ಶರದ್ ಪವಾರ್ – ಅದಾನಿ ಸ್ನೇಹವೂ, ಪೊಲಿಟಿಕಲ್-ಕಾರ್ಪೊರೇಟ್ ಸಂಬಂಧವೂ!

Date:

ಶರದ್ ಪವಾರ್ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಅದಾನಿಯನ್ನು ‘ಪರಿಶ್ರಮಿ, ಸುಧಾರಕ, ಕೈಲಾಸದಿಂದ ಧರೆಗಿಳಿದವನು’ ಎಂದೆಲ್ಲ ಬಣ್ಣಿಸಿದ್ದಾರೆ. 

ರಾಜಕೀಯದಲ್ಲಿ ರಾಜಕಾರಣಿಗಳು ಮತ್ತು ಉದ್ಯಮಗಳ ನಡುವಿನ ಸ್ನೇಹವನ್ನು ಅನುಮಾನದಿಂದಲೇ ನೋಡಲಾಗುತ್ತದೆ. ಇದಕ್ಕೆ ಮುಖ್ಯಕಾರಣ, ಇವರ ನಡುವಿನ ಸ್ನೇಹವು ಎಂದಿಗೂ ವೈಯಕ್ತಿಕವಾಗಿರುವುದಿಲ್ಲ. ಆ ಸ್ನೇಹ, ರಾಜಕೀಯ ಮತ್ತು ಕಾರ್ಪೊರೇಟ್ ಉದ್ಯಮಗಳ ಮೇಲೆ ಬೆಸೆದುಕೊಂಡಿರುತ್ತದೆ. ‘ಕ್ವಿಡ್ ಪ್ರೊ ಕ್ವೋ’ ಮಾದರಿಯಲ್ಲಿ ಕೊಡುಕೊಳ್ಳುವಿಯನ್ನು ಬಯಸುತ್ತದೆ. ಅದೇ ರೀತಿ, ಪ್ರಸ್ತುತ ರಾಜಕಾರಣದಲ್ಲಿ ಪ್ರಧಾನಿ ಮೋದಿ ಮತ್ತು ಅದಾನಿ-ಅಂಬಾನಿಗಳ ಸ್ನೇಹವೂ ಎದ್ದುಕಾಣುತ್ತಿದೆ. ಹೀಗಾಗಿಯೇ, ‘ಮೋದಾನಿ’ ಎಂಬ ಹೆಸರು ಪ್ರಚಲಿತದಲ್ಲಿದೆ. ಇದೇ ಅದಾನಿಗೂ ಮಹಾರಾಷ್ಟ್ರ ರಾಜಕಾರಣಕ್ಕೂ, ಅದರಲ್ಲೂ ಶರದ್ ಪವಾರ್ ಕುಟುಂಬಕ್ಕೆ ಅಷ್ಟೇ ನಿಕಟ ನಂಟಿತ್ತು, ಈಗಲೂ ಇದೆ ಎಂಬುದು ಕೂಡ ಸತ್ಯ.

- Advertisement -

ಈಗ, ಮಹಾರಾಷ್ಟ್ರ ರಾಜಕಾರಣದ ದಿಗ್ಗಜ ಶರದ್ ಪವಾರ್ ಮತ್ತು ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ನಡುವಿನ ಸಂಬಂಧದ ಚರ್ಚೆ ಮುನ್ನೆಲೆಗೆ ಬಂದಿದೆ. ಕಾರಣ, ಡಿಸೆಂಬರ್ 28ರಂದು ಬಾರಾಮತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪವಾರ್ ಕುಟುಂಬವು ಅದಾನಿಗೆ ‘ರೆಡ್ ಕಾರ್ಪೆಟ್’ ಹಾಸಿ ಸ್ವಾಗತಿಸಿರುವುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು ಗ್ರಹಿಸಲು ಅವರ ದಿನಚರಿಯ ಭಾಗವೇ ಆಗಿದ್ದ ಕೆಲವು ತುಣುಕುಗಳು ನಿಮ್ಮ ಓದಿಗಾಗಿ... ಆರೆಸ್ಸೆಸ್‌ಗೊಂದು ಕಿವಿಮಾತುಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ...

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ...

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ'ದ ಆವರಣದಲ್ಲಿ ನಿರ್ಮಿಸಲಾಗಿರುವ ಸಬರಮತಿ ಆಶ್ರಮವು ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಪ್ರೇರಣಾ ಕೇಂದ್ರವಾಗಿ...

ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ

ನಿನ್ನ ಚಾಳೀಸಿನೊಳಗೆ ತೂರಿಕೊಂಡ ಸ್ವಚ್ಚ ಭಾರತವಿನ್ನೂ ಚರಂಡಿಯಲ್ಲಿ ಹೊರಳಾಡುತ್ತಿದೆ. ಕಪ್ಪು ಹಣದ ಕತ್ತಲೆ ಗಾಢವಾಗಿ, ಸೂತ್ರಧಾರಿಗಳು ಉಳ್ಳವರಾಗಿ ಕೈಲಾಸದಲ್ಲಿನ ಭವ್ಯ ಶಿವಾಲಯದಲ್ಲಿದ್ದಾರೆ. ಊರ ಹೊರಗಣ ಕೇರಿಯವರಿಗೆ ಕೊಳಕು ಬಳಿಯುವ ಕಾಯಕ ಮತ್ತು ಕೊಳಗೇರಿ...

ಬಾರಾಮತಿಯಲ್ಲಿ ಶರದ್ ಪವಾರ್ ಅವರ ಕುಟುಂಬವು ‘ಶರದ್‌ಚಂದ್ರ ಪವಾರ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್’ (ಎಐ ಸೆಂಟರ್) ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕೇಂದ್ರಕ್ಕೆ ಅದಾನಿ ಗ್ರೂಪ್‌ ಸುಮಾರು 25 ರೂ. ಧನಸಹಾಯ ಒದಗಿಸಿದೆ ಎಂದು ಹೇಳಲಾಗಿದೆ. ಅಲ್ಲದೆ, ಕಳೆದ ಭಾನುವಾರ (ಡಿ.28) ಈ ಕೇಂದ್ರವನ್ನು ಗೌತಮ್ ಅದಾನಿಯೇ ಉದ್ಘಾಟಿಸಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಪವಾರ್ ಅವರ ಮಗಳು ಸಂಸದೆ ಸುಪ್ರಿಯಾ ಸುಳೆ, ಎನ್‌ಸಿಪಿಯನ್ನು ಇಬ್ಬಾಗಿಸಿ ಬಿಜೆಪಿ ಜೊತೆ ಸೇರಿಸಿರುವ ಎನ್‌ಸಿಪಿ (ಅಜಿತ್ ಬಣ)ದ ನಾಯಕ, ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಅವರ ಪತ್ನಿ ಸುನೇತ್ರಾ ಪವಾರ್ ಸೇರಿದಂತೆ ಪವಾರ್ ಕುಟುಂಬದವರು ಭಾಗಿಯಾಗಿದ್ದರು. ಒಂದೆಡೆ, ರಾಜಕೀಯ ಕಾರಣಕ್ಕಾಗಿ ದೂರವಾಗಿದ್ದವರು. ಮತ್ತೊಂದೆಡೆ, ರಾಜಕೀಯ-ಕಾರ್ಪೊರೇಟ್ ಹಳೆಯ ಸ್ನೇಹಿತರು ಒಗ್ಗೂಡಿದ್ದರು.  

ಅದಾನಿಯನ್ನು ‘ಶ್ರಮಜೀವಿ ಯುವಜನರಿಗೆ ಸ್ಪೂರ್ತಿ’ ಎಂದು ಶರದ್ ಪವಾರ್ ಬಣ್ಣಿಸಿದ್ದಾರೆ. ಅಂತೆಯೇ, ಬಾರಾಮತಿಯನ್ನು ‘ಪ್ರಗತಿಯ ಸಂಕೇತ’ ಎಂದಿರುವ ಅದಾನಿ, ಶರದ್ ಅವರನ್ನು ತಮ್ಮ ‘ಮಾರ್ಗದರ್ಶಕ’ನೆಂದು ಹೊಗಳಿದಿದ್ದಾರೆ.

