VB-G RAM G | MYTHS vs REALITY; ಉದ್ಯೋಗ ಖಾತ್ರಿಯ ಕುರಿತು ಕಥೆ ಕಟ್ಟುತ್ತಿದೆಯೇ ಸರ್ಕಾರ?

Date:

TIE ವರದಿಯ ಪ್ರಕಾರ, ವ್ಯಕ್ತಿ-ದಿನಗಳ ಉದ್ಯೋಗ ಮಾತ್ರವಲ್ಲದೆ ಕೆಲಸಕ್ಕಾಗಿ ಮುಂದೆ ಬಂದ ಕುಟುಂಬಗಳ ಸಂಖ್ಯೆಯೂ ಸುಮಾರು ಶೇ.50ರಷ್ಟು ಕಡಿಮೆಯಾಗಿದೆ. ಈ ಬೆಳವಣಿಗೆ ನಡೆಯುತ್ತಿರುವುದು ದೇಶದಲ್ಲಿ ನಿರುದ್ಯೋಗ ವ್ಯಾಪಕವಾಗಿರುವ ಮತ್ತು ಹಲವು ಗ್ರಾಮೀಣ ಪ್ರದೇಶಗಳು ಬರ ಹಾಗೂ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿಯೇ. ಹೀಗಾಗಿ ಇಲ್ಲಿ ಪ್ರಶ್ನೆ ಕೇವಲ ‘ಎಷ್ಟು ಉದ್ಯೋಗ ಸೃಷ್ಟಿಯಾಯಿತು?’ ಎಂಬುದಲ್ಲ. ಕೆಲಸಕ್ಕಾಗಿ ಗ್ರಾಮೀಣ ಜನರು ಬರುತ್ತಿದ್ದಾರೆಯೇ, ಬಂದವರಿಗೆ ಕೆಲಸ ಸಿಗುತ್ತಿದೆಯೇ, ಕೆಲಸದ ಬೇಡಿಕೆಯನ್ನು ವ್ಯವಸ್ಥೆಯೇ ತಡೆಯುತ್ತಿದೆಯೇ? ಎಂಬುದನ್ನೂ ಪರಿಶೀಲಿಸಬೇಕಾಗಿದೆ.

- Advertisement -

125 ದಿನಗಳ ಉದ್ಯೋಗ ಖಾತ್ರಿ, ಹೆಚ್ಚಿದ ಅನುದಾನ, ಹೆಚ್ಚಿನ ಕೂಲಿ, ಡಿಜಿಟಲ್‌ ದಕ್ಷತೆ.. VB-G RAM G ಕುರಿತು ಕೇಂದ್ರ ಸರ್ಕಾರ ಕಟ್ಟಿಕೊಡುತ್ತಿರುವ ಚಿತ್ರಣ ಇದು. ಆದರೆ ಯೋಜನೆ ಜಾರಿಗೆ ಬಂದ ಮೊದಲ ತಿಂಗಳಲ್ಲೇ ಗ್ರಾಮೀಣ ಉದ್ಯೋಗದಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸುಮಾರು ಶೇ.50ರಷ್ಟು ಕುಸಿತ ಕಂಡುಬಂದಿರುವುದು ಈ ಘೋಷಣೆಗಳ ವಿಶ್ವಾಸಾರ್ಹತೆಯನ್ನ ಪ್ರಶ್ನಿಸುವಂತಾಗಿದೆ. The Indian Express ವರದಿಯೊಂದು ಅಂಕಿಅಂಶಗಳ ಸಹಿತ ಅದರ ಹಿಂದಿರುವ ಕಥೆ ಮತ್ತು ವಾಸ್ತವಗಳನ್ನು ಬಿಚ್ಚಿಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಹಿರಿಯ ಸಾಮಾಜಿಕ ಹೋರಾಟಗಾರರಾದ ಅರುಣಾ ರಾಯ್‌ ಹಾಗೂ ನಿಖಿಲ್‌ ಡೇ ಅವರ ವಿಶ್ಲೇಷಣಾ ಲೇಖನದ ಕನ್ನಡ ರೂಪ ಹೀಗಿದೆ… ಕೇಂದ್ರ ಬಿಜೆಪಿ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ಯೋಜನೆ ಎಂದು ಬಿಂಬಿಸುತ್ತಿರುವ ವಿಕಸಿತ ಭಾರತ–ಗ್ಯಾರಂಟಿ ಫಾರ್ ರೋಜ್ಗಾರ್ ಆ್ಯಂಡ್ ಅಜೀವಿಕಾ ಮಿಷನ್ ಗ್ರಾಮೀಣ (VB-G RAM G) ಕುರಿತು ಕಟ್ಟಿಕೊಡುತ್ತಿರುವ ಕಥನಕ್ಕೂ, ಗ್ರಾಮೀಣ ಭಾರತದ ನೆಲದ ವಾಸ್ತವಕ್ಕೂ ನಡುವೆ ದೊಡ್ಡ ಕಂದಕವೇ ನಿರ್ಮಾಣವಾಗುತ್ತಿರುವಂತೆ ಕಾಣುತ್ತಿದೆ. ಆಗಸ್ಟ್ 12ರಂದು TIEನಲ್ಲಿ ಪ್ರಕಟವಾದ ‘Between the myth and reality of VB-G RAM G, the tragic human cost’ ಎಂಬ ವಿಶ್ಲೇಷಣಾತ್ಮಕ ಲೇಖನದಲ್ಲಿ ಇದೇ ಪ್ರಶ್ನೆಯನ್ನು ಪ್ರಮುಖವಾಗಿ ಎತ್ತಲಾಗಿದೆ.

ಕೇಂದ್ರ ಸರ್ಕಾರದ ಪ್ರಕಾರ, ರದ್ದುಗೊಂಡಿರುವ ʼಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (MGNREGA)ಯನ್ನು ಬದಲಿಸಿರುವ VB-G RAM G ಅದರ ಮತ್ತಷ್ಟು ‘ಸುಧಾರಿತ’ ರೂಪ. ಉದ್ಯೋಗ ಖಾತ್ರಿ ದಿನಗಳನ್ನು ಹೆಚ್ಚಿಸಲಾಗಿದೆ, ದೇಶದ ಎಲ್ಲ ಗ್ರಾಮೀಣ ಪ್ರದೇಶಗಳಿಗೂ ಯೋಜನೆಯನ್ನು ವಿಸ್ತರಿಸಲಾಗಿದೆ, ಕೇಂದ್ರದಿಂದ ಇದುವರೆಗಿನ ಅತಿ ಹೆಚ್ಚಿನ ಅನುದಾನ ನೀಡಲಾಗಿದೆ ಮತ್ತು ರಾಜ್ಯಗಳು ಹೆಚ್ಚುವರಿ 40ರಷ್ಟು ಹಣವನ್ನು ನೀಡಲಿವೆ ಎಂಬುದು ಸರ್ಕಾರದ ಪ್ರಮುಖ ಸಮರ್ಥನೆ.

image 2026 08 13T183520.670

ಇವೆಲ್ಲವನ್ನೂ ನೋಡಿದರೆ, ಗ್ರಾಮೀಣ ಕಾರ್ಮಿಕರು 125 ದಿನಗಳ ಉದ್ಯೋಗ ಪಡೆಯಲು ಕೆಲಸದ ಸ್ಥಳಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುತ್ತಿರಬೇಕು ಎಂದು ಭಾವಿಸುವುದು ಸಹಜ. ಆದರೆ, ಸರ್ಕಾರದ ಪ್ರಚಾರದ ಚಿತ್ರಕ್ಕೂ ವಾಸ್ತವದ ಚಿತ್ರಕ್ಕೂ ತಾಳೆಯಾಗುತ್ತಿಲ್ಲ.

ಆಗಸ್ಟ್ 10ರಂದು The Indian Express ಪ್ರಕಟಿಸಿದ ‘In its first month, VB-G RAM G sees almost 50% y-o-y dip in rural jobs’ ವರದಿಯೇ ಈ ವ್ಯತ್ಯಾಸವನ್ನು ಬಯಲಿಗೆಳೆದಿದೆ. ಸರ್ಕಾರದ ಅಧಿಕೃತ ಅಂಕಿ-ಅಂಶಗಳನ್ನೇ ಆಧರಿಸಿರುವ ವರದಿ, VB-G RAM G ಜಾರಿಗೆ ಬಂದ ಮೊದಲ ತಿಂಗಳಾದ ಜುಲೈನಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಒದಗಿಸಲಾದ ಗ್ರಾಮೀಣ ಉದ್ಯೋಗದಲ್ಲಿ ಸುಮಾರು ಶೇ.50ರಷ್ಟು ಕುಸಿತ ಕಂಡುಬಂದಿದೆ ಎಂದು ಹೇಳಿದೆ.

ಇದು ಕೇವಲ ಒಂದು ತಿಂಗಳ ಅಂಕಿ-ಅಂಶವಲ್ಲ. MGNREGA ರದ್ದುಗೊಂಡು VB-G RAM G ಜಾರಿಗೆ ಬರಲಿದೆ ಎಂಬ ಘೋಷಣೆಯ ನಂತರದಿಂದಲೇ ತಿಂಗಳಿಗೆ ಎಷ್ಟು ಉದ್ಯೋಗ ಸೃಷ್ಟಿಯಾಗುತ್ತಿದೆ ಎಂಬುದನ್ನು ಕಾರ್ಮಿಕ ಸಂಘಟನೆಗಳು ಮತ್ತು ಹಕ್ಕುಗಳ ಹೋರಾಟಗಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಉದ್ಯೋಗದ ಬೇಡಿಕೆಯೇ ಕಡಿಮೆಯಾಗಿದೆಯೇ?

ಜೂನ್‌ನಲ್ಲಿ NREGA Sangharsh Morcha, ಕೃಷಿ ಕಾರ್ಮಿಕರ ಸಂಘಟನೆಗಳು ಮತ್ತು ಕಾರ್ಮಿಕ ಹಕ್ಕುಗಳ ಗುಂಪುಗಳು ನಡೆಸಿದ ಸುದ್ದಿಗೋಷ್ಠಿಯಲ್ಲಿ ಇಲಾಖೆಯ ಅಂಕಿ-ಅಂಶಗಳನ್ನು ಆಧರಿಸಿ ಮಹತ್ವದ ವಿಚಾರವೊಂದನ್ನು ಪ್ರಸ್ತಾಪಿಸಲಾಗಿತ್ತು.

2025ರ ಜನವರಿಯಿಂದ ಜೂನ್‌ವರೆಗೆ ಸೃಷ್ಟಿಯಾದ ಉದ್ಯೋಗ 33.54 ಕೋಟಿ ವ್ಯಕ್ತಿ-ದಿನಗಳಿಂದ, 2026ರ ಇದೇ ಅವಧಿಯಲ್ಲಿ 21.52 ಕೋಟಿ ವ್ಯಕ್ತಿ-ದಿನಗಳಿಗೆ ಕುಸಿದಿತ್ತು. ಅಂದರೆ ಬರೋಬ್ಬರಿ ಶೇ.35.8ರಷ್ಟು ಇಳಿಕೆ. ಹಿಂದಿನ ಮೂರು ವರ್ಷಗಳ ಸರಾಸರಿಯೊಂದಿಗೆ ಹೋಲಿಸಿದರೂ ಉದ್ಯೋಗ ಸೃಷ್ಟಿಯಲ್ಲಿ ಇದೇ ರೀತಿಯ ಕುಸಿತ ಕಂಡುಬಂದಿತ್ತು. ಈ ಕುಸಿತವನ್ನು ಪ್ರಶ್ನಿಸಿದಾಗ, ಜುಲೈ 1ರಿಂದ ಹೊಸ ಕಾಯ್ದೆ ಜಾರಿಗೆ ಬಂದ ನಂತರ ಎಲ್ಲವೂ ಸರಿಯಾಗಲಿದೆ ಎಂಬ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ ಜುಲೈ ತಿಂಗಳ ಅಂಕಿ-ಅಂಶಗಳು ಆ ಭರವಸೆಗೆ ವಿರುದ್ಧವಾದ ಚಿತ್ರಣ ನೀಡಿವೆ.

TIE ವರದಿಯ ಪ್ರಕಾರ, ವ್ಯಕ್ತಿ-ದಿನಗಳ ಉದ್ಯೋಗ ಮಾತ್ರವಲ್ಲದೆ ಕೆಲಸಕ್ಕಾಗಿ ಮುಂದೆ ಬಂದ ಕುಟುಂಬಗಳ ಸಂಖ್ಯೆಯೂ ಸುಮಾರು ಶೇ.50ರಷ್ಟು ಕಡಿಮೆಯಾಗಿದೆ. ಈ ಬೆಳವಣಿಗೆ ನಡೆಯುತ್ತಿರುವುದು ದೇಶದಲ್ಲಿ ನಿರುದ್ಯೋಗ ವ್ಯಾಪಕವಾಗಿರುವ ಮತ್ತು ಹಲವು ಗ್ರಾಮೀಣ ಪ್ರದೇಶಗಳು ಬರ ಹಾಗೂ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿಯೇ. ಹೀಗಾಗಿ ಇಲ್ಲಿ ಪ್ರಶ್ನೆ ಕೇವಲ ‘ಎಷ್ಟು ಉದ್ಯೋಗ ಸೃಷ್ಟಿಯಾಯಿತು?’ ಎಂಬುದಲ್ಲ. ಕೆಲಸಕ್ಕಾಗಿ ಗ್ರಾಮೀಣ ಜನರು ಬರುತ್ತಿದ್ದಾರೆಯೇ, ಬಂದವರಿಗೆ ಕೆಲಸ ಸಿಗುತ್ತಿದೆಯೇ, ಕೆಲಸದ ಬೇಡಿಕೆಯನ್ನು ವ್ಯವಸ್ಥೆಯೇ ತಡೆಯುತ್ತಿದೆಯೇ? ಎಂಬುದನ್ನೂ ಪರಿಶೀಲಿಸಬೇಕಾಗಿದೆ.

125 ದಿನಗಳ ಉದ್ಯೋಗ ಖಾತ್ರಿಯ ಮಿಥ್

VB-G RAM G ಕುರಿತು ಸರ್ಕಾರದ ಅತ್ಯಂತ ದೊಡ್ಡ ಪ್ರಚಾರವೇ 125 ದಿನಗಳ ಉದ್ಯೋಗ ಖಾತ್ರಿ. ದೇಶದಾದ್ಯಂತ ಜಾಹೀರಾತು ಫಲಕಗಳು, ರೈಲು ನಿಲ್ದಾಣಗಳ ಪ್ರಕಟಣೆಗಳು, ರೇಡಿಯೊ ಜಾಹೀರಾತುಗಳು, ಪಂಚಾಯಿತಿ ಸಭೆಗಳು, ಅಧಿಕೃತ ಪ್ರಕಟಣೆಗಳು ಹಾಗೂ ಪೂರ್ಣಪುಟ ಜಾಹೀರಾತುಗಳ ಮೂಲಕ ಉದ್ಯೋಗದ ದಿನಗಳನ್ನು ಹೆಚ್ಚಿಸಿರುವುದನ್ನು ಸರ್ಕಾರ ದೊಡ್ಡ ಸಾಧನೆಯಂತೆ ಪ್ರಚಾರ ಮಾಡಿದೆ. ಆದರೆ ಕಾನೂನಿನಲ್ಲಿ 125 ದಿನಗಳ ಉದ್ಯೋಗ ಖಾತ್ರಿ ಎಂದು ಬರೆಯುವುದರಿಂದ ಮಾತ್ರ ಗ್ರಾಮೀಣ ಕಾರ್ಮಿಕರ ಕೈಗೆ 125 ದಿನಗಳ ಕೆಲಸ ಸಿಗುವುದಿಲ್ಲ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ 125 ದಿನಗಳ ಉದ್ಯೋಗವನ್ನು ‘ಖಾತ್ರಿಪಡಿಸುವ’ ಹೊಣೆ ನೀಡಿದೆ. ಆದರೆ ಆ ಉದ್ಯೋಗವನ್ನು ನಿಜವಾಗಿ ಒದಗಿಸಲು ಅಗತ್ಯವಿರುವ ಬೃಹತ್ ಹಣಕಾಸಿನ ಸಂಪನ್ಮೂಲವನ್ನು ಕೇಂದ್ರ ಸರ್ಕಾರ ತನ್ನ ಮೇಲೆಯೇ ಸಂಪೂರ್ಣವಾಗಿ ಹೊತ್ತುಕೊಂಡಿಲ್ಲ.

ಕೇಂದ್ರದ ‘ನಾರ್ಮೇಟಿವ್ ಅಲೊಕೇಶನ್’ ಮೀರಿದ ಬೇಡಿಕೆಗೆ ಹಣವನ್ನು ಹೇಗೆ ಒದಗಿಸಲಾಗುತ್ತದೆ ಎಂಬುದು ಸ್ಪಷ್ಟವಾಗದಿದ್ದರೆ, 125 ದಿನಗಳ ಖಾತ್ರಿ ಕಾನೂನಿನಲ್ಲಿರುವ ಪದವಾಗಿಯೇ ಉಳಿಯುವ ಸಾಧ್ಯತೆ ಇದೆ. ಅಂದರೆ, ಕೆಲಸ ನೀಡುವ ಹೊಣೆ ರಾಜ್ಯದ ಮೇಲಿರುತ್ತದೆ; ಆದರೆ ಅದಕ್ಕೆ ಅಗತ್ಯವಿರುವ ಹಣಕಾಸಿನ ಸಂಪನ್ಮೂಲಕ್ಕೆ ಕೇಂದ್ರದ ಬದ್ಧತೆ ಸೀಮಿತವಾಗಿರುತ್ತದೆ. ಇದು ನಿಜವಾದ ಉದ್ಯೋಗ ಖಾತ್ರಿಯೇ ಅಥವಾ ಹೊಣೆಗಾರಿಕೆಯನ್ನು ಮತ್ತೊಂದು ಹಂತಕ್ಕೆ ವರ್ಗಾಯಿಸುವ ವ್ಯವಸ್ಥೆಯೇ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ.

‘ಅತಿ ಹೆಚ್ಚಿನ ಅನುದಾನ’ ಎಂಬ ಮಿಥ್

ಕೇಂದ್ರ ಸರ್ಕಾರ ಈ ವರ್ಷ VB-G RAM Gಗೆ ₹95,000 ಕೋಟಿ ಮೀಸಲಿಟ್ಟಿರುವುದನ್ನು ‘ಇದುವರೆಗಿನ ಅತಿ ದೊಡ್ಡ ಅನುದಾನ’ ಎಂದು ಬಿಂಬಿಸಿದೆ. ರಾಜ್ಯಗಳ ಕಡ್ಡಾಯ 40ರಷ್ಟು ಪಾಲನ್ನು ಸೇರಿಸಿದರೆ ಒಟ್ಟು ಸಂಪನ್ಮೂಲ ₹1.55 ಲಕ್ಷ ಕೋಟಿ ಆಗಲಿದೆ ಎಂಬುದು ಸರ್ಕಾರದ ಲೆಕ್ಕ. ಕಾಗದದ ಮೇಲೆ ಇದು ದೊಡ್ಡ ಮೊತ್ತವೇ ಸರಿ. ಆದರೆ ಹಣದ ಮೊತ್ತಕ್ಕಿಂತ ಆ ಹಣ ನಿಜವಾಗಿ ಎಷ್ಟು ಕೆಲಸವನ್ನು ಸೃಷ್ಟಿಸುತ್ತದೆ ಎಂಬುದೇ ಮುಖ್ಯ. ಕೆಲಸವೇ ನೀಡದಿದ್ದರೆ ಅಥವಾ ರಾಜ್ಯ ಸರ್ಕಾರಗಳಿಗೆ ಯೋಜನೆಯನ್ನು ವ್ಯಾಪಕವಾಗಿ ಜಾರಿಗೊಳಿಸಲು ಸೂಕ್ತ ಪ್ರೋತ್ಸಾಹ ಮತ್ತು ಸಂಪನ್ಮೂಲ ದೊರೆಯದಿದ್ದರೆ, ಎಷ್ಟೇ ದೊಡ್ಡ ಮೊತ್ತವನ್ನು ಕಾಗದದ ಮೇಲೆ ಮೀಸಲಿಟ್ಟರೂ ಅದರ ಪ್ರಯೋಜನ ಗ್ರಾಮೀಣ ಕಾರ್ಮಿಕರಿಗೆ ತಲುಪುವುದಿಲ್ಲ.

image 2026 08 13T183740.772

ಇದರ ಮತ್ತೊಂದು ಅಪಾಯಕಾರಿ ಪರಿಣಾಮವೆಂದರೆ, ಯೋಜನೆ ವಿಫಲವಾದಾಗ ಅದರ ಹೊಣೆಯನ್ನು ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳತ್ತ ಅಥವಾ ಅಂತಿಮವಾಗಿ ಕೆಲಸ ಕೇಳುವ ಜನರತ್ತ ತಳ್ಳುವ ಸಾಧ್ಯತೆ. ಅಂದರೆ, ಕೇಂದ್ರ ಸರ್ಕಾರ ಹಣ ಮೀಸಲಿಟ್ಟಿದೆ; ರಾಜ್ಯಗಳು ತಮ್ಮ ಪಾಲಿನ ಹಣ ನೀಡಿಲ್ಲ; ಜನರೇ ಕೆಲಸ ಕೇಳುತ್ತಿಲ್ಲ ಎಂಬ ರೀತಿಯ ಕಥನವನ್ನು ಮುಂದಿನ ದಿನಗಳಲ್ಲಿ ಕಟ್ಟಿಕೊಳ್ಳಲು ಈ ವ್ಯವಸ್ಥೆ ಅವಕಾಶ ಮಾಡಿಕೊಡಬಹುದೇ ಎಂಬ ಅನುಮಾನವನ್ನು ಲೇಖಕರು ವ್ಯಕ್ತಪಡಿಸುತ್ತಾರೆ.

ಹೆಚ್ಚಿನ ಕೂಲಿಯ ಮಿಥ್

VB-G RAM G ಅಡಿಯಲ್ಲಿ ದಿನಕ್ಕೆ ₹300ರಷ್ಟು ಕನಿಷ್ಠ ಮಟ್ಟದ ಕೂಲಿ ನಿಗದಿಪಡಿಸಲಾಗಿದೆ ಎಂಬುದು ಕೇಂದ್ರದ ಮತ್ತೊಂದು ಪ್ರತಿಪಾದನೆ. ಆದರೆ ಈ ₹300ರ ದರ ದೇಶದ ಬಹುತೇಕ ರಾಜ್ಯಗಳ ಕನಿಷ್ಠ ವೇತನಕ್ಕಿಂತಲೂ ಕಡಿಮೆ. ಇನ್ನೂ ಗಮನಾರ್ಹ ಸಂಗತಿಯೆಂದರೆ, ಕೇಂದ್ರ ಸರ್ಕಾರವೇ ನೇಮಿಸಿದ್ದ ಸತ್ಪತಿ ಸಮಿತಿ, 2018ರ ಜೂನ್ ಬೆಲೆ ಮಟ್ಟದಲ್ಲಿ ₹375ರಷ್ಟು ರಾಷ್ಟ್ರೀಯ ಕನಿಷ್ಠ ಕೂಲಿ ಶಿಫಾರಸು ಮಾಡಿತ್ತು. ಹೀಗಿರುವಾಗ, ₹300ರ ಕೂಲಿಯನ್ನು ‘ಹೆಚ್ಚಿನ ವೇತನ’ ಎಂದು ಬಿಂಬಿಸುವುದರಲ್ಲಿ ಎಷ್ಟು ವಾಸ್ತವವಿದೆ?

ಗ್ರಾಮೀಣ ಕಾರ್ಮಿಕರ ಜೀವನ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವಾಗ, ಕಾನೂನಿನಲ್ಲಿ ಉದ್ಯೋಗದ ದಿನಗಳನ್ನು ಹೆಚ್ಚಿಸಿದ್ದೇವೆ ಎಂದು ಹೇಳುವುದಷ್ಟೇ ಸಾಕಾಗುವುದಿಲ್ಲ. ಆ ಉದ್ಯೋಗದಿಂದ ದೊರೆಯುವ ಕೂಲಿ ಕುಟುಂಬವನ್ನು ಎಷ್ಟು ಮಟ್ಟಿಗೆ ಬದುಕಿಸಬಲ್ಲದು ಎಂಬುದೂ ಅಷ್ಟೇ ಮುಖ್ಯ.

ಇದನ್ನೂ ಓದಿ: ಸ್ವತಂತ್ರ ಭಾರತಕ್ಕೆ 8 ದಶಕಗಳ ಸಂಭ್ರಮ; ಯೋಜನೆಗಳ ಅಬ್ಬರದಲ್ಲಿ ಕರಗುತ್ತಿದೆಯೇ ಬಡವನ ಜೀವ?

ಡಿಜಿಟಲ್ ದಕ್ಷತೆಯ ಮಿಥ್

VB-G RAM Gಯನ್ನು ಹೆಚ್ಚು ತಂತ್ರಜ್ಞಾನ ಆಧಾರಿತ, ಪಾರದರ್ಶಕ ಮತ್ತು ಪರಿಣಾಮಕಾರಿ ಯೋಜನೆಯಾಗಿ ಸರ್ಕಾರ ಬಿಂಬಿಸುತ್ತಿದೆ. ಆದರೆ ಗ್ರಾಮೀಣ ಕಾರ್ಮಿಕರ ದೃಷ್ಟಿಯಿಂದ ನೋಡಿದಾಗ ಇದೇ ತಂತ್ರಜ್ಞಾನ ಹೊಸ ರೀತಿಯ ಹೊರಗಿಡುವಿಕೆಗೆ ಕಾರಣವಾಗುತ್ತಿದೆ ಎಂಬುದು ಲೇಖನದ ಮತ್ತೊಂದು ಪ್ರಮುಖ ವಾದ.

ಇ-ಕೆವೈಸಿ (e-KYC) ಪ್ರಕ್ರಿಯೆಯಿಂದ ಕೋಟ್ಯಂತರ ಜಾಬ್ ಕಾರ್ಡ್‌ಗಳು ಅಳಿಸಲ್ಪಟ್ಟಿವೆ ಎಂಬ ಆರೋಪಗಳಿವೆ. ಹೀಗಾಗಿ ಕೆಲಸಕ್ಕಾಗಿ ಮುಂದೆ ಬರುತ್ತಿರುವ ಕುಟುಂಬಗಳ ಸಂಖ್ಯೆ ಇಳಿಕೆಯಾಗಿರುವುದಕ್ಕೆ ಇದು ಒಂದು ಕಾರಣವಾಗಿರಬಹುದೇ ಎಂಬ ಪ್ರಶ್ನೆ ಎದುರಾಗುತ್ತದೆ. ಇದರ ಜೊತೆಗೆ NMMS ವ್ಯವಸ್ಥೆಯ ಮುಖ ಗುರುತಿಸುವಿಕೆ, ಜಿಯೋ-ಟ್ಯಾಗಿಂಗ್ ಮತ್ತು ಜಿಯೋ-ಫೆನ್ಸಿಂಗ್ ಆಧಾರಿತ ಹಾಜರಾತಿ ಕಾರ್ಮಿಕರಿಗೆ ಮತ್ತೊಂದು ಅಡೆತಡೆಯಾಗಿ ಪರಿಣಮಿಸಿದೆ.

ಸುಮಾರು 11 ಕೋಟಿ ನೋಂದಾಯಿತ ಸಕ್ರಿಯ ಕಾರ್ಮಿಕರ ಹಾಜರಾತಿಯನ್ನು ದಿನಕ್ಕೆ ಎರಡು ಬಾರಿ ನಿರ್ದಿಷ್ಟ ಸ್ಥಳಕ್ಕೆ ಜಿಯೋ-ಟ್ಯಾಗ್ ಮತ್ತು ಜಿಯೋ-ಫೆನ್ಸ್ ಮಾಡಿ ಛಾಯಾಚಿತ್ರದ ಮೂಲಕ ದಾಖಲಿಸುವುದು ಗ್ರಾಮೀಣ ಪ್ರದೇಶಗಳ ವಾಸ್ತವ ಪರಿಸ್ಥಿತಿಯಲ್ಲಿ ಎಷ್ಟರ ಮಟ್ಟಿಗೆ ಸಾಧ್ಯ?

ನೆಟ್‌ವರ್ಕ್ ಇಲ್ಲದಿರುವುದು, ತಾಂತ್ರಿಕ ದೋಷ, ಮೊಬೈಲ್ ಅಥವಾ ಆ್ಯಪ್ ಸಮಸ್ಯೆ, ಸ್ಥಳ ಗುರುತಿಸುವಿಕೆಯ ವೈಫಲ್ಯ.. ಇವುಗಳಲ್ಲಿ ಯಾವುದಾದರೂ ಒಂದು ಕಾರಣದಿಂದ ಹಾಜರಾತಿ ದಾಖಲಾಗದಿದ್ದರೆ, ಅದರ ಪರಿಣಾಮ ಕಾರ್ಮಿಕನ ಕೂಲಿಯ ಮೇಲೆಯೇ ಬೀಳಬಹುದು. ತಂತ್ರಜ್ಞಾನ ಕಾರ್ಮಿಕರ ಕೆಲಸವನ್ನು ಸುಲಭಗೊಳಿಸಬೇಕೇ ಹೊರತು, ಅವರ ವೇತನವನ್ನೇ ಕಳೆದುಕೊಳ್ಳುವ ಮತ್ತೊಂದು ಕಾರಣವಾಗಬಾರದು.

ಲೇಖನದಲ್ಲಿ ಉಲ್ಲೇಖಿಸಿರುವಂತೆ, MGNREGA ಕಾರ್ಮಿಕರೇ ಈ ರೀತಿಯ ಮೇಲ್ವಿಚಾರಣಾ ವ್ಯವಸ್ಥೆಯನ್ನು ಪ್ರತಿಯೊಬ್ಬ ಸರ್ಕಾರಿ ನೌಕರನ ಮೇಲೂ ಜಾರಿಗೊಳಿಸಬೇಕು ಎಂದು ಒತ್ತಾಯಿಸುವಷ್ಟು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಗ ಮಾತ್ರ ತಂತ್ರಜ್ಞಾನ ಆಧಾರಿತ ಹಾಜರಾತಿಯ ಕಿರಿಕಿರಿ ಮತ್ತು ಒತ್ತಡದ ನಿಜವಾದ ಅನುಭವ ಅರ್ಥವಾಗಬಹುದು ಎಂಬುದು ಅವರ ವಾದ.

‘ವಿಕಸಿತ ಭಾರತ’ದ ಮಿಥ್ ಮತ್ತು ಒಕ್ಕೂಟ ವ್ಯವಸ್ಥೆಯ ಪ್ರಶ್ನೆ

VB-G RAM G ಅಡಿಯಲ್ಲಿ ರಾಜ್ಯಗಳು 40ರಷ್ಟು ಹಣಕಾಸಿನ ಪಾಲು ನೀಡಬೇಕಾಗಿರುವುದನ್ನು ಕೇಂದ್ರ ಸರ್ಕಾರ ‘ಸಹಕಾರಿ ಒಕ್ಕೂಟ ವ್ಯವಸ್ಥೆ’ಯ ಹೊಸ ಮಾದರಿ ಎಂದು ಸಮರ್ಥಿಸುತ್ತಿದೆ. ಆದರೆ ರಾಜ್ಯಗಳ ಒಪ್ಪಿಗೆಯನ್ನು ಪಡೆಯದೆ ಕೇಂದ್ರದ ಕಾಯ್ದೆಯ ಅನುಷ್ಠಾನದ ಹಣಕಾಸಿನ ಹೊಣೆಯನ್ನು ರಾಜ್ಯಗಳ ಮೇಲೆ ಹೇರಿರುವುದು ಸಂವಿಧಾನದ ವಿಧಿ 258ಕ್ಕೆ ಸಂಬಂಧಿಸಿದ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂಬುದು ಲೇಖಕರ ವಾದ.

ಕೇಂದ್ರ ಕಾಯ್ದೆಯ ಅನುಷ್ಠಾನದಿಂದ ರಾಜ್ಯಗಳ ಮೇಲೆ ಹೆಚ್ಚುವರಿ ಹಣಕಾಸಿನ ಹೊರೆ ಬೀಳುತ್ತಿದ್ದರೆ, ಆ ಹೊಣೆಯನ್ನು ಯಾರು ಹೊತ್ತುಕೊಳ್ಳಬೇಕು ಎಂಬುದು ಕೇವಲ ಆಡಳಿತಾತ್ಮಕ ಪ್ರಶ್ನೆಯಲ್ಲ; ಅದು ಭಾರತದ ಒಕ್ಕೂಟ ವ್ಯವಸ್ಥೆಯ ಸ್ವರೂಪಕ್ಕೆ ಸಂಬಂಧಿಸಿದ ಪ್ರಶ್ನೆ. ಆರಂಭದಲ್ಲಿ ಹಲವು ವಿರೋಧ ಪಕ್ಷಗಳ ರಾಜ್ಯಗಳು ಈ ಹಣಕಾಸು ವ್ಯವಸ್ಥೆಗೆ ಆಕ್ಷೇಪ ವ್ಯಕ್ತಪಡಿಸಿದ್ದವು. ಆದರೆ ನಂತರ ಅವು ಬಹುತೇಕ ಈ ವ್ಯವಸ್ಥೆಯೊಂದಿಗೆ ಹೊಂದಿಕೊಂಡಿರುವಂತೆ ಕಾಣಿಸುತ್ತಿವೆ.

ಕೇವಲ ಕಾನೂನು ಬದಲಾವಣೆಯಲ್ಲ, ಹಕ್ಕಿನ ಸ್ವರೂಪದ ಬದಲಾವಣೆ

VB-G RAM Gಯನ್ನು MGNREGAಯ ಸುಧಾರಿತ ರೂಪ ಎಂದು ಬಿಂಬಿಸುವ ಮೊದಲು, ಅದರ ಮೂಲ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು ಅಗತ್ಯ. MGNREGA ಪರಿಪೂರ್ಣ ಯೋಜನೆಯಾಗಿರಲಿಲ್ಲ. ಅನುಷ್ಠಾನದಲ್ಲಿ ಭ್ರಷ್ಟಾಚಾರ, ವಿಳಂಬ, ತಾಂತ್ರಿಕ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿದ್ದವು. ಆದರೂ ಅದು ಗ್ರಾಮೀಣ ಕಾರ್ಮಿಕರಿಗೆ ಕೆಲಸ ಕೇಳುವ ಕಾನೂನುಬದ್ಧ ಹಕ್ಕು ನೀಡಿದ ಪ್ರಮುಖ ಸಾಮಾಜಿಕ ಭದ್ರತಾ ವ್ಯವಸ್ಥೆಯಾಗಿತ್ತು. ಸುಮಾರು ಎರಡು ದಶಕಗಳ ಕಾಲ ಗ್ರಾಮೀಣ ಭಾರತದ ಬಡ ಕುಟುಂಬಗಳಿಗೆ ಅದು ಒಂದು ರೀತಿಯ ಕೊನೆಯ ಆಸರೆಯಾಗಿತ್ತು.

ಹೊಸ ಕಾಯ್ದೆ ನಿಜವಾಗಿಯೂ ಆ ಹಕ್ಕನ್ನು ಬಲಪಡಿಸುತ್ತಿದೆಯೇ ಅಥವಾ ಕಾನೂನಿನ ಭಾಷೆಯಲ್ಲಿ ಅದನ್ನು ಬಲಪಡಿಸಿದಂತೆ ತೋರಿಸುತ್ತಾ, ಹಣಕಾಸು ಮತ್ತು ಅನುಷ್ಠಾನದ ವ್ಯವಸ್ಥೆಯಲ್ಲಿ ಅದನ್ನು ದುರ್ಬಲಗೊಳಿಸುತ್ತಿದೆಯೇ ಎಂಬುದೇ ಇಲ್ಲಿ ಮೂಲ ಪ್ರಶ್ನೆ.

ರಾಜಕೀಯ ವಿರೋಧದ ಕೊರತೆಯೂ ಪ್ರಶ್ನೆ

ಈ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರದ ನಿಲುವಿನಷ್ಟೇ ರಾಜಕೀಯ ವಿರೋಧ ಪಕ್ಷಗಳ ಪಾತ್ರವೂ ಪ್ರಶ್ನಾರ್ಹವಾಗಿದೆ. ಹೊಸ ಕಾಯ್ದೆಯನ್ನು ವಿರೋಧ ಪಕ್ಷಗಳು ಸಂಸತ್ತಿನಲ್ಲಿ ವಿರೋಧಿಸಿದ್ದವು. ಹೆಚ್ಚಿನ ಚರ್ಚೆ, ಸಮಾಲೋಚನೆ ಮತ್ತು ಮರುಪರಿಶೀಲನೆಗೆ ಅವು ಒತ್ತಾಯಿಸಿದ್ದವು. ಆದರೆ ಕೇವಲ ಸಂಸದೀಯ ವಿರೋಧ ಸಾಕಾಗುವುದಿಲ್ಲ. ಗ್ರಾಮೀಣ ಕಾರ್ಮಿಕರ ಪರವಾಗಿ ನಿರಂತರ ಜನಾಂದೋಲನ ರೂಪಿಸುವುದು, ರಾಜ್ಯ ಸರ್ಕಾರಗಳನ್ನು ಒಗ್ಗೂಡಿಸುವುದು, ಕಾನೂನುಬದ್ಧ ಸವಾಲು ಹಾಕುವುದು ಅಥವಾ ಪರ್ಯಾಯ ಉದ್ಯೋಗ ಖಾತ್ರಿ ವ್ಯವಸ್ಥೆ ರೂಪಿಸುವ ಪ್ರಯತ್ನ ಮಾಡುವುದು ಸೇರಿದಂತೆ ಇಂತಹ ಕ್ರಮಗಳ ಅಗತ್ಯವಿತ್ತು. ಆದರೆ, ವಿರೋಧ ಪಕ್ಷಗಳು ತಮ್ಮ ನೈತಿಕ ಹೊಣೆಗಾರಿಕೆಯಿಂದಲೂ ಹಿಂದೆ ಸರಿದಂತೆ ಕಾಣುತ್ತಿವೆ. ರಾಜ್ಯ ಸರ್ಕಾರಗಳೂ VB-G RAM Gಯನ್ನು ಕಾನೂನುಬದ್ಧವಾಗಿ ಪ್ರಶ್ನಿಸಿಲ್ಲ. ತಮ್ಮ ರಾಜ್ಯಗಳಲ್ಲಿ ಪರ್ಯಾಯವಾಗಿ ಉದ್ಯೋಗ ಖಾತ್ರಿಯನ್ನು ಬಲಪಡಿಸುವ ಪ್ರಯತ್ನವನ್ನೂ ಮಾಡಿಲ್ಲ.

ಕೊನೆಗೆ ಬೆಲೆ ತೆರಬೇಕಾಗಿರುವವರು ಯಾರು?

ಸರ್ಕಾರದ ಪ್ರಚಾರ, ದೊಡ್ಡ ಮೊತ್ತದ ಅನುದಾನ, 125 ದಿನಗಳ ಘೋಷಣೆ, ಡಿಜಿಟಲ್ ತಂತ್ರಜ್ಞಾನ, ಹೊಸ ಕಾನೂನು ಇವೆಲ್ಲದರ ನಡುವೆ ಈ ವ್ಯವಸ್ಥೆಯಿಂದ ನಿಜವಾಗಿ ಲಾಭ ಪಡೆಯುತ್ತಿರುವವರು ಯಾರು? ಎಂಬ ಮೂಲ ಪ್ರಶ್ನೆ ಮಾತ್ರ ಕಾಡುತ್ತದೆ. ಏಕೆಂದರೆ ಅದರ ಬೆಲೆ ಕಟ್ಟುತ್ತಿರುವವರು ಭಾರತದ ಅತ್ಯಂತ ದುರ್ಬಲ ಗ್ರಾಮೀಣ ಕಾರ್ಮಿಕರು. ಅವರಲ್ಲಿ ಬಹುಪಾಲು ಮಹಿಳೆಯರು. ಕುಟುಂಬದ ಆದಾಯದಲ್ಲಿ ಸಣ್ಣದಾದರೂ ಖಚಿತ ಪಾಲು ಸಿಗಬೇಕು ಎಂಬ ನಿರೀಕ್ಷೆಯಲ್ಲಿ ಅವರು ಉದ್ಯೋಗ ಖಾತ್ರಿ ಯೋಜನೆಯತ್ತ ನೋಡುತ್ತಾರೆ. ಒಂದು ದಿನದ ಕೆಲಸ ಅವರಿಗೆ ಕೇವಲ ‘ಒಂದು ವ್ಯಕ್ತಿ-ದಿನ’ವಲ್ಲ. ಅದು ಒಂದು ದಿನದ ಆಹಾರ, ಮಕ್ಕಳ ಖರ್ಚು, ಔಷಧಿ, ಸಾಲದ ಕಂತು ಅಥವಾ ಮನೆಯ ಅಗತ್ಯ. ಹೀಗಾಗಿ ಒಂದು ದಿನದ ಉದ್ಯೋಗದ ನಷ್ಟವೂ ಒಂದು ಕುಟುಂಬದ ಬದುಕಿನಲ್ಲಿ ದೊಡ್ಡ ನಷ್ಟವೇ.

ಅಂಕಿ-ಅಂಶಗಳಲ್ಲಿ ಅದು ಕೇವಲ ‘ಒಂದು ವ್ಯಕ್ತಿ-ದಿನ’ ಎಂದು ಕಾಣಬಹುದು. ಲಕ್ಷಾಂತರ ವ್ಯಕ್ತಿ-ದಿನಗಳು ಕಡಿಮೆಯಾದಾಗ ಅದು ಕೋಟ್ಯಂತರ ರೂಪಾಯಿಗಳ ಲೆಕ್ಕವಾಗಬಹುದು. ಆದರೆ ಅದರ ಹಿಂದೆ ಹಸಿವು, ಸಾಲ, ಅನಿಶ್ಚಿತತೆ ಮತ್ತು ಬದುಕಿನ ಸಂಕಷ್ಟವಿರುತ್ತದೆ. ಇದೇ VB-G RAM G ಕುರಿತು ನಡೆಯುತ್ತಿರುವ ಚರ್ಚೆಯ ಅತ್ಯಂತ ಕಹಿ ವಾಸ್ತವ. ಕೇಂದ್ರ ಸರ್ಕಾರ 125 ದಿನಗಳ ಉದ್ಯೋಗದ ಬಗ್ಗೆ ದೊಡ್ಡ ಘೋಷಣೆ ಮಾಡಬಹುದು. ₹95,000 ಕೋಟಿ ಅನುದಾನದ ಬಗ್ಗೆ ಹೆಮ್ಮೆಪಡಬಹುದು. ಡಿಜಿಟಲ್ ವ್ಯವಸ್ಥೆಯನ್ನು ದಕ್ಷತೆಯ ಸಂಕೇತವಾಗಿ ಬಿಂಬಿಸಬಹುದು. ಆದರೆ ಕೆಲಸ ಕೇಳಿದ ವ್ಯಕ್ತಿಗೆ ಕೆಲಸ ಸಿಗದಿದ್ದರೆ, ಆ ಎಲ್ಲ ಘೋಷಣೆಗಳ ಅರ್ಥವೇನು?

ಇದನ್ನೂ ಓದಿ: ಬೀದರ್‌ | ಕಾರ್ಮಿಕ ವಿರೋಧ ವಿಬಿ-ಜಿರಾಮ್‌ಜಿ ಹಿಂಪಡೆಯಲು ಆಗ್ರಹ

ಗ್ರಾಮೀಣ ಜನರಿಗೆ ಉದ್ಯೋಗದ ಅಗತ್ಯ ಕಡಿಮೆಯಾಗಿಲ್ಲ. ದೇಶದಲ್ಲಿ ನಿರುದ್ಯೋಗ ಮತ್ತು ಗ್ರಾಮೀಣ ಸಂಕಷ್ಟ ಮುಂದುವರಿದಿರುವಾಗ ಉದ್ಯೋಗ ಖಾತ್ರಿಯ ವ್ಯವಸ್ಥೆ ಇನ್ನಷ್ಟು ಬಲಿಷ್ಠವಾಗಬೇಕಿತ್ತು. ಆದರೆ ಅದೇ ವ್ಯವಸ್ಥೆ ದುರ್ಬಲವಾಗುತ್ತಿದ್ದರೆ, ಇದು ಕೇವಲ ಒಂದು ಯೋಜನೆಯ ಅನುಷ್ಠಾನದ ಸಮಸ್ಯೆಯಲ್ಲ. ಇದು ಭಾರತದ ಗ್ರಾಮೀಣ ಕಾರ್ಮಿಕರ ಹಕ್ಕು, ಸಾಮಾಜಿಕ ಭದ್ರತೆ ಮತ್ತು ಕೇಂದ್ರ-ರಾಜ್ಯ ಸಂಬಂಧಗಳ ಕುರಿತಾದ ದೊಡ್ಡ ನೀತಿ ಪ್ರಶ್ನೆ.

ನಗರಗಳ ಬೀದಿಗಳಲ್ಲಿ ಪ್ರತಿಭಟಿಸುವ ಯುವಕರ ಹಿಂದೆ ಕೇವಲ ರಾಜಕೀಯ ಅಸಮಾಧಾನವಿಲ್ಲ. ಅವರ ಹಿಂದೆ ಕೆಲಸ ಬೇಕು, ಉದ್ಯೋಗ ಬೇಕು, ಬದುಕಿಗೆ ಭದ್ರತೆ ಬೇಕು ಎಂಬ ಮೂಲ ಬೇಡಿಕೆಯೂ ಇದೆ. ಆದ್ದರಿಂದ VB-G RAM Gಯ ಯಶಸ್ಸನ್ನು ಸರ್ಕಾರದ ಜಾಹೀರಾತುಗಳಿಂದ ಅಳೆಯಲು ಸಾಧ್ಯವಿಲ್ಲ. ಅದನ್ನು ಅಳೆಯಬೇಕಿರುವುದು ಕೆಲಸ ಕೇಳಿದ ಎಷ್ಟು ಕುಟುಂಬಗಳಿಗೆ ನಿಜವಾಗಿ ಕೆಲಸ ಸಿಕ್ಕಿತು, ಎಷ್ಟು ದಿನ ಕೆಲಸ ಸಿಕ್ಕಿತು, ಎಷ್ಟು ಕೂಲಿ ಸಿಕ್ಕಿತು ಮತ್ತು ಎಷ್ಟು ಜನರು ವ್ಯವಸ್ಥೆಯಿಂದ ಹೊರಗುಳಿದರು ಎಂಬ ಪ್ರಶ್ನೆಗಳ ಮೂಲಕ.

MGNREGA ಭಾರತ ಹೊಂದಿದ್ದ ಏಕೈಕ ಸಮಗ್ರ ಕಾನೂನುಬದ್ಧ ಗ್ರಾಮೀಣ ಉದ್ಯೋಗ ಖಾತ್ರಿ ವ್ಯವಸ್ಥೆಯಾಗಿತ್ತು. ಅದರ ಬದಲಿಗೆ ಬಂದ VB-G RAM G ನಿಜವಾಗಿಯೂ ಅದನ್ನು ಬಲಪಡಿಸುತ್ತಿದೆಯೇ ಅಥವಾ ಅದರ ಹಕ್ಕಿನ ಸ್ವರೂಪವನ್ನೇ ದುರ್ಬಲಗೊಳಿಸುತ್ತಿದೆಯೇ ಎಂಬುದನ್ನು ಕಾಲವೇ ಹೇಳಬೇಕಿದೆ. ಆದರೆ ಒಂದು ಸಂಗತಿ ಮಾತ್ರ ಈಗಲೇ ಸ್ಪಷ್ಟ.. ಸರ್ಕಾರದ ಕಥನದ ಆಚೆ, ಅಂಕಿ-ಅಂಶಗಳ ಆಚೆ, 125 ದಿನಗಳ ಘೋಷಣೆಯ ಆಚೆ ಅಲ್ಲಿ ಬದುಕಿಗಾಗಿ ಕೆಲಸ ಹುಡುಕುತ್ತಿರುವ ಒಂದು ಬೃಹತ್ ಗ್ರಾಮೀಣ ಭಾರತವಿದೆ. ಆ ಜನರ ನೋವನ್ನು ಯಾವ ಅಂಕಿ-ಅಂಶವೂ ಸಂಪೂರ್ಣವಾಗಿ ಹೇಳಲಾರದು.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುದ್ದೇಬಿಹಾಳ | ದಾಸೋಹಿ ರೈತ ಉತ್ಪಾದಕ ಸಹಕಾರಿ ಸಂಘದ ಆರ್ಥಿಕ ಚಟುವಟಿಕೆ: ಗವಿಸಿದ್ದೇಶ್ವರ ಶ್ರೀಗಳಿಂದ ಚಾಲನೆ

ರೈತರೇ ಮಾಲೀಕರಾಗಿ, ರೈತರ ಆರ್ಥಿಕ ಸಬಲೀಕರಣವನ್ನೇ ಕೇಂದ್ರವಾಗಿಟ್ಟುಕೊಂಡು ಅಸ್ತಿತ್ವಕ್ಕೆ ಬಂದಿರುವ ದಾಸೋಹಿ...

ಸಮುದ್ರದಲ್ಲಿ ಅಲೆಗಳು ಭೋರ್ಗರೆಯುತ್ತಿರುವಾಗ ಈಜುವುದು ನನಗಿಷ್ಟ: ವೈರಲ್ ಆಯ್ತು ರಾಹುಲ್ ಗಾಂಧಿ ‘X’ ಪೋಸ್ಟ್

ಸಮುದ್ರದಲ್ಲಿ ಅಲೆಗಳು ಭೋರ್ಗರೆಯುತ್ತಿರುವಾಗ ಈಜುವುದು ನನಗಿಷ್ಟ ಎಂದು ಕಾಂಗ್ರೆಸ್ ನಾಯಕ ಹಾಗೂ...

ಗವಿಸಿದ್ದೇಶ್ವರ ಸ್ವಾಮೀಜಿ ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿದ್ದಾರೆಂಬ ಸುಳ್ಳುಸುದ್ದಿ: ತಪ್ಪಿತಸ್ಥನ ವಿರುದ್ಧ FIR

ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಆಹ್ವಾನವನ್ನು...