ʼಬಂಗಾರದಂಥ ಹೊಲ ಹೋಯ್ತು, ಈಗ ಸತ್ತರೆ ಹೂಳೋಕೂ ಜಾಗವಿಲ್ಲʼ; ಕಾರಂಜಾ ಸಂತ್ರಸ್ತರಿಗೆ ಪರಿಹಾರ ಯಾವಾಗ?

Date:

ಬೀದರ್ ಜಿಲ್ಲೆಯ ಜೀವನಾಡಿ ಎನಿಸಿಕೊಂಡಿರುವ ಕಾರಂಜಾ ಜಲಾಶಯದ ಒಡಲಿನಲ್ಲಿರುವುದು ಬರೀ ನೀರಲ್ಲ, ಸಾವಿರಾರು ರೈತ ಕುಟುಂಬಗಳ ಕಣ್ಣೀರು ಹಾಗೂ ದಶಕಗಳಿಂದ ಹೂತುಹೋದ ಕನಸುಗಳು. ಐದು ದಶಕಗಳ ಹಿಂದೆ ನಾಡಿನ ಹಿತಕ್ಕಾಗಿ, ಜಿಲ್ಲೆಯ ಜನರ ಅನ್ನ-ನೀರಿಗಾಗಿ ತಮ್ಮ ಬಂಗಾರದಂತಹ ಜಮೀನುಗಳನ್ನು ಧಾರೆ ಎರೆದುಕೊಟ್ಟವರು ಇಂದು ಬೀದಿ ಪಾಲಾಗಿದ್ದಾರೆ. ಅಂದು ಸರ್ಕಾರದ ಮಾತಿಗೆ ಬೆಲೆ ಕೊಟ್ಟವರು ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ.

- Advertisement -

“ನಮ್ಮ ಕುಟುಂಬಕ್ಕೆ ಇದ್ದ 12 ಎಕರೆ ಬಂಗಾರದಂಥ ಹೊಲವನ್ನು ಕಾರಂಜಾ ಜಲಾಶಯಕ್ಕೆ ಕೊಟ್ಟೆವು. ಆಗಿನ ಕಾಲಕ್ಕೆ ಎಕರೆಗೆ ಕೇವಲ 2-3 ಸಾವಿರ ರೂಪಾಯಿ ಪರಿಹಾರ ಕೊಟ್ಟು ನಮ್ಮ ತಲೆ ಸವರಿದರು. ಈಗ ನಾವು ಸತ್ರೆ ಹೂಳೋಕೂ ಜಾಗವಿಲ್ಲದ ದುಸ್ಥಿತಿ ಬಂದಿದೆ. ನಾವು ಸತ್ತರೆ ಎಲ್ಲಿ ಹೂಳಬೇಕು? ಸರ್ಕಾರ ಅಕ್ಷರಶಃ ನಡು ನೀರಾಗ ನಮ್‌ ಕೈ ಬಿಟ್ಟದ” ಇದು ಔರಾದ್ (ಎಸ್) ಗ್ರಾಮದ ಸಂತ್ರಸ್ತ ಮಹಿಳೆ ಮಲ್ಲಮ್ಮ ಅವರ ಎದೆಯೊಡೆಯುವ ಮಾತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಬಗದಲ್ ಗ್ರಾಮದ ಸಣ್ಣ ಹೋಟೆಲ್‌ನಲ್ಲಿ ಒಲೆಯ ಉರಿಯ ಮುಂದೆ ನಿಂತು ಮಿರ್ಚಿ ಕರಿಯುತ್ತಿದ್ದ ಶ್ರೀಕಾಂತ ಪೋಶೆಟ್ಟಿ ಅವರ ಕತೆ ಮತ್ತಷ್ಟು ಕರುಣಾಜನಕ. ಅಪ್ಪನ ಕಾಲದಲ್ಲಿದ್ದ 5 ಎಕರೆ ಜಮೀನು ಜಲಾಶಯದಲ್ಲಿ ಮುಳುಗಡೆಯಾದ ಮೇಲೆ ಈ ಕುಟುಂಬದ ಬದುಕು ಮೂರಾಬಟ್ಟೆಯಾಗಿದೆ.

