಲಿತ ವಿದ್ಯಾರ್ಥಿ ಹೋರಾಟಗಾರ್ತಿಯ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಭಾರದ್ವಾಜ್ ಅವರನ್ನು ಸೆಪ್ಟೆಂಬರ್ 5ರಂದು ಉತ್ತರ ಪ್ರದೇಶದಿಂದ ಬಂಧಿಸಲಾಗಿತ್ತು. ಅವರ ವಿರುದ್ಧ ಹಲ್ಲೆ ಆರೋಪಗಳ ಜತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ (ಎಸ್‌ಸಿ/ಎಸ್‌ಟಿ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಪೋಕ್ಸೋ ಕಾಯ್ದೆಯಡಿಯಲ್ಲಿಯೂ ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ.
ಮೊದಲಿಗೆ ಭಾರದ್ವಾಜ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115(2)ರಡಿ ಸರಳ ಗಾಯ ಉಂಟುಮಾಡಿದ ಆರೋಪ ಮತ್ತು ಸೆಕ್ಷನ್ 126(2)ರಡಿ ಅಕ್ರಮವಾಗಿ ತಡೆದ ಆರೋಪಗಳನ್ನು ಮಾತ್ರ ದಾಖಲಿಸಲಾಗಿತ್ತು. ನಂತರ ಸಾಮಾಜಿಕ ಜಾಲತಾಣದಲ್ಲಿ ಭಾರದ್ವಾಜ್ ಅವರು, “ಹುಡುಗಿಯ ತಂದೆಯ ತಲೆಬುರುಡೆಯನ್ನು ಒಡೆದಿದ್ದೇನೆ. ಪೊಲೀಸರು ಕೆಲವೇ ಗಂಟೆಗಳ ಕಾಲ ನನ್ನನ್ನು ವಶಕ್ಕೆ ಪಡೆದಿದ್ದರು” ಎಂದು ಹೇಳಿಕೊಂಡಿದ್ದರು.
ಇದಾದ ಬಳಿಕ ಸಿಜೆಪಿ ಮುಖಂಡರು, ವಿದ್ಯಾರ್ಥಿನಿ ಮತ್ತು ಆಕೆಯ ತಂದೆಯೊಂದಿಗೆ ಸಂಸತ್ ಮಾರ್ಗ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು. ನಂತರ ಪ್ರಕರಣಕ್ಕೆ ಗಂಭೀರ ಆರೋಪಗಳನ್ನು ಸೇರಿಸಿ ಭಾರದ್ವಾಜ್ ಅವರನ್ನು ಬಂಧಿಸಲಾಗಿತ್ತು. ಈ ಹಿಂದೆ ಭಾರದ್ವಾಜ್ ಅವರು ತಮ್ಮ ಬಂಧನ ಕಾನೂನುಬಾಹಿರ ಎಂದು ಘೋಷಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್ ಆ ಅರ್ಜಿಯನ್ನು ತಿರಸ್ಕರಿಸಿತ್ತು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಜಾಮೀನು ವಿಚಾರಣೆಯ ವೇಳೆ ಭಾರದ್ವಾಜ್ ಪರ ವಕೀಲ ಉಮೇಶ್ ಚಂದ್ರ ಶರ್ಮಾ ವಾದ ಮಂಡಿಸಿ, ದೆಹಲಿ ಪೊಲೀಸರು ರಾಜಕೀಯ ಕಾರಣಗಳಿಂದ ಭಾರದ್ವಾಜ್ ಅವರನ್ನು ಬಂಧಿಸಿದ್ದಾರೆ ಎಂದು ಆರೋಪಿಸಿದರು.
ದೂರುದಾರನೇ ಮೊದಲು ಭಾರದ್ವಾಜ್ ಮೇಲೆ ಹಲ್ಲೆ ನಡೆಸಿದ್ದಾನೆ. ದೂರುದಾರ ಭಾರದ್ವಾಜ್ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯಗಳಿರುವ ವಿಡಿಯೊ ತಮ್ಮ ಬಳಿ ಇದ್ದರೂ, ಪೊಲೀಸರು ದೂರುದಾರನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಪ್ರತಿಯಾಗಿ ದೂರುದಾರರ ಪರ ವಕೀಲರಾದ ಸ್ವಾತಿ ಖನ್ನಾ ವಾದಿಸಿ, ಭಾರದ್ವಾಜ್ ಅವರು ದೂರುದಾರನ ವಿರುದ್ಧ ಜಾತಿ ನಿಂದನೆ ಪದಗಳನ್ನು ಬಳಸಿದ್ದಾರೆ. ಅಲ್ಲದೆ, ತಾವೇ ದಾಳಿ ನಡೆಸಿರುವುದಾಗಿ ವಿಡಿಯೊದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು. ಭಾರದ್ವಾಜ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿರುವ ವಿಚಾರವನ್ನೂ ಅವರು ನ್ಯಾಯಾಲಯದ ಗಮನಕ್ಕೆ ತಂದರು.
ಈ ನಡುವೆ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಆರಂಭದಲ್ಲಿ ದಾಖಲಾದ ದೂರಿನಲ್ಲಿ ಭಾರದ್ವಾಜ್ ಜಾತಿ ನಿಂದನೆ ಪದಗಳನ್ನು ಬಳಸಿರುವ ಬಗ್ಗೆ ಯಾವುದೇ ಉಲ್ಲೇಖ ಇರಲಿಲ್ಲ ಎಂದು ತಿಳಿಸಿದ್ದಾರೆ. ನಂತರ ದೂರುದಾರನ ಹೇಳಿಕೆಯನ್ನು ಮತ್ತೊಮ್ಮೆ ದಾಖಲಿಸಿದಾಗ, ಭಾರದ್ವಾಜ್ ಜಾತಿ ನಿಂದನೆ ಪದಗಳನ್ನು ಬಳಸಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಎಸ್‌ಸಿ/ಎಸ್‌ಟಿ ಕಾಯ್ದೆಯ ಸೆಕ್ಷನ್‌ಗಳನ್ನು ಪ್ರಕರಣಕ್ಕೆ ಸೇರಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.




