ತೆಲಂಗಾಣದ ಮೇಡಕ್ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಬಲಪಂಥೀಯ ಗುಂಪು ಮದರಸಾ ಮೇಲೆ ದಾಳಿ ನಡೆಸಿದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ ಮಿನಜ್ ಉಲ್ ಮದರಸಾ ಬಕ್ರೀದ್ ಪ್ರಯುಕ್ತ ಜಾನುವಾರುಗಳನ್ನು ಸಾಗಣೆ ಮಾಡುತ್ತಿದೆ ಎಂಬ ಆರೋಪದ ಮೇಲೆ ವಾಹನವನ್ನು ತಡೆದಾಗ ಎರಡು ಗುಂಪುಗಳ ನಡುವೆ ಕಲ್ಲುಗಳ ತೂರಾಟ ಶುರುವಾಗಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.
ಮದರಸಾ ಮೇಲೆ ದಾಳಿ ನಡೆದಿದೆ ಎಂಬ ಸುದ್ದಿ ಹರಡಿದ ಒಂದು ಗಂಟೆಯಲ್ಲಿ ಮತ್ತೊಂದು ಗುಂಪು ಜಮಾವಣೆಗೊಂಡಿದೆ. ದೊಣ್ಣೆಗಳನ್ನು ಹಿಡಿದು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತ ಹೋಗುತ್ತಿದ್ದ ಗುಂಪು ಕಾರುಗಳು ಹಾಗೂ ಇತರ ಸ್ವತ್ತುಗಳ ಮೇಲೆ ದಾಳಿ ನಡೆಸಿದೆ. ದಾಳಿಯ ಸಂದರ್ಭದಲ್ಲಿ ಮದರಸಾದಲ್ಲಿದ್ದ ಹಲವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಬಲಪಂಥೀಯ ಗುಂಪು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯ ಮೇಲೂ ದಾಳಿ ನಡೆಸಿದೆ. ಗಲಭೆ ತೀವ್ರಗೊಂಡ ನಂತರ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಪವನ್ ಕಲ್ಯಾಣ್ ನೇಮಕ
ಮೇಡಕ್ ಎಸ್‌ಪಿ ಬಿ ಬಾಲ ಸ್ವಾಮಿ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ 8 ಮಂದಿಯನ್ನು ಬಂಧಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಘಟನೆಗೆ ರಾಜಕೀಯ ಸಂಬಂಧವಿದೆಯೆ ಎಂಬುದು ದೃಢಪಟ್ಟಿಲ್ಲ. ಗಲಭೆಗಳಿಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಎಐಎಂಐಎಂ ಅಧ್ಯಕ್ಷ ಅಸಾದ್ದುದೀನ್ ಓವೈಸಿ ಅವರು ತೆಲಂಗಾಣ ಡಿಜಿಪಿ ರವಿ ಗುಪ್ತ ಅವರೊಂದಿಗೆ ಮಾತನಾಡಿ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಗಲಭೆ ಉಂಟಾಗಲು ಹಿಂದೂ ವಾಹಿನಿ ಹಾಗೂ ಬಿಜೆಪಿ ಕಾರಣರಾಗಿದ್ದು, ಮುಸ್ಲಿಂ ಸಮುದಾಯದವರಿಗೆ ಸೇರಿದ ಆಸ್ತಿಪಾಸ್ತಿಗಳ ಮೇಲೆ ಗುಂಪು ದಾಳಿ ನಡೆಸುತ್ತಿದೆ ಎಂದು ಕಾರವಾನ್ ಶಾಸಕ ಕಸೂರ್ ಮೋಹಿದ್ದೀನ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು,ಪೊಲೀಸರು ಪ್ರದೇಶದ ಸುತ್ತಲು ಗಸ್ತು ತಿರುಗುತ್ತಿದ್ದಾರೆ.
