ಕುಡಿಯುವ ನೀರಿನ ಸಮಸ್ಯೆ ತಲೆದೋರಿದ ಔರಾದ್ ತಾಲ್ಲೂಕಿನ ವಡಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋರಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಶನಿವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ ಒಂದೆರಡು ತಿಂಗಳಿನಿಂದ ನೀರಿನ ಅಭಾವದಿಂದ ಗ್ರಾಮಸ್ಥರು ನೀರಿಗಾಗಿ ದೂರದ ಊರುಗಳಿಗೆ ತೆರಳಬೇಕಾದ ಪರಿಸ್ಥಿತಿ ಉದ್ಭವಿಸಿರುವ ಕುರಿತು ಏ.27ರಂದು ‘ಈದಿನ.ಕಾಮ್’ ನಲ್ಲಿ ‘ನಮ್ಗ ಅನ್ನ ಕೊಡಬೇಡ್ರಿ; ಕುಡಿಯೋಕೆ ನೀರು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ!’ ತಲೆಬರಹದಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.
ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಅಧಿಕಾರಿಗಳ ತಂಡದೊಂದಿಗೆ ಇಂದು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು. ನೀರು ಸರಬರಾಜು ಮಾಡುವ ಖಾಸಗಿ ವ್ಯಕ್ತಿಯೊಬ್ಬರ ಜಮೀನಿನಲ್ಲಿ ಇರುವ ಬಾವಿಗೆ ತೆರಳಿ ಪರಿಶೀಲನೆ ನಡೆಸಿದರು. ಸರ್ಕಾರಿ ಬಾವಿ ಇದ್ದರೂ ನೀರು ಜನರಿಗೆ ನೀರು ಕೊಡಲು ಒಪ್ಪದಿರುವ ವ್ಯಕ್ತಿಯೊಂದಿಗೆ ಮಾತುಕತೆ ನಡೆಸಿ ಮಾಹಿತಿ ಪಡೆದರು.
ಜಿಲ್ಲಾಧಿಕಾರಿ ಎದುರು ಗೋಳು ತೋಡಿಕೊಂಡ ಮಹಿಳೆಯರು
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಸೋರಳ್ಳಿ ಗ್ರಾಮಕ್ಕೆ ಭೇಟಿ ನೀಡಿ ವಾಪಸ್ ಹೋಗುತ್ತಿದ್ದ ವೇಳೆ ಮಹಿಳೆಯರು ಡಿಸಿ ಅವರ ಕಾರು ನಿಲ್ಲಿಸಿ ನೀರಿನ ಬವಣೆ ಬಗ್ಗೆ ಗೋಳು ತೋಡಿಕೊಂಡರು.

‘ನಮ್ಗ ನೀರಿನ ಹೈರಾಣ ಭಾಳ ಆಗಿದೆ. ದಿನಾಲೂ ಸುಡು ಬಿಸಿಲಿನಲ್ಲಿ ನೀರಿಗಾಗಿ ಖಾಲಿ ಕೊಡ ಹಿಡಿದು ದೂರದ ಬೋರವೆಲ್, ಬಾವಿಗಳಿಗೆ ಅಲೆದಾಡುತ್ತಿದ್ದೇವೆ. ನೀರಿನ ಪರದಾಟದಿಂದ ಸಮಯಕ್ಕೆ ಹೊಟ್ಟೆಗೆ ಅನ್ನ ಸಿಗುತ್ತಿಲ್ಲ. ಪುಟ್ಟ ಪುಟ್ಟ ಮಕ್ಕಳಿಗೂ ನೀರಿನ ತಾಪತ್ರಯ ತಪ್ಪುತ್ತಿಲ್ಲ. ನಾವು ಹೇಗೆ ಮಾಡಬೇಕು? ಏನಾದರೂ ಮಾಡಿ ನಮಗೆ ನೀರಿನ ವ್ಯವಸ್ಥೆ ಮಾಡಿ ಮೇಡಂ’ ಎಂದು ಮಹಿಳೆಯರು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರ ಎದುರು ಸಂಕಟ ಹೇಳಿಕೊಂಡರು.
ಈ ಕುರಿತು ‘ಈದಿನ‘ ಜೊತೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾಡಿ, ‘ಸೋರಳ್ಳಿ ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡ ಹಿನ್ನೆಲೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಬಾವಿಯ ನೀರು ಕೊಡಲು ಒಪ್ಪದಿರುವ ವ್ಯಕ್ತಿಗೆ ನೋಟಿಸ್ ನೀಡುವ ಬಗ್ಗೆ ಯೋಚಿಸುತ್ತಿದ್ದೇವೆ. ಒಂದೆರಡು ದಿನದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಬಳಿಕ ಜಮಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಂಬಗಿ, ಬಾರ್ಡರ್ ತಾಂಡಾಕ್ಕೆ (ವಿಜಯನಗರ), ಏಕಲಾರ ತಾಂಡಾ, ಕಿರುಗುನವಾಡಿ ಗ್ರಾಮಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಅವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿ ಗ್ರಾಮಸ್ಥರಿಂದ ಮಾಹಿತಿ ಪಡೆದರು. ಬೇಸಿಗೆಯಲ್ಲಿ ಯಾವುದೇ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇದನ್ನೂ ಓದಿ : ಬೀದರ್ | ನಮ್ಗ ಅನ್ನ ಕೊಡಬೇಡ್ರಿ; ಕುಡಿಯೋಕೆ ನೀರು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ!
ಈ ಸಂದರ್ಭದಲ್ಲಿ ಔರಾದ್ ತಹಸೀಲ್ದಾರ್ ಮಹೇಶ್ ಪಾಟೀಲ್, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ನಿರ್ದೇಶಕ ಮಾರುತಿ ರಾಠೋಡ ಸೇರಿದಂತೆ ಗ್ರಾಮ ಪಂಚಾಯತ್, ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.




