ಬೆಂಗಳೂರಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುತ್ತಿದ್ದ ವೇಳೆ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ವೇದಿಕೆಯ ಮೇಲೆಯೇ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆಯುತ್ತಿದ್ದ ಪಿ.ಜಿ.ಆರ್ ಸಿಂಧ್ಯಾ ಅವರ ಅಭಿನಂದನಾ ಸಮಾರಂಭದಲ್ಲಿ ಘಟನೆ ನಡೆದಿದೆ.
ರಕ್ತದಲ್ಲಿನ ಸಕ್ಕರೆ ಅಂಶ ಇಳಿಕೆಯಾದ ಕಾರಣ ಅಸ್ವಸ್ಥರಾಗಿದ್ದಾರೆ. ಶೀಘ್ರವೇ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಾರ್ಯಕ್ರಮದಲ್ಲಿ ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್ ಉಪಸ್ಥಿತರಿದ್ದರು. ಖಾದರ್ ತಮ್ಮ ಕಾರಿನಲ್ಲಿ ಸಂತೋಷ್ ಹೆಗ್ಡೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಸದ್ಯ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿರುವ ಸಂತೋಷ್ ಹೆಗ್ಡೆ ಆರೋಗ್ಯ ಸುಧಾರಿಸಿದ್ದು, ತುರ್ತು ಚಿಕಿತ್ಸಕಿ ಡಾ. ಹರ್ಷಿತಾ ಅವರ ನೇತೃತ್ವದಲ್ಲಿ ವೈದ್ಯಕೀಯ ನಿಗಾದಲ್ಲಿರುವ ಅವರನ್ನು ಶೀಘ್ರವೇ ಡಿಸ್ಚಾರ್ಜ್ ಮಾಡಲಾಗುವುದು ಎಂದು ತಿಳಿಸಿದರು.