ಈ ಇಬ್ಬರ ಸ್ನೇಹ ಅವರೇ ಹೇಳುವಂತೆ, ಇತ್ತೀಚಿನದ್ದಲ್ಲ. ಸುಮಾರು 30 ವರ್ಷಗಳ ಹಳೆಯದ್ದು. ಶರದ್-ಅದಾನಿ ನಡುವಿನ ಪೊಲಿಟಿಕಲ್-ಕಾರ್ಪೊರೇಟ್ ಸ್ನೇಹ ಆರಂಭವಾದದ್ದು 1990ರ ದಶಕದಲ್ಲಿ. 1990-95ರ ನಡುವೆ ಶರದ್ ಪವಾರ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಅದೇ ಸಮಯದಲ್ಲಿ, ಗುಜರಾತ್‌ಗೆ ಸೀಮಿತವಾಗಿದ್ದ ಅದಾನಿ ತಮ್ಮ ವ್ಯಾಪಾರವನ್ನು ವಿಸ್ತರಿಸುವ ಧಾವಂತದಲ್ಲಿದ್ದರು. ಬಂದರು ನಿರ್ವಹಣೆಯನ್ನು ದಾಟಿ, ಮೂಲಸೌಕರ್ಯ ಕ್ಷೇತ್ರಕ್ಕೆ ತಮ್ಮ ಉದ್ಯಮವನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದರು. ಆಗ, ಅದಾನಿಗೆ ಸಿಕ್ಕಿದ್ದೇ ಶರದ್ ಪವಾರ್.

ಶರದ್ ಪವಾರ್‌ ಅವರ ನೆರವಿನಿಂದ ಅದಾನಿ ತನ್ನ ಉದ್ದಿಮೆಯನ್ನು ಮಹಾರಾಷ್ಟ್ರಕ್ಕೆ ವಿಸ್ತರಿಸಿದರು. ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಯೋಜನೆ ರೂಪಿಸಿದರು. ಮಹಾರಾಷ್ಟ್ರದ ಗೋಂಡಿಯಾ ಜಿಲ್ಲೆಯಲ್ಲಿ ಅದಾನಿ ‘ಉಷ್ಣ ವಿದ್ಯುತ್ ಸ್ಥಾವರ’ ಸ್ಥಾಪಿಸಲು ಅದಾನಿಗೆ ಎಲ್ಲ ರೀತಿಯ ನೆರವನ್ನು ಪವಾರ್ ನೀಡಿದರು. ಜೊತೆಗೆ, ನಾನಾ ರೀತಿಯ ವ್ಯಾಪಾರ-ವಹಿವಾಟುಗಳ ಒಪ್ಪಂದಗಳು ಮತ್ತು ಗುತ್ತಿಗೆಗಳನ್ನು ಅದಾನಿಗೆ ಪವಾರ್ ನೀಡಿದರು.

ಅಲ್ಲಿಂದ, ಅದಾನಿ-ಪವಾರ್ ಸ್ನೇಹ ದಟ್ಟವಾಗಿ ಬೆಳೆಯಿತು. 2015ರಲ್ಲಿ ಪ್ರಕಟವಾದ ಪವಾರ್‌ ಅವರ ಆತ್ಮಚರಿತ್ರೆ ‘ಲೋಕ್ ಮಝೆ ಸಾಂಗತಿ’ ಪುಸ್ತಕದಲ್ಲಿ ಅದಾನಿಯನ್ನು ‘ಪರಿಶ್ರಮಿ, ಸಾಧಾರಣ ಜೀವಿ, ಕೈಲಾಸದಿಂದ ಧರೆಗಿಳಿದವನು’ ಎಂದೆಲ್ಲ ಬಣ್ಣಿಸಿದ್ದಾರೆ. “ಅದಾನಿಯು ಮುಂಬೈ ಲೋಕಲ್ ರೈಲಿನಲ್ಲಿ ವಸ್ತುಗಳನ್ನು ಮಾರಾಟ ಮಾಡುವ ಸೇಲ್ಸ್‌ಮ್ಯಾನ್‌ ಕೆಲಸದಿಂದ ಆರಂಭಿಸಿ, ಸಣ್ಣ ವ್ಯಾಪಾರಗಳ ಮೂಲಕ ಡೈಮಂಡ್ ಉದ್ಯಮವನ್ನು ಪ್ರವೇಶಿಸಿದ್ದಾರೆ. ಅವರಿಗೆ ಮೂಲಸೌಕರ್ಯ ಕ್ಷೇತ್ರದಲ್ಲಿ ದೊಡ್ಡ ಕನಸುಗಳಿದ್ದವು. ಅವರಿಗೆ ತಮ್ಮ ಸರ್ಕಾರವು ಅಗತ್ಯ ನೆರವು ನೀಡಿತು” ಎಂದು ಪವಾರ್ ಬರೆದುಕೊಂಡಿದ್ದಾರೆ.

ಆದಾಗ್ಯೂ, 2014ರಲ್ಲಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ಬಳಿಕ, ಮೋದಿ ಸರ್ಕಾರ ಎಲ್ಲೆಡೆ ಅದಾನಿಗಾಗಿ ನೀತಿ-ಯೋಜನೆಗಳನ್ನು ರೂಪಿಸಲಾರಂಭಿಸಿತು. ಅದಾನಿ, ಗುಜರಾತ್, ಮಹಾರಾಷ್ಟ್ರವನ್ನು ದಾಟಿ ಭಾರತದಾದ್ಯಂತ ವಿಸ್ತರಣೆಗೊಳ್ಳಲಾರಂಭಿಸಿದರು. ಪವಾರ್ ಜೊತೆಗಿನ ಸ್ನೇಹ ಉಳಿದಿತ್ತು.

ಆದ್ದರಿಂದಲೇ, 2019ರ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ-ಶಿವಸೇನಾ ಮೈತ್ರಿ ಮುರಿದಿದ್ದಾಗ, ಬಿಜೆಪಿ-ಎನ್‌ಸಿಪಿ ಮೈತ್ರಿ ಬೆಸೆಯಲು ಅದಾನಿ ಯತ್ನಿಸಿದ್ದರು. ಅದಾನಿ ನೇತೃತ್ವದಲ್ಲಿ ಬಿಜೆಪಿ ಮತ್ತು ಎನ್‌ಸಿಪಿ ನಾಯಕರು ಸಭೆ ನಡೆಸಿದ್ದರು. ಈ ಮಾತುಕತೆಯ ಭಾಗವಾಗಿ 2019ರ ನವೆಂಬರ್ 23ರಂದು ಅಜಿತ್ ಪವಾರ್ ಅವರು ಬಿಜೆಪಿಯೊಂದಿಗೆ ಸೇರಿ ಸರ್ಕಾರ (ದೇವೇಂದ್ರ ಫಡ್ನವೀಸ್ ಸಿಎಂ, ಅಜಿತ್ ಪವಾರ್ ಡಿಸಿಎಂ) ರಚಿಸಿದ್ದರು. ಆದರೆ, ಶರದ್ ಪವಾರ್ ಈ ಮೈತ್ರಿಯನ್ನು ನಿರಾಕರಿಸಿದ್ದರಿಂದ, ಕೇವಲ 80 ಗಂಟೆಗಳಲ್ಲಿ ಸರ್ಕಾರ ಬಿದ್ದುಹೋಯಿತು. ಕಾಂಗ್ರೆಸ್‌-ಎನ್‌ಸಿಪಿ-ಶಿವಸೇನೆ ಮಹಾವಿಕಾಸ್ ಅಘಾಡಿ ಮೈತ್ರಿಕೂಟ ಮಾಡಿಕೊಂಡು ಸರ್ಕಾರ ರಚಿಸಿದ್ದವು.

ಅದಾನಿ ಮುಂದಾಳತ್ವದಲ್ಲಿ ಬಿಜೆಪಿ-ಎನ್‌ಸಿಪಿ ಮೈತ್ರಿಗೆ ಯತ್ನ ನಡೆದು, ವಿಫಲವಾದರೂ, ಅದಾನಿ-ಪವಾರ್ ಸಂಬಂಧಕ್ಕೆ ಧಕ್ಕೆಯಾಗಿರಲಿಲ್ಲ ಎಂಬುದು ಆನಂತರದ ಬೆಳವಣಿಗೆಗಳಿಂದ ಸ್ಪಷ್ಟವಾಗಿದೆ. 2023ರಲ್ಲಿ ‘ಹಿಂಡೆನ್‌ಬರ್ಗ್ ರಿಸರ್ಚ್’ ವರದಿಯು ಅದಾನಿ ಗ್ರೂಪ್ ಮೇಲೆ ಗಂಭೀರ ಅಕ್ರಮಗಳ ಆರೋಪಗಳನ್ನು ಮಾಡಿತು. ಈ ಆರೋಪಗಳ ಕುರಿತು ತನಿಖೆ ನಡೆಸಲು ‘ಜಂಟಿ ಸಂಸದೀಯ ಸಮಿತಿ’ (ಜೆಪಿಸಿ) ರಚನೆಗೆ ಕಾಂಗ್ರೆಸ್ ಒತ್ತಾಯಿಸಿತ್ತು. ಆದರೆ, ಪವಾರ್ ಇದನ್ನು ವಿರೋಧಿಸಿದ್ದರು. ಅದಾನಿ ಗ್ರೂಪ್‌ಅನ್ನು ಸಮರ್ಥಿಸಿಕೊಂಡಿದ್ದರು. ‘ಹಿಂಡೆನ್‌ಬರ್ಗ್‌ ವರದಿ’ಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದರು. ಇದು ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟದಲ್ಲಿ ಅಸಮಾಧಾನ ಸೃಷ್ಟಿಸಿತ್ತು.

ಅಂತೆಯೇ, ಏಷ್ಯಾದ ಅತೀ ದೊಡ್ಡ ಕೊಳಗೇರಿ ಎಂದೇ ಹೆಸರಾಗಿರುವ ಮುಂಬೈನ ಧಾರಾವಿ ಅಭಿವೃದ್ಧಿಗಾಗಿ ‘ಧಾರಾವಿ ಪುನರ್‌ಅಭಿವೃದ್ಧಿ ಯೋಜನೆ’ಯನ್ನು ರೂಪಿಸಲಾಗಿದೆ. ಈ ಯೋಜನೆಯು 2022ರಲ್ಲಿ ಅದಾನಿ ಗ್ರೂಪ್‌ನ ಪಾಲಾಯಿತು. ಧಾರಾವಿಯನ್ನು ಅಭಿವೃದ್ಧಿ ಪಡಿಸಲು ಅದಾನಿ ಗ್ರೂಪ್‌ಗೆ ನೀಡಬೇಕು ಮತ್ತು ಧಾರಾವಿ ಜನರನ್ನು ಒಂದೆಡೆಗೆ ದೂಡಿ, ಉಳಿದ ಭೂಮಿಯನ್ನು ಅದಾನಿ ತನ್ನ ಉದ್ಯಮಕ್ಕೆ ಬಳಸಿಕೊಳ್ಳಲು ಅವಕಾಶ ನೀಡಬೇಕೆಂದೇ ಈ ಯೋಜನೆ ರೂಪಿಸಲಾಗಿದೆ ಎಂದು ರಾಹುಲ್‌ ಗಾಂಧಿ ಆರೋಪಿಸಿದರು. ಆದರೆ, ಈ ವಿಚಾರದಲ್ಲಿಯೇ ಅದಾನಿ ಪರ ಬ್ಯಾಟಿಂಗ್‌ ಮಾಡಿದ ಪವಾರ್, ಆರಂಭದಲ್ಲಿ ಈ ಯೋಜನೆಯಲ್ಲಿ ಅದಾನಿಗೆ ಆಸಕ್ತಿಯೇ ಇರಲಿಲ್ಲ ಎಂದು ಹೇಳಿದ್ದಾರೆ. ಮೈತ್ರಿ ಮತ್ತು ಮೈತ್ರಿ ನಿಷ್ಠೆಗಿಂತ ಮಿಗಿಲಾಗಿ ಆಗಾಗ್ಗೆ ಅದಾನಿ ನಿಷ್ಠೆಯನ್ನು ಪವಾರ್ ತೋರಿಸಿದ್ದಾರೆ.

