ಕೇರಳದ ನೂತನ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸರ್ಕಾರ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮುಟ್ಟಿನ ರಜೆ ನೀಡುವ ಪ್ರಸ್ತಾಪವನ್ನು ಮಾಡಿದೆ. ಹಾಗಯೇ ಅಸಂಘಟಿತ ವಲಯದ ಮಹಿಳೆಯರಿಗೆ ಹೆರಿಗೆ ರಜೆಯ ಭರವಸೆಯನ್ನೂ ನೀಡಿದೆ.
ವಿದ್ಯಾರ್ಥಿಗಳಿಗೆ ಮೂರು ದಿನ ಮುಟ್ಟಿನ ರಜೆಯಲ್ಲಿ ತಪ್ಪಿದ ತರಗತಿಗಳನ್ನು ಸರಿದೂಗಿಸಲು, ವಾರಾಂತ್ಯದಲ್ಲಿ ತರಗತಿಗಳನ್ನು ನಡೆಯಲಿವೆ. “ಹೆಣ್ಣು ಮಕ್ಕಳಿಗಾಗಿ ನಮ್ಮ ಬದ್ಧತೆಯು ಪ್ರಾಜೆಕ್ಟ್ ಮೆನ್ಸ್ಟ್ರುವಲ್ ಡಿಗ್ನಿಟಿಯಲ್ಲಿ ಪ್ರತಿಫಲಿಸುತ್ತದೆ. ಈ ಯೋಜನೆಯಡಿಯಲ್ಲಿ ನಾವು ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಹುಡುಗಿಯರು ಮತ್ತು ಮಹಿಳೆಯರಿಗೆ ಸ್ನೇಹಪರವಾದ ವಾತಾವರಣ ನಿರ್ಮಿಸುವ ಉದ್ದೇಶ ಹೊಂದಿದ್ದೇವೆ” ಎಂದು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಭಾಷಣದಲ್ಲಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಮುಟ್ಟಿನ ರಜೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಹೈಕೋರ್ಟ್ ಆದೇಶ: ಜನವಾದಿ ಮಹಿಳಾ ಸಂಘಟನೆ ಸ್ವಾಗತ
2023ರ ಜನವರಿಯಲ್ಲಿ ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ಮುಟ್ಟಿನ ರಜೆಯನ್ನು ಈ ಹಿಂದಿನ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಸರ್ಕಾರವು ಜಾರಿಗೆ ತಂದಿತ್ತು. ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿ ಎಲ್ಲ ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಹಾಜರಾತಿಯಲ್ಲಿ 2% ರಿಯಾಯಿತಿಯನ್ನೂ ನೀಡಲಾಗಿತ್ತು. ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಮುಟ್ಟಿನ ರಜೆ ನೀಡಿದ ಬಳಿಕ ಎಲ್‌ಡಿಎಫ್ ಸರ್ಕಾರವೂ ಮುಟ್ಟಿನ ರಜೆ ನೀಡುವ ನಿರ್ಧಾರ ಕೈಗೊಂಡಿತ್ತು. ಇದೀಗ ಹೊಸದಾಗಿ ರಚನೆಯಾದ ಯುಡಿಎಫ್ ಸರ್ಕಾರವು ಶಾಲಾ ಮಕ್ಕಳಿಗೆ ಮೂರು ದಿನಗಳ ಮುಟ್ಟಿನ ರಜೆಯ ಭರವಸೆ ನೀಡಿದೆ.
ಹಾಗೆಯೇ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರಿಗೆ ಆರು ತಿಂಗಳ ಹೆರಿಗೆ ರಜೆ ಸೇರಿದಂತೆ ಕೆಲವು ಇತರೆ ಪ್ರಯೋಜನಗಳನ್ನು ನೀಡುವ ಭರವಸೆಯನ್ನು ಸರ್ಕಾರ ನೀಡಿದೆ.
ಸರ್ಕಾರಿ ಕಚೇರಿಗಳು, ಕೈಗಾರಿಕಾ ಸಂಸ್ಥೆಗಳು, ಐಟಿ ಪಾರ್ಕ್‌ಗಳು ಮತ್ತು 50ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಇತರ ಸಂಸ್ಥೆಗಳು ಸುರಕ್ಷಿತ, ಉತ್ತಮ ಗುಣಮಟ್ಟದ ಡೇಕೇರ್ ಕೇಂದ್ರಗಳನ್ನು ಹೊಂದಿರಬೇಕು ಎಂಬುದನ್ನು 1961ರ ಮಾತೃತ್ವ ಪ್ರಯೋಜನ ಕಾಯ್ದೆ ಕಡ್ಡಾಯಗೊಳಿಸಿದೆ. ಈ ನಿಯಮಗಳನ್ನು ಅನುಷ್ಠಾನಗೊಳಿಸುವುದು ಸೇರಿದಂತೆ ಇತರ ಉಪಕ್ರಮಗಳನ್ನು ಘೋಷಿಸಲಾಗಿದೆ.
ಇದನ್ನು ಓದಿದ್ದೀರಾ? BREAKING NEWS | ಮುಟ್ಟಿನ ರಜೆ ‘ಬದುಕುವ ಹಕ್ಕು’ – ನೀತಿ ಕಟ್ಟುನಿಟ್ಟಾಗಿ ಜಾರಿಗೊಳಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಹೆಚ್ಚುವರಿಯಾಗಿ, “ಸ್ಯಾನಿಟರಿ ನ್ಯಾಪ್ಕಿನ್‌ಗಳು, ಪಾದರಕ್ಷೆಗಳು ಮತ್ತು ಇತರ ಅಗತ್ಯ ವಸ್ತುಗಳು ಮಹಿಳೆಯರಿಗೆ ಲಭ್ಯವಾಗುವಂತೆ” ಸರ್ಕಾರ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದೆ.
ಕರ್ನಾಟಕದಲ್ಲಿ ಮುಟ್ಟಿನ ರಜೆ
ರಾಜ್ಯದಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯಗಳು, ಕಾರ್ಖಾನೆಗಳು, ಅಂಗಡಿಗಳು ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುವ 18ರಿಂದ 52 ವರ್ಷದೊಳಗಿನ ಎಲ್ಲ ಖಾಯಂ, ಗುತ್ತಿಗೆ ಮತ್ತು ಹೊರಗುತ್ತಿಗೆ ಮಹಿಳಾ ನೌಕರರಿಗೆ ಪ್ರತಿ ತಿಂಗಳು ಒಂದು ದಿನದಂತೆ ವರ್ಷಕ್ಕೆ ಗರಿಷ್ಠ 12 ವೇತನಸಹಿತ ಮುಟ್ಟಿನ ರಜೆಯನ್ನು ರಾಜ್ಯ ಸರ್ಕಾರವು ಘೋಷಿಸಿದೆ. ಆರಂಭದಲ್ಲಿ ಖಾಸಗಿ ವಲಯಕ್ಕೆ ಮಾತ್ರ ಸೀಮಿತವಾಗಿದ್ದ ಈ ನೀತಿಯನ್ನು ನಂತರ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೂ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಈ ಮಹಿಳಾಪರ ನಿರ್ಧಾರವನ್ನು ಹೋರಾಟಗಾರರು ಸ್ವಾಗತಿಸಿದ್ದಾರೆ.
ಆದರೆ ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಕೆಲವು ಉದ್ಯೋಗಸ್ಥ ಮಹಿಳೆಯರು ಮತ್ತು ಹೋಟೆಲ್ ಮಾಲೀಕರ ಸಂಘ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅಧಿಸೂಚನೆಯಿಂದ ಮಹಿಳೆಯರ ಉದ್ಯೋಗಾವಕಾಶಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಕೆಲವು ಮಹಿಳೆಯರು ಹೇಳಿದ್ದಾರೆ. ಇನ್ನು ಕಡ್ಡಾಯ ರಜೆ ಆದೇಶಿಸಲು ಸರ್ಕಾರಕ್ಕೆ ಕಾನೂನುಬದ್ಧ ಅಧಿಕಾರವಿಲ್ಲ ಎಂದು ಹೋಟೆಲ್ ಮಾಲೀಕರ ಸಂಘ ವಾದಿಸಿದೆ. ಈ ಅರ್ಜಿಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.




