ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಹುಕೋನದ ಸ್ಪರ್ಧೆಯನ್ನು ಎದುರುಗಾಣುತ್ತಿರು ತಮಿಳುನಾಡು ಬಾರಿ ಕುತೂಹಲಕ್ಕೆ ಕಾರಣವಾಗಿದೆ. ಆಡಳಿತರೂಢ ಡಿಎಂಕೆ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕೆ ಯತ್ನಿಸುತ್ತಿದ್ದರೆ, ಎಐಎಡಿಎಂಕೆ-ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಅಧಿಕಾರಕ್ಕೇರಬೇಕು ಎಂದು ಯತ್ನಿಸುತ್ತಿದೆ.
ಈ ಪಂಚರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಕಾರ್ಯತಂತ್ರಗಳನ್ನು ಹೆಣೆಯುತ್ತಿದೆ. ʼರಾಜ್ಯವನ್ನು ಕಾಪಾಡಿಕೊಳ್ಳುವುದು, ರಾಜ್ಯದಲ್ಲಿ ತನ್ನ ನೆಲೆಗಳನ್ನು ವಿಸ್ತರಿಸಿಕೊಳ್ಳುವುದು ಮತ್ತು ರಾಜ್ಯದಲ್ಲಿ ಗೆದ್ದು ಅಧಿಕಾರಕ್ಕೆ ಬರುವುದುʼ ಬಿಜೆಪಿಯ ಪ್ರಮುಖ ಗುರಿಯಾಗಿವೆ. ಗೆದ್ದು ಅಧಿಕಾರಕ್ಕೆ ಬರುವುದಕ್ಕೆ(ಮೈತ್ರಿಯಿಂದ) ಯತ್ನಿಸುತ್ತಿರುವ ರಾಜ್ಯಗಳಲ್ಲಿ ಒಂದಾದ ತಮಿಳುನಾಡನ್ನು ತನ್ನ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದೆ. ಆದರೆ, ಎಐಎಡಿಎಂಕೆ ಜೊತೆಗಿನ ಮೈತ್ರಿಯಿಂದಲೂ ಅಧಿಕಾರಕ್ಕೆ ಏರುವುದು ಕಷ್ಟ ಎನ್ನುವುದನ್ನು ಚುನಾವಣಾ ಪೂರ್ವ ಸಮೀಕ್ಷಾ ವರದಿವೊಂದು ಹೇಳಿದೆ.
ಲೋಕ ಪೋಲ್ ಸಂಸ್ಥೆ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ನೇತೃತ್ವದ ಒಕ್ಕೂಟ ಮತ್ತೆ ಅಧಿಕಾರ ಹಿಡಿಯುವ ಸಾಧ್ಯತೆ ಹೆಚ್ಚಿದೆ ಎಂದು ಭವಿಷ್ಯ ಹೇಳಿದೆ.
ಡಿಎಂಕೆ ಪೂರ್ಣ ಬಹುಮತದಿಂದ ಗೆದ್ದು ಮತ್ತೆ ಅಧಿಕಾರವನ್ನು ಹಿಡಿಯಲಿದೆ ಎಂದು ಅಂದಾಜಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿಕೂಟಗಳಿಗೆ ಪರ್ಯಾಯವಾಗಿ ರಾಜ್ಯದಲ್ಲಿ ಹೊಸ ರಾಜಕೀಯದ ಅಲೆ ಎಬ್ಬಿಸಿದ್ದ ನಟ ದಳಪತಿ ವಿಜಯ್ ನೇತೃತ್ವದ ಟಿವಿಕೆ ಒಂದಂಕಿ ಕ್ಷೇತ್ರಗಳನ್ನು ದಾಟುವುದಿಲ್ಲ ಎಂದು ಹೇಳಿದ್ದು, ಟಿವಿಕೆಯ ಏಕಾಂಗಿ ಸ್ಪರ್ಧೆ ಆಡಳಿತರೂಢ ಡಿಎಂಕೆ ನೇತೃತ್ವದ ಒಕ್ಕೂಟಕ್ಕೆ ಅನುವು ಮಾಡಿಕೊಡಲಿದೆ ಎಂದು ಪರೋಕ್ಷವಾಗಿ ಹೇಳಿದೆ. ಅಚ್ಚರಿ ಎಂಬಂತೆ ಎಐಎಡಿಎಂಕೆ ಮೈತ್ರಿಕೂಟ ಎರಡಂಕಿ ಕ್ಷೇತ್ರಗಳನ್ನು ದಾಟುವುದಿಲ್ಲ ಎಂದು ಹೇಳಿದೆ.
