ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾ ಬಳಿ ಎಲ್‌ಪಿಜಿ ಟ್ಯಾಂಕರ್ ಸ್ಫೋಟಗೊಂಡು ಕನಿಷ್ಠ ನಾಲ್ಕು ಜನರು ಸಜೀವ ದಹನವಾಗಿರುವ ಅತ್ಯಂತ ಭೀಕರ ಘಟನೆ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಸಂಭವಿಸಿದೆ.
ಕೊಕ್ರಝಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಶಿಹೋರಿ ಟೋಲ್ ಪ್ಲಾಜಾದಲ್ಲಿ ಈ ದುರಂತ ನಡೆದಿದೆ. ಕಾನ್ಪುರದಿಂದ ವಾರಣಾಸಿ ಕಡೆಗೆ ತೆರಳುತ್ತಿದ್ದ ಎಲ್‌ಪಿಜಿ ಗ್ಯಾಸ್ ಟ್ಯಾಂಕರ್, ಟೋಲ್ ಪ್ಲಾಜಾ ಪ್ರವೇಶಿಸುವ ವೇಳೆ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಜೋರಾಗಿ ಅಪ್ಪಳಿಸಿದೆ. ಪರಿಣಾಮ, ಸ್ಫೋಟ ಸಂಭವಿಸಿದೆ.
ಲಭ್ಯವಾಗಿರುವ ಸಿಸಿಟಿವಿ ದೃಶ್ಯಗಳ ಪ್ರಕಾರ, ಎಲ್‌ಪಿಜಿ ಟ್ಯಾಂಕರ್ ಟೋಲ್ ಪ್ಲಾಜಾದತ್ತ ಸಾಗುತ್ತಿದ್ದಾಗ ಅದರ ಪಕ್ಕದಲ್ಲೇ ಮತ್ತೊಂದು ಟ್ಯಾಂಕರ್ ಬಂದಿದೆ. ಒಂದು ಹಂತದಲ್ಲಿ ಎರಡು ಟ್ಯಾಂಕರ್‌ಗಳು ಒಂದೇ ಪಥದಲ್ಲಿ (ಲೈನ್) ಸಾಗಲು ಮುನ್ನುಗ್ಗಿದ್ದರಿಂದ, ಅಪಘಾತವನ್ನು ತಪ್ಪಿಸಲು ಚಾಲಕ ತನ್ನ ವಾಹನವನ್ನು ಏಕಾಏಕಿ ಪಕ್ಕಕ್ಕೆ ತಿರುಗಿಸಲು ಯತ್ನಿಸಿದ್ದಾರೆ. ಆದರೆ, ವೇಗ ಹೆಚ್ಚಾಗಿದ್ದರಿಂದ ನಿಯಂತ್ರಣ ಕಳೆದುಕೊಂಡ ಟ್ಯಾಂಕರ್ ನೇರವಾಗಿ ಟೋಲ್‌ನ ಡಿವೈಡರ್‌ಗೆ ಢಿಕ್ಕಿಯಾಗಿದೆ.
ಢಿಕ್ಕಿಯಾದ ಕೆಲವೇ ಕ್ಷಣಗಳಲ್ಲಿ ಟ್ಯಾಂಕರ್‌ಗೆ ಭಾರೀ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇಡೀ ಟೋಲ್ ಆವರಣದಲ್ಲಿ ದಟ್ಟ ಹೊಗೆ ಆವರಿಸಿದೆ. ನೋಡನೋಡುತ್ತಿದ್ದಂತೆಯೇ ಗ್ಯಾಸ್ ಟ್ಯಾಂಕರ್ ಕ್ಷಣಾರ್ಧದಲ್ಲಿ ಭಾರೀ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಸ್ಪೋಟದ ಭೀಕರತೆಯಲ್ಲಿ ಟೋಲ್ ಫ್ಲಾಜಾದಲ್ಲಿದ್ದವರು ತಪ್ಪಿಸಿಕೊಳ್ಳಲಾಗದೆ, ಬೆಂಕಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
CCTV footage has surfaced showing an LPG tanker leaking at Sihori Toll Plaza in Kaushambi district before erupting into a massive inferno.
— Hate Detector 🔍 (@HateDetectors) July 3, 2026
Four people, including the tanker driver and two toll plaza workers, were killed, while two others sustained injuries.
The blaze, which… pic.twitter.com/4Zdfcw1buY
ದುರಂತ ಘಟನೆಯಲ್ಲಿ ಟ್ಯಾಂಕರ್ ಚಾಲಕ ಹಾಗೂ ಮೂವರು ಟೋಲ್ ಸಿಬ್ಬಂದಿ ಸೇರಿ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ಮೃತ ಚಾಲಕನನ್ನು ಮಿರ್ಜಾಪುರ ಜಿಲ್ಲೆಯ ಧರ್ಮೇಂದ್ರ ದ್ವಿವೇದಿ ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ತೀವ್ರವಾಗಿ ಸುಟ್ಟ ಗಾಯಗಳಿಗೆ ಒಳಗಾಗಿದ್ದ ಐವರು ಟೋಲ್ ನೌಕರರನ್ನು ಪ್ರಯಾಗ್‌ರಾಜ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಿಬ್ಬಂದಿಗಳಾದ ಅಲೋಕ್ ಸಿಂಗ್, ಹಿರಾಮಣಿ ಸಿಂಗ್ ಮತ್ತು ಕೃಷ್ಣಪಾಲ್ ಮೌರ್ಯ ಎಂಬುವವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸದ್ಯ ಇನ್ನುಳಿದ ಇಬ್ಬರು ನೌಕರರ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸರು ಧಾವಿಸಿ ಸುದೀರ್ಘ ಕಾರ್ಯಾಚರಣೆಯ ನಂತರ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಸ್ಫೋಟದಿಂದಾಗಿ ಟೋಲ್ ಪ್ಲಾಜಾ ಮತ್ತು ಸುತ್ತಮುತ್ತಲಿನ ಸಾರ್ವಜನಿಕ ಆಸ್ತಿಗೆ ವ್ಯಾಪಕ ಹಾನಿಯಾಗಿದೆ ಎಂದು ಕೊಖ್ರಾಝಾರ್ ಠಾಣಾ ಅಧಿಕಾರಿ ಚಂದ್ರ ಭೂಷಣ್ ಮೌರ್ಯ ತಿಳಿಸಿದ್ದಾರೆ.