WhatsApp Image 2026 04 10 at 2.57.10 PM

“ನಮ್ಮ ತಂದೆಗೆ ಮೂವರು ಮಕ್ಕಳು, ನಾನು ಅಂಗವಿಕಲ. ಉಳಿದಿಬ್ಬರು ಸಹೋದರರು ಬೇರೆ ನಗರಕ್ಕೆ ವಲಸೆ ಹೋಗಿ ಅಲ್ಲೆ ಕೆಲಸ ಮಾಡ್ತಾರೆ. ನಮ್ಮ ಪೂರ್ವಜರ ಪಾಲಿಗೆ ಇದ್ದ 5 ಎಕರೆ ಜಮೀನು ಕಾರಂಜಾ ಜಲಾಶಯದಲ್ಲಿ ಮುಳುಗಡೆಯಾಗಿದೆ. ನಮಗೆ ಸಿಗಬೇಕಾದ ನ್ಯಾಯಯುತ ಪರಿಹಾರ ಇಂದಿಗೂ ಸಿಕ್ಕಿಲ್ಲ. ಅತ್ತ ಜಮೀನೂ ಕಳೆದುಕೊಂಡು, ಇತ್ತ ಪರಿಹಾರವೂ ಸಿಗದೇ ಅತಂತ್ರವಾದ ನಮ್ಮ ಬದುಕು ಮೂರಾಬಟ್ಟೆಯಾಯ್ತು. ಕೆಲಸ ಮಾಡಲು ಸಾಧ್ಯವಿಲ್ಲದಿದ್ದರೂ ಬದುಕು ನಡೆಸುವುದು ಅನಿವಾರ್ಯ. ಹೀಗಾಗಿ ಕಳೆದ 15 ವರ್ಷಗಳಿಂದ ಗ್ರಾಮದಲ್ಲಿ ಸ್ವಂತ ಹೋಟೆಲ್‌ ನಡೆಸುತ್ತ ಜೀವನ ಸಾಗಿಸುತ್ತಿರುವೆ. ನನಗೆ ಐದು ಜನ ಹೆಣ್ಣು ಮಕ್ಕಳು, ಒಬ್ಬ ಪುತ್ರನಿದ್ದಾನೆ. ಜಮೀನು ಕೊಟ್ಟು ದಶಕಗಳೇ ಕಳೆದರೂ ಸೂಕ್ತ ಪರಿಹಾರ ಮಾತ್ರ ಇಂದಿಗೂ ಬಂದಿಲ್ಲ. ಎಲ್ಲ ಸರ್ಕಾರಗಳು ನಮಗೆ ಭರವಸೆ ನೀಡುತ್ತಲೇ ಇವೆ. ಆದರೆ ಪರಿಹಾರ ಯಾರೂ ಕೊಟ್ಟಿಲ್ಲ” ಎಂದು ನೋವಿನಿಂದ ನುಡಿದರು.

“ಕಾರಂಜಾ ಜಲಾಶಯಕ್ಕೆ ನೀಡಿದ್ದ ಜಮೀನಷ್ಟೇ ಅಲ್ಲ, ಜಲಾಶಯ ನಿರ್ಮಾಣದ ವೇಳೆ ಇಡೀ ನಮ್ಮೂರೇ ಮುಳುಗಡೆಯಾಗಿ ಈಗ ಪುನರ್ವಸತಿ ಗ್ರಾಮದಲ್ಲಿದ್ದೇವೆ. ಇಲ್ಲಿ ಸುಮಾರು 150ಕ್ಕೂ ಹೆಚ್ಚಿನ ಕುಟುಂಬಗಳು ವಾಸಿಸುತ್ತವೆ. ನಮ್ಗೆ ಯಾರಿಗೂ 1 ಗುಂಟೆ ಹೊಲ ಇಲ್ಲ. ಎಲ್ಲರೂ ರಾಸಾಯನಿಕ ಕಾರ್ಖಾನೆ ಸೇರಿದಂತೆ ಇತರೆ ಕಡೆ ಕೂಲಿ ಕೆಲಸಕ್ಕೆ ಹೋಗಿ ಜೀವನ ಸಾಗಿಸುತ್ತಿದ್ದೇವೆ. ಜಿಲ್ಲೆಯ ಜನರ ಅನ್ನ-ನೀರಿಗಾಗಿ ನಮ್ಮ ಬೆಲೆ ಬಾಳುವ ಜಮೀನು ನೀಡಿದ ನಾವು ಈಗ ಸ್ಮಶಾನದ ಭೂಮಿಗಾಗಿಯೂ ಪರದಾಟ ನಡೆಸಬೇಕಾದ ದುಸ್ಥಿತಿ ಬಂದೊದಗಿದೆ” ಎಂದ ಕೋಳಾರ ಕೈಗಾರಿಕೆ ಪ್ರದೇಶ ಸಮೀಪದಲ್ಲಿರುವ ಪುನರ್ವಸತಿ ಗ್ರಾಮ ಹಜ್ಜರಗಿ ಊರಿನ ಮಹಿಳೆಯರ ಒಡಲಾಳದ ಮಾತು ಕೇಳುವಾಗ ಸರ್ಕಾರಗಳ ನಿರ್ಲಕ್ಷ್ಯ ಧೋರಣೆ ಎದ್ದು ಕಾಣುತ್ತಿತ್ತು.

ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ(ಕೆ) ಗ್ರಾಮದ ಹೊರವಲಯದಲ್ಲಿರುವ ಕಾರಂಜಾ ಜಲಾಶಯಕ್ಕಾಗಿ ಜಮೀನು ಕೊಟ್ಟು ಪರಿಹಾರಕ್ಕಾಗಿ ಐದು ದಶಕಗಳಿಂದ ಹೋರಾಟ ನಡೆಸುತ್ತಿದ್ದರೂ ಯಾವ ಸರ್ಕಾರಗಳಿಗೂ ಸಂತ್ರಸ್ತರ ನೋವು ಕಾಣದಂತಾಗಿದೆ. ಈ ಬಗ್ಗೆ ʼಈದಿನʼ ಗ್ರೌಂಡ್‌ ರಿಪೋರ್ಟ್‌ಗಾಗಿ ಕೆಲ ಗ್ರಾಮಗಳಿಗೆ ಭೇಟಿ ನೀಡಿದ ವೇಳೆ ಸಂತ್ರಸ್ತರ ಕರುಣಾಜನಕ ಕತೆ ಹೇಳತೊಡಗಿದರು. ಇದು ಒಬ್ಬರಿಬ್ಬರ ಕತೆಯಲ್ಲ. ಒಂದು ಗ್ರಾಮ ವ್ಯಥೆಯಲ್ಲ. ಸಾವಿರಾರು ಸಂತ್ರಸ್ತರ ಸಾಮೂಹಿಕ ಸಮಸ್ಯೆ ಎನ್ನುವುದು ಅರಿವಿಗೆ ಬಂತು.

1972 ಹಾಗೂ ಅದರ ನಂತರದಲ್ಲಿ ಎರಡು ಹಂತದಲ್ಲಿ ಕಾರಂಜಾ ಜಲಾಶಯದ ನಿರ್ಮಾಣಕ್ಕಾಗಿ ಸುಮಾರು 15 ಸಾವಿರ ಎಕರೆಗೂ ಅಧಿಕ ಜಮೀನನ್ನು ಅಧಿಕಾರಿಗಳು ಸ್ವಾಧೀನ ಪಡಿಸಿಕೊಂಡಿದ್ದಾರೆ. ಮನೆ ಕಳೆದುಕೊಂಡ ಬೀದರ್ ಜಿಲ್ಲೆಯ 28 ಗ್ರಾಮಗಳ ಸುಮಾರು 5 ಸಾವಿರಕ್ಕೂ ಅಧಿಕ ರೈತ ಕುಟುಂಬಗಳು ಇಂದಿಗೂ ಪರಿಹಾರಕ್ಕಾಗಿ ಪರಿತಪಿಸುತ್ತಿವೆ. ಪರಿಹಾರಕ್ಕಾಗಿ ಎರಡು ವರ್ಷಗಳ ಕಾಲ ಧರಣಿ, ಪ್ರತಿಭಟನೆ ನಡೆಸಿದರು. ಸಾಲದೆ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾದರು. ಜನಪ್ರತಿನಿಧಿಗಳ ಮನೆ ಬಾಗಿಲು ತಟ್ಟಿ ಬೇಡಿಕೆಯಿಟ್ಟರು. ಆದರೂ ನೆಪಕ್ಕೆ ಭರವಸೆಗಳ ಸುರಿಸುತ್ತಾರೆಯೇ ಹೊರತು ಸಂತ್ರಸ್ತ ರೈತರ ಜೇಬಿಗೆ ಪುಡಿಗಾಸು ಪರಿಹಾರವೂ ಬಂದಿಲ್ಲ.

ರಾಜ್ಯ ಸರಕಾರ 1984ರಲ್ಲಿ ಒಬ್ಬರಿಗೆ ಕೇವಲ ₹2,900 ಪರಿಹಾರ ಮಾತ್ರ ನೀಡಿದೆ. ಈ ವೇಳೆ ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗುವ ಅರಿವಿಲ್ಲದ ಕಾರಣ ಅನೇಕ ರೈತರು ನ್ಯಾಯಾಲಯದ ಮೆಟ್ಟಿಲೇರಲಿಲ್ಲ. ಸಿಕ್ಕಷ್ಟು ಹಣದಲ್ಲೇ ಸಮಾಧಾನಪಟ್ಟರು. ಅವರಲ್ಲಿ ಅನೇಕರು ಅಂತಿಮ ಯಾತ್ರೆ ಮುಗಿಸಿದ್ದಾರೆ. ಮುಂದೆ ಮಕ್ಕಳು, ಮೊಮ್ಮಕ್ಕಳು ನ್ಯಾಯಕ್ಕಾಗಿ ಹೋರಾಡಿದರೂ ನ್ಯಾಯ ಸಿಗದೇ ಇರುವುದಕ್ಕೆ ದಿಕ್ಕುತೋಚದಂತಾಗಿ ಸಂಕಷ್ಟದ ಬದುಕು ದೂಡುತ್ತಿದ್ದಾರೆ. ಇನ್ನೂ ಕೆಲವರು ನ್ಯಾಯಾಲಯದ ಮೊರೆ ಹೋಗಿ ಎಕರೆಗೆ ₹6 ರಿಂದ ₹88 ಸಾವಿರ ಪರಿಹಾರ ಪಡೆದರೆ ಕೆಲವರು ಅದಕ್ಕಿಂತ ಹೆಚ್ಚು ಕೂಡ ಪಡೆದಿದ್ದಾರೆ.

WhatsApp Image 2026 04 10 at 3.08.06 PM
2019ರಲ್ಲಿ ಕಾರಂಜಾ ಸಂತ್ರಸ್ತರ ಬೇಡಿಕೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪಾ ಖಾಶೆಂಪುರ ನೇತ್ರತ್ವದಲ್ಲಿ ಬೀದರ್‌ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು.

ಒಂದೇ ರೀತಿಯ ಜಮೀನು ಕಳೆದುಕೊಂಡು ಮನೆಗಳಿಲ್ಲದೆ ನಿರಾಶ್ರಿತರಾದ 28 ಹಳ್ಳಿಗಳ ಸಾವಿರು ರೈತರಿಗೆ ಒಂದೇ ತೆರನಾದ ಪರಿಹಾರ ಮಾತ್ರ ಇಲ್ಲಿಯವರೆಗೂ ದಕ್ಕಿಲ್ಲ. ಜಲಾಶಯಕ್ಕಾಗಿ ಎಲ್ಲ ರೈತರು ಒಂದೇ ರೀತಿಯ ಜಮೀನು ನೀಡಿದ್ದಾರೆ. ಆದರೆ, ಒಂದೊಂದು ಗ್ರಾಮದ ರೈತರಿಗೆ ಒಂದೊಂದು ರೀತಿಯಲ್ಲಿ ಅಲ್ಪ ಪರಿಹಾರ ನೀಡಿ ಸರ್ಕಾರ ಕೈತೊಳೆದುಕೊಂಡಿದೆ. ಇದು ರೈತರಿಗೆ ಮಾಡುವ ಅನ್ಯಾಯ ಹಾಗೂ ತಾರತಮ್ಯವಾಗಿದೆ. ನಮಗೆ ಮಾನವೀಯತೆ ಆಧಾರದಲ್ಲಿ ವೈಜ್ಞಾನಿಕ ಪರಿಹಾರ ನೀಡಬೇಕು ಎಂಬುದು ಕಾರಂಜಾ ಸಂತ್ರಸ್ತರ ನ್ಯಾಯಯುತ ಬೇಡಿಕೆ.

ಕಾರಂಜಾ ಜಲಾಶಯದಲ್ಲಿ ಕಮಾಲಪುರ, ಔರಾದ್ (ಎಸ್), ಖೇಣಿ ರಂಜೋಳ್, ಹಿಲಾಲಪುರ, ಮರಖಲ್, ಬಾವಗಿ, ಔರಾದ್ (ಎಸ್), ಬಂಬಳಗಿ, ರೇಕುಳಗಿ, ಹೊಚಕನಳ್ಳಿ, ಅತಿವಾಳ, ನಿಡವಂಚಾ, ಹಜ್ಜರಗಿ, ಬ್ಯಾಲಹಳ್ಳಿ, ಕಟ್ಟಿತೂಗಾಂವ್, ಸಿಂಧಬಂದಗಿ, ಡಾಕುಳಗಿ, ನೆಲವಾಡ, ಸಂಗೊಳಗಿ, ಭೈರನಳ್ಳಿ, ಬಗದಲ, ಬಾಪುರ, ಸಿರ್ಸಿ(ಎ), ಮನ್ನಾಏಖೆಳ್ಳಿ ಸೇರಿ 28 ಗ್ರಾಮಗಳ ಜಮೀನು ಸ್ವಾಧೀನವಾಗಿದೆ. ಅಲ್ಲದೆ ಕಮಾಲಪುರ, ಹಜ್ಜರಗಿ ಸೇರಿದಂತೆ ಸುಮಾರು 8 ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿ ಬೇರೆಡೆ ಪುನರ್ವಸತಿ ಗ್ರಾಮಗಳಾಗಿವೆ.