ಇದನ್ನೂ ಓದಿ : ಅಸ್ಸಾಂ ಗದ್ದುಗೆಗೆ ಪ್ರಣಾಳಿಕೆಗಳ ಕಸರತ್ತು: ಕಮಲದ ‘ಸಂಕಲ್ಪ ಪತ್ರ’ಕ್ಕೆ ‘ಕೈ’ ಗ್ಯಾರಂಟಿ ಸವಾಲು
ಕಳೆದೊಂದು ವರ್ಷದಿಂದ ಡಿಎಂಕೆ ನೇತೃತ್ವದ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ ಎಂದು ಹೇಳಲಾಗುತ್ತಿತ್ತು. ಆದರೆ, ಈ ಸಮೀಕ್ಷೆ ಜನ ಆಡಳಿತ ಸರ್ಕಾರವನ್ನು ಸಂಪೂರ್ಣವಾಗಿ ಒಪ್ಪಿದ್ದಾರೆ ಎನ್ನುವುದನ್ನು ಸೂಚ್ಯವಾಗಿ ಹೇಳಿದೆ. ಈ ಸಮೀಕ್ಷೆಯ ಪ್ರಕಾರ ಎಐಎಡಿಎಂಕೆ ಮೈತ್ರಿಕೂಟ ಮತ್ತು ಟಿವಿಕೆ ನಡೆಸುತ್ತಿರುವ ರಾಜಕೀಯ ತಂತ್ರಗಾರಿಕೆ ಈ ಬಾರಿ ಸಂಪೂರ್ಣ ವ್ಯರ್ಥವಾಗಲಿದೆ ಎಂದು ವರದಿ ಮೂಲಕ ಹೇಳಿದೆ.
ಲೋಕ ಲೋಕ ಪೋಲ್ ನಡೆಸಿದ ಸಮೀಕ್ಷೆ ಹೇಳುವ ಪ್ರಕಾರ, ಆಡಳಿತಾರೂಢ ಡಿಎಂಕೆ ನೇತೃತ್ವದ ಒಕ್ಕೂಟ ತಮಿಳುನಾಡಿನಲ್ಲಿರುವ ಒಟ್ಟು 234 ವಿಧಾನಸಭಾ ಕ್ಷೇತ್ರಗಳ ಪೈಕಿ 181 ರಿಂದ 189 ಕ್ಷೇತ್ರಗಳಲ್ಲಿ ಜಯ ಗಳಿಸುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಉಳಿಸಿಕೊಳ್ಳಲಿದೆ ಎಂದಿದ್ದಲ್ಲದೇ, ಈ ಮೈತ್ರಿ ಒಕ್ಕೂಟ ಶೇ. 40.1ರಷ್ಟು ಮತ ಹಂಚಿಕೆಯನ್ನು ಪಡೆಯಲಿದೆ ಎಂದು ಅಂದಾಜಿಸಿದೆ.
ಪ್ರತಿಪಕ್ಷದ ಸ್ಥಾನದಲ್ಲಿರುವ ಎಐಡಿಎಂಕೆ ಮೈತ್ರಿಕೂಟ ಕೇವಲ 38 ರಿಂದ 42 ಕ್ಷೇತ್ರಗಳಲ್ಲಿ ಗೆದ್ದು ತೃಪ್ತಿಪಟ್ಟುಕೊಳ್ಳಲಿದೆ ಎಂದು ಹೇಳಿದೆ. ಮತ್ತು ಎಐಡಿಎಂಕೆ ಮೈತ್ರಿಕೂಟ ಶೇ. 29ರಷ್ಟು ಮತ ಹಂಚಿಕೆಯನ್ನು ಪಡೆಯಲಿದೆ ಎಂದು ಹೇಳಿದೆ.

(ಈ ಮೇಲಿನ ಚಾರ್ಟ್ ಅನ್ನು Gemini ಸಹಾಯದ ಮೂಲಕ ರಚಿಸಲಾಗಿದೆ)
ಇನ್ನು, ದಳಪತಿ ವಿಜಯ್ ನೇತೃತ್ವದ ಟಿವಿಕೆ ಹೆಚ್ಚು ಕ್ಷೇತ್ರಗಳನ್ನು ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲವಾದರೂ, ಶೇ.23.9ರಷ್ಟು ಮತ ಹಂಚಿಕೆಯನ್ನು ಪಡೆಯುತ್ತದೆ ಎಂದು ಸಮೀಕ್ಷೆ ಹೇಳಿದೆ. ಇದು ಎಐಎಡಿಎಂಕೆ ಮತಬ್ಯಾಂಕ್‌ಗೆ ದೊಡ್ಡ ಹೊಡೆತ ನೀಡಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ.
ಸೀಮಾನ್ ನೇತೃತ್ವದ ಎನ್ಟಿಕೆ ಶೇ. 4.9 ರಷ್ಟು ಮತಗಳನ್ನು ಪಡೆದರೂ, ಒಂದೇ ಒಂದು ಕ್ಷೆತ್ರವನ್ನು ಗೆಲ್ಲುವುದು ಬಹಳ ಕಷ್ಟ ಎಂದು ಅಂದಾಜು ಮಾಡಿದೆ. ಇತರೆ ಸಣ್ಣ ಪುಟ್ಟ ಪಕ್ಷಗಳು ಶೇ. 2.1 ರಷ್ಟು ಮತಗಳನ್ನು ಪಡೆಯಬಹುದೆಂದು ಸಮೀಕ್ಷೆ ಹೇಳಿದೆ.

(ಈ ಮೇಲಿನ ಚಾರ್ಟ್ ಅನ್ನು Gemini ಸಹಾಯದ ಮೂಲಕ ರಚಿಸಲಾಗಿದೆ)




