ಇನ್ನೂ ಕಣ್ಣು ಬಿಡದ ಪಕ್ಷ ಸೇರಿದ TMC ಬಂಡಾಯ ಸಂಸದರು; ಯಾವುದೀ NCPI?

Date:

ತೃಣಮೂಲ ಕಾಂಗ್ರೆಸ್‌ನ (TMC) 20 ಬಂಡಾಯ ಸಂಸದರು ತಾವು ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ (NCPI) ಪಕ್ಷದೊಂದಿಗೆ ವಿಲೀನಗೊಂಡಿರುವುದಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ತಿಳಿಸಿದ್ದಾರೆ. ಅಲ್ಲದೆ ಸಂಸತ್ತಿನಲ್ಲಿ ತಮಗೆ ಪ್ರತ್ಯೇಕ ಬಣವಾಗಿ ಕೂರಲು ಅವಕಾಶ ನೀಡಬೇಕೆಂದು ಕೋರಿದ್ದಾರೆ. ಈ ಹಠಾತ್ ಬೆಳವಣಿಗೆಯಿಂದಾಗಿ ಇಷ್ಟು ದಿನ ಅಷ್ಟಾಗಿ ಸದ್ದು ಮಾಡದ, ಕನಿಷ್ಟ ಇಂಥದ್ದೊಂದು ಪಕ್ಷವಿದೆ ಎಂದೂ ತಿಳಿಯದ NCPI ಮೇಲೆ ಇದೀಗ ದೇಶದ ಗಮನ ನೆಟ್ಟಿದೆ.

- Advertisement -

ಶಿಯುಲಿ ಕುಂದು ನೇತೃತ್ವದ ಈ NCPI ಪಕ್ಷ ಇತ್ತೀಚಿಗೆ ಅಸ್ಸಾಂ ಮತ್ತು ತ್ರಿಪುರಾಗಳಲ್ಲಿ ಸಕ್ರಿಯವಾಗಿದೆ. ಭಾರತೀಯ ಚುನಾವಣಾ ಆಯೋಗದ (ECI) ವೆಬ್‌ಸೈಟ್ ಪ್ರಕಾರ, ಇದು “ನೋಂದಾಯಿತ ಆದರೆ ಮಾನ್ಯತೆ ಪಡೆಯದ” ಪಕ್ಷಗಳ ಪಟ್ಟಿಯಲ್ಲಿದ್ದು, “ಏಳು ಕಿರಣಗಳಿರುವ ಪೆನ್ನಿನ ನಿಬ್” ಅನ್ನು ತನ್ನ ಪಕ್ಷದ ಚಿಹ್ನೆಯನ್ನಾಗಿ ಹೊಂದಿದೆ. 2023ರ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಪಕ್ಷದಿಂದ ಜಹಾಂಗೀರ್ ಅಲಿ (54) ಮತ್ತು ಬರ್ಜೇಡಾ ತ್ರಿಪುರ (65)ರನ್ನು ಉನಕೋಟಿ ಜಿಲ್ಲೆಯ ಕೈಲಾಶಹರ್ ಕ್ಷೇತ್ರ ಮತ್ತು ಧಲೈ ಜಿಲ್ಲೆಯ ಚಾವ್ಮಾನು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಪಕ್ಷವು ಒಟ್ಟು 7 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತಾದರೂ, 4 ಕ್ಷೇತ್ರಗಳ ನಾಮಪತ್ರ ತಿರಸ್ಕೃತಗೊಂಡಿದ್ದವು. ಕೊನೆಗೆ ಕೇವಲ ಇಬ್ಬರು ಅಭ್ಯರ್ಥಿಗಳು ಮಾತ್ರ ಪಕ್ಷದಿಂದ ಸ್ಪರ್ಧಿಸಬೇಕಾಯಿತು. ಇಬ್ಬರೂ ಸೇರಿ ಗಳಿಸಿದ್ದ ಒಟ್ಟು ಮತಗಳು ಕೇವಲ 822 (ಎಸ್‌ಟಿ-ಮೀಸಲಾತಿ ಚಾವ್ಮಾನುದಲ್ಲಿ 536 ಮತ್ತು ಕೈಲಾಶಹರ್‌ನಲ್ಲಿ 286). ಕೃಷ್ಣ ಕುಮಾರ್ ದೆಬ್ಬರ್ಮಾ ಎಂಬ ಮತ್ತೊಬ್ಬ ಅಭ್ಯರ್ಥಿ ಅಂಬಾಸಾದಿಂದ ಪಕ್ಷದ ಬೆಂಬಲಿತ ಪಕ್ಷೇತರನಾಗಿ ಸ್ಪರ್ಧಿಸಿ 376 ಮತ ಪಡೆದಿದ್ದರು. ಜತೆಗೆ ಅಂದು ಆ ಕ್ಷೇತ್ರಗಳಲ್ಲಿ ಟಿಎಂಸಿ ಕೂಡ ನೋಟಾಗಿಂತ (NOTA- 537) ಸ್ವಲ್ಪವೇ ಹೆಚ್ಚು ಮತ (696) ಪಡೆದು ಮೂರು ಮತ್ತು ನಾಲ್ಕನೇ ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

ಅಸ್ಸಾಂ, ಬಿಹಾರ ಕತ್ತಲಲ್ಲಿ ಮುಳುಗಿದಾಗ ಮೋದಿಗೆ ‘ಆಶೀರ್ವಾದ್ ಕಾ...

ದೆಹಲಿಯಲ್ಲಿ ಕಟ್ಟಡ ಕುಸಿದು ವಿದ್ಯಾರ್ಥಿಗಳು ಹೆಣವಾದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆಘಾತಗೊಂಡು ಎಳೆ ಜೀವಗಳು ಸಾವಿನ ದಾರಿ ಹಿಡಿದಾಗ, ತಮ್ಮ ಹಕ್ಕುಗಳಿಗಾಗಿ ದೇಶದ ಯುವಜನ ಬೀದಿಗಿಳಿದಾಗ, ಕೊನೆಗೆ ನೈಸರ್ಗಿಕ ವಿಕೋಪದಿಂದ ದೇಶದ ಜನ...

ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ –...

ಮತದಾನಕ್ಕೂ ಮುನ್ನ ಎದುರಾಳಿಯೇ ಕಣದಿಂದ ಮಾಯವಾದರೆ, ಅದನ್ನು ಚುನಾವಣೆ ಎನ್ನಬಹುದೇ? ನಂದಿಗ್ರಾಮದ ಬೆಳವಣಿಗೆಗಳು 2027ರ ಉತ್ತರ ಪ್ರದೇಶ ಚುನಾವಣೆಗೂ ಗಂಭೀರ ಸವಾಲು ಒಡ್ಡುವಂತಿವೆ ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ನಂದಿಗ್ರಾಮದ...

ಚುನಾವಣೆಯ ನಂತರ ಈ ಪಕ್ಷ ಸಂಪೂರ್ಣವಾಗಿ ನಾಪತ್ತೆಯಾಗಿತ್ತು ಎಂದು ಸ್ವತಃ ಸ್ಪರ್ಧಿಸಿದ್ದ ಅಭ್ಯರ್ಥಿಗಳೇ ಅಳಲು ತೋಡಿಕೊಂಡಿದ್ದಾರೆ. ಕೈಲಾಶಹರ್ ಅಭ್ಯರ್ಥಿ ಜಹಾಂಗೀರ್ ಅಲಿ ಮಾತನಾಡಿ, “2023ರ ಚುನಾವಣೆಯ ಸಂದರ್ಭದಲ್ಲಿ ಕೋಲ್ಕತ್ತಾದಿಂದ ಬಂದಿದ್ದ ಶಿಯುಲಿ ಕುಂದು ನಮ್ಮನ್ನು ಸಂಪರ್ಕಿಸಿ ಅಭ್ಯರ್ಥಿಯಾಗುವಂತೆ ಕೋರಿದ್ದರು. ಚುನಾವಣೆ ಮುಗಿದ ತಕ್ಷಣ ಅವರು ತಮ್ಮ ಅಂಗಡಿ ಮುಚ್ಚಿ ವಾಪಸ್ ಹೋದರು. ನಂತರ ನಮಗೆ ಅವರ ಸಂಪರ್ಕವೇ ಸಿಗಲಿಲ್ಲ” ಎಂದಿದ್ದಾರೆ. ಚಾವ್ಮನು ಕ್ಷೇತ್ರದ ಅಭ್ಯರ್ಥಿ ಬರ್ಜೆಡಾ ತ್ರಿಪುರಾ ಕೂಡ, “ಅವರು ನನ್ನಿಂದ ಯಾವುದೇ ಹಣ ಪಡೆಯಲಿಲ್ಲ, ಪ್ರಚಾರವೂ ಮಾಡಲಿಲ್ಲ. ಅವರಿಗೆ ಕೇವಲ ಅಭ್ಯರ್ಥಿಗಳು ಬೇಕಾಗಿದ್ದರು ಅಷ್ಟೆ. ಚುನಾವಣೆ ಮುಗಿದ ಮೇಲೆ ನಾವೂ ಅವರ ಸಂಪರ್ಕ ಕಳೆದುಕೊಂಡೆವು” ಎಂದು ಹೇಳಿರುವುದಾಗಿ NDTV ವರದಿ ಮಾಡಿದೆ.

ಪಕ್ಷದ ನಾಯಕ ಶಂತನು ಡೇ ಪ್ರಕಾರ, 2023ರ ಬಂಗಾಳ ಪಂಚಾಯತ್ ಚುನಾವಣೆ ಮತ್ತು 2026ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಪ್ಲಾನ್ ಇತ್ತಾದರೂ, ಆಂತರಿಕ ಹಣಕಾಸಿನ ಜಗಳ ಮತ್ತು ಸಂಪನ್ಮೂಲಗಳ ಕೊರತೆಯಿಂದಾಗಿ ಪಕ್ಷ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿತ್ತು. ಆದರೆ, ಇಂತಹ ಇತಿಹಾಸವಿರುವ ಪಕ್ಷ ಈಗ 20 ಲೋಕಸಭಾ ಸಂಸದರ ಬಲದೊಂದಿಗೆ ದಿಢೀರ್ ಸುದ್ದಿಯಲ್ಲಿದೆ.

ಸದ್ಯ ಈ ಬಂಡಾಯ ಸಂಸದರು ಇನ್ನೂ ಕಣ್ಣುಬಿಡದ ಈ ಚಿಕ್ಕ ಪಕ್ಷದೊಂದಿಗೆ ವಿಲೀನವಾಗಿರುವುದರ ಹಿಂದೆ ಒಂದು ಪ್ರಮುಖ ರಾಜಕೀಯ ತಂತ್ರವಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಸಂವಿಧಾನದ 10ನೇ ಶೆಡ್ಯೂಲ್‌ ಅಡಿಯಲ್ಲಿ ಬರುವ ಪಕ್ಷಾಂತರ ನಿಷೇಧ ಕಾಯ್ದೆಯ ಅನರ್ಹತೆಯಿಂದ ಪಾರಾಗಲು ಇವರು ಈ ಹಾದಿ ಹಿಡಿದಿದ್ದಾರೆ. ಈ ನಿಯಮದ ಪ್ರಕಾರ, ಮೂಲ ರಾಜಕೀಯ ಪಕ್ಷದ ಕನಿಷ್ಠ ಮೂರನೇ ಎರಡರಷ್ಟು (2/3) ಸಂಸದರು ಒಪ್ಪಿ ಮತ್ತೊಂದು ಪಕ್ಷದೊಂದಿಗೆ ವಿಲೀನವಾದರೆ ಅವರಿಗೆ ಅನರ್ಹತೆಯಿಂದ ರಕ್ಷಣೆ ಸಿಗುತ್ತದೆ.

2016ರಲ್ಲಿ ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಇಡೀ ಶಾಸಕರ ಬಳಗವನ್ನು ಕಳೆದುಕೊಂಡು ಪತನವಾಗಿತ್ತು. ಮಾಜಿ ಸಿಎಂ ನಬಂ ಟುಕಿ ಅವರನ್ನು ಹೊರತುಪಡಿಸಿ ಉಳಿದೆಲ್ಲಾ ಕಾಂಗ್ರೆಸ್ ಶಾಸಕರು ಸಾಮೂಹಿಕವಾಗಿ ‘ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ’ (PPA) ಪಕ್ಷ ಸೇರಿದ್ದರು. ಈ PPA ಪಕ್ಷವು ಆಗಲೇ ಬಿಜೆಪಿಯ ಮಿತ್ರಪಕ್ಷಗಳ ಒಕ್ಕೂಟವಾದ NEDA ದ ಭಾಗವಾಗಿತ್ತು. ಅದೇ ವರ್ಷದ ಕೊನೆಯಲ್ಲಿ (ಡಿಸೆಂಬರ್ 31) PPA ಸೇರಿದ್ದ ಶಾಸಕರು ಪೇಮಾ ಖಂಡು ನೇತೃತ್ವದಲ್ಲಿ ಅಧಿಕೃತವಾಗಿ ಬಿಜೆಪಿಗೆ ವಲಸೆ ಹೋದರು. ಈ ಮೂಲಕ ಈಶಾನ್ಯ ಭಾರತದಲ್ಲಿ ಬಿಜೆಪಿ ತನ್ನ ಮೊದಲ ಪೂರ್ಣ ಪ್ರಮಾಣದ ಸರ್ಕಾರವನ್ನು ಅಸ್ತಿತ್ವಕ್ಕೆ ತರುವಲ್ಲಿ ಯಶಸ್ವಿಯಾಯಿತು. ಈಗಿನ ಟಿಎಂಸಿ ಬಂಡಾಯ ಸಂಸದರು ಕೂಡ ಇದೇ ಮಾದರಿಯಲ್ಲಿ ಆಂಟಿ-ಡಿಫೆಕ್ಷನ್ (ಪಕ್ಷಾಂತರ ನಿಷೇಧ) ಕಾನೂನಿನಿಂದ ಬಚಾವಾಗಲು NCPI ಎಂಬ ಸಣ್ಣ ಪಕ್ಷವನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

“ನಾವು ನೋಂದಾಯಿತ ಪ್ರಾದೇಶಿಕ ಪಕ್ಷವಾದ NCPI ಜೊತೆ ವಿಲೀನಗೊಂಡಿದ್ದೇವೆ. ನಿಯಮದ ಪ್ರಕಾರ ಮೂರನೇ ಎರಡರಷ್ಟು ಬಹುಮತದೊಂದಿಗೆ ಹೊರಬಂದ ತಕ್ಷಣವೇ ಮೂಲ ಪಕ್ಷದ ಹೆಸರನ್ನು ನಮ್ಮದೇ ಎಂದು ಹೇಳಲು ಬರುವುದಿಲ್ಲ. ಆದ್ದರಿಂದ ಜುಲೈನಲ್ಲಿ ಸಂಸತ್ತು ಪುನರಾರಂಭಗೊಂಡಾಗ, ನಮಗೇ 2/3 ಬಹುಮತ ಇರುವುದರಿಂದ ‘ತೃಣಮೂಲ’ ಹೆಸರನ್ನು ನಮಗೇ ನೀಡಬೇಕೆಂದು ಸ್ಪೀಕರ್ ಬಳಿ ಕೋರುತ್ತೇವೆ. ಅದಾದ ಬಳಿಕ ಅಸಲಿ TMC ಯಾವುದು ಎಂಬುದನ್ನು ಕೋರ್ಟ್ ತೀರ್ಮಾನಿಸಲಿದೆ,” ಎಂದು ಬಂಡಾಯ ಸಂಸದರಲ್ಲೊಬ್ಬರಾದ ಹಿರಿಯ ನಾಯಕ ಸುದೀಪ್ ಬಂಡೋಪಾಧ್ಯಾಯ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಬಂಗಾಳದ ವಿರೋಧ ಪಕ್ಷದ ನಾಯಕ ರಿತಬ್ರತಾ ಬ್ಯಾನರ್ಜಿ ಅವರು ಮೂಲ ರಾಜಕೀಯ ಪಕ್ಷವನ್ನೇ ತಮ್ಮ ವಶಕ್ಕೆ ಪಡೆಯುವ ಪ್ರಕ್ರಿಯೆಯೂ ಜಾರಿಯಲ್ಲಿದೆ ಎಂದಿದ್ದಾರೆ.

ಇದನ್ನೂ ಓದಿ: ಪೇಪರ್ ಲೀಕ್ ತಡೆಯಲು ʼಮಿಲಿಟರಿʼ ಕರೆತಂದ ಮೋದಿ; ಇದು ಹತಾಶೆಯ ಪರಮಾವಧಿ ಎಂದ ಜನ!

ಆದರೆ ಬಂಡಾಯಗಾರರ ಈ ವಾದವನ್ನು TMC ಹೈಕಮಾಂಡ್ ತೀವ್ರವಾಗಿ ವಿರೋಧಿಸಿದೆ. TMC ಸಂಸದೀಯ ಪಕ್ಷದ ನಾಯಕ ಅಭಿಷೇಕ್ ಬ್ಯಾನರ್ಜಿ ಅವರು ಸ್ಪೀಕರ್‌ಗೆ ಸುದೀರ್ಘ ಪತ್ರ ಬರೆದಿದ್ದು, ಸುಪ್ರೀಂ ಕೋರ್ಟ್‌ನ 2023ರ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ತೀರ್ಪನ್ನು ಉಲ್ಲೇಖಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ‘ರಾಜಕೀಯ ಪಕ್ಷ’ ಮತ್ತು ‘ಸಂಸದೀಯ ಪಕ್ಷ’ ಎರಡೂ ಬೇರೆ ಬೇರೆ ಸಂಸ್ಥೆಗಳಾಗಿವೆ. ಸದನದಲ್ಲಿ ವಿಪ್ ಮತ್ತು ನಾಯಕರನ್ನು ನೇಮಿಸುವ ಪೂರ್ಣ ಅಧಿಕಾರ ಮೂಲ ರಾಜಕೀಯ ಪಕ್ಷಕ್ಕಿರುತ್ತದೆಯೇ ಹೊರತು ಬಂಡಾಯ ಗುಂಪಿಗಲ್ಲ ಎಂಬುದು ಅವರ ವಾದ.

ಮುಂದುವರಿದು, 91ನೇ ಸಂವಿಧಾನ ತಿದ್ದುಪಡಿಯ ಪ್ರಕಾರ ವಿಲೀನ ಕಾನೂನುಬದ್ಧವಾಗಬೇಕಾದರೆ ಕೇವಲ 2/3 ಸಂಸದರು ಬದಲಾದರೆ ಸಾಲದು, ಅದರೊಂದಿಗೆ ಮೂಲ ರಾಜಕೀಯ ಪಕ್ಷವೂ ಮತ್ತೊಂದು ಪಕ್ಷದೊಂದಿಗೆ ವಿಲೀನವಾಗಬೇಕು. ಆದರೆ ಇಲ್ಲಿ ಮೂಲ TMC ಪಕ್ಷವು ಯಾವುದೇ ಪಕ್ಷದೊಂದಿಗೆ ವಿಲೀನವಾಗಿಲ್ಲ ಅಥವಾ ಹೊಸದಾಗಿ ಸೃಷ್ಟಿಯಾಗಿಲ್ಲ. ಆದ್ದರಿಂದ ಪಕ್ಷದ ವಿಪ್ ಉಲ್ಲಂಘಿಸಿ, ಪಕ್ಷದ ನಾಯಕರ ಅಧಿಕಾರವನ್ನು ಒಪ್ಪದ ಈ ಬಂಡಾಯಗಾರರನ್ನು ಪ್ಯಾರಾಗ್ರಾಫ್ 2(1) ರ ಅಡಿಯಲ್ಲಿ ತಕ್ಷಣ ಅನರ್ಹಗೊಳಿಸಬೇಕು ಮತ್ತು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ TMC ಪಕ್ಷಕ್ಕೆ ತಮ್ಮ ವಾದ ಮಂಡಿಸಲು ಅವಕಾಶ ನೀಡಬೇಕು ಎಂದು ಅಭಿಷೇಕ್ ಬ್ಯಾನರ್ಜಿ ಸ್ಪೀಕರ್ ಅವರಿಗೆ ಮನವಿ ಮಾಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರ MLC ಚುನಾವಣೆ: 5 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಪ್ರಶಾಂತ್ ಕಿಶೋರ್ ಜನ ಸುರಾಜ್ ಪಾರ್ಟಿ

ಬಿಹಾರ ವಿಧಾನ ಪರಿಷತ್ತಿನ (ಎಂಎಲ್‌ಸಿ) ಮುಂಬರುವ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ...

ಹವಾಮಾನ ವರದಿ: ರಾಜ್ಯದ 16 ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರೀ ಮಳೆ

ಬಂಗಾಳಕೊಲ್ಲಿ ಮತ್ತು ಉತ್ತರ ಅಂಡಮಾನ್ ಸಮುದ್ರ ಭಾಗದಲ್ಲಿ ತೀವ್ರ ವಾಯುಭಾರ ಕುಸಿತ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ: ರಾಜಕೀಯ ಲಾಭ ಸಿಗುತ್ತಾ?

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು...