ಮೇಕೆ ಕಳವು ಮಾಡಿದ್ದಾನೆ ಎಂಬ ಶಂಕೆಯಲ್ಲಿ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು ಥಳಿಸಿ ಕೊಂದಿರುವ ಘಟನೆ ಜಾರ್ಖಂಡ್‌ನಲ್ಲಿ ಭಾನುವಾರ ತಡರಾತ್ರಿ ಕುಂಟಿಯ ಮುರ್ಹು ಬ್ಲಾಕ್‌ನ ಬಿಂದಾದಿರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಮೇಕೆಗಳನ್ನು ಕದಿಯಲು ಹೋಗಿದ್ದ ನಾಲ್ವರು ಯುವಕರನ್ನು ಗ್ರಾಮಸ್ಥರು ದೊಣ್ಣೆಗಳಿಂದ ಥಳಿಸಿದ್ದಾರೆ. ನಾವು ನೋಡುವಷ್ಟರಲ್ಲಿ ಆರೋಪಿಗಳು ಮೂರು ಮೇಕೆಗಳನ್ನು ಕಾರಿನಲ್ಲಿ ತುಂಬಿಸಿದ್ದರು ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: 500 ರೂ. ಕದ್ದ ಆರೋಪ; ಮಗನನ್ನೇ ಹೊಡೆದು ಕೊಂದ ತಂದೆ
ಆರೋಪಿಗಳನ್ನು ಹಿಡಿದು ಕಾಡಿನ ಕಡೆಗೆ ಕರೆದೊಯ್ದು ಮರಕ್ಕೆ ಕಟ್ಟಿ, ಗ್ರಾಮಸ್ಥರು ಇಡೀ ರಾತ್ರಿ ಥಳಿಸಿದ್ದಾರೆ. ನಾಲ್ವರಲ್ಲಿ ಒಬ್ಬರನ್ನು ಗ್ರಾಮಸ್ಥರು ವಶಕ್ಕೆ ಪಡೆದಿದ್ದರು. ನೇಜಮ್ ಅನ್ಸಾರಿ ಎಂಬಾತ ನಿರಪರಾಧಿ ಎಂದು ಆತನನ್ನು ಬಿಟ್ಟಿದ್ದರು. ಇನ್ನೋರ್ವ ಕಾರು ಚಾಲಕ ಗುಡ್ಡು ಅನ್ಸಾರಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಸೋಮವಾರ ಬೆಳಿಗ್ಗೆ, ಪೊಲೀಸರು ಮೂವರ ರಕ್ಷಣೆ ಮಾಡಿದ್ದಾರೆ. ಈ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ದಿಲ್ದಾರ್ ಅನ್ಸಾರಿ ಸದರ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಆದರೆ ಫಿರೋಜ್ ಅನ್ಸಾರಿ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಎಸ್‌ಡಿಪಿಒ ಮಂಗಲ್ ಸಿಂಗ್ ಜಮುದಾ ಹೇಳಿದ್ದಾರೆ.
ದೇಶದಲ್ಲಿ ಇಂತಹ ಮಾಬ್ ಲಿಂಚಿಂಗ್ (mob lynching) ಪ್ರಕರಣಗಳು ಪದೇ ಪದೇ ವರದಿಯಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎಸ್. ಬಿದಿರೆ ಮೂಲದ ಕುಮಾರ್ (37) ಎಂಬವರನ್ನು ತೋಟದಿಂದ ತೆಂಗಿನಕಾಯಿ ಕಳ್ಳತನ ಮಾಡಿದ್ದಾರೆ ಎಂಬ ಆರೋಪದ ಮೇಲೆ ದಾಳಿ ನಡೆಸಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಇನ್ನು ಬೆಂಗಳೂರು ರಾಮಮೂರ್ತಿನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಅಶ್ವತ್ಥ್ (50) ಎಂಬ ಕಾರ್ಮಿಕನನ್ನು ಬೈಕ್ ಕದ್ದಿದ್ದಾನೆ ಎಂಬ ಶಂಕೆಯಿಂದ ಕಟ್ಟಿಹಾಕಿ ಮಾರಣಾಂತಿಕವಾಗಿ ಥಳಿಸಲಾಯಿತು. ನಂತರ ಅವರ ಮೃತದೇಹವನ್ನು ರಸ್ತೆಬದಿಯಲ್ಲಿ ಪತ್ತೆಯಾಗಿತ್ತು.
ಕೇರಳದ ವಾಲಯಾರ್‌ನಲ್ಲಿ ಕಳ್ಳತನ ಮಾಡಿರಬಹುದು ಎಂಬ ಶಂಕೆಯಿಂದ ಚತ್ತೀಸ್‌ಗಢ ಮೂಲದ ವಲಸೆ ಕಾರ್ಮಿಕ ರಾಮ್ ನಾರಾಯಣ್ ಭಾಗೇಲ್ (31) ಎಂಬಾತನ ಮೇಲೆ ಗುಂಪೊಂದು ಕ್ರೂರವಾಗಿ ಥಳಿಸಿ ಕೊಂದಿತ್ತು. ಸಿಸಿಟಿವಿ ಹಾಗೂ ವಿಡಿಯೋ ತುಣುಕುಗಳ ಆಧಾರದ ಮೇಲೆ ಕೇರಳ ಪೊಲೀಸರು ಆರೋಪಿಗಳನ್ನು ಗುರುತಿಸಿ ಹಲವರನ್ನು ಬಂಧಿಸಿದ್ದರು. ಇದೇ ರೀತಿ ಹಲವೆಡೆ ಘಟನೆಗಳು ನಡೆಯುತ್ತಲೇ ಇದೆ.





