ದೀರ್ಘಕಾಲದಿಂದ ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ನೆರವಾಗಲು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ‘ಒನ್ ಟೈಮ್ ಸೆಟಲ್‌ಮೆಂಟ್’ (OTS) ಯೋಜನೆಯನ್ನು ಜಾರಿಗೆ ತಂದಿದೆ.
ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಿದಂತೆ, ಈ ಯೋಜನೆ ಯುಗಾದಿ ವಿಶೇಷ ಕೊಡುಗೆಯಾಗಿ ಜಾರಿಗೆ ಬಂದಿದೆ. ಮಂಡಳಿಯ ಅಧ್ಯಕ್ಷ ಡಾ: ರಾಮ್ ಪ್ರಸಾತ್ ಮನೋಹರ್ ಈ ಸಂಬಂಧಿಸಿದಂತೆ ಮಾಹಿತಿ ನೀಡಿದ್ದಾರೆ.
BWSSB ವ್ಯಾಪ್ತಿಯಲ್ಲಿ ಒಟ್ಟು 11 ಲಕ್ಷ ನೀರಿನ ಸಂಪರ್ಕಗಳಿದ್ದು, ಅದರಲ್ಲಿ ಸುಮಾರು 5.11 ಲಕ್ಷ ಗ್ರಾಹಕರು ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. 2026ರ ಫೆಬ್ರವರಿ ಅಂತ್ಯದ ವೇಳೆಗೆ ಒಟ್ಟು ಬಾಕಿ ಮೊತ್ತ 851.33 ಕೋಟಿ ಆಗಿದ್ದು, ಅದರಲ್ಲಿ 539.43 ಕೋಟಿ ಅಸಲು ಹಾಗೂ 311.90 ಕೋಟಿ ಬಡ್ಡಿ ಸೇರಿದೆ.
ಗ್ರಾಹಕರ ಮೇಲಿನ ಆರ್ಥಿಕ ಹೊರೆ ತಗ್ಗಿಸಲು ಏಪ್ರಿಲ್ 2026ರಿಂದ ಜೂನ್ 2026ರವರೆಗೆ ಮೂರು ತಿಂಗಳ ಅವಧಿಗೆ OTS ಯೋಜನೆ ಜಾರಿ ಮಾಡಲಾಗಿದೆ. ಈ ಯೋಜನೆಯ ಅಡಿ ಬಡ್ಡಿ ಮನ್ನಾ ಸೌಲಭ್ಯ ನೀಡಲಾಗುತ್ತಿದ್ದು, ಗ್ರಾಹಕರು ಕೇವಲ ಅಸಲು ಮೊತ್ತವನ್ನು ಪಾವತಿಸುವ ಮೂಲಕ ಬಾಕಿ ತೆರವುಗೊಳಿಸಬಹುದಾಗಿದೆ.
ಇದನ್ನೂ ಓದಿ : ಮೈಬಣ್ಣದ ತಾರತಮ್ಯಕ್ಕೆ ಆಟದ ಮೂಲಕವೇ ಉತ್ತರ: ಅಂದು ಬಿಳಿಯರನ್ನೇ ಬೆರಗುಗೊಳಿಸಿದ್ದ ಟೆನಿಸ್ ದಿಗ್ಗಜ ವಿಜಯ್…
ಈ ತಿಂಗಳ ನೀರಿನ ಬಿಲ್ ಜೊತೆಯಲ್ಲೇ OTSಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ. ಬಾಕಿ ಮೊತ್ತ, ಮನ್ನಾ ಆಗುವ ಬಡ್ಡಿ, ಪಾವತಿಸಬೇಕಾದ ಅಂತಿಮ ಮೊತ್ತ ಹಾಗೂ ಪಾವತಿ ವಿಧಾನಗಳ ವಿವರಗಳನ್ನು ಒಳಗೊಂಡ ಪ್ರತ್ಯೇಕ ನೋಟಿಸ್ ಗ್ರಾಹಕರಿಗೆ ಜಾರಿಯಾಗಲಿದೆ.
ಬಹುಕಾಲದಿಂದ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿ ಕೊಂಡು ಬಿಲ್ ಪಾವತಿಸುವಂತೆ ಜಲಮಂಡಳಿ ಮನವಿ ಮಾಡಿದೆ.