ಅದರ ಮುಂದುವರಿದ ಭಾಗವಾಗಿ, ಈಗ ಬಾರಾಮತಿಯಲ್ಲಿ ಅದಾನಿಯಿಂದ ನೆರವು ಪಡೆದು ‘ಎಐ ಸೆಂಟರ್‌’ಅನ್ನು ಪವಾರ್ ಕುಟುಂಬ ತೆರೆದಿದೆ. ಅದರನ್ನು ಅದಾನಿಯಿಂದಲೇ ಉದ್ಘಾಟಿಸಿದೆ. ಇದು, ವಿಪಕ್ಷಗಳು ಅದಾನಿ ಮತ್ತು ಮೋದಿ ವಿರುದ್ಧ ಮಾಡುತ್ತಿರುವ ‘ಕ್ರೋನಿ ಕ್ಯಾಪಿಟಲಿಸಂ’ ಆರೋಪಕ್ಕೆ ಒಳಪೆಟ್ಟು ನೀಡಿದೆ.

ಈ ಲೇಖನ ಓದಿದ್ದೀರಾ?: ಹಸಿರು ಉಸಿರು ಕಸಿದ ‘ವಿಕಾಸ’: ಅದಾನಿ ಸಾಮ್ರಾಜ್ಯ ವಿಸ್ತರಣೆಗೆ ಬಲಿಯಾಗುತ್ತಿರುವ ಅರಣ್ಯ ಮತ್ತು ಪ್ರಜಾಪ್ರಭುತ್ವ

ಶರದ್ ಕುಟುಂಬದ ನಡೆಯನ್ನು ಖಂಡಿಸಿರುವ ಶಿವಸೇನೆ (ಉದ್ದವ್ ಬಣ), “ಪವಾರ್ ಮತ್ತು ಅದಾನಿಯ ಸ್ನೇಹವು ಧಾರಾವಿ ಅಭಿವೃದ್ಧಿ ಯೋಜನೆಯಂತಹ ವಿವಾದಗಳನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ ಎಂದಿದೆ. ಅಂತೆಯೇ, ವಂಚಿತ್ ಬಹುಜನ್ ಅಘಾಡಿಯ ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್ ಅವರು, ಪವಾರ್ ಬಿಜೆಪಿಗೆ ಸೇರಲು ಮೊದಲ ಹೆಜ್ಜೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಗಮನಾರ್ಹವಾಗಿ, ಮಹಾರಾಷ್ಟ್ರದಲ್ಲಿ ಎನ್‌ಸಿಪಿ (ಶರದ್ ಬಣ) ಬಿಜೆಪಿ ವಿರುದ್ಧದ ಮೈತ್ರಿಕೂಟದಲ್ಲಿದ್ದರೂ, ಮಹಾರಾಷ್ಟ್ರದ ಹೊರಗೆ ಬಿಜೆಪಿ ಜೊತೆಗೆ ಶರದ್ ಪವಾರ್ ಒಡನಾಟ ಹೊಂದಿದ್ದಾರೆ. ಅದು ಅದಾನಿಯ ಕಾರಣಕ್ಕಾಗಿ ಎಂಬ ಮಾತುಗಳೂ ಇವೆ. ಈ ‘ಪೊಲಿಟಿಕಲ್-ಕಾರ್ಪೊರೇಟ್’ ಸ್ನೇಹ-ಸಂಬಂಧದ ಭಾಗವಾಗಿಯೇ, ಇತ್ತೀಚೆಗೆ ನಡೆದ ‘ಆಪರೇಷನ್ ಸಿಂಧೂರ್’ ಬಳಿಕ ಭಾರತವು ಭಯೋತ್ಪಾದನೆ ವಿರುದ್ಧ ತನ್ನ ನಿಲುವನ್ನು ಮಿತ್ರ ರಾಷ್ಟ್ರಗಳಿಗೆ ಸಾರಲು ತೆರಳಿದ್ದ ಸಂಸದರ ನಿಯೋಗಗಳಲ್ಲಿ ಪವಾರ್ ಅವರ ಮಗಳು ಸುಪ್ರಿಯಾ ಸುಳೆ ಸ್ಥಾನ ಪಡೆದುಕೊಂಡಿದ್ದರು.

