ತಮಿಳುನಾಡಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ‘ಮಧ್ಯಾಹ್ನದ ಬಿಸಿಯೂಟ ಯೋಜನೆ’ಯಡಿ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ಬಡಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಪರಿಶೀಲಿಸುತ್ತಿದೆ. ಶಾಲಾ ಶಿಕ್ಷಣ ಸಚಿವ ರಾಜ್ಮೋಹನ್ ಅವರು ಈ ಕುರಿತ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಮುಂದಿಟ್ಟಿದ್ದಾರೆ.
ಈ ಪ್ರಸ್ತಾವನೆ ಕುರಿತು ಮಾತನಾಡಿರುವ ಸಚಿವ ರಾಜ್ಮೋಹನ್, ರಾಜ್ಯದ ಪ್ರತಿಯೊಂದು ಪ್ರಮುಖ ರಾಜಕೀಯ ಕಾಲಘಟ್ಟದಲ್ಲೂ ಶಾಲಾ ಪೌಷ್ಟಿಕಾಂಶ ಕಾರ್ಯಕ್ರಮವನ್ನು ಒಂದಲ್ಲ ಒಂದು ರೀತಿಯಲ್ಲಿ ಬಲಪಡಿಸಲಾಗಿದೆ ಎಂದು ಸ್ಮರಿಸಿದರು. “1950ರ ದಶಕದಲ್ಲಿ ಮಾಜಿ ಮುಖ್ಯಮಂತ್ರಿ ಕೆ. ಕಾಮರಾಜರ್ ಅವರು ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಮೊದಲು ಪರಿಚಯಿಸಿದರು. ಕರುಣಾನಿಧಿ ಅವರು ಮೊಟ್ಟೆಗಳನ್ನು ಸೇರಿಸಿದರೆ, ಎಂ.ಜಿ.ಆರ್ ಅವರು ಇದನ್ನು ಪೌಷ್ಟಿಕಾಂಶದ ಊಟದ ಕಾರ್ಯಕ್ರಮವಾಗಿ ಮಾರ್ಪಡಿಸಿದರು. ಜಯಲಲಿತಾ ಅವರು ವಾರದ ಎಲ್ಲಾ ದಿನಗಳಲ್ಲೂ ಮೊಟ್ಟೆ ವಿತರಿಸುವಂತೆ ಯೋಜನೆಯನ್ನು ವಿಸ್ತರಿಸಿದರು. ಅದೇ ರೀತಿ, ಸರ್ಕಾರಿ ಶಾಲೆಗಳಲ್ಲಿ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ಪರಿಚಯಿಸುವ ಆಸೆ ನನಗಿದೆ” ಎಂದು ಅವರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಸದ್ಯ ಈ ಪ್ರಸ್ತಾವನೆಯು ಮುಖ್ಯಮಂತ್ರಿ ವಿಜಯ್ ಅವರ ಪರಿಶೀಲನೆಯಲ್ಲಿದ್ದು, ಅಂತಿಮ ನಿರ್ಧಾರ ಇನ್ನಷ್ಟೇ ಹೊರಬೀಳಬೇಕಿದೆ. ತಮಿಳುನಾಡು ಶಾಲಾ ಪೌಷ್ಟಿಕಾಂಶ ಕಾರ್ಯಕ್ರಮಗಳಲ್ಲಿ ಹಿಂದಿನಿಂದಲೂ ಮುಂಚೂಣಿಯಲ್ಲಿದೆ. ಸೆಪ್ಟೆಂಬರ್ 2022ರಲ್ಲಿ ಅಂದಿನ ಡಿಎಂಕೆ ಸರ್ಕಾರವು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬೆಳಗಿನ ಉಪಾಹಾರ ಒದಗಿಸುವ ‘ಮುಖ್ಯಮಂತ್ರಿಗಳ ಉಪಾಹಾರ ಯೋಜನೆ’ಯನ್ನು (ನಂತರ ‘ಪೆರುಂತಲೈವರ್ ಕಾಮರಾಜರ್ ಉಪಾಹಾರ ಯೋಜನೆ’ ಎಂದು ಮರುನಾಮಕರಣ ಮಾಡಲಾಗಿದೆ) ಆರಂಭಿಸಿತ್ತು. ಇದು ಮಧ್ಯಾಹ್ನದ ಬಿಸಿಯೂಟದ ಜೊತೆಯಲ್ಲೇ ನಡೆಯುತ್ತಿದ್ದು, ಮಕ್ಕಳಿಗೆ ದಿನದಲ್ಲಿ ಎರಡು ಪೌಷ್ಟಿಕ ಊಟ ಸಿಗುವಂತೆ ಖಚಿತಪಡಿಸಿದೆ.
ಒಂದು ವೇಳೆ ