2020ರ ದೆಹಲಿ ಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಕಳೆದ ಆರು ವರ್ಷಗಳಿಂದ ತಿಹಾರ್ ಜೈಲಿನಲ್ಲಿರುವ ಉಮರ್ ಖಾಲಿದ್ ಅವರು ಮೊದಲ ಬಾರಿಗೆ ಸಂದರ್ಶನ ನೀಡಿದ್ದರು. ಕಠಿಣ ನಿರ್ಬಂಧಗಳ ನಡುವೆಯೇ ತಮ್ಮ ಕುಟುಂಬದ ಮೂಲಕ ಬ್ರಿಟಿಷ್ ಪತ್ರಿಕೆ “ದಿ ಗಾರ್ಡಿಯನ್ಗೆ” ನೀಡಿದ ಈ ಸಂದರ್ಶನದಲ್ಲಿ ಅವರು ಜೈಲಿನಲ್ಲಿನ ಏಕಾಂತ, ಮಾನಸಿಕ ಹಿಂಸೆ ಮತ್ತು ಸಮಾಜದ ವರ್ತನೆ ಕುರಿತು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಸಂಜೆಯೊಂದು ಮೆಲ್ಲಗೆ ಜಾರಿ ಕತ್ತಲಾಗುವಾಗ, ನಾಲ್ಕು ಗೋಡೆಗಳ ನಡುವೆ ಎಣಿಸಿದ ದಿನಗಳ ಲೆಕ್ಕಾಚಾರ ಆರು ಸುದೀರ್ಘ ವರ್ಷಗಳಿಗೆ ಬಂದು ನಿಲ್ಲುತ್ತದೆ. ಕಂಬಿಗಳ ಆಚೆ ಕಾಲದ ಚಕ್ರ ಉರುಳುತ್ತಲೇ ಇದೆ; ಜಗತ್ತಿನಲ್ಲಿ ಋತುಗಳು ಬದಲಾದವು, ಹೊಸ ರಾಜಕೀಯ ಸಮೀಕರಣಗಳು ಹುಟ್ಟಿಕೊಂಡವು, ವಿದ್ಯಾರ್ಥಿಗಳಾಗಿದ್ದವರು ಉದ್ಯೋಗಸ್ಥರಾದರು, ಗ್ರಹಸ್ಥರಾದರು, ಮರಗಳು ಎಲೆ ಉದುರಿಸಿ ಮತ್ತೆ ಹೊಸ ಚಿಗುರು ತಳೆದವು. ಶಹರು ಬದಲಾಗತೊಡಗಿತು. ಆದರೆ, ನಮ್ಮೊಳಗೇ ಒಬ್ಬನಾಗಿದ್ದ ಯುವಕ ಬಂದಿಯಾಗಿರುವ ಆ ಕಲ್ಲಿನ ಕೋಣೆಯೊಳಗೆ ಸಮಯ ಮಾತ್ರ ಹೆಪ್ಪುಗಟ್ಟಿ ನಿಂತಿದೆ. ಯುವಕ ನಡುವಯಸ್ಸಿಗನಾಗಿದ್ದಾನೆ.
ವಿಚಾರಣೆಯೆಂಬ ಪ್ರಕ್ರಿಯೆಯೇ ಸ್ವತಃ ಕಠಿಣ ಶಿಕ್ಷೆಯಾಗಿ ಮಾರ್ಪಡುವಾಗ, ಆಡಿದ ಮಾತುಗಳು ಮತ್ತು ಬರೆದ ಅಕ್ಷರಗಳೇ ಅಪರಾಧದ ಮುದ್ರೆಯೊತ್ತಿಸಿಕೊಳ್ಳುತ್ತವೆ. ಪ್ರಜಾಪ್ರಭುತ್ವದ ಅಂಗಳದಲ್ಲಿ ನಿಂತು ಸಂವಿಧಾನದ ಆಶಯಗಳನ್ನು ಓದಿ ಹೇಳಿದ ಧ್ವನಿಯೊಂದು, ಅಧಿಕಾರದ ಅಹಂಗೆ ಬೆದರಿಕೆಯಾಗಿ ಕಂಡದ್ದು ಈ ಕಾಲದ ದೊಡ್ಡ ದುರಂತ. ಹಿಂಸೆಯ ಕರೆಯನ್ನು ನೀಡದ, ಕೈಯಲ್ಲಿ ಶಸ್ತ್ರ ಹಿಡಿಯದ, ಕೇವಲ ನಂಬಿದ ಸಿದ್ಧಾಂತವನ್ನು ಪ್ರತಿಪಾದಿಸಿದ ಮನಸ್ಸೊಂದನ್ನು ಅಲಕ್ಷಿಸುವುದು, ಸತತವಾಗಿ ಮೌನಕ್ಕೆ ತಳ್ಳುವುದು ಎಂತಹ ನ್ಯಾಯ?
