ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ಬೆಳಗಾವಿ ನಗರದ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ನಡೆದ ರೈತ ಮುಖಂಡರ ಸಭೆಯಲ್ಲಿ ರಾಜ್ಯ ರೈತ ಸಂಘದ ಚೂನಪ್ಪ ಪೂಜೇರಿ ಬಣ ಹಾಗೂ ಕೋಡಿಹಳ್ಳಿ ಚಂದ್ರಶೇಖರ ಬಣದ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆದು, ಅದು ಹೊಡೆದಾಟಕ್ಕೆ ತಿರುಗಿತು. ಸಭಾಂಗಣದಲ್ಲಿ ನಡೆದ ಗದ್ದಲದಿಂದ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತ ಮುಖಂಡರೊಂದಿಗೆ ಪ್ರತ್ಯೇಕ ಸಭೆಗಳನ್ನು ಆಯೋಜಿಸಲಾಗಿತ್ತು. ಮಧ್ಯಾಹ್ನ ಕಾರ್ಖಾನೆ ಮಾಲೀಕರ ಸಭೆ ಮುಗಿಸಿದ ಮುಖ್ಯಮಂತ್ರಿ ಯಲ್ಲಮ್ಮನಗುಡ್ಡಕ್ಕೆ ತೆರಳಿದ್ದರು. ಸಂಜೆ 4 ಗಂಟೆ ಸುಮಾರಿಗೆ ರೈತ ಮುಖಂಡರು ಸಭಾಂಗಣಕ್ಕೆ ಆಗಮಿಸಿದ್ದರು. ಮುಖ್ಯಮಂತ್ರಿ ಇನ್ನೂ ಸಭೆಗೆ ಬರುವ ಮುನ್ನವೇ ರೈತ ಮುಖಂಡರ ನಡುವೆ ಮಾತಿನ ಚಕಮಕಿ ಆರಂಭವಾಯಿತು.
ಕೋಡಿಹಳ್ಳಿ ಚಂದ್ರಶೇಖರ ಬಣದ ಮುಖಂಡ, ಕಲಬುರಗಿಯ ಮಹಾಂತೇಶ ಜಮಾದಾರ ಕಬ್ಬಿನ ಬೆಲೆ ಸೇರಿದಂತೆ ರೈತರ ಬೇಡಿಕೆಗಳ ಕುರಿತು ಮಾತನಾಡುತ್ತಿದ್ದರು. ಈ ವೇಳೆ ಅವರ ಮಾತು ಸರಿಯಿಲ್ಲ ಎಂದು ಆಕ್ಷೇಪಿಸಿದ ಚೂನಪ್ಪ ಪೂಜೇರಿ ಬಣದ ಕೆಲವರು ಮೈಕ್ ಕಿತ್ತುಕೊಂಡರು ಎನ್ನಲಾಗಿದೆ. ಇದರಿಂದ ಎರಡೂ ಬಣಗಳ ನಡುವೆ ವಾಗ್ವಾದ ತೀವ್ರಗೊಂಡಿತು.
ಮಧ್ಯಪ್ರವೇಶಿಸಿದ ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ, ಎಲ್ಲರನ್ನೂ ಸಮಾಧಾನಪಡಿಸಲು ಯತ್ನಿಸಿದರು. “ನಾವು ಹೋರಾಟ ನಡೆಸಿ ಈ ಸಭೆ ನಡೆಯುವಂತೆ ಮಾಡಿದ್ದೇವೆ. ನಮಗೂ ಮಾತನಾಡುವ ಹಕ್ಕಿದೆ. ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ 4,500 ರೂಪಾಯಿ ದರ ನಿಗದಿಪಡಿಸುವಂತೆ ಒತ್ತಾಯಿಸಲಾಗುವುದು” ಎಂದು ಹೇಳುತ್ತಿದ್ದಂತೆ ಕೋಡಿಹಳ್ಳಿ ಬಣದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು.
“ಪ್ರತಿ ಟನ್ ಕಬ್ಬಿಗೆ 5,500 ರೂಪಾಯಿ ದರಕ್ಕಾಗಿ ಹೋರಾಟ ನಡೆಸಿ ಈಗ 4,500 ರೂಪಾಯಿ ಎಂದು ಹೇಳುತ್ತಿರುವುದೇಕೆ?” ಎಂದು ಅವರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಚೂನಪ್ಪ ಪೂಜೇರಿ, “4,500 ರೂಪಾಯಿ ಕಬ್ಬಿನ ದರವಾಗಿದ್ದು, ಉಳಿದ 1,000 ರೂಪಾಯಿ ರಾಜ್ಯ ಸರ್ಕಾರದ ಪ್ರೋತ್ಸಾಹಧನವಾಗಿದೆ. ಎರಡನ್ನೂ ಸೇರಿಸಿದರೆ ಒಟ್ಟು 5,500 ರೂಪಾಯಿ ಆಗುತ್ತದೆ” ಎಂದು ಸ್ಪಷ್ಟಪಡಿಸಲು ಯತ್ನಿಸಿದರು.
ಆದರೆ, ಎರಡೂ ಬಣಗಳ ಮುಖಂಡರು ಜೋರಾಗಿ ಮಾತನಾಡತೊಡಗಿದ್ದರಿಂದ ಸಭಾಂಗಣದಲ್ಲಿ ಯಾರ ಮಾತೂ ಸ್ಪಷ್ಟವಾಗಿ ಕೇಳದ ಪರಿಸ್ಥಿತಿ ನಿರ್ಮಾಣವಾಯಿತು. ಗದ್ದಲದ ನಡುವೆ ಚೂನಪ್ಪ ಪೂಜೇರಿ ಬಣದ ಕೆಲವರು ನೀರಿನ ಗಾಜಿನ ಲೋಟಗಳನ್ನು ಎದುರಾಳಿ ಬಣದತ್ತ ಎಸೆದರು ಎನ್ನಲಾಗಿದೆ. ಅವು ತಗುಲಿ ಇಬ್ಬರಿಗೆ ಎದೆಭಾಗದಲ್ಲಿ ಪೆಟ್ಟಾಗಿದೆ ಎಂದು ತಿಳಿದುಬಂದಿದೆ. ಬಳಿಕ ಕೋಡಿಹಳ್ಳಿ ಬಣದವರೂ ತಳ್ಳಾಟ ಮತ್ತು ನೂಕಾಟದಲ್ಲಿ ತೊಡಗಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಅವರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಹಲವು ಬಾರಿ ಮನವಿ ಮಾಡಿದರೂ ಗದ್ದಲ ನಿಯಂತ್ರಣಕ್ಕೆ ಬರಲಿಲ್ಲ. ಕೊನೆಗೆ ಮಧ್ಯಪ್ರವೇಶಿಸಿದ ಪೊಲೀಸರು ಗದ್ದಲದಲ್ಲಿ ತೊಡಗಿದ್ದವರನ್ನು ಸಭಾಂಗಣದಿಂದ ಹೊರಗೆ ಕರೆದೊಯ್ದರು.
ಕಬ್ಬಿನ ಬೆಲೆ ನಿಗದಿ ಹಾಗೂ ರೈತರ ಬೇಡಿಕೆಗಳ ಕುರಿತು ಚರ್ಚೆ ನಡೆಯಬೇಕಿದ್ದ ಸಭೆ, ಮುಖಂಡರ ನಡುವಿನ ವಾಗ್ವಾದ ಮತ್ತು ಹೊಡೆದಾಟದಿಂದಾಗಿ ಕೆಲಕಾಲ ಅಸ್ತವ್ಯಸ್ತಗೊಂಡಿತು.





