ಕೇರಳದ ವಯನಾಡ್ ಜಿಲ್ಲೆಯ ಮೇಪ್ಪಾಡಿ ಸಮೀಪದ ಕಲ್ಲಾಡಿಯಲ್ಲಿ ಮಂಗಳವಾರ ಸುರಂಗ ರಸ್ತೆ ಯೋಜನಾ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿಕೊಂಡಿರಬಹುದು ಎಂಬ ಆತಂಕ ಎದುರಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳನ್ನು ಸಂಪರ್ಕಿಸುವ ಆನಾಕ್ಕಂಪೋಯಿಲ್-ಮೇಪ್ಪಾಡಿ ಸುರಂಗ ರಸ್ತೆ ಯೋಜನೆಯ ಕಾಮಗಾರಿ ನಡೆಯುತ್ತಿದ್ದ ಮೀನಾಕ್ಷಿ ಸೇತುವೆಯ ಬಳಿ ಈ ಘಟನೆ ಸಂಭವಿಸಿದೆ. ಭೂಕುಸಿತ ಸಂಭವಿಸಿದ ತಕ್ಷಣ ಕಲ್ಪೆಟ್ಟಾದಿಂದ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳು, ಪೊಲೀಸ್ ಮತ್ತು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF) ತಂಡಗಳಿಂದ ಜಂಟಿಯಾಗಿ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಇದೇ ಸ್ಥಳದಲ್ಲಿ ಸುರಂಗ ಯೋಜನೆಗೆ ಸಂಬಂಧಿಸಿದ ಕಾರ್ಮಿಕರು ತಂಗಿದ್ದರು. ಭೂಕುಸಿತ ಸಂಭವಿಸುತ್ತಿದ್ದಂತೆಯೇ ಸ್ಥಳೀಯ ನಿವಾಸಿಗಳು ಮೂವರನ್ನು ರಕ್ಷಿಸಿದ್ದಾರೆ. ಅವಶೇಷಗಳು ಬಿದ್ದ ಪರಿಣಾಮ ಐದು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿ ವಿ. ಡಿ. ಸತೀಶನ್ ಅವರು ಜಿಲ್ಲೆಯ ಸಚಿವರೊಂದಿಗೆ ತುರ್ತು ಸಭೆ ನಡೆಸಿದ್ದು, ಯುದ್ಧೋಪಾದಿಯಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸುವಂತೆ ಸೂಚಿಸಿದ್ದಾರೆ. ಸಚಿವರಾದ ಎ. ಪಿ. ಅನಿಲ್ ಕುಮಾರ್ ಮತ್ತು ಟಿ. ಸಿದ್ದಿಕ್ ಅವರು ತಕ್ಷಣ ವಯನಾಡ್‌ಗೆ ತೆರಳಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ, ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (KSDMA), ಭೂಕುಸಿತದಿಂದಾಗಿ ಮೇಪ್ಪಾಡಿ ಸಮೀಪದ ರಸ್ತೆಗಳು ಬಂದ್ ಆಗಿವೆ ಎಂದು ತಿಳಿಸಿದೆ.
2024ರ ಜುಲೈನಲ್ಲಿ ವಯನಾಡ್‌ನಲ್ಲಿ ಭೀಕರ ಭೂಕುಸಿತ ಸಂಭವಿಸಿತ್ತು. ಆ ಘಟನೆಯ ಎರಡು ವರ್ಷಗಳ ನಂತರ ಈ ಭೂಕುಸಿತ ಘಟನೆ ನಡೆದಿದೆ. ಆಗ ಸುರಿದ ಭಾರೀ ಮಳೆಯಿಂದಾಗಿ ಮೇಪ್ಪಾಡಿ ಪ್ರದೇಶದಲ್ಲಿ ಸರಣಿ ಭೂಕುಸಿತಗಳು ಸಂಭವಿಸಿ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು, ಹಲವರು ನಾಪತ್ತೆಯಾಗಿದ್ದರು. ಚೂರಲ್ಮಲ ಮತ್ತು ಮುಂಡಕೈ ನಂತಹ ಹಳ್ಳಿಗಳು ಸಂಪೂರ್ಣವಾಗಿ ನಾಶವಾಗಿದ್ದವು. ಆ ದುರಂತವು ಕೇರಳದ ಇತಿಹಾಸದಲ್ಲೇ ಅತ್ಯಂತ ಭೀಕರವಾದ ಭೂಕುಸಿತಗಳಲ್ಲಿ ಒಂದಾಗಿತ್ತು.



