ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟ 200ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಜನರು “ದ್ರಾವಿಡ ಮಾದರಿ 2.0 ಸರ್ಕಾರ”ದ ಪರವಾಗಿದ್ದಾರೆ. ಪ್ರತಿ ಮನೆಯನ್ನೂ ತಲುಪಿರುವ ನಮ್ಮ ಸರ್ಕಾರದ ಯೋಜನೆಗಳಿಂದಾಗಿ ಕಳೆದ ಐದು ವರ್ಷಗಳಲ್ಲಿ ತಮ್ಮ ಸರ್ಕಾರದ ಮೇಲಿನ ಜನರ ವಿಶ್ವಾಸ ಹೆಚ್ಚಿದೆ ಎಂದಿದ್ದಾರೆ.
ತಮ್ಮ ಪ್ರಚಾರದ ಅನುಭವವನ್ನು ಹಂಚಿಕೊಂಡ ಅವರು, ಸರ್ಕಾರದ ಯೋಜನೆಗಳು ತಳಮಟ್ಟದವರೆಗೆ ತಲುಪಿರುವುದು ಅತ್ಯಂತ ಗಮನಾರ್ಹ ಅಂಶವಾಗಿದೆ. ಅದರಲ್ಲೂ ವಿಶೇಷವಾಗಿ, ಉಪಹಾರ ನೀಡುವ ಯೋಜನೆ (Breakfast Scheme) ಜಾರಿಗೆ ಬಂದ ನಂತರ ಶಾಲಾ ದಾಖಲಾತಿಯಲ್ಲಿನ ಏರಿಕೆ ತೃಪ್ತಿ ತಂದಿದೆ. ತಮ್ಮ ಸರ್ಕಾರದ ‘ಇಲ್ಲತ್ತರಸಿ’ (Illatharasi) ಯೋಜನೆ ಈ ಚುನಾವಣೆಯ “ಸೂಪರ್ ಸ್ಟಾರ್” ಆಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ : ಜಲದೊಳಗಣ ಕಿಚ್ಚು ಜಲವ ಸುಡಲಿಲ್ಲ- ದಲಿತ ಚಳವಳಿಯ ಮೌಲ್ಯ ಪ್ರಜ್ಞೆಯ ಹುಡುಕಾಟ
ತಂದೆ ಎಂ. ಕರುಣಾನಿಧಿ ಅವರ ಪರಂಪರೆಯನ್ನು ಮೀರಿ “ಸ್ಟ್ಯಾಲಿನ್ ಫ್ಲೇವರ್” ಎಂಬ ಬ್ರ್ಯಾಂಡ್ ಸೃಷ್ಟಿಸಿಕೊಳ್ಳುತ್ತಿದ್ದಾರೆ ಎಂಬ ಟೀಕೆಯನ್ನು ತಳ್ಳಿಹಾಕಿದ ಅವರು, “ಈ ಸ್ಟ್ಯಾಲಿನ್ ಒಬ್ಬ ವ್ಯಕ್ತಿಯಲ್ಲ,” ಪೆರಿಯಾರ್, ಅಣ್ಣಾ ಮತ್ತು ಕಲೈಂಜರ್ ಅವರ ದ್ರಾವಿಡ ಪರಂಪರೆಯ ಮುಂದುವರಿದ ಅಧ್ಯಾಯವೆಂದು ತಮ್ಮನ್ನು ತಾವು ಬಣ್ಣಿಸಿಕೊಂಡರು, ಮಾತ್ರವಲ್ಲದೇ, ತಮ್ಮನ್ನು “ದ್ರಾವಿಡ ಫ್ಲೇವರ್” ಎಂದು ಕರೆಸಿಕೊಳ್ಳಲು ಬಯಸುವುದಾಗಿ ತಿಳಿಸಿದ್ದಾರೆ.
ಮೈತ್ರಿಕೂಟದಲ್ಲಿ ಬಿರುಕು ಮೂಡಿದೆ ಎಂಬ ಮಾತುಗಳನ್ನು ಅಲ್ಲಗಳೆದ ಸ್ಟ್ಯಾಲಿನ್, ಡಿಎಂಕೆ ಚುನಾವಣೆಯಲ್ಲಿ ಗೆಲ್ಲುವ ಮೈತ್ರಿಕೂಟವಾದ್ದರಿಂದ ಪಕ್ಷಗಳು ನಮ್ಮ ಜೊತೆ ಕೈಜೋಡಿಸಿವೆ. ಈ ಚುನಾವಣಾ ಕಣದಲ್ಲಿ “ಟೀಮ್ ತಮಿಳುನಾಡು ವರ್ಸಸ್ ಟೀಮ್ ದೆಹಲಿ” ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ.
ಎಐಎಡಿಎಂಕೆ-ಬಿಜೆಪಿ ಮೈತ್ರಿಯನ್ನು ತೀವ್ರವಾಗಿ ಟೀಕಿಸಿದ ಸ್ಟ್ಯಾಲಿನ್, ಬಿಜೆಪಿ “ಎಐಎಡಿಎಂಕೆ ಹೆಗಲ ಮೇಲೆ ಏರಿ ಹಿಂಬಾಗಿಲ ಮೂಲಕ ತಮಿಳುನಾಡಿಗೆ ಪ್ರವೇಶಿಸಲು ಪ್ರಯತ್ನಿಸುತ್ತಿದೆ” ಎಂದು ಆರೋಪಿಸಿದ್ದಾರೆ.