ಇನ್ನು, ಜೈಲು ಪಾಲಾದ ಭ್ರಷ್ಟ ಮಂತ್ರಿಗಳು, ಮುಖ್ಯಮಂತ್ರಿಗಳನ್ನು 30 ದಿನಗಳಲ್ಲಿ ತೆಗೆದುಹಾಕುವ ಮಸೂದೆಯನ್ನು ಪರಿಶೀಲಿಸಲು 2025ರ ಅಕ್ಟೋಬರ್‌ನಲ್ಲಿ ರಚಿಸಲಾಗಿದ್ದ ಜಂಟಿ ಸಂಸದೀಯ ಸಮಿತಿಯನ್ನು ‘ಇಂಡಿಯಾ’ ಮೈತ್ರಿಕೂಟವು ಬಹಿಷ್ಕರಿಸಿತ್ತು. ಆದರೂ, ಎನ್‌ಸಿಪಿ (ಶರದ್ ಬಣ) ಸಮಿತಿಯಲ್ಲಿ ಭಾಗವಹಿಸಿತ್ತು.

ಇದೆಲ್ಲವೂ, ಇಂದಿಗೂ ಎನ್‌ಸಿಪಿ (ಶರದ್ ಬಣ) ಮತ್ತು ಬಿಜೆಪಿ ನಡುವೆ ಅದಾನಿ ಸಂಪರ್ಕ ಕೊಂಡಿಯಾಗಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಶರದ್ ಪವಾರ್ ಮತ್ತು ಅದಾನಿ ನಡುವಿನ ಸ್ನೇಹವು ಕೇವಲ ವೈಯಕ್ತಿಕವಲ್ಲ, ವ್ಯಾಪಾರ ಮತ್ತು ರಾಜಕೀಯದ ಮೇಲೆ ಪ್ರಭಾವ ಬೀರುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಪ್ರದೇಶ: ಪ್ರಜಾಪ್ರಭುತ್ವ ಹೋರಾಟಗಾರರಿಗೆ ಅಖಿಲೇಶ್ ಮಾಸಿಕ ₹51,000 ಪಿಂಚಣಿ ಭರವಸೆ

ಉತ್ತರ ಪ್ರದೇಶದಲ್ಲಿ 2027ರಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಸರ್ಕಾರ ರಚಿಸಿದರೆ, 1975ರ...

ಎಐ ಸೃಷ್ಟಿಸುವ ಕೃತಕ ಪ್ರೋಟೀನ್‌ಗಳಿಗೆ ಗೂಗಲ್‌ನಿಂದ ‘ಡಿಜಿಟಲ್ ಮುದ್ರೆ’: ಜೈವಿಕ ಅಪಾಯ ತಡೆಯಲು ಹೊಸ ಅಸ್ತ್ರ

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ಲ್ಯಾಬ್‌‌ಗಳಲ್ಲಿ ಹೊಸ ಬಗೆಯ ಪ್ರೋಟೀನ್‌ಗಳನ್ನು...

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರು, ಗೋವಾ, ಕೋಲ್ಕತ್ತದಲ್ಲಿ ಸಿಜೆಪಿ ‘ಮೋರ್ಚಾ’

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌: ಯಾಕೀ ವಿವಾದ?

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ....