ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆ ತೊರೆದಿದ್ದಾರೆ. ಡಿ.ಕೆ ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಅಣಿಯಾಗಿದ್ದಾರೆ. ರಾಜ್ಯದಲ್ಲಿ ಈ ಅಧಿಕಾರ ಹಸ್ತಾಂತರಕ್ಕೆ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟದ ಪ್ರಮುಖ ಪಕ್ಷಗಳ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ನಾಜೂಕಾಗಿ ಜರುಗಿನ ನಾಯಕತ್ವ ಬದಲಾವಣೆಯನ್ನು ಶ್ಲಾಘಿಸಿದ್ದಾರೆ. ಸಿದ್ದರಾಮಯ್ಯ ಕುರಿತು ಹಲವರು ಹೆಮ್ಮೆಯ ಮಾತುಗಳನ್ನಾಡಿದ್ದಾರೆ.
ಯಾವುದೇ ಅಡಚಣೆಯಿಲ್ಲದೆ ಗೌರವಯುತವಾಗಿ ರಾಜೀನಾಮೆ ನೀಡಿ, ರಾಜ್ಯದ ಜನರಿಗೆ ಸಂದೇಶ ರವಾನಿಸಿದ ಸಿದ್ದರಾಮಯ್ಯರ ನಡೆಯನ್ನು ಟಿಎಂಸಿ ಮುಖ್ಯಸ್ಥೆ, ಬಂಗಾಳ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶ್ಲಾಘಿಸಿದ್ದಾರೆ. “ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆಯು ಯಾವುದೇ ಗೊಂದಲವಿಲ್ಲದೆ, ಅತ್ಯಂತ ಸುಸೂತ್ರವಾಗಿ ಮತ್ತು ಪ್ರಜಾಪ್ರಭುತ್ವದ ಶಿಸ್ತಿನಿಂದ ನಡೆದಿರುವುದು ಹೆಮ್ಮೆಯ ವಿಷಯ. ಸಿದ್ದರಾಮಯ್ಯ ಅವರು ತಳಸಮುದಾಯಗಳ ಪರವಾಗಿ ನೀಡಿದ ಆಡಳಿತವು ಶ್ಲಾಘನೀಯ” ಎಂದಿದ್ದಾರೆ.
“ಕಾಂಗ್ರೆಸ್ ಪಕ್ಷವು ತನ್ನ ಆಂತರಿಕ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಅತ್ಯಂತ ಪ್ರಬುದ್ಧವಾಗಿ ಬಗೆಹರಿಸಿಕೊಂಡಿದೆ. ಇದು ‘ಇಂಡಿಯಾ’ ಒಕ್ಕೂಟದ ಒಗ್ಗಟ್ಟನ್ನು ಮತ್ತಷ್ಟು ಬಲಪಡಿಸುತ್ತದೆ. ಸಿದ್ದರಾಮಯ್ಯ ಅವರ ಅನುಭವ ಮುಂದಿನ ದಿನಗಳಲ್ಲಿ ರಾಷ್ಟ್ರ ರಾಜಕಾರಣಕ್ಕೆ ದೊಡ್ಡ ಶಕ್ತಿಯಾಗಲಿದೆ” ಎಂದು ಟಿಎಂಸಿ ಹೇಳಿದೆ.
ಅಂತೆಯೇ, ತಮಿಳುನಾಡು ಮಾಜಿ ಮುಖ್ಯಮಂತ್ರಿ, ಡಿಎಂಕೆ ನಾಯಕ ಎಂ.ಕೆ ಸ್ಟಾಲಿನ್ ಕೂಡ ಪ್ರತಿಕ್ರಿಯಿಸಿದ್ದಾರೆ. “ಸಿದ್ದರಾಮಯ್ಯ ಅವರು ದಕ್ಷಿಣ ಭಾರತದಲ್ಲಿ ಸಾಮಾಜಿಕ ನ್ಯಾಯದ ಅತಿ ದೊಡ್ಡ ಧ್ವನಿಯಾಗಿದ್ದಾರೆ. ಕಡುಬಡವರ ಕಲ್ಯಾಣಕ್ಕಾಗಿ ಅವರು ತಂದ ‘ಅನ್ನಭಾಗ್ಯ’ ಮತ್ತು ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿ. ಹೈಕಮಾಂಡ್ ಆದೇಶಕ್ಕೆ ತಲೆಬಾಗಿ ಅವರು ನೀಡಿರುವ ರಾಜೀನಾಮೆ ಅವರ ರಾಜಕೀಯ ಪ್ರಬುದ್ಧತೆಯನ್ನು ತೋರಿಸುತ್ತದೆ. ಹೊಸದಾಗಿ ಜವಾಬ್ದಾರಿ ವಹಿಸಿಕೊಳ್ಳಲಿರುವ ಡಿ.ಕೆ. ಶಿವಕುಮಾರ್ ಅವರಿಗೂ ನನ್ನ ಶುಭ ಹಾರೈಕೆಗಳು” ಎಂದಿದ್ದಾರೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಎನ್‌ಸಿಪಿ ನಾಯಕ ಶರದ್ ಪವಾರ್ ಕೂಡ ಪ್ರಕ್ರಿಯಿಸಿದ್ದಾರೆ. “ಕರ್ನಾಟಕದ ಇಬ್ಬರೂ ಪ್ರಮುಖ ನಾಯಕರು (ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್) ಅತ್ಯಂತ ತಿಳಿವಳಿಕೆಯಿಂದ ಅಧಿಕಾರ ಹಸ್ತಾಂತರಕ್ಕೆ ಸಹಕರಿಸಿರುವುದು ದೇಶದ ಮೈತ್ರಿಕೂಟಕ್ಕೆ ಮಾದರಿಯಾಗಿದೆ. ಇದು ಮುಂಬರುವ ಲೋಕಸಭಾ ಅಥವಾ ಇತರ ರಾಜ್ಯಗಳ ಚುನಾವಣೆಗಳ ಮೇಲೆ ಸಕಾರಾತ್ಮಕ ಪ್ರಭಾವ ಬೀರಲಿದೆ” ಎಂದು ವಿಶ್ಲೇಷಿಸಿದ್ದಾರೆ.
ಅಂತೆಯೇ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸವಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಪ್ರತಿಕ್ರಿಯೆ ನೀಡಿದ್ದಾರೆ. “ಸಿದ್ದರಾಮಯ್ಯ ಅವರು ಹಿಂದುಳಿದ ಮತ್ತು ಶೋಷಿತ ವರ್ಗಗಳ ಪರವಾಗಿ ದಶಕಗಳ ಕಾಲ ಹೋರಾಡಿದವರು. ಮುಖ್ಯಮಂತ್ರಿ ಸ್ಥಾನದಿಂದ ಅವರು ಕೆಳಗಿಳಿದರೂ, ಜನಮಾನಸದಲ್ಲಿ ಅವರ ಸ್ಥಾನ ಶಾಶ್ವತವಾಗಿರುತ್ತದೆ” ಎಂದು ಗೌರವ ಸಲ್ಲಿಸಿದ್ದಾರೆ.
ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯರನ್ನು ಕೊಂಡಾಡಿದ್ದಾರೆ. “ಸಿದ್ದರಾಮಯ್ಯ ಅವರು ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ಸೂಚನೆಯನ್ನು ಗೌರವಿಸಿ ಅವರು ರಾಜೀನಾಮೆ ನೀಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಐದು ವರ್ಷಗಳ ಅವಧಿಯನ್ನು ಯಶಸ್ವಿಯಾಗಿ ಪೂರೈಸಲಿದ್ದು, ಜನರ ಕಲ್ಯಾಣದ ಕೆಲಸಗಳು ನಿರಂತರವಾಗಿ ಸಾಗಲಿವೆ” ಎಂದು ಭರವಸೆ ನೀಡಿದ್ದಾರೆ.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯ ಪ್ರತಿಕ್ರಿಯೆಯೇ ಸಿದ್ದರಾಮಯ್ಯ ಮೇಲಿನ ಮೆಚ್ಚುಗೆಯಿಂದಲೇ ಕೂಡದೆ. “ಸಿದ್ದರಾಮಯ್ಯ ಅವರು ಕರ್ನಾಟಕದ ಜನರಿಗೆ ನೀಡಿದ ಮಾತುಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ತ್ಯಾಗ ಮತ್ತು ಪಕ್ಷದ ಮೇಲಿನ ನಿಷ್ಠೆ ಶ್ಲಾಘನೀಯ. ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯು ಒಮ್ಮತದಿಂದ ನಡೆದಿದ್ದು, ರಾಜ್ಯದ ಅಭಿವೃದ್ಧಿಯ ವೇಗ ಹೀಗೆಯೇ ಮುಂದುವರಿಯಲಿದೆ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಮುಖ್ಯಮಂತ್ರಿ ಬದಲಾವಣೆ: ಏನಾಗಲಿದೆ ಸರ್ಕಾರದ ಭವಿಷ್ಯ?
ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಸಿದ್ದರಾಮಯ್ಯ ಅವರ ಆಡಳಿತ ಮತ್ತು ರಾಜಕೀಯ ಜೀವನವು ಅವರ ಅಚಲ ಸಿದ್ಧಾಂತ, ಪರಿಶ್ರಮ ಹಾಗೂ ಸಾಮಾಜಿಕ ನ್ಯಾಯದ ಬದ್ಧತೆಗೆ ಸಾಕ್ಷಿಯಾಗಿದೆ. ಪಕ್ಷದಲ್ಲಿ ನಾಯಕತ್ವ ಬದಲಾವಣೆಯ ಪ್ರಕ್ರಿಯೆಯು ಅತ್ಯಂತ ಸುಸೂತ್ರವಾಗಿ ಮತ್ತು ಗೌರವಯುತವಾಗಿ ನಡೆದಿದೆ” ಎಂದು ಹೇಳಿದ್ದಾರೆ.
ತಮಿಳುನಾಡಿನ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಪ್ರಕ್ರಿಯಿಸಿದ್ದು, “ನನ್ನ ಆಡಳಿತಾತ್ಮಕ ವೃತ್ತಿಜೀವನದಲ್ಲಿ ಮನಸ್ಸಿನಲ್ಲಿ ಅಳಿಸಲಾಗದ ನೆನಪೊಂದಿದೆ. ಆ ದಿನಗಳಲ್ಲಿ, ನನ್ನನ್ನು ಜಿಲ್ಲಾಧಿಕಾರಿಯಾಗಿ ಮಂಗಳೂರಿಗೆ ವರ್ಗಾಯಿಸಲಾಯಿತು, ಅದು ಕೋಮು ಘರ್ಷಣೆಗಳು ಮತ್ತು ಮರಳು ಮಾಫಿಯಾದ ಕಾಟದ ನೆರಳಿನಲ್ಲಿತ್ತು. ಅಲ್ಲಿಗೆ ಹೊರಡುವ ಮೊದಲು, ಮುಖ್ಯಮಂತ್ರಿಗಳು ನನ್ನನ್ನು ವೈಯಕ್ತಿಕವಾಗಿ ಭೇಟಿಯಾಗಲು ಬಯಸುತ್ತಾರೆ ಎಂಬ ಮಾಹಿತಿ ಸಿಕ್ಕಿತು. ಅದು ಸಾಮಾನ್ಯ ಘಟನೆಯಾಗಿರಲಿಲ್ಲ. ಜಿಲ್ಲಾಧಿಕಾರಿಯನ್ನು ವೈಯಕ್ತಿಕವಾಗಿ ಕರೆಯುವುದು ಅಪರೂಪ. ನಾನು ಅವರ ಕೋಣೆಗೆ ಸ್ವಲ್ಪ ನಡುಕದಿಂದ ಪ್ರವೇಶಿಸಿದೆ. ಅವರು ತಮ್ಮ ಎಂದಿನ ಪ್ರಶಾಂತ, ಭಾವರಹಿತ ಮುಖದಿಂದ ನನ್ನನ್ನು ನೋಡಿದರು. ‘ಬಾ…’ ಎಂದರು. ‘ನಿಮಗಿರುವ ಏಕೈಕ ಜವಾಬ್ದಾರಿ ಎಂದರೆ, ಅಲ್ಲಿ ಇನ್ನು ಮುಂದೆ ಕೋಮು ಗಲಭೆಗಳು ನಡೆಯಬಾರದಷ್ಟೆ..’ ಎಂದಷ್ಟೇ ಹೇಳಿದರು. ಒಬ್ಬ ಮುಖ್ಯಮಂತ್ರಿ ಒಬ್ಬ ಯುವ ಐಎಎಸ್ ಅಧಿಕಾರಿಯೊಂದಿಗೆ ಏಕಾಂಗಿಯಾಗಿ ಕುಳಿತು ನಿಜವಾಗಿಯೂ ಮುಖ್ಯವಾದದ್ದನ್ನು ಸ್ಪಷ್ಟವಾಗಿ ಹೇಳಿದ್ದರು. ಆ ಒಂದು ವಾಕ್ಯವು ಆಡಳಿತದ ಸಂಪೂರ್ಣ ತತ್ವಶಾಸ್ತ್ರವನ್ನು ಒಳಗೊಂಡಿತ್ತು. ಅದು ಕೇವಲ ರಾಜಕೀಯ ಪ್ರದರ್ಶನವಾಗಿರಲಿಲ್ಲ; ಸಾಮಾನ್ಯ ಜನರನ್ನು ಅಸಾಧಾರಣ ದ್ವೇಷದಿಂದ ರಕ್ಷಿಸುವ ಜವಾಬ್ದಾರಿಯ ಪ್ರಜ್ಞೆಯ ಅಭಿವ್ಯಕ್ತಿ” ಎಂದಿದ್ದಾರೆ.
ಮುಂದುವರೆದು, “ಹದಿನೈದು ದಿನಗಳ ನಂತರ, ಮಂಗಳೂರು ಮತ್ತೆ ಉದ್ವಿಗ್ನತೆಗೆ ಒಳಗಾಯಿತು. ಎರಡೂ ಧರ್ಮಗಳ ಇಬ್ಬರು ಕೊಲ್ಲಲ್ಪಟ್ಟರು. ನಗರವು ಸ್ಫೋಟದ ಅಂಚಿನಲ್ಲಿತ್ತು. ನಂತರ ಅವರು ಮತ್ತೆ ಕರೆ ಮಾಡಿದರು. ಹಿಂದಿನಂತೆಯೇ ಅದೇ ನೇರ ಧ್ವನಿಯಲ್ಲಿ, ಅವರು ಹೇಳಿದರು: ‘ಜಿಲ್ಲಾಧಿಕಾರಿ… ಅಗತ್ಯವಿರುವುದನ್ನು ಮಾಡಿ. ಯಾರನ್ನಾದರೂ ಬಂಧಿಸಿ; ಅವರು ನಮ್ಮ ಪಕ್ಷದವರಾಗಿದ್ದರೂ ಹಿಂಜರಿಯಬೇಡಿ. ಆದರೆ ಈ ಪರಿಸ್ಥಿತಿಯನ್ನು ಒಂದು ದಿನದೊಳಗೆ ನಿಯಂತ್ರಣಕ್ಕೆ ತರಬೇಕು.’ ಆ ಮಾತುಗಳು ಯುವ ಜಿಲ್ಲಾಧಿಕಾರಿಗೆ ಅಪಾರ ವಿಶ್ವಾಸ ಮತ್ತು ದೃಢಸಂಕಲ್ಪವನ್ನು ನೀಡಿತು. ಇದು ಕೇವಲ ಆದೇಶವಾಗಿರಲಿಲ್ಲ; ಅದು ಕಾರ್ಯನಿರ್ವಹಿಸಲು ಸಂಪೂರ್ಣ ಅನುಮತಿಯಾಗಿತ್ತು. ರಾಜಕೀಯ ಬೆಂಬಲ. ಪ್ರಾಮಾಣಿಕ ರಾಜಕೀಯ ಇಚ್ಛಾಶಕ್ತಿ” ಎಂದಿದ್ದಾರೆ.
“ಈ ನಡೆಗೆ ಪೂರಾ ವಿರುದ್ಧವಾದ ಅನುಭವಗಳೂ ನನಗಿವೆ. ಮತ್ತೊಂದು ಆಡಳಿತದ ಅವಧಿಯಲ್ಲಿ, ಇದೇ ರೀತಿಯ ಪರಿಸ್ಥಿತಿಯಲ್ಲಿ, ಮೇಲಿನಿಂದ ಬಂದ ಆದೇಶವು ಸಂಪೂರ್ಣವಾಗಿ ಭಿನ್ನವಾಗಿತ್ತು. ಆಗ ಬಂದ ಕರೆಯಲ್ಲಿ ‘’ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳಬೇಡಿ; ಪರಿಸ್ಥಿತಿ ಹಾಗೆಯೇ ಇರಲಿ’ ಎಂದಿದ್ದರು. ಆ ಮಾತು ‘ಯಾರು ಯಾರಿಗಾಗಿ ಆಳುತ್ತಿದ್ದಾರೆ’ ಎಂಬುದನ್ನು ಬಹಿರಂಗಪಡಿಸುತ್ತದೆ” ಎಂದು ಸೆಂಥಿಲ್ ವಿವರಿಸಿದ್ದಾರೆ.
“ಸಿದ್ದರಾಮಯ್ಯ ಎಂದಿಗೂ ಆ ರೀತಿಯ ನಾಯಕನಾಗಿರಲಿಲ್ಲ. ಅವರು ರಾಜ್ಯದ ಹಣಕಾಸಿನ ಲೆಕ್ಕವನ್ನು ಬೆರಳ ತುದಿಯಲ್ಲಿಟ್ಟುಕೊಂಡಿದ್ದರು; ಪ್ರತಿ ನಡೆಯಲ್ಲಿ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿ ನಿಖರತೆಯಿಂದ ಆಳ್ವಿಕೆ ಮಾಡಿದ ವ್ಯಕ್ತಿ; ಸಮಾಜದ ತಳಮಟ್ಟದಲ್ಲಿರುವ ಜನರ ಪರವಾಗಿ ದೃಢವಾಗಿ ನಿಂತ ವ್ಯಕ್ತಿ. ನಾನೊಬ್ಬ ರಾಜಕೀಯ ನಾಯಕನಾಗಿ ನಿಜವಾಗಿಯೂ ಗೌರವಿಸುವ ನಾಯಕ ಸಿದ್ದರಾಮಯ್ಯ ಅವರು. ಅವರ ನಡೆಯ ಉದಾತ್ತ ಪರಂಪರೆ ಅವರು ಘೋಷಿಸಿದ ಯೋಜನೆಗಳಲ್ಲಿಲ್ಲ; ಅವರು ಓದಿದ ಬಜೆಟ್‌ಗಳಲ್ಲಿಯೂ ಇಲ್ಲ. ಅವರು ಮುಖ್ಯಮಂತ್ರಿಯಾಗಿ ನಡೆದುಕೊಂಡ ರೀತಿಯಲ್ಲೇ ಇದೆ. ಆ ಅಧಿಕಾರಿಗಳಿಗೆ ದೈರ್ಯ ತುಂಬುವ ಆತ್ಮೀಯ ಫೋನ್ ಕರೆಯಲ್ಲಿದೆ. ಆತಂಕಗೊಂಡ ಯುವ ಅಧಿಕಾರಿಗೆ ‘ಹೋಗಿ ಶಾಂತಿ ಕಾಪಾಡು’ ಎಂದು ಅವರು ಹೇಳಿದ ರೀತಿಯಲ್ಲಿದೆ. ಈಗ, ಅವರು ಅದೇ ಘನತೆಯೊಂದಿಗೆ ತಮ್ಮ ಹುದ್ದೆಯಿಂದ ಕೆಳಗಿಳಿಯುತ್ತಿರುವಾಗ, ನನ್ನ ಹೃದಯವು ಆಳವಾಗಿ ಕಲಕುತ್ತದೆ. ತತ್ವಗಳು ಸ್ಥಾನಗಳಿಗಿಂತ ಹೆಚ್ಚು ಬಾಳಿಕೆ ಬರುವವು ಎಂದು ಯಾವಾಗಲೂ ಅರ್ಥಮಾಡಿಕೊಂಡಿದ್ದ ವ್ಯಕ್ತಿಯ ಉದಾತ್ತ ನಡೆ ಇದು” ಎಂದು ಶ್ಲಾಘಿಸಿದ್ದಾರೆ.