ಹೌದು, ನಾವು ಉಮರ್ ಖಾಲಿದ್ ಬಗ್ಗೆಯೇ ಮಾತಾಡುತ್ತಿರುವುದು.
“ಭಿನ್ನಾಭಿಪ್ರಾಯವು ಅಪರಾಧವಾಗಬಾರದು; ಪ್ರಜಾಪ್ರಭುತ್ವದ ಉಸಿರಾಗಬೇಕು.”ಎನ್ನುತ್ತಾರೆ ಕಾನೂನು ತಜ್ಞರು, ಪಂಡಿತರು. ಆದರೆ ಈ ಸೆಪ್ಟೆಂಬರ್ 13 ಕ್ಕೆ ಆರು ವರ್ಷಗಳಾದವು ಉಮರ್ ಖಾಲಿದ್ನ ಜೈಲು ಜೀವನಕ್ಕೆ. ಜನರು “ಅವನೂ ಒಬ್ಬ ಮನುಷ್ಯ ಎಂಬುದನ್ನೇ ಮರೆತಿದ್ದಾರೆ” ಎಂದು ಬ್ರಿಟನ್ನ The Guardian ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಮಾತುಗಳು ಕೇವಲ ಒಬ್ಬ ವಿಚಾರಣಾಧೀನ ಕೈದಿಯ ವೈಯಕ್ತಿಕ ಅನುಭವವಾಗದೇ ಅದು ಭಾರತದ ಪ್ರಜಾಪ್ರಭುತ್ವ, ನ್ಯಾಯಾಂಗ, ಭಿನ್ನಾಭಿಪ್ರಾಯ ಮತ್ತು ನಾಗರಿಕ ಸ್ವಾತಂತ್ರ್ಯಗಳ ಕುರಿತು ಮತ್ತೊಮ್ಮೆ ಗಂಭೀರ ಚರ್ಚೆಗೆ ನಮ್ಮನ್ನು ಪ್ರೇರೇಪಿಸುತ್ತದೆ.
2020ರ ದೆಹಲಿ ಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಕಳೆದ ಆರು ವರ್ಷಗಳಿಂದ ತಿಹಾರ್ ಜೈಲಿನಲ್ಲಿರುವ ಉಮರ್ ಖಾಲಿದ್ ಅವರು ಮೊದಲ ಬಾರಿಗೆ ಸಂದರ್ಶನ ನೀಡಿದ್ದರು. ಕಠಿಣ ನಿರ್ಬಂಧಗಳ ನಡುವೆಯೇ ತಮ್ಮ ಕುಟುಂಬದ ಮೂಲಕ ದಿ ಗಾರ್ಡಿಯನ್ಗೆ ನೀಡಿದ ಈ ಸಂದರ್ಶನದಲ್ಲಿ ಅವರು ಜೈಲಿನಲ್ಲಿನ ಏಕಾಂತ, ಮಾನಸಿಕ ಹಿಂಸೆ ಮತ್ತು ಸಮಾಜದ ವರ್ತನೆ ಕುರಿತು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಅವರು ಹೇಳುವಂತೆ, “ನನ್ನಿಂದ ನನ್ನ ಮಾನವೀಯತೆಯನ್ನೇ ಕಸಿದುಕೊಳ್ಳಲಾಗಿದೆ. ಮನುಷ್ಯನಾಗಿ ಕಾಣಿಸಿಕೊಳ್ಳುವುದು ನನ್ನಂತಹವರಿಗೆ ಒಂದು ಐಷಾರಾಮಿ ಹಕ್ಕಿನಂತಾಗಿದೆ.”
“ಮನುಷ್ಯನಾಗಿ ಕಾಣಿಸಿಕೊಳ್ಳುವುದೇ ಈಗ ನನಗಿರುವ ವಿಶೇಷಾಧಿಕಾರ” 39 ವರ್ಷದ ಉಮರ್ ಖಾಲಿದ್ ಅವರ ಪ್ರಕಾರ, ನಿರಂತರ ಪ್ರಚಾರ ಮತ್ತು ದ್ವೇಷದ ರಾಜಕೀಯವು ಅವರನ್ನು ಜನರ ಕಣ್ಣಿನಲ್ಲಿ ಒಬ್ಬ ಮನುಷ್ಯನಾಗಿ ಅಲ್ಲ, ʼಖಳನಾಯಕʼನನ್ನಾಗಿ ರೂಪಿಸಿದೆ.
