ಪಶ್ಚಿಮ ಬಂಗಾಳದ ಹಲವು ಸ್ಟ್ರಾಂಗ್ ರೂಮ್‌ಗಳ ಸಿಸಿಟಿವಿಗಳು ಕಾರ್ಯನಿರ್ವಹಿಸುತ್ತಿಲ್ಲ. ಆಗಾಗೇ ಆಫ್ ಆಗುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಶಶಿ ಪಂಜಾ ಅವರು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಗೆ ಪತ್ರ ಬರೆದಿದ್ದಾರೆ. ಮೇ 1ರಂದು ಈ ಬಗ್ಗೆ ಪತ್ರ ಬರೆದಿದ್ದು ಸಿಸಿಟಿವಿ ದೋಷ ಉಂಟಾದರೆ ಇವಿಎಂಗಳು ಮತ್ತು ವಿವಿಪ್ಯಾಟ್‌ಗಳ ಸುರಕ್ಷತೆ ಅಪಾಯಕ್ಕೆ ಸಿಲುಕಬಹುದು ಎಂದು ಹೇಳಿದ್ದಾರೆ.
ಕೋಲ್ಕತ್ತಾ, ಜಲ್ಪೈಗುರಿ, ಗೈಘಾಟ ವಿಧಾನಸಭಾ ಕ್ಷೇತ್ರದ ಸ್ಟ್ರಾಂಗ್ ರೂಮ್‌ಗಳು, ಚಂದ್ರನಗೋರ್ ಸರ್ಕಾರಿ ಕಾಲೇಜು ಮತ್ತು ಜಂಗಿಪುರ ಪಾಲಿಟೆಕ್ನಿಕ್ ಕಾಲೇಜು ಸೇರಿದಂತೆ ಹಲವು ಸ್ಥಳಗಳಲ್ಲಿ ಈ ರೀತಿ ಸಿಸಿಟಿವಿ ಸಮಸ್ಯೆ ಉಂಟಾಗುತ್ತಿದೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿದ್ದೀರಾ? ಬಂಗಾಳದಲ್ಲಿ ಚುನಾವಣಾ ಹೈಡ್ರಾಮಾ: ಸ್ಟ್ರಾಂಗ್ ರೂಮ್‌ನಲ್ಲಿ ನಡುರಾತ್ರಿ ನಡೆದಿದ್ದೇನು?
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಪಂಜಾ, “ಚುನಾವಣಾ ಆಯೋಗದ ಮಾರ್ಗಸೂಚಿಗಳ ಅಡಿಯಲ್ಲಿ ಸ್ಟ್ರಾಂಗ್ ರೂಮ್‌ಗಳ ನಿರಂತರ 24×7 ಸಿಸಿಟಿವಿ ಮೇಲ್ವಿಚಾರಣೆ ಕಡ್ಡಾಯವಾಗಿದೆ. ಯಾವುದೇ ಲೋಪವು ಸಂಗ್ರಹಿಸಲಾದ ಯಂತ್ರಗಳ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕುತ್ತದೆ. ಈಗಾಗಲೇ ಒತ್ತಡವಿರುವಾಗ ಚುನಾವಣಾ ಪ್ರಕ್ರಿಯೆಯಲ್ಲಿ ಜನರ ವಿಶ್ವಾಸ ಇನ್ನಷ್ಟು ಕಡಿಮೆಯಾಗುತ್ತದೆ” ಎಂದು ಪತ್ರದಲ್ಲಿ ಬರೆದಿದ್ದಾರೆ.
“ಸಿಸಿಟಿವಿ ನಿಷ್ಕ್ರಿಯತೆಯ ಸಂಪೂರ್ಣ ನಿದರ್ಶನವಾರು ವರದಿಯನ್ನು ಅಧಿಕಾರಿಗಳು ತಕ್ಷಣ ಒದಗಿಸಬೇಕು. ಆ ಅವಧಿಯ ದಾಖಲೆಗಳನ್ನು ಒದಗಿಸಬೇಕು. ಚುನಾವಣಾ ಆಯೋಗದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಅಧಿಕೃತ ಪ್ರತಿನಿಧಿಗಳಿಗೆ ನಿರಂತರ ಪ್ರವೇಶಕ್ಕೆ ಅವಕಾಶ ನೀಡಬೇಕು” ಎಂದು ಟಿಎಂಸಿ ನಾಯಕಿ ಒತ್ತಾಯಿಸಿದ್ದಾರೆ.
ಸಂಪೂರ್ಣ ಸಿಸಿಟಿವಿ ದಾಖಲೆಗಳನ್ನು ಸಂರಕ್ಷಿಸಲು ಮತ್ತು ಒದಗಿಸಲು ವಿಫಲವಾದರೆ ಮೇಲ್ವಿಚಾರಣಾ ಪ್ರಕ್ರಿಯೆಯ ಸಮಗ್ರತೆಯ ಬಗ್ಗೆ ಪ್ರತಿಕೂಲ ತೀರ್ಮಾನಕ್ಕೆ ಬರಬೇಕಾಗುತ್ತದೆ. ತ್ವರಿತವಾಗಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆದಿದೆ. ಎರಡನೇ ಹಂತದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆ 15 ಮತಗಟ್ಟೆಗಳಲ್ಲಿ ಇಂದು ಮರು ಮತದಾನ ನಡೆಯುತ್ತಿದೆ. ಮೇ 4ರಂದು ಎಲ್ಲ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಈ ನಡುವೆ ಮಾಹಿತಿ ನೀಡದೆಯೇ ಸ್ಟ್ರಾಂಗ್ ರೂಮ್‌ನ ಸೀಲ್ ತೆಗೆದು ಪೋಸ್ಟಲ್ ಬ್ಯಾಲೆಟ್‌ಗಳನ್ನು ತೆರೆದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.




