ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳಲ್ಲಿ ಉಂಟಾಗಿರುವ ಗಣನೀಯ ಇಳಿಕೆಯ ಲಾಭವನ್ನು ಪ್ರಯಾಣಿಕರಿಗೆ ವರ್ಗಾಯಿಸಲು ಮುಂದಾಗಿರುವ ಏರ್ ಇಂಡಿಯಾ, ಜುಲೈ 1ರಿಂದ ತನ್ನ ಅಂತಾರಾಷ್ಟ್ರೀಯ ವಿಮಾನಗಳ ಇಂಧನ ಹೆಚ್ಚುವರಿ ಶುಲ್ಕವನ್ನು (Fuel Surcharge) ಅಧಿಕೃತವಾಗಿ ಕಡಿತಗೊಳಿಸಿದೆ.
ಕಳೆದ ಕೆಲವು ದಿನಗಳ ಹಿಂದೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಬ್ಯಾರೆಲ್‌ಗೆ 70 ಡಾಲರ್‌ಗಿಂತ ಕಡಿಮೆ ಕಡಿಮೆಯಾಗಿತ್ತು. ಈ ಅನುಕೂಲಕರ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಏರ್ ಇಂಡಿಯಾ ಈ ನಿರ್ಧಾರ ಕೈಗೊಂಡಿದೆ. ಪರಿಣಾಮವಾಗಿ ಯುರೋಪ್, ಯುಕೆ, ಉತ್ತರ ಅಮೆರಿಕ ಮತ್ತು ಆಸ್ಟ್ರೇಲಿಯಾದಂತಹ ದೀರ್ಘ ಪ್ರಯಾಣದ ಮಾರ್ಗಗಳಲ್ಲಿ ಟಿಕೆಟ್ ದರಗಳು ಇಳಿಕೆಯಾಗುವ ನಿರೀಕ್ಷೆ ದಟ್ಟವಾಗಿದೆ.
ಏರ್ ಇಂಡಿಯಾದ ಹೊಸ ಆದೇಶದ ಪ್ರಕಾರ, ಯುರೋಪ್ ಮತ್ತು ಯುನೈಟೆಡ್ ಕಿಂಗ್‌ಡಮ್ (UK) ಮಾರ್ಗಗಳಲ್ಲಿ ಇಂಧನ ಶುಲ್ಕವನ್ನು ಬರೋಬ್ಬರಿ ಶೇ. 38ರಷ್ಟು ಕಡಿತಗೊಳಿಸಲಾಗಿದೆ. ಈ ಹಿಂದೆ ಇಲ್ಲಿ ಪ್ರಯಾಣಿಸಲು ಒಬ್ಬರಿಗೆ 205 ಡಾಲರ್ ಇಂಧನ ಶುಲ್ಕ ವಿಧಿಸಲಾಗುತ್ತಿತ್ತು, ಈಗ ಅದು 125 ಡಾಲರ್‌ಗೆ ಇಳಿಕೆಯಾಗಿದೆ. ಹಾಗೆಯೇ, ಉತ್ತರ ಅಮೆರಿಕ ಮತ್ತು ಆಸ್ಟ್ರೇಲಿಯಾ ಮಾರ್ಗಗಳಲ್ಲಿ 280 ಡಾಲರ್‌ನಷ್ಟಿದ್ದ ಶುಲ್ಕವನ್ನು 200 ಡಾಲರ್‌ಗೆ (ಶೇ. 28.5ರಷ್ಟು ಕಡಿತ) ಇಳಿಸಲಾಗಿದೆ.
ವರದಿಗಳ ಪ್ರಕಾರ, ಒಂದು ಲಕ್ಷ ರೂಪಾಯಿ ಮೌಲ್ಯದ ಟಿಕೆಟ್ ದರದಲ್ಲಿ ಕನಿಷ್ಠ ಶೇ. 10ರಷ್ಟು ಇಳಿಕೆಯಾದರೂ, ಪ್ರಯಾಣಿಕರಿಗೆ ಸರಿಸುಮಾರು 10,000 ರೂಪಾಯಿಗಳಷ್ಟು ಉಳಿತಾಯವಾಗಲಿದೆ.
ಏರ್ ಇಂಡಿಯಾದ ಈ ಕ್ರಮದ ಬೆನ್ನಲ್ಲೇ ಇಂಡಿಗೋ ಕೂಡ ತನ್ನ ಅಂತಾರಾಷ್ಟ್ರೀಯ ದರಗಳನ್ನು ಶೀಘ್ರವೇ ಪರಿಷ್ಕರಿಸುವ ಸಾಧ್ಯತೆ ಇದೆ. ಆದರೆ, ಸ್ಪೈಸ್‌ಜೆಟ್ ಈ ಕುರಿತು ಭಿನ್ನ ನಿಲುವು ತಳೆದಿದ್ದು, ಮಧ್ಯಪ್ರಾಚ್ಯ ಬಿಕ್ಕಟ್ಟಿನ ಸಮಯದಲ್ಲೇ ತಾವು ಶುಲ್ಕ ಹೆಚ್ಚಿಸದ ಕಾರಣ, ಈಗ ಕಡಿತದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇನ್ನೊಂದೆಡೆ, ದೇಶೀಯ ವಿಮಾನ ಇಂಧನ (ATF) ದರದಲ್ಲಿ ಇಳಿಕೆಯಾಗಿದ್ದರೂ, ಸದ್ಯಕ್ಕೆ ದೇಶೀಯ ವಿಮಾನ ಟಿಕೆಟ್ ದರದಲ್ಲಿ ದೊಡ್ಡ ಬದಲಾವಣೆ ಕಂಡುಬರುವ ಸಾಧ್ಯತೆ ಕಡಿಮೆ ಎಂದು ವಿಮಾನಯಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಸಾವು ಗೆದ್ದ ಸರದಾರ: 140 ಟನ್ ಅವಶೇಷಗಳಡಿ 8 ದಿನಗಳ ಕಾಲ ಬದುಕಿಳಿದ ವ್ಯಕ್ತಿಯ ಪವಾಡಸದೃಶ ಪಾರು
ಇಂಧನ ಶುಲ್ಕದ ಸುದ್ದಿಯ ಜೊತೆಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ತನ್ನ ಮಧ್ಯಪ್ರಾಚ್ಯ ಸೇವೆಗಳನ್ನು ಮತ್ತಷ್ಟು ವಿಸ್ತರಿಸಿದೆ. ಒಮಾನ್‌ನ ಸಲಾಲಾ ಮತ್ತು ಕುವೈತ್‌ಗೆ ವಿಮಾನ ಸಂಚಾರವನ್ನು ಪುನರಾರಂಭಿಸಲಾಗಿದೆ. ಜುಲೈ 2ರಿಂದ ಕೋಝಿಕ್ಕೋಡ್–ಸಲಾಲಾ ಮಾರ್ಗದಲ್ಲಿ ವಿಮಾನಗಳು ಹಾರಾಟ ನಡೆಸುತ್ತಿದ್ದು, ಜುಲೈ 3ರಿಂದ ಕೋಝಿಕ್ಕೋಡ್–ಕುವೈತ್ ಹಾಗೂ ಜುಲೈ 4ರಿಂದ ಬೆಂಗಳೂರು–ಕುವೈತ್ ವಿಮಾನ ಸೇವೆಗಳು ಹಂತ ಹಂತವಾಗಿ ಆರಂಭವಾಗಲಿವೆ.