ಪರಿಹಾರಕ್ಕಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ವೈಜ್ಞಾನಿಕ ಪರಿಹಾರಕ್ಕೆ ಆಗ್ರಹಿಸಿ ಬೀದರ್ ನಗರದ ಜಿಲ್ಲಾ ಉಸ್ತುವಾರಿ ಕಚೇರಿ ಎದುರು ನಡೆದ ಹೋರಾಟದ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದ ಹಿನ್ನೆಲೆ ಮೂರು ಜನ ಸಂತ್ರಸ್ತ ರೈತರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಅಹೋರಾತ್ರಿ ಧರಣಿ ಆರಂಭವಾಗಿ 890 ದಿನ ಕಳೆದರೂ ಸ್ಪಂದನೆ ಸಿಗದೆ ಸಂತ್ರಸ್ತರು ಹೋರಾಟವನ್ನು ತೀವ್ರಗೊಳಿಸಿದರು. 2024ರ ಡಿ.12ರಂದು ಧರಣಿ ಸ್ಥಳದಲ್ಲಿ ಕಾರಂಜಾ ಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಹೊಚಕನಳ್ಳಿ, ರಾಜಪ್ಪ ಕಮಾಲಪುರ ಹಾಗೂ ರಾಜಶೇಖರ ಖೇಣಿ ರಂಜೋಳ ಅವರು ವಿಷ ಸೇವಿಸಿದರು. ಕೂಡಲೇ ಪೊಲೀಸರು ಮೂವರನ್ನು ಬ್ರಿಮ್ಸ್‌ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದರು. ಬಳಿಕ ಸರ್ಕಾರ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿ ಸಂತ್ರಸ್ತರನ್ನು ಕರೆಯಿಸಿ ವಿಶೇಷ ಸಭೆ ನಡೆಸಿ ಚರ್ಚಿಸಿತು.

WhatsApp Image 2026 04 10 at 2.00.30 PM 1

ಧರಣಿ ಹಿಂಪಡೆದು ವರ್ಷ ಕಳೆದರೂ ಪರಿಹಾರ ಇಲ್ಲ :

ಕಾರಂಜಾ ಸಂತ್ರಸ್ತರು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಿ 2018ರಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ್ದರು. ಧರಣಿ 78 ದಿನಗಳನ್ನು ಪೂರೈಸಿದ ಬಳಿಕ ಅಂದಿನ ಸಮ್ಮಿಶ್ರ ಸರ್ಕಾರದಲ್ಲಿ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪಾ ಖಾಸೆಂಪುರ ನೇತ್ರತ್ವದಲ್ಲಿ ಕಾರಂಜಾ ಸಂತ್ರಸ್ತರನ್ನು ಬೆಂಗಳೂರಿನ ವಿಕಾಸಸೌಧಕ್ಕೆ ಕರೆದೊಯ್ದರು. ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸಂತ್ರಸ್ತರ ಅಹವಾಲು ಆಲಿಸಿ ಮನವೊಲಿಸಿ ಪರಿಹಾರದ ಭರವಸೆ ನೀಡಿದರು. ಅನೇಕ ಬಾರಿ ಜಿಲ್ಲೆಯ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಮಾಜಿ ಎಂಎಲ್ಸಿ ಅರವಿಂದ ಕುಮಾರ್‌ ಅರಳಿ ಸೇರಿದಂತೆ ಅನೇಕರು ಸದನದಲ್ಲಿ ಪರಿಹಾರಕ್ಕಾಗಿ ಧ್ವನಿಯೆತ್ತಿದರು. ಆದರೂ ಕಾರಂಜಾ ಸಂತ್ರಸ್ತರಿಗೆ ಸಿಗಬೇಕಾದ ಪರಿಹಾರ ಕನಸಾಗಿಯೇ ಉಳಿದಿದೆ.

ನಂತರ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯಿಂದ ಬೀದರ್ ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು 2022ರ ಜೂನ್ 1ರಂದು ಅಹೋರಾತ್ರಿ ಧರಣಿ ಆರಂಭಿಸಿ ಬರೋಬ್ಬರಿ 926 ದಿನಗಳ ಕಾಲ ಬಿಸಿಲು, ಮಳೆ, ಚಳಿ ಎನ್ನದೆ ನಿರಂತರವಾಗಿ ಧರಣಿ ನಡೆಸಿದರು.

WhatsApp Image 2026 04 10 at 12.58.33 PM
ಕಾರಂಜಾ ಸಂತ್ರಸ್ತರು 2025ರ ಜನವರಿ 10ರಂದು 926 ದಿನಗಳ ಅಹೋರಾತ್ರಿ ಧರಣಿ ಅಂತ್ಯಗೊಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಅವರು ಧರಣಿ ಸ್ಥಳಕ್ಕೆ ಆಗಮಿಸಿ, ಸಿಎಂ ಸಿದ್ದರಾಮಯ್ಯನವರು ಬೇಡಿಕೆ ಈಡೇರಿಸಲು ಒಪ್ಪಿಕೊಂಡಿದ್ದಾರೆ. ಇದಕ್ಕಾಗಿ ತಾಂತ್ರಿಕ ಸಮಿತಿ ರಚಿಸಿದ್ದಾರೆ. ಧರಣಿ ಹಿಂಪಡೆಯಬೇಕೆಂಬ ಸಚಿವರ ಮನವಿಗೆ ಧರಣಿನಿರತರು ಒಪ್ಪಿದರು. ಬಳಿಕ 2025ರ ಜನವರಿ10ರಂದು ಕಾರ್ಯಕ್ರಮವೊಂದನ್ನು ಆಯೋಜಿಸಿ ಸಚಿವ ಈಶ್ವರ ಖಂಡ್ರೆ ಅವರು ಧರಣಿ ನಿರತರನ್ನು ಸನ್ಮಾನಿಸಿ ಎಲ್ಲರಿಗೂ ಜ್ಯೂಸ್‌ ಕುಡಿಸಿದರು.

ಸರ್ಕಾರದ ಮಾತಿಗೆ ಕಿವಿಗೊಟ್ಟು ಧರಣಿ ಹಿಂಪಡೆದಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಸಚಿವರು, ಬೆಳಗಾವಿ ಅಧಿವೇಶನದ ವೇಳೆ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೀಡಿರುವ ಭರವಸೆಯಂತೆ ತಾಂತ್ರಿಕ ಸಮಿತಿ ರಚಿಸಲಾಗಿದೆ. ಅದರ ವರದಿ ಆಧರಿಸಿ ಶೀಘ್ರದಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು. 2025ರ ಎಪ್ರಿಲ್‌ 4ರಂದು ತಾಂತ್ರಿಕ ಸಮಿತಿ ರಚಿಸಿತು. ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯ ಆರು ಜನರ ತಾಂತ್ರಿಕ ಸಮಿತಿ ಮೂರು ತಿಂಗಳೊಳಗೆ ವರದಿ ನೀಡಲು ಸರಕಾರ ಸೂಚಿಸಿತ್ತು. ತಡವಾದರೂ ಎರಡು ತಿಂಗಳ ಹಿಂದೆಯೇ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಆದರೆ, ರೈತರಿಗೆ ಪರಿಹಾರ ಮಾತ್ರ ಇನ್ನೂ ದಕ್ಕಿಲ್ಲ.

ಬೀದರ್‌ ಜಿಲ್ಲೆಯಲ್ಲಿ ಇಂದು ಒಂದಿಷ್ಟು ಪ್ರಮಾಣದಲ್ಲಿ ನೀರಾವರಿ ಪ್ರದೇಶವಿದೆ ಎಂದರೆ ಜಿಲ್ಲೆಯ ಜೀವನಾಡಿಯೇ ಆದ ಕಾರಂಜಾ ಜಲಾಶಯವೇ ಕಾರಣ ಎನ್ನಬಹುದು. ಜಿಲ್ಲೆಯ ಶೇ.50ರಷ್ಟು ಜನರಿಗೆ ಕುಡಿಯುವ ನೀರು, ಸಕ್ಕರೆ ಕಾರ್ಖಾನೆಗಳಿಗೆ ಪೂರೈಕೆಯಾಗುತ್ತಿರುವ ನೀರು ಕೂಡ ಕಾರಂಜಾದಿಂದಲೇ.

WhatsApp Image 2026 04 10 at 2.00.32 PM

ನಾಳೆ ಏ.11ರಂದು ಸಿಎಂ ಸಿದ್ದರಾಮಯ್ಯ ಅವರು ಬೀದರ್‌ ನಗರಕ್ಕೆ ಆಗಮಿಸುತ್ತಿದ್ದಾರೆ. ಕಾರಂಜಾ ರೈತ ಸಂತ್ರಸ್ಥರ ನ್ಯಾಯಯುತವಾದ ಬೇಡಿಕೆ ಈಡೇರಿಸಲು ಸರ್ಕಾರ ತಕ್ಷಣ ಸ್ಪಂದಿಸಿ ಕಾರಂಜಾ ನೀರಾವರಿ ಯೋಜನೆಗೆ ಭೂಮಿ ನೀಡಿದ ರೈತ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ಹಣ ಘೋಷಿಸಬೇಕೆಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷ ಬಸವರಾಜ ದೇಶಮುಖ ಮತ್ತು ಸಂಸ್ಥಾಪಕ ಅಧ್ಯಕ್ಷ ಡಾ.ಲಕ್ಷ್ಮಣ ದಸ್ತಿಯವರು ಒತ್ತಾಯಿಸಿದ್ದಾರೆ.

“ಏ.11ರಂದು ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳು ಪಕ್ಷಾತೀತವಾಗಿ ಹೋರಾಟದಲ್ಲಿ ಭಾಗವಹಿಸಿ ಬೆಂಬಲಿಸಬೇಕು” ಎಂದು ಚಂದ್ರಶೇಖರ ಪಾಟೀಲ್‌ ಹೊಚಕನಳ್ಳಿ ಮನವಿ ಮಾಡಿದ್ದಾರೆ.

“ನಾಳೆ ಬೀದರ್‌ ನಗರಕ್ಕೆ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಈ ಬಾರಿ ಕಾರಂಜಾ ಸಂತ್ರಸ್ತರ ದಶಕದ ಬೇಡಿಕೆಗೆ ಸ್ಪಂದಿಸಿ, ನ್ಯಾಯಾಲಯಗಳು ನೀಡಿರುವ ತೀರ್ಪಿನಂತೆ ಪರಿಹಾರ ಹಣದ ಮೊತ್ತವನ್ನು ಪರಿಗಣಿಸಿ ಮಾನವೀಯತೆಯ ಮಾನದಂಡದಂತೆ ಪ್ರತಿ ಎಕರೆಗೆ ನ್ಯಾಯಯುತವಾದ ಪರಿಹಾರ ನೀಡಬೇಕು ಪರಿಹಾರ ಘೋಷಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಸಚಿವ ರಹೀಂ ಖಾನ್, ಹಾಗೂ ಬೀದರ ಜಿಲ್ಲೆಯ‌ ಎಲ್ಲ ಶಾಸಕರು, ಸಂಸದ ಹಾಗೂ ಸಂಘಟಿತ ರಾಜಕೀಯ ಇಚ್ಛಾಶಕ್ತಿ ತೋರಬೇಕು” ಎಂದು ಸಮಿತಿಯ ಸಂಚಾಲಕ ವಿನಯಕುಮಾರ ಮಾಳಗೆ ಆಗ್ರಹಿಸಿದ್ದಾರೆ.

ಏ.11ರಂದು ಪ್ರತಿಭಟನೆ : ಸಂತ್ರಸ್ತ ರೈತರಿಗೆ ಆಹ್ವಾನ

ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣ ಸಮಿತಿ ಹಾಗೂ ಬೀದರ್ ಸಮಗ್ರ ಅಭಿವೃದ್ಧಿ ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಕಾರಂಜಾ ಜಲಾಶಯದಲ್ಲಿ ಮನೆ-ಮಠ ಕಳೆದುಕೊಂಡಿರುವ ಸುಮಾರು 28 ಗ್ರಾಮಗಳಿಗೆ ಭೇಟಿ ನೀಡಿ ಏ.11ರಂದು ಬೀದರ್‌ನಲ್ಲಿ ನಡೆಯುವ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. ರಾಜ್ಯ ಪತ್ರಕರ್ತರ ಸಮ್ಮೇಳನದ ಉದ್ಘಾಟನೆಗೆ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಈ ಬಾರಿ ಕಾರಂಜಾ ಸಂತ್ರಸ್ತರ ಬೇಡಿಕೆಗೆ ಸ್ಪಂದಿಸಿ ಪರಿಹಾರ ಘೋಷಿಸುವ ಭರವಸೆಯಿದೆ. ಎಲ್ಲಾ ಸಂತ್ರಸ್ತರ ರೈತರು ಕುಟುಂಬ ಸಮೇತ ಪ್ರತಿಭಟನೆಯಲ್ಲಿ ಭಾಗವಹಿಸಿ ನ್ಯಾಯಕ್ಕಾಗಿ ಹಕ್ಕೊತ್ತಾಯ ಮಂಡಿಸೋಣʼ ಎಂದು ಮನವರಿಕೆ ಮಾಡುತ್ತಿದ್ದಾರೆ.

WhatsApp Image 2026 04 10 at 3.12.10 PM

“ನಮ್ಮ ಭೂಮಿ ನಮ್ಮ ಹಕ್ಕು” ಎಂಬ ಘೋಷವಾಕ್ಯದೊಂದಿಗೆ ಕಾರಂಜಾ ಮುಳುಗಡೆ ಸಂತ್ರಸ್ತರು ಏ.11ರಂದು ಬೀದರ್‌ನಲ್ಲಿ ನಡೆಸುತ್ತಿರುವ ನ್ಯಾಯಸಮ್ಮತ ಹೋರಾಟಕ್ಕೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ಪಕ್ಷ ಸಂಪೂರ್ಣ ಬೆಂಬಲ ಸೂಚಿಸಿದೆ. ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಸಚಿವ ರಹೀಂ ಖಾನ್ ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ರೈತರಿಗೆ ಸಮರ್ಪಕ ಪರಿಹಾರ ದೊರಕಿಸುವಲ್ಲಿ ಪ್ರಮುಖ ಪಾತ್ರವಹಿಸಿ ರೈತರ ಜೀವನದಲ್ಲಿ ಹೊಸ ಭರವಸೆ ಮೂಡಿಸಬೇಕು. ಕಾರಂಜಾ ಸಂತ್ರಸ್ತ ರೈತರ ದೀರ್ಘಕಾಲದ ಹೋರಾಟಕ್ಕೆ ನ್ಯಾಯ ಸಿಗಬೇಕು” ಎಂದು ಪಕ್ಷದ ರಾಜ್ಯ ಸಂಯೋಜಕ ಮಹೇಶ್ ಗೋರನಾಳಕರ್ ಒತ್ತಾಯಿಸಿದ್ದಾರೆ.