ಉಮರ್ ಹೇಳುತ್ತಾರೆ- “ಜೈಲಿನಲ್ಲಿ ನನ್ನೊಂದಿಗೆ ಊಟ ಮಾಡುವ ಕೈದಿಗಳೇ ನನ್ನ ಬೆನ್ನ ಹಿಂದೆ ‘ಭಯೋತ್ಪಾದಕ’ ಎಂದು ಗುಸುಗುಸು ಮಾತನಾಡುತ್ತಾರೆ. ವಿಚಿತ್ರವಾಗಿ ನೋಡುತ್ತಾರೆ. ಹೊರಗಿನ ಪ್ರಚಾರ ನನ್ನನ್ನು ಸಂಪೂರ್ಣವಾಗಿ ಒಡೆದುಹಾಕಿದೆ. ನನ್ನಂತಹವರಿಗೆ ಮನುಷ್ಯರೆಂದು ಪರಿಗಣಿಸಲ್ಪಡುವುದೇ ಒಂದು ವಿಶೇಷಾಧಿಕಾರವಾಗಿದೆ.”
ಇದೇ ರೀತಿ ಉಮರ್ ತಮ್ಮ ಬೆಂಬಲಿಗರ ಮೇಲೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಕೆಲವರು ನನ್ನನ್ನು ದೊಡ್ಡ ಹೀರೋವನ್ನಾಗಿ ಚಿತ್ರಿಸುತ್ತಾರೆ. ಆದರೆ ಅವರು ಕೂಡ ನಾನು ಹಸಿ-ಮಾಂಸದ ಮನುಷ್ಯ ಎಂಬುದನ್ನು ಮರೆತುಬಿಡುತ್ತಾರೆ. ನನಗೂ ಭಯಗಳಿವೆ, ದುರ್ಬಲತೆಗಳಿವೆ. ಈ ಆರು ವರ್ಷದ ಜೈಲು ಜೀವನ ನನ್ನ ದೇಹ ಮತ್ತು ಮನಸ್ಸನ್ನು ಹಿಂಡಿಬಿಟ್ಟಿದೆ. ನನ್ನ ಆತಂಕ ಅನೇಕ ಪಟ್ಟು ಹೆಚ್ಚಾಗಿದೆ.”
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್, ದೇಶದ ಇಂದಿನ ರಾಜಕೀಯ ವಾತಾವರಣವನ್ನೂ ಟೀಕಿಸಿದ್ದಾರೆ. ಅವರ ಪ್ರಕಾರ, ಇಂದು ದ್ವೇಷದ ಭಾಷೆ ಮತ್ತು ಹಿಂಸೆಯನ್ನು ಸಾಮಾನ್ಯವಾಗಿ ಸ್ವೀಕರಿಸಲಾಗುತ್ತಿದೆ. ಇನ್ನೂ ನೋವು ತಂದಿರುವ ಸಂಗತಿಯೆಂದರೆ, ಪ್ರತಿಪಕ್ಷ ರಾಜಕೀಯ ಪಕ್ಷಗಳು, ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಪ್ರಸಿದ್ಧ ಸಾಮಾಜಿಕ ಹೋರಾಟಗಾರರು ತಮ್ಮ ಪ್ರಕರಣದ ಬಗ್ಗೆ ಮೌನ ವಹಿಸಿರುವುದು.
“ಈ ಮೌನವೇ ಸರ್ಕಾರಕ್ಕೆ ಭಿನ್ನಮತದ ಧ್ವನಿಗಳನ್ನು ಗುರಿಯಾಗಿಸಲು ಇನ್ನಷ್ಟು ಧೈರ್ಯ ನೀಡುತ್ತಿದೆ. ಆರು ವರ್ಷಗಳ ನಂತರ ನಾನು ತುಂಬಾ ಏಕಾಂಗಿಯಾಗಿದ್ದೇನೆ” ಎನ್ನುವ ಉಮರ್ ಖಾಲಿದ ವಿಪಕ್ಷ ಮತ್ತು ಹೋರಾಟಗಾರರ ಮೌನದ ಬಗ್ಗೆ ಬೇಸರ ಪಟ್ಟುಕೊಳ್ಳುತ್ತಾರೆ.
