ರಾಜ್ಯಸಭೆಯ ಅತಿ ಕಿರಿಯ ಸದಸ್ಯ ರಾಘವ್ ಛಡ್ಡಾ ಜನಸಾಮಾನ್ಯರನ್ನು ಬಾಧಿಸುತ್ತಿದ್ದ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಸತತವಾಗಿ ಧ್ವನಿ ಎತ್ತಿದ್ದರು. ಏರ್‌ಪೋರ್ಟ್‌ನಲ್ಲಿ ಸಿಗುವ ದುಬಾರಿ ಆಹಾರ, ಮೊಬೈಲ್ ಡೇಟಾ ಹೆಸರಿನಲ್ಲಿ ಖಾಸಗಿ ಕಂಪನಿಗಳು ಮಾಡುತ್ತಿರುವ ಸುಲಿಗೆ, ಗಿಗ್ ಕಾರ್ಮಿಕರ ಸಮಸ್ಯೆ, ಪಿತೃತ್ವದ ರಜೆ ಕಾನೂನುಬದ್ಧಗೊಳಿಸುವ ಬಗ್ಗೆ… ಹೀಗೆ ಯಾರೂ ಎತ್ತದ, ಆದರೆ ಜನರ ಬದುಕಿಗೆ ಹತ್ತಿರವಿರುವ ಹಲವು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಭರವಸೆಯ ನಾಯಕನಾಗುವ ಲಕ್ಷಣ ತೋರಿದ್ದರು.
ಆಮ್ ಆದ್ಮಿ ಪಕ್ಷದ ಯುವ ನಾಯಕ, ರಾಜ್ಯಸಭೆಯ ಅತಿಕಿರಿಯ ಸದಸ್ಯ ರಾಘವ್ ಛಡ್ಡಾ ಅತ್ಯುತ್ತಮ ಮಾತುಗಾರರಲ್ಲಿ ಒಬ್ಬರು. ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಮಾಧ್ಯಮಗಳು ಮಾತ್ರವಲ್ಲ ಸಾಮಾನ್ಯ ಜನರ ಪಾಲಿಗೆ ʼನೀಲಿ ಕಣ್ಣಿನ ಹುಡುಗʼ ಎನಿಸಿದರೆ ಅಚ್ಚರಿಯಿಲ್ಲ. ಬಜೆಟ್ ಅಧಿವೇಶನಲ್ಲಿ ಅವರು ಎತ್ತಿರುವ ಕೆಲವು ಪ್ರಶ್ನೆಗಳಿಗೆ ತಕ್ಷಣ ಪರಿಹಾರವೂ ಸಿಕ್ಕಿರುವುದು ಚಡ್ಡಾ ಅವರ ರಾಜಕೀಯ ಗ್ರ್ಯಾಫ್ ಏಕ್‌ದಂ ಮೇಲೇರುವಂತೆ ಮಾಡಿತ್ತು. ಗಿಗ್ ಕಾರ್ಮಿಕರ ಸಮಸ್ಯೆ, ಪಿತೃತ್ವದ ರಜೆಯನ್ನು ಕಾನೂನುಬದ್ಧಗೊಳಿಸುವುದು, ಏರ್ಪೋರ್ಟ್‌ನಲ್ಲಿ ಸಿಗುವ ದುಬಾರಿ ಆಹಾರದ ಬಗ್ಗೆ, ಮೊಬೈಲ್ ಡೇಟಾ ಹೆಸರಿನಲ್ಲಿ ಖಾಸಗಿ ಕಂಪನಿಗಳು ಮಾಡುತ್ತಿರುವ ಸುಲಿಗೆ… ಹೀಗೆ ಯಾರೂ ಎತ್ತದ ಆದರೆ ಜನರ ಬದುಕಿಗೆ ಹತ್ತಿರವಿರುವ ಹಲವು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಭರವಸೆಯ ನಾಯಕನಾಗುವ ಸೂಚನೆ ತೋರಿದ್ದರು. ಸಂಜಯಸಿಂಗ್ ಅವರು ರಾಜ್ಯಸಭೆಯಲ್ಲಿ ಆಮ್ ಆದ್ಮೀ ಪಕ್ಷದ ಅತ್ಯಂತ ಗಟ್ಟಿ ರಾಜಕೀಯ ದನಿಯಾಗಿದ್ದಾರೆ. ಮತ್ತೊಬ್ಬ ಸಮರ್ಥ ವಾಕ್ಪಟು. ಛಡ್ಡಾ ಸಾಮಾಜಿಕ ಸಮಸ್ಯೆಗಳನ್ನು ಅತ್ಯಂತ ಸಮರ್ಥವಾಗಿ ಮುನ್ನೆಲೆಗೆ ತರುತ್ತಿದ್ದವರು. ಇದೊಂದು ಅಪರೂಪದ ಜುಗಲ್ ಬಂದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಛಡ್ಡಾ ಅವರಂತಹ ಸಂಸದೀಯ ಪಟುವನ್ನು ಆ ಪಕ್ಷ ಅವರನ್ನು ಗೌರವಿಸಬೇಕಿತ್ತು. ಆದರೆ, ನಿನ್ನೆ ಆಪ್ ನಿಂದ ಹೊರಬಿದ್ದ ಸುದ್ದಿ ನಿರಾಶಾದಾಯಕ ಮಾತ್ರವಲ್ಲ, ಕೇಜ್ರಿವಾಲ್ ನಾಯಕತ್ವದ ದೊಡ್ಡ ಲೋಪವನ್ನು ಎತ್ತಿ ತೋರಿಸುತ್ತಿದೆ.
ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ಮುಕ್ತ ಭಾರತ ಚಳವಳಿಯಲ್ಲಿ ಅರವಿಂದ ಕೇಜ್ರಿಪಾಲ್ ಮೊದಲು ದೇಶಕ್ಕೆ ಪರಿಚಯವಾಗಿದ್ದರು. ಇವರೊಂದಿಗೆ ನಿವೃತ್ತ ಐಎಎಸ್ ಅಧಿಕಾರಿ ಕಿರಣ್ ಬೇಡಿ, ಪ್ರೊ ಯೋಗೇಂದ್ರ ಯಾದವ್, ಸುಪ್ರೀಂಕೋರ್ಟ್‌ನ ವಕೀಲರಾದ ಪ್ರಶಾಂತ್ ಭೂಷಣ್ ಯುಪಿಎ ಸರ್ಕಾರದ ಹಲವು ಭ್ರಷ್ಟಾಚಾರಗಳ ವಿರುದ್ಧ ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಬೇರೆ ಬೇರೆ ರಾಜ್ಯಗಳಲ್ಲಿಯೂ ಯುವಜನರು ಸ್ವಯಂಪ್ರೇರಿತವಾಗಿ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಭ್ರಷ್ಟಾಚಾರದ ವಿರುದ್ಧ ಇಡೀ ದೇಶ ಜಾಗೃತಗೊಳ್ಳುವ ಸೂಚನೆಗಳು ಕಂಡಿದ್ದವು. ಇನ್ನೇನು 2014ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಾಗ ನಡೆದ ಈ ಬೃಹತ್ ಚಳವಳಿಯ ಲಾಭವನ್ನು ನೇರವಾಗಿ ಬಿಜೆಪಿ ಪಡೆದಿತ್ತು. ವಾಸ್ತವದಲ್ಲಿ ಅಣ್ಣಾ ಹಿಂದೆ ಆರೆಸ್ಸೆಸ್ ಇತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. ಕಾಲಾನಂತರ ಈ ಮಾತುಗಳು ನಿಜವಾದವು. ಆದರೆ ಯುಪಿಎ ಸರ್ಕಾರದ ಆಡಳಿತ ವಿರೋಧಿ ಅಲೆ, ಅಣ್ಣಾ ಹಜಾರೆ ನಡೆಸಿದ ಹೋರಾಟದಲ್ಲಿ ಮೋದಿ ಅಧಿಕಾರ ಹಿಡಿದರೆ, ಅದೇ ಸಮಯಲ್ಲಿ ಕೇಜ್ರಿವಾಲ್ ತಂಡ ಹುಟ್ಟು ಹಾಕಿದ್ದು ಆಮ್ ಆದ್ಮಿ ಪಕ್ಷ. ಲೋಕಸಭೆ ಚುನಾವಣೆ ನಡೆದ ಒಂದೇ ವರ್ಷದಲ್ಲಿ ಬಂದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕೇಜ್ರಿವಾಲ್ ಪಕ್ಷ ಅಚ್ಚರಿಯ ಗೆಲುವು ದಾಖಲಿಸಿತ್ತು. ಮೊದಲ ಅವಧಿಯಲ್ಲಿ ಸರ್ಕಾರಿ ಶಾಲೆಗಳ ಆಧುನೀಕರಣ, ಶಿಕ್ಷಣ-ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದರು. ಆದರೆ ಸರ್ವಾಧಿಕಾರಿ ಮನಸ್ಥಿತಿಯನ್ನು ಬೆಳೆಸಿಕೊಂಡರು. ಪಕ್ಷ ಕಟ್ಟುವಲ್ಲಿ ಹೆಗಲಾಗಿದ್ದ ಒಬ್ಬೊಬ್ಬರನ್ನೇ ದೂರ ಸರಿಯುವಂತೆ ಮಾಡಿದ್ದರು. ಕಿರಣ್ ಬೇಡಿಯವರು ಬಿಜೆಪಿ ಸೇರಿಕೊಂಡು ರಾಜ್ಯಪಾಲರಾದರು. ಪಕ್ಷ ಕಟ್ಟಲು ಜೊತೆಯಾಗಿದ್ದ ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಅವರಂತಹ ಮೇಧಾವಿ ನಾಯಕರನ್ನು, ಮೇಧಾ ಪಾಟ್ಕರ್ ಅವರಂತಹ ಜನಪರ ಹೋರಾಟಗಾರರನ್ನು ಕೇಜ್ರಿವಾಲ್ ದೂರ ಮಾಡಿದ್ದರು.
ಎರಡನೇ ಬಾರಿಗೆ ದೆಹಲಿ ಗದ್ದುಗೆ ಹಿಡಿದ ನಂತರ ಮೋದಿ-ಅಮಿತ್ ಶಾ ಹುನ್ನಾರದ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ಸಾಲು ಸಾಲು ಆರೋಪ ಹೊತ್ತು ಕೇಜ್ರೀವಾಲ್ ಸಂಪುಟದ ಸದಸ್ಯರು ಒಬ್ಬೊಬ್ಬರಾಗಿ ಜೈಲು ಸೇರಿದ್ದರು. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ವತಃ ಕೇಜ್ರಿವಾಲ್ ಅವರನ್ನೇ ಜನ ಗೆಲ್ಲಿಸಲಿಲ್ಲ. ಎರಡು ತಿಂಗಳ ಹಿಂದೆ ಕೇಜ್ರಿವಾಲ್ ಸಹಿತ ಬಿಜೆಪಿ ರಚಿಸಿದ್ದ ಅಬಕಾರಿ ಹಗರಣದ ಜಾಲ ಹರಿದು ಹೋಗಿ ಎಲ್ಲ ಆರೋಪಿಗಳು ಖುಲಾಸೆಗೊಂಡರು.
ಇದೀಗ ಪಕ್ಷದ ಸಮರ್ಥ ಯುವ ನಾಯಕ ಛಡ್ಡಾ ಅವರನ್ನು ರಾಜ್ಯಸಭೆಯಲ್ಲಿ ಪಕ್ಷದ ಉಪನಾಯಕನ ಹುದ್ದೆಯಿಂದ ತೆರವುಗೊಳಿಸಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಆ ಸ್ಥಾನವನ್ನು ಪಂಜಾಬ್ ಸಂಸದ ಅಶೋಕ್ ಮಿತ್ತಲ್ ಅವರಿಗೆ ನೀಡಲಾಗಿದೆ. ರಾಜ್ಯಸಭಾ ಕಾರ್ಯದರ್ಶಿಗೆ ಪತ್ರ ಬರೆದು ಪಕ್ಷದ ಕೋಟಾದಲ್ಲಿ ಮಾತನಾಡಲು ಅವಕಾಶ ನೀಡದಿರುವಂತೆ ಮನವಿ ಮಾಡಲಾಗಿದೆ ಎಂದು ವರದಿಯಾಗಿದೆ. ಇದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಅಷ್ಟೇ ಅಲ್ಲ ಕೇಜ್ರಿವಾಲ್ ಅವರ ಈ ನಡವಳಿಕೆ ಮತ್ತೊಬ್ಬ ಸಮರ್ಥ ಯುವನಾಯಕನನ್ನು ಕಳೆದುಕೊಳ್ಳುವತ್ತ ಸಾಗಿದೆ ಎಂಬ ಚರ್ಚೆಗಳು ಆರಂಭವಾಗಿದೆ. ಛಡ್ಡಾ ಬಿಜೆಪಿಗಾ, ಕಾಂಗ್ರೆಸ್ ಕಡೆಗಾ ಎಂಬ ಚರ್ಚೆಗೆ ಅವಕಾಶವಾಗಿದೆೆ. ಈ ಬೆಳವಣಿಗೆಯ ನಂತರ ಮಾತನಾಡಿರುವ ಛಡ್ಡಾ, “ನಾನು ಜನ ಸಾಮಾನ್ಯರ ಪರವಾಗಿ, ಸಾರ್ವಜನಿಕರ ಸಮಸ್ಯೆಗಳನ್ನು ರಾಜ್ಯಸಭೆಯಲ್ಲಿ ಧ್ವನಿ ಎತ್ತಿದ್ದರಿಂದ ಪಕ್ಷಕ್ಕೆ ಆದ ಸಮಸ್ಯೆ ಏನು? ನಾನು ಸದಾ ಜನಸಾಮಾನ್ಯರ ಪರವಾಗಿ, ಜನರ ಜೊತೆಗೆ ಇರುತ್ತೇನೆ. ನನ್ನ ಧ್ವನಿ ಅಡಗಿಸಲು ಸಾಧ್ಯವಿಲ್ಲ. ನಾನು ಹರಿಯುವ ನದಿಯಾಗಿದ್ದೆ. ಮುಂದೆ ಮುಳುಗಿಸುವ ಜಲಪ್ರವಾಹ ಆದೇನು” ಎಂದು ಒಗಟಿನ ರೀತಿ ಮಾತನಾಡಿದ್ದಾರೆ.
ಭ್ರಷ್ಟಾಚಾರ ಮುಕ್ತ ಸರ್ಕಾರ, ಸರಳತೆ ಮುಂತಾದ ಬಣ್ಣದ ಮಾತುಗಳನ್ನು ಆಡಿ ಅಧಿಕಾರ ಹಿಡಿದ ಕೇಜ್ರಿವಾಲ್ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ. ಮೊದಲ ಅವಧಿಯಲ್ಲಿ ಭರವಸೆ ಮೂಡಿಸಿದ್ದರು. ಎರಡನೇ ಅವಧಿ ಶುರುವಾಗುತ್ತಿದ್ದಂತೆ ಅವರ ಸರ್ಕಾರ ಹಲವು ಭ್ರಷ್ಟಾಚಾರದ ಆರೋಪ ಎದುರಿಸಬೇಕಾಯ್ತು. ಅಷ್ಟೇ ಅಲ್ಲ ಸರಳತೆಯ ಭರವಸೆಯನ್ನೂ ಹುಸಿಗೊಳಿಸಿ ಮುಖ್ಯಮಂತ್ರಿ ವಾಸಕ್ಕೆ ಶೀಷಮಹಲ್ ಎಂಬ ಭವ್ಯ ಬಂಗಲೆ ಕಟ್ಟಿಸಿಕೊಂಡು ವಿವಾದಕ್ಕೆ ಗುರಿಯಾಗಿದ್ದರು. ಭ್ರಷ್ಟಾಚಾರ ನಿರ್ಮೂಲನೆಯ ಹೋರಾಟದಲ್ಲಿ ಹುಟ್ಟಿಕೊಂಡ ನಾಯಕ- ಪಕ್ಷ ಅದೇ ಅಧಿಕಾರ ಮದದ ಕೂಪದಲ್ಲಿ ಬಿದ್ದರು. ಅಧಿಕಾರ ಕಳೆದುಕೊಳ್ಳುವಂತಾಗಿತ್ತು. ಸೋತರೂ ಕೇಜ್ರಿವಾಲ್ ಅವರ ನಾಯಕತ್ವ ಗುಣದಲ್ಲಿ ಸುಧಾರಣೆ ಕಂಡುಬಂದಿಲ್ಲ ಎಂಬುದಕ್ಕೆ ಛಡ್ಡಾ ಅವರನ್ನು ಬದಿಗೆ ಸರಿಸಿರುವುದೇ ಸಾಕ್ಷಿ. ಈಗಾಗಲೇ ದೆಹಲಿಯಲ್ಲಿ ಅಧಿಕಾರ ಕಳೆದುಕೊಂಡ ನಂತರ ಹಲವರು ಬೇರೆ ಪಕ್ಷಗಳಿಗೆ ವಲಸೆ ಹೋಗಿದ್ದಾರೆ. ಈಗ ಯುವ ನಾಯಕ ಛಡ್ಡಾ ಅದೇ ಹಾದಿ ಹಿಡಿದಿರುವ ಇಂಗಿತವಿದೆ. ರಾಜ್ಯಸಭೆಯಲ್ಲಿ ಜನರ ಸಮಸ್ಯೆಗಳ ಪರ ಧ್ವನಿ ಎತ್ತುತ್ತಿರುವ ನಾಯಕನೊಬ್ಬನರ ಅಧಿಕಾರ-ಅವಕಾಶ ಮೊಟಕುಗೊಳಿಸಿರುವುದು ಪಕ್ಷದ ಹಿತದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ.
ಈ ಮಧ್ಯೆ ರಾಘವ್ ಛಡ್ಡಾ ಕೇಜ್ರಿವಾಲ್ ಜೈಲುಪಾಲಾದಾಗಿನಿಂದಲೂ ಪಕ್ಷದ ಜೊತೆಗೆ ಅಂತರ ಕಾಯ್ದುಕೊಂಡು ಬಂದಿದ್ದರು ಎಂಬ ಆರೋಪ ಇದೆ. ಪಕ್ಷ ಸಂಕಷ್ಟದಲ್ಲಿದ್ದಾಗ ಛಡ್ಡಾ ಲಂಡನ್‌ನಲ್ಲಿದ್ದರು ಎಂಬ ಆರೋಪಕ್ಕೆ ಅಪರೂಪದ ಕಣ್ಣಿನ ಕಾಯಿಲೆಗೆ ಚಿಕಿತ್ಸೆ ಪಡೆಯುವ ಸಲುವಾಗಿ ಲಂಡನ್‌ನಲ್ಲಿದ್ದ ಕಾರಣವನ್ನು ಛಡ್ಡಾ ನೀಡಿದ್ದರು. ಆದರೆ, ಆನಂತರವೂ ಮಾತನಾಡಲೇ ಬೇಕಾದ ಸಂದರ್ಭದಲ್ಲಿ ಅವರು ಮಾತಾಡಿಲ್ಲ. ಕೇಜ್ರಿವಾಲ್ ಜಾಮೀನಿನ ಮೇಲೆ ಬಿಡುಗಡೆಯಾದಾಗ ಭೇಟಿ ಮಾಡಿಲ್ಲ, ಈಗ ಖುಲಾಸೆಯಾದ ನಂತರವೂ ಅಂತರ ಕಾಯ್ದುಕೊಂಡಿದ್ದರು ಎಂಬುದು ಛಡ್ಡಾ ಮೇಲಿನ ಆರೋಪ. ಇದಕ್ಕೆಲ್ಲ ಛಡ್ಡಾ ಅವರೇ ಉತ್ತರಿಸಬೇಕಿದೆ. ರಾಜ್ಯಸಭೆ ಸದಸ್ಯನನ್ನಾಗಿ ಮಾಡಿದ ತನ್ನದೇ ಪಕ್ಷದ ನಾಯಕರು ಸಂಕಷ್ಟದಲ್ಲಿದ್ದಾಗ ಮೌನವಾಗಿದ್ದ ಛಡ್ಡಾ ನಡವಳಿಕೆ ಕೂಡ ಪ್ರಶ್ನಾರ್ಹ. ಆದರೆ, ಜನರ ಪರವಾಗಿ ರಾಜ್ಯಸಭೆಯಲ್ಲಿ ನಿರಂತರವಾಗಿ ಮಾತನಾಡಿ ದೇಶದ ಗಮನ ಸೆಳೆದಿದ್ದ ಯುವ ನಾಯಕನಿಗೆ ದಿಢೀರನೆ ಮಾಡಿರುವ ಮುಖಭಂಗ ಸರಿಯಲ್ಲ. ತಾನೊಬ್ಬನೇ ಪ್ರಭಾವಿ ನಾಯಕ ಎನಿಸಬೇಕು ಎಂಬ ಸಣ್ಣತನ ಕೇಜ್ರಿವಾಲ್ ಅವರದ್ದು ಎಂದು ಹಲವರು ಆರೋಪಿಸಿದ್ದಾರೆ. ಪಕ್ಷದಲ್ಲಿ ಬೇರೆ ಯಾವ ನಾಯಕರನ್ನೂ ಬೆಳೆಸುವ ಗುಣ ಅವರಲ್ಲಿಲ್ಲ ಎಂಬ ಮಾತುಗಳು ಮುನ್ನೆಲೆಗೆ ಬಂದಿದೆ. ಅಷ್ಟೇ ಅಲ್ಲ ಪಂಜಾಬ್‌ನಲ್ಲಿ ಅಧಿಕಾರ ಹಿಡಿದ ಪಕ್ಷ ಚುನಾವಣಾಪೂರ್ವದಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಪಕ್ಷದ ಹೆಸರಿಗೆ ಕಳಂಕ ತಂದಿದೆ. ಇಂತಹ ಸಮಯದಲ್ಲಿ ಪಕ್ಷವನ್ನು ಕಟ್ಟುವ ಕೆಲಸ ಮಾಡುವ ಬದಲು ಕೆಡಹುವ ಕೆಲಸ ಮಾಡುವುದರಿಂದ ಪಕ್ಷಕ್ಕೆ ಒಳಿತಾಗುವುದು ಸಾಧ್ಯವಿಲ್ಲ.




