ನಿಯಂತ್ರಕಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ(ಸೆಬಿ) ಅದಾನಿ ಸಮೂಹದ 6 ಕಂಪನಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
2023ರ ಜನವರಿಯಲ್ಲಿ ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆ ಷೇರುಗಳನ್ನು ತಿರುಚಲಾಗಿದೆ ಎಂಬ ಆರೋಪ ಮಾಡಿದ ನಂತರ ಅದಾನಿ ಸಂಸ್ಥೆ ವಿರುದ್ಧ ಸೆಬಿ ತನಿಖೆ ಆರಂಭಿಸಿದೆ.
ಅದಾನಿ ಪವರ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಎನರ್ಜಿ ಸಲ್ಯೂಷನ್ಸ್, ಅದಾನಿ ವಿಲ್‌ಮಾರ್ ಹಾಗೂ ಅದಾನಿ ಪೋರ್ಟ್ ಕಂಪನಿಗಳಿಗೆ ಮಾರ್ಚ್ ತ್ರೈಮಾಸಿಕದಲ್ಲಿ ನೋಟಿಸ್ ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಲೋಕಸಭೆ ಚುನಾವಣೆ | ರಾಯ್‌ಬರೇಲಿಯಿಂದ ರಾಹುಲ್, ಅಮೇಥಿಯಿಂದ ಕೆಎಲ್ ಶರ್ಮಾ ಕಣಕ್ಕೆ
ನೋಟಿಸ್ ನೀಡಿದ ಕಾರಣ ಅದಾನಿ ಸಂಸ್ಥೆಯ ಷೇರುಗಳು ಶುಕ್ರವಾರ ಶೇ0.1 ರಿಂದ 1.6ರವರೆಗೆ ಕುಸಿತಗೊಂಡಿವೆ.
ಪಟ್ಟಿ ಮಾಡಿದ ಕಂಪನಿಗಳಲ್ಲಿ ಸರಿಯಾದ ನಿಬಂಧನೆಗಳನ್ನು ಅನುಸರಿಸದಿರುವುದು ಹಾಗೂ ಕೆಲವು ಸಂಬಂಧಿತ ಕಂಪನಿಯ ವಹಿವಾಟುಗಳಲ್ಲಿ ಬಹಿರಂಗಪಡಿಸುವಿಕೆಯ ನಿಯಮಗಳನ್ನು ಉಲ್ಲಂಘಿಸಿರುವುದಕ್ಕೆ ಮಾರ್ಚ್ ತ್ರೈಮಾಸಿಕದಲ್ಲಿ ಸೆಬಿ ಎರಡು ನೋಟಿಸ್ ಕಳುಹಿಸಿದೆ ಎಂದು ಅದಾನಿ ಎಂಟರ್‌ಪ್ರೈಸಸ್ ಗುರುವಾರ ತಿಳಿಸಿದೆ.
ಕಂಪನಿಯು ಆರೋಪಿಸಿರುವ ಉಲ್ಲಂಘನೆಗಳನ್ನು ಹಾಗೂ ನಿಬಂಧನೆಗಳನ್ನು ಅನುಸರಿಸದಿರುವುದರ ಬಗ್ಗೆ ವಿವರ ನೀಡಲಿಲ್ಲ. ಆದರೆ ರಿಲೇಟೆಡ್ ಪಾರ್ಟಿ ಟ್ರಾನ್ಸಾಕ್ಷನ್ಸ್ ಆರೋಪಗಳಲ್ಲಿ ಮಹತ್ವದ ಅಂಶವಿಲ್ಲದ ಕಾರಣ ನೋಟಿಸ್‌ಗಳು ಯಾವುದೇ ತತ್ಪರಿಣಾಮ ಬೀರುವುದಿಲ್ಲ ಎಂದು ಕಂಪನಿ ತಿಳಿಸಿದೆ.
2023ರ ಜನವರಿಯಲ್ಲಿ ಅಮೆರಿಕದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆ ಅದಾನಿ ಸಾಮ್ರಾಜ್ಯವನ್ನೇ ಅಲುಗಾಡಿಸುವಂತಹ ವರದಿ ಬಿಡುಗಡೆ ಮಾಡಿತ್ತು. ಅಲ್ಲಿಯವರೆಗೆ ಗಣನೀಯವಾಗಿ ಉತ್ತಮ ಸ್ಥಿತಿಯಲ್ಲಿದ್ದ ಅದಾನಿ ಸಮೂಹ ಸಂಸ್ಥೆಗಳ ಷೇರುಬೆಲೆ ದಿಢೀರ್ ಕುಸಿತಗೊಂಡಿದ್ದವು. ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆ ಮಾಡಿದ್ದ ಆರೋಪಗಳ ವಿಚಾರವನ್ನು ಕೂಲಂಕಷವಾಗಿ ತನಿಖೆ ಮಾಡುವಂತೆ ಸೆಬಿಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಈ ಪ್ರಕಾರವಾಗಿ ಸೆಬಿ ತನಿಖೆ ನಡೆಸುತ್ತಿದ್ದು, ಈ ವೇಳೆ ದೊರೆತ ಕೆಲ ಮಾಹಿತಿ ಆಧರಿಸಿ ಆರು ಕಂಪನಿಗಳಿಗೆ ನೋಟಿಸ್ ನೀಡಲಾಗಿದೆ.
ನೋಟಿಸ್ ಎಂಬುದು ಆರೋಪಗಳಿಗೆ ಅಥವಾ ಅಕ್ರಮ ನಡೆದಿರುವುದಕ್ಕೆ ಕಾರಣ ಕೇಳುವುದಾಗಿರುತ್ತದೆ. ನೋಟಿಸ್ನಲ್ಲಿ ಮಾಡಲಾಗಿರುವ ಆರೋಪದಲ್ಲಿ ಹೆಚ್ಚಿನವು ರಿಲೇಟೆಡ್ ಪಾರ್ಟಿ ಟ್ರಾನ್ಸಾಕ್ಷನ್ಸ್ಗೆ ಸಂಬಂಧಿಸಿದ್ದವೇ ಆಗಿವೆ.
ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆ ತನ್ನ ವರದಿಯಲ್ಲಿ ಅದಾನಿ ಸಮೂಹ ಸಂಸ್ಥೆಗಳ ವಿರುದ್ಧ 6,000ಕ್ಕೂ ಹೆಚ್ಚು ರಿಲೇಟೆಡ್ ಪಾರ್ಟಿ ಟ್ರಾನ್ಸಾಕ್ಷನ್ಸ್ಗಳನ್ನು ಉಲ್ಲೇಖಿಸಿ, ಅವುಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು.
ಈ ಪೈಕಿ ಸೆಬಿ 13 ನಿರ್ದಿಷ್ಟ ರಿಲೇಟ್ ಪಾರ್ಟಿ ಟ್ರಾನ್ಸಾಕ್ಷನ್ಸ್ಗಳನ್ನು ಗುರುತಿಸಿ ಅದರಲ್ಲಿ ಯಾವುದಾದರೂ ಅಕ್ರಮ ನಡೆದಿದೆಯಾ ಎಂದು ತನಿಖೆ ಮಾಡುತ್ತಿರುವುದಾಗಿ ಸೆಬಿ ಸುಪ್ರೀಂಕೋರ್ಟ್ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿತ್ತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಸೆಬಿಯಿಂದ ಆರು ಅದಾನಿ ಕಂಪನಿಗಳಿಗೆ ನೋಟಿಸ್ ಜಾರಿಯಾಗಿದೆ.