ಆದರೆ, ಉಮರ್ ಖಾಲಿದ್ ತಮ್ಮ ನಿಲುವು ಯಾವತ್ತಿಗೂ ಬದಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಉಮರ್ ಖಾಲಿದ್ ತಮ್ಮ ಜೈಲು ಜೀವನ, ಕುಟುಂಬದಿಂದ ದೂರವಿರುವ ನೋವು, ಪುಸ್ತಕಗಳೊಂದಿಗೆ ಕಳೆದ ದಿನಗಳು ಮತ್ತು ಸ್ವಾತಂತ್ರ್ಯದ ಅರ್ಥದ ಕುರಿತು ಅನೇಕ ಕಡೆ ಮಾತನಾಡಿದ್ದಾರೆ. ಆದರೆ ಆ ಮಾತುಗಳಿಗಿಂತಲೂ ದೊಡ್ಡ ಪ್ರಶ್ನೆಯೊಂದು ಅವರ ನಮ್ಮೆದುರು ನಿಂತು ಕಾಡುತ್ತದೆ. ವಿಚಾರಣೆ ಪೂರ್ಣಗೊಳ್ಳುವ ಮೊದಲೇ ವರ್ಷಗಳ ಕಾಲ ವ್ಯಕ್ತಿಯೊಬ್ಬನನ್ನು ಜೈಲಿನಲ್ಲಿ ಇರಿಸುವುದು ನ್ಯಾಯವೇ? ಸಾರ್ವಜನಿಕ ಜೀವನದಲ್ಲಿ ವ್ಯಕ್ತಿಗಳನ್ನು ದೇವರನ್ನಾಗಿಸುವುದೂ, ರಾಕ್ಷಸರನ್ನಾಗಿಸುವುದೂ ಎರಡೂ ಅವರ ಮಾನವೀಯತೆಯನ್ನು ಅಳಿಸಿಹಾಕುತ್ತವೆ. ವ್ಯಕ್ತಿಯ ಜಟಿಲತೆಯನ್ನು ಒಪ್ಪಿಕೊಳ್ಳುವ ಸಂಸ್ಕೃತಿಯೇ ಪ್ರಜಾಪ್ರಭುತ್ವದ ಬಲ.
ಇದು ಕೇವಲ ಉಮರ್ ಖಾಲಿದ್ ಅವರ ಪ್ರಶ್ನೆಯಲ್ಲ. ಭಾರತದ ವಿವಿಧ ಜೈಲುಗಳಲ್ಲಿ ಸಾವಿರಾರು ವಿಚಾರಣಾಧೀನ ಕೈದಿಗಳು ವರ್ಷಗಳ ಕಾಲ ಬಂಧನದಲ್ಲೇ ಉಳಿದಿದ್ದಾರೆ. ಅವರಲ್ಲಿ ಹಲವರು ಕೊನೆಗೆ ನಿರ್ದೋಷಿಗಳೆಂದು ಬಿಡುಗಡೆಯಾದರೂ, ಕಳೆದುಹೋದ ವರ್ಷಗಳನ್ನು ಯಾರೂ ಮರಳಿ ಕೊಡಲಾರರು. ಈ ವಾಸ್ತವಿಕತೆ ನ್ಯಾಯದ ತತ್ವವನ್ನೇ ಪ್ರಶ್ನಿಸುತ್ತದೆ.
ಒಂದು ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯವು ಸಹಜ. ಸರ್ಕಾರವನ್ನು ಟೀಕಿಸುವುದು, ಪ್ರತಿಭಟಿಸುವುದು, ಪ್ರಶ್ನಿಸುವುದು—ಇವು ಸಂವಿಧಾನಾತ್ಮಕ ಹಕ್ಕುಗಳು. ಆದರೆ ಭಿನ್ನಾಭಿಪ್ರಾಯ ಮತ್ತು ಅಪರಾಧದ ನಡುವಿನ ಗಡಿ ಮಸುಕಾದಾಗ, ಪ್ರಜಾಪ್ರಭುತ್ವದ ಆರೋಗ್ಯದ ಬಗ್ಗೆ ಪ್ರಶ್ನೆಗಳು ಏಳುವುದು ಸಹಜ.
“2019ರ ಸಿಎಎ ವಿರೋಧಿ ಚಳವಳಿಯಲ್ಲಿ ಹೇಳಿದ್ದನ್ನೇ ಮತ್ತೆ ಹೇಳುತ್ತೇನೆ. ನಾವು ಹಿಂಸೆಗೆ ಹಿಂಸೆಯಿಂದ ಪ್ರತಿಕ್ರಿಯಿಸುವುದಿಲ್ಲ. ಅವರು ದ್ವೇಷ ಹರಡಿದರೆ, ನಾವು ಪ್ರೀತಿಯಿಂದ ಉತ್ತರಿಸುತ್ತೇವೆ” ಎನ್ನುವ ಉಮರ್ ಖಾಲಿದ್ ನನ್ನು ಇನ್ನೆಷ್ಟು ಕಾಲ ಬಂಧನದಲ್ಲಿಡುವಿರಿ?
ಒಬ್ಬ ವ್ಯಕ್ತಿಯನ್ನು ಬಂಧಿಸುವುದು ಕಾನೂನಿನ ಪ್ರಕ್ರಿಯೆಯಾಗಿರಬಹುದು. ಆದರೆ, ಅವನನ್ನು ಸಮಾಜದ ಕಣ್ಣಿನಲ್ಲಿ ಶಾಶ್ವತವಾಗಿ ಅಪರಾಧಿಯನ್ನಾಗಿ ಮಾಡುವುದು ನ್ಯಾಯದ ಕೆಲಸವಲ್ಲ. ಆರೋಪ ಮತ್ತು ಅಪರಾಧದ ನಡುವಿನ ವ್ಯತ್ಯಾಸವನ್ನು ಮರೆತಾಗ ಪ್ರಜಾಪ್ರಭುತ್ವದ ಆತ್ಮವೇ ದುರ್ಬಲವಾಗುತ್ತದೆ.
ಉಮರ್ ಖಾಲಿದ್ ಅವರ ಮೇಲಿನ ಆರೋಪಗಳು ಗಂಭೀರವಾಗಿವೆ. ದೆಹಲಿ ಗಲಭೆಯ ಸಂಚು ಪ್ರಕರಣದಲ್ಲಿ ಅವರನ್ನು UAPA ಅಡಿಯಲ್ಲಿ ಬಂಧಿಸಲಾಗಿದೆ. ಸರ್ಕಾರ ಮತ್ತು ತನಿಖಾ ಸಂಸ್ಥೆಗಳು ತಮ್ಮ ಬಳಿ ಸಾಕಷ್ಟು ಸಾಕ್ಷ್ಯಗಳಿವೆ ಎಂದು ಹೇಳುತ್ತಿವೆ. ಮತ್ತೊಂದೆಡೆ, ಉಮರ್ ಖಾಲಿದ್ ಮತ್ತು ಅವರ ಪರ ವಕೀಲರು ಈ ಆರೋಪಗಳನ್ನು ರಾಜಕೀಯ ಪ್ರೇರಿತವೆಂದು ವಾದಿಸುತ್ತಿದ್ದಾರೆ. ಈ ವಿವಾದದ ಅಂತಿಮ ತೀರ್ಪು ನ್ಯಾಯಾಲಯದ್ದೇ. ಆದರೆ, ನ್ಯಾಯಾಲಯದ ತೀರ್ಪು ಬರುವ ಮುನ್ನವೇ ಸಾರ್ವಜನಿಕ ವಲಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಯ ಸಾಮಾಜಿಕ ಶಿಕ್ಷೆ ಆರಂಭವಾಗಿಬಿಡುತ್ತದೆ. ಸಾಮಾಜಿಕ ನ್ಯಾಯ ಕೋರಿ ಯಾರಾದರೂ ಮಾನವೀಯ ದೃಷ್ಟಿಯಿಂದ ಬರೆದಾಗಲೂ ಫ್ಯಾಸಿಸ್ಟ್ ಶಕ್ತಿಗಳು ಅವರ ಮೇಲೆ ಮುಗಿಬೀಳುತ್ತವೆ. ನ್ಯಾಯಕ್ಕಾಗಿ ಯಾರೂ ದನಿ ಎತ್ತಬಾರದೆನ್ನುವ ಅಲಿಖಿತ ಕಾನೂನೊಂದು ಪ್ರಚಲಿತದಲ್ಲಿದೆ. ಇಂದು ಚಿಂತೆಯ ವಿಷಯವಾಗಿದೆ.

ಭಾರತೀಯ ನ್ಯಾಯಶಾಸ್ತ್ರದಲ್ಲಿ ಒಂದು ಮೂಲಭೂತ ತತ್ವವಿದೆ, “ತಪ್ಪು ಸಾಬೀತಾಗುವವರೆಗೆ ಪ್ರತಿಯೊಬ್ಬ ಆರೋಪಿಯೂ ನಿರ್ದೋಷಿ.” ಇದೇ ಕಾರಣಕ್ಕೆ ಜಾಮೀನು ಮತ್ತು ನ್ಯಾಯಸಮ್ಮತ ವಿಚಾರಣೆಗೆ ವಿಶೇಷ ಮಹತ್ವ ನೀಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸುಪ್ರೀಂ ಕೋರ್ಟ್ ಕೂಡ UAPA ಪ್ರಕರಣಗಳಲ್ಲಿಯೂ ವಿಚಾರಣೆ ಅತಿಯಾಗಿ ವಿಳಂಬವಾದರೆ ದೀರ್ಘಾವಧಿಯ ಬಂಧನವೇ ಶಿಕ್ಷೆಯಾಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ನ್ಯಾಯದ ಉದ್ದೇಶ ಶಿಕ್ಷೆ ನೀಡುವುದಷ್ಟೇ ಅಲ್ಲ; ನ್ಯಾಯಸಮ್ಮತ ಪ್ರಕ್ರಿಯೆಯನ್ನು ಖಚಿತಪಡಿಸುವುದೂ ಆಗಿದೆ.
ಸಂವಿಧಾನ ತಜ್ಞ ಗೌತಮ್ ಭಾಟಿಯಾ ಹಲವು ಬರಹಗಳಲ್ಲಿ, “ಪ್ರಕ್ರಿಯೆಯೇ ಶಿಕ್ಷೆಯಾಗಬಾರದು” (Process should not become punishment) ಎಂದು ಒತ್ತಿ ಹೇಳಿದ್ದಾರೆ. ಭಾರತದ ನ್ಯಾಯ ವ್ಯವಸ್ಥೆಯಲ್ಲಿ ಅನೇಕ ವಿಚಾರಣಾಧೀನ ಕೈದಿಗಳು ಶಿಕ್ಷೆ ವಿಧಿಸುವ ಮೊದಲೇ ಹಲವು ವರ್ಷಗಳನ್ನು ಜೈಲಿನಲ್ಲಿ ಕಳೆಯುತ್ತಾರೆ. ನಂತರ ಅವರು ನಿರ್ದೋಷಿಗಳೆಂದು ಸಾಬೀತಾದರೂ, ಕಳೆದುಹೋದ ವರ್ಷಗಳನ್ನು ಯಾರೂ ಹಿಂದಿರುಗಿಸಲು ಸಾಧ್ಯವಿಲ್ಲ.
ಇನ್ನೊಂದೆಡೆ, ಸರ್ಕಾರ ಮತ್ತು ತನಿಖಾ ಸಂಸ್ಥೆಗಳು ಈ ಪ್ರಕರಣ ರಾಜಕೀಯ ಪ್ರೇರಿತವಲ್ಲ ಎಂದು ನಿರಂತರವಾಗಿ ಹೇಳುತ್ತಿವೆ. ಅವರ ಪ್ರಕಾರ, ನ್ಯಾಯಾಂಗವು ಸಂಪೂರ್ಣ ಸ್ವತಂತ್ರವಾಗಿದ್ದು, ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಲಾಗಿದೆಯಂತೆ !
ಒಟ್ಟಾರೆ, ಈ ಸಂದರ್ಭದಲ್ಲಿ ಉಮರ್ ಖಾಲಿದ್ ತಮ್ಮ ಕಾನೂನು ಹೋರಾಟಕ್ಕಿಂತಲೂ ಹೆಚ್ಚು, ದೀರ್ಘಕಾಲದ ಬಂಧನದಿಂದ ಉಂಟಾದ ಮಾನಸಿಕ ನೋವು, ಸಾಮಾಜಿಕ ಏಕಾಂತ ಮತ್ತು “ಮನುಷ್ಯ”ನಾಗಿ ಕಾಣಿಸಿಕೊಳ್ಳುವ ಹಕ್ಕಿನ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಮತ್ತೊಂದು ಸಂಗತಿ ಎಂದರೆ – ಜೈಲು ಕೇವಲ ದೇಹವನ್ನು ಬಂಧಿಸಬಹುದು; ಆಲೋಚನೆಗಳನ್ನು ಅಲ್ಲ. ಇತಿಹಾಸದಲ್ಲಿ ಅನೇಕ ಲೇಖಕರು, ಚಿಂತಕರು ಮತ್ತು ರಾಜಕೀಯ ನಾಯಕರಿಗೆ ಜೈಲು ಅನುಭವವಾಗಿದೆ. ಅವರೊಂದಿಗೆ ಒಪ್ಪಿಕೊಳ್ಳಬಹುದು ಅಥವಾ ಭಿನ್ನಾಭಿಪ್ರಾಯ ಹೊಂದಬಹುದು. ಆದರೆ ಅವರ ಧ್ವನಿಯನ್ನು ಕೇಳುವ ಹಕ್ಕು ಸಮಾಜಕ್ಕಿದೆ.
ಭಿನ್ನ ದನಿಗಳನ್ನು ಹತ್ತಿಕ್ಕುವುದು ಭಾರತಕ್ಕೆ ಹೊಸ ವಿದ್ಯಮಾನವೇನಲ್ಲ. ಮಹಾತ್ಮ ಗಾಂಧಿ, ಡಾ. ಬಿ. ಆರ್. ಅಂಬೇಡ್ಕರ್, ನೆಲ್ಸನ್ ಮಂಡೇಲಾ ಸೇರಿದಂತೆ ಅನೇಕ ಚಿಂತಕರು ತಮ್ಮ ಕಾಲದಲ್ಲಿ ತೀವ್ರ ಟೀಕೆ, ಅಪಪ್ರಚಾರ ಮತ್ತು ಅಧಿಕಾರದ ದಮನವನ್ನು ಎದುರಿಸಿದ್ದರು. ಆದರೆ ಇತಿಹಾಸದ ಪಾಠವೇನೆಂದರೆ, ಭಿನ್ನಮತವನ್ನು ಅಪರಾಧವಾಗಿ ಪರಿವರ್ತಿಸುವ ಸಮಾಜ ತನ್ನ ಪ್ರಜಾಪ್ರಭುತ್ವದ ಶಕ್ತಿಯನ್ನೇ ಕಳೆದುಕೊಳ್ಳುತ್ತದೆ.
ಉಮರ್ ಖಾಲಿದ್ ಅವರ ಬಗ್ಗೆ ಓದುವಾಗ, ವ್ಯಕ್ತಿಯ ಬಗ್ಗೆ ಇರುವ ರಾಜಕೀಯ ಅಭಿಪ್ರಾಯಗಳನ್ನು ಸ್ವಲ್ಪ ಹೊತ್ತು ಬದಿಗಿಟ್ಟು ಒಂದು ದೊಡ್ಡ ಪ್ರಶ್ನೆಯನ್ನು ಕೇಳಬೇಕಾಗಿದೆ: ಪ್ರಜಾಪ್ರಭುತ್ವದ ಶಕ್ತಿ ಭಿನ್ನಾಭಿಪ್ರಾಯವನ್ನು ಸಹಿಸಿಕೊಳ್ಳುವ ಸಾಮರ್ಥ್ಯದಲ್ಲಿದೆಯೇ, ಅಥವಾ ಅದನ್ನು ದಮನಿಸುವ ಸಾಮರ್ಥ್ಯದಲ್ಲಿದೆಯೇ ?
ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನ ಸಭೆಯಲ್ಲಿ ಎಚ್ಚರಿಕೆ ನೀಡಿದ್ದರು: “ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ, ಅದನ್ನು ನಡೆಸುವವರು ಉತ್ತಮರಲ್ಲದಿದ್ದರೆ ಅದು ಯಶಸ್ವಿಯಾಗುವುದಿಲ್ಲ.”
ಈ ಮಾತಿನ ಅರ್ಥವೇನೆಂದರೆ, ಪ್ರಜಾಪ್ರಭುತ್ವದ ಗುಣಮಟ್ಟವನ್ನು ಕೇವಲ ಕಾನೂನುಗಳು ನಿರ್ಧರಿಸುವುದಿಲ್ಲ; ಅವುಗಳನ್ನು ಜಾರಿಗೊಳಿಸುವ ಸಂಸ್ಥೆಗಳ ನಡವಳಿಕೆಯೂ ನಿರ್ಧರಿಸುತ್ತದೆ. ಭಿನ್ನಮತವನ್ನು ಶತ್ರುತ್ವವೆಂದು ಕಾಣುವ ಸಂಸ್ಕೃತಿ ಬೆಳೆದರೆ, ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತದೆ.
ಈ ಪ್ರಶ್ನೆಗೆ ಉತ್ತರ ಹುಡುಕುವುದು ಕೇವಲ ನ್ಯಾಯಾಲಯದ ಕೆಲಸವಲ್ಲ. ಅದು ಮಾಧ್ಯಮ, ನಾಗರಿಕ ಸಮಾಜ, ಬೌದ್ಧಿಕ ವಲಯ ಮತ್ತು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯೂ ಹೌದು. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಯ ಸ್ವಾತಂತ್ರ್ಯ ಮತ್ತು ರಾಜ್ಯದ ಭದ್ರತೆ—ಇವೆರಡರ ನಡುವಿನ ಸಮತೋಲನವೇ ಅದರ ನಿಜವಾದ ಪರೀಕ್ಷೆ.
ಈ ಹಿನ್ನೆಲೆಯಲ್ಲಿ ಡಾ. ಅಂಬೇಡ್ಕರ್ ಅವರ ಒಂದು ಮಾತು ನೆನಪಾಗುತ್ತದೆ: “ಸಂವಿಧಾನಿಕ ನೈತಿಕತೆ ಸಹಜವಾಗಿ ಹುಟ್ಟುವುದಿಲ್ಲ; ಅದನ್ನು ಸಮಾಜದಲ್ಲಿ ಬೆಳೆಸಬೇಕು.” ಆ ನೈತಿಕತೆಯ ಒಂದು ಮುಖ್ಯ ಅಂಶವೇ—ಆರೋಪಿಯನ್ನು ಅಪರಾಧಿ ಎಂದು ತೀರ್ಮಾನಿಸುವ ಹಕ್ಕು ನ್ಯಾಯಾಲಯಕ್ಕಷ್ಟೇ ಇದೆ; ಸಮಾಜಕ್ಕೆ ಅಲ್ಲ.