“ಕಾರಂಜಾ ಜಲಾಶಯಕ್ಕಾಗಿ ಮನೆ-ಮಠ ಕಳೆದುಕೊಂಡು ಕುಟುಂಬಗಳು ದಿಕ್ಕಾಪಾಲಾಗಿವೆ. ನ್ಯಾಯಯುತ ಪರಿಹಾರ ಸಿಗದೇ ಇರುವುದಕ್ಕೆ ಅನೇಕ ಸಂತ್ರಸ್ತರ ಬದುಕು ಹೀನಾಯ ಸ್ಥಿತಿಗೆ ತಲುಪಿದೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ಜಮೀನು ನೀಡಿದ ಅವರೀಗ ಅನ್ನ-ಆಶ್ರಯಕ್ಕಾಗಿ ಪರದಾಡುವಂತಾಗಿದೆ. ವೈಜ್ಞಾನಿಕ ಪರಿಹಾರಕ್ಕಾಗಿ ನಿರಂತರ ಹೋರಾಟ ನಡೆಸುತ್ತಿದ್ದೇವೆ. ಅದಕ್ಕಾಗಿ ಪ್ರಾಣತ್ಯಾಗಕ್ಕೂ ಸಿದ್ಧರಾಗಿ ವಿಷ ಸೇವಿಸಿದ್ದೇವೆ. ನಮ್ಮದು ಇದು ಅಂತಿಮ ಹೋರಾಟ. ನಾಳೆ ಜಿಲ್ಲೆಗೆ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಕಾರಂಜಾ ಸಂತ್ರಸ್ತರಿಗೆ ಸೂಕ್ತ ಪರಿಹಾರ ಘೋಷಿಸಿ ಬಹುಕಾಲದ ಬೇಡಿಕೆ ಈಡೇರಿಸುವ ಭರವಸೆ ಇದೆ” ಎಂದು ಸಮಿತಿಯ ಹಿರಿಯ ಮುಖಂಡ ರಾಜಪ್ಪ ಕೋಸಂ ಅವರು ಹೇಳುತ್ತಾರೆ.

ಇದನ್ನೂ ಓದಿ: ಬೀದರ್‌ | ಜಲ್ಲಿ ಕಲ್ಲಿನ ರಸ್ತೆ ಮೇಲೆ ಜನರ ಸರ್ಕಸ್;‌ ಮುಗ್ಗರಿಸಿ ಬಿದ್ದರೂ ಕದಲದ ಆಡಳಿತ!

ಅಭಿವೃದ್ಧಿಯ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಸರ್ಕಾರಗಳು, ನಂತರ ಅವರ ಬದುಕಿನ ಬಗ್ಗೆ ಕನಿಷ್ಠ ಕಾಳಜಿಯನ್ನೂ ತೋರುವುದಿಲ್ಲ ಎನ್ನುವುದಕ್ಕೆ ಕಾರಂಜಾ ಜಲಾಶಯದ ಸಂತ್ರಸ್ತರೇ ಸಾಕ್ಷಿ. ಯಾರ ಹೊಲದಲ್ಲಿ ಲಕ್ಷಾಂತರ ಟನ್ ನೀರು ಹರಿಯುತ್ತಿದೆಯೋ, ಅವರೇ ಇಂದು ಕುಡಿಯುವ ನೀರಿಗಾಗಿ ಮತ್ತು ಕೂಲಿಗಾಗಿ ಪರದಾಡುತ್ತಿರುವುದು ಭಾರತದ ಆರ್ಥಿಕ ವ್ಯವಸ್ಥೆಯ ದೊಡ್ಡ ವಿಪರ್ಯಾಸ. ಈ ಸಮಸ್ಯೆಗೆ ಖಂಡಿತ ಪರಿಹಾರ ಸಿಗಲೇಬೇಕು. ವರ್ಷಗಳಿಂದ ಮಾಡುತ್ತಿರುವ ನ್ಯಾಯಯುತ್‌ ಹೋರಾಟಕ್ಕೆ ಜಯ ಸಿಗದೇ ಇದ್ದರೆ, ಸಮಾಜವಾದಿ ಹಿನ್ನೆಲೆಯಿಂದ ಬಂದಿರುವ ಸಿದ್ದರಾಮಯ್ಯ ಅವರ ಸರ್ಕಾರ ಕೂಡ ಇಲ್ಲದರವರ ಪರವಾಗಿ ಯಾವ ಕಾಳಜಿಯನ್ನೂ ತೋರುವುದಿಲ್ಲ ಎನ್ನುವುದು ಸಾಬೀತಾಗುತ್ತದೆ. ಸರ್ಕಾರ ಅದಕ್ಕೆ ಆಸ್ಪದ ಕೊಡಬಾರದು.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಲೈಂಗಿಕ ಕಿರುಕುಳ ಆರೋಪ; ಪ್ರಾಧ್ಯಾಪಕ ಹುದ್ದೆಯಿಂದ ಕಾಂಗ್ರೆಸ್ ಸಂಸದ ಬಿಮೋಲ್ ವಜಾ

11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು...

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...