ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆಯಲ್ಲಿ ‘ವಂದೇ ಮಾತರಂ’ ಗೀತೆಯನ್ನು ಅರ್ಧಕ್ಕೆ ನಿಲ್ಲಿಸಲು ಯತ್ನಿಸಲಾಗಿದೆ ಎಂಬ ಆರೋಪದ ಮೇಲೆ ಕಾಂಗ್ರೆಸ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದರು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಮೇಲಿನ ಈ ಆರೋಪಕ್ಕೆ ಕಾಂಗ್ರೆಸ್ ಕಟುವಾಗಿ ಪ್ರತಿಕ್ರಿಯಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, “ಸಂಸತ್ತಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಮತ್ತು ತಮ್ಮ ಸಂಘಟನೆಯ ಪ್ರಧಾನ ಕಚೇರಿಯಲ್ಲಿ 2002ರವರೆಗೆ ತ್ರಿವರ್ಣ ಧ್ವಜವನ್ನು ಹಾರಿಸದ ಸೈದ್ಧಾಂತಿಕ ಹಿನ್ನೆಲೆಯ ನಾಯಕರು ಇಂದು ಕಾಂಗ್ರೆಸ್‌ನಿಂದ ಕ್ಷಮಾಪಣೆ ಕೇಳುತ್ತಿದ್ದಾರೆ. ನೈಜ ಸವಾಲುಗಳು ಹಾಗೂ ಮೋದಿ-ಶಾ ಅವರ ಸರ್ಕಾರದ ಬೃಹತ್ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಈ ವಿವಾದವನ್ನು ಸೃಷ್ಟಿಸಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸೋನಿಯಾ ಕ್ಷಮೆಯಾಚನೆಗೆ ಬಂಕಿಮ್ ಚಂದ್ರ ವಂಶಜ, ಬಿಜೆಪಿ ಶಾಸಕ ಆಗ್ರಹ: ಏನಿದು ವಂದೇ ಮಾತರಂ ವಿವಾದ?
ಇನ್ನು ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಮಾತನಾಡಿ, “ದೇಶದಲ್ಲಿ ವಂದೇ ಮಾತರಂ ಗೀತೆಗಾಗಿ ಲಾಠಿ ಏಟುಗಳನ್ನು ತಿಂದ ಇತಿಹಾಸ ಕಾಂಗ್ರೆಸ್‌ಗಿದೆ. ಬ್ರಿಟಿಷರ ಆಡಳಿತಾವಧಿಯಲ್ಲಿ ಸಂಘ ಪರಿವಾರದವರು ಬ್ರಿಟಿಷರಿಗೆ ಶರಣಾಗಿದ್ದರು. ಈಗ ರಾಷ್ಟ್ರಗೀತೆ ಮತ್ತು ರಾಷ್ಟ್ರೀಯತೆಯ ಬಗ್ಗೆ ಕಾಂಗ್ರೆಸ್‌ಗೆ ಪಾಠ ಮಾಡುವ ಅರ್ಹತೆ ಅವರಿಗಿಲ್ಲ” ಎಂದು ಟೀಕಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ವಂದೇ ಮಾತರಂ ಗಾಯನ ನಡೆಯುತ್ತಿದ್ದಾಗ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಗೀತೆಯನ್ನು ನಿಲ್ಲಿಸುವಂತೆ ಸೂಚಿಸಿದರು ಎಂಬ ವಿಡಿಯೋ ತುಣುಕನ್ನು ಉಲ್ಲೇಖಿಸಿ, ಅಮಿತ್ ಶಾ ಅವರು ರಾಜಸ್ಥಾನದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ದೇಶದ ಜನತೆ ಹಾಗೂ ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರಲ್ಲಿ ಬಹಿರಂಗ ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದ್ದರು. ಆದರೆ, ಕಾಂಗ್ರೆಸ್ ಈ ಆರೋಪವನ್ನು ತಳ್ಳಿಹಾಕಿದ್ದು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕುರ್ಚಿ ವ್ಯವಸ್ಥೆ ಮಾಡುವಂತೆ ಸೋನಿಯಾ ಗಾಂಧಿ ಹೇಳುತ್ತಿದ್ದರೇ ಹೊರತು ಗೀತೆ ನಿಲ್ಲಿಸಲು ಅಲ್ಲ ಎಂದು ಸ್ಪಷ್ಟನೆ ನೀಡಿದೆ.
ಅಲ್ಲದೆ, ಇತ್ತೀಚಿನ ಸಂಸತ್ ಅಧಿವೇಶನದಲ್ಲೂ ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಇತರ ನೀತಿಗಳ ವೈಫಲ್ಯಗಳ ಕುರಿತು ಪ್ರತಿಪಕ್ಷಗಳು ನಿರಂತರವಾಗಿ ಧ್ವನಿ ಎತ್ತಿದ್ದರಿಂದ, ಅದರಿಂದ ತಪ್ಪಿಸಿಕೊಳ್ಳಲು ಬಿಜೆಪಿ ಇಂತಹ ವಿಷಯಗಳನ್ನು ಮುನ್ನೆಲೆಗೆ ತರುತ್ತಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.