ಕೊನೆಯದಾಗಿ ಉಮರ್ ಖಾಲಿದ್ ಅವರ ಮಾತುಗಳನ್ನು ಸಿದ್ಧಾಂತಗಳನ್ನು ಒಪ್ಪಬಹುದು ಅಥವಾ ವಿರೋಧಿಸಬಹುದು. ಆದರೆ ಅದು ಎತ್ತಿರುವ ಪ್ರಶ್ನೆಗಳನ್ನು ನಿರ್ಲಕ್ಷಿಸಲಾಗದು. ವಿಚಾರಣೆ ಪೂರ್ಣಗೊಳ್ಳುವ ಮೊದಲೇ ಒಬ್ಬ ವ್ಯಕ್ತಿಯ ಸಾಮಾಜಿಕ ಮರಣ ಸಂಭವಿಸಬೇಕೇ? ಭಿನ್ನಮತವನ್ನು ರಾಷ್ಟ್ರವಿರೋಧದೊಂದಿಗೆ ಸಮೀಕರಿಸುವುದು ಪ್ರಜಾಪ್ರಭುತ್ವಕ್ಕೆ ಅಪಾಯವಲ್ಲವೇ? ಹಾಗಾದರೆ ರಾಷ್ಟ್ರೀಯ ಭದ್ರತೆ ಮತ್ತು ನಾಗರಿಕ ಸ್ವಾತಂತ್ರ್ಯದ ನಡುವೆ ಸಮತೋಲನವನ್ನು ಹೇಗೆ ಸಾಧಿಸಬೇಕು? ಈ ಪ್ರಶ್ನೆಗಳು ಕೇವಲ ಉಮರ್ ಖಾಲಿದ್ ಅವರದ್ದಲ್ಲ. ಅವು ಭಾರತದ ಪ್ರಜಾಪ್ರಭುತ್ವ, ನ್ಯಾಯ ವ್ಯವಸ್ಥೆ ಮತ್ತು ನಾಗರಿಕ ಸಮಾಜದ ಪರೀಕ್ಷೆಯ ಪ್ರಶ್ನೆಗಳಾಗಿವೆ. ಸಾಮಾಜಿಕ ನ್ಯಾಯಕ್ಕಾಗಿ ದನಿ ಎತ್ತುವುದೂ ಅಷ್ಟೇ ಮುಖ್ಯವಾಗಿದೆ.
— ಫೈಜ್ ಅಹ್ಮದ್ ಫೈಜ್ ಅವರ ಕ್ರಾಂತಿಗೀತೆ ಜೈಲಿನ ಗೋಡೆಗಳನ್ನು ದಾಟಿ ಅನುರಣಿಸಬೇಕಿದೆ –
“ಬೋಲ್ ಕಿ ಲಬ್ ಆಜಾದ್ ಹೈ ತೇರೆ / ಬೋಲ್ ಝಬಾನ್ ಅಬ್ ತಕ್ ತೇರಿ ಹೈ / ತೇರಾ ಸುತ್ವಾನ್ ಜಿಸ್ಮ್ ಹೈ ತೇರಾ / ಬೋಲ್ ಕಿ ಜಾನ್ ಅಬ್ ತಕ್ ತೇರಿ ಹೈ”
ಮಾತಾಡು, ನಿನ್ನ ತುಟಿಗಳಿನ್ನೂ ಸ್ವತಂತ್ರವಾಗಿವೆ, ಮಾತಾಡು, ಈ ನಾಲಿಗೆ ಇನ್ನೂ ನಿನ್ನದೇ ಆಗಿದೆ! ನಿನ್ನ ಈ ಗಟ್ಟಿ ದೇಹ ನಿನ್ನದೇ, ಮಾತನಾಡು, ನಿನ್ನ ಆತ್ಮ ಇನ್ನೂ ನಿನ್ನೊಳಗೇ ಇದೆ!
“ನ್ಯಾಯವು ಆಗಬೇಕು ಮಾತ್ರವಲ್ಲ, ಅದು ಆಗುತ್ತಿರುವುದು ಜನರಿಗೆ ಗೋಚರಿಸಬೇಕು.”ಬ್ರಿಟಿಷ್ ನ್ಯಾಯಮೂರ್ತಿ Lord Hewart ಅವರ ಈ ಪ್ರಸಿದ್ಧ ಮಾತು ಇಂದು ಕೂಡ ಪ್ರಸ್ತುತವಾಗಿದೆ. ಕಾಲ ಎಂದಿಗೂ ಅಧಿಕಾರದ ಸ್ವತ್ತಲ್ಲ. ಇಂದು ಸರಪಳಿಯಲ್ಲಿ ಬಂಧಿಯಾಗಿರುವ ಧ್ವನಿ, ನಾಳೆ ಮುಂಜಾನೆಯ ಬೆಳಕಿನಂತೆ ಹೊರಬರಲೇಬೇಕು. ಏಕೆಂದರೆ, ಹಿಂಸೆಗಿಂತ ಶಕ್ತಿಶಾಲಿಯಾದದ್ದು ಸತ್ಯ, ಮತ್ತು ಜೈಲಿನ ಗೋಡೆಗಳಿಗಿಂತ ಎತ್ತರವಾದದ್ದು ಮನುಷ್ಯನ ಆತ್ಮಸಾಕ್ಷಿ.

ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ



