ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಾದಿಗ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿನಿ ಕುಮಾರಿ ಸುಮಂಗಲ ಅವರ ಕುಟುಂಬಕ್ಕೆ ಸರ್ಕಾರದಿಂದ ನೆರವು ನೀಡುವಂತೆ ಆಗ್ರಹಿಸಿ ಮಾದಿಗ ಸಮಾಜ ದಲಿತ ಒಕ್ಕೂಟ ವತಿಯಿಂದ ಆಗ್ರಹಿಸಿದರು.
ಅತ್ಯಂತ ಬಡತನ ಮತ್ತು ಸಂಕಷ್ಟದ ನಡುವೆಯೂ ಶ್ರಮ, ಪ್ರತಿಭೆ ಹಾಗೂ ದೃಢ ಸಂಕಲ್ಪದಿಂದ ವೈದ್ಯಕೀಯ ಶಿಕ್ಷಣ (MBBS) ಸೀಟು ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಮಾದಿಗ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿನಿ ಕುಮಾರಿ ಸುಮಂಗಲ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ತೀವ್ರ ದುಃಖಕ್ಕೆ ಕಾರಣವಾಗಿದೆ.
ಬಸವಕಲ್ಯಾಣದಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಶಿರಾ ಸಮೀಪ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಸುಮಂಗಲ ಅವರು ಅಕಾಲಿಕವಾಗಿ ಮೃತಪಟ್ಟಿದ್ದಾರೆ. ಈ ದುರಂತದಿಂದ ಕುಟುಂಬ ಮಾತ್ರವಲ್ಲದೆ ಇಡೀ ಸಮುದಾಯ ಶೋಕಸಾಗರದಲ್ಲಿ ಮುಳುಗಿದೆ.
ಸುಮಂಗಲ ಅವರು ಬಡ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದು, ತಾಯಿ ಯಮುನಮ್ಮ ಸೇರಿದಂತೆ ಕುಟುಂಬದವರು ಕಷ್ಟಪಟ್ಟು ದುಡಿದು ಅವರನ್ನು ವೈದ್ಯೆಯನ್ನಾಗಿ ಮಾಡುವ ಕನಸು ಕಂಡಿದ್ದರು. ತಮ್ಮ ಪರಿಶ್ರಮ ಮತ್ತು ಪ್ರತಿಭೆಯಿಂದ MBBS ಪ್ರವೇಶ ಪಡೆದಿದ್ದ ಅವರು, ಹಿಂದುಳಿದ ಹಾಗೂ ಶೋಷಿತ ಸಮುದಾಯದ ಯುವಜನತೆಗೆ ಸ್ಪೂರ್ತಿಯಾಗಿದ್ದರು. ಆದರೆ ವಿಧಿಯ ಕ್ರೂರಾಟದಿಂದಾಗಿ ಕುಟುಂಬದ ಏಕೈಕ ಆಸರೆ ಕಳೆದುಹೋಗಿದ್ದು, ತಾಯಿ ಹಾಗೂ ಅಕ್ಕ-ತಂಗಿಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಸರ್ಕಾರವು ಸೂಕ್ತ ಆರ್ಥಿಕ ಪರಿಹಾರ ಘೋಷಿಸಬೇಕು, ಅವರ ತಾಯಿ ಮತ್ತು ಕುಟುಂಬದ ಸದಸ್ಯರಿಗೆ ಅಗತ್ಯ ಸರ್ಕಾರಿ ಸೌಲಭ್ಯಗಳು, ಜೀವನೋಪಾಯದ ನೆರವು ಹಾಗೂ ವಿಶೇಷ ಪುನರ್ವಸತಿ ಯೋಜನೆಗಳನ್ನು ಒದಗಿಸಬೇಕು ಎಂದು ವಿವಿಧ ಸಂಘಟನೆಗಳು, ಸಾರ್ವಜನಿಕರು ಹಾಗೂ ಮಾದಿಗ ಸಮುದಾಯದ ಮುಖಂಡರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬೀದಿ ನಾಯಿಗಳ ದಾಳಿ: ನಾಲ್ಕು ಕುರಿ ಸಾವು
ಪ್ರತಿಭಟನೆಯಲ್ಲಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರ ಅಧ್ಯಕ್ಷರು ಪಾಮಯ್ಯ ಮುರಾರಿ, ಮೋಹನ್ ಗೋಸ್ಲೆ, ಇನ್ನಿತರರು ಇದ್ದರು.



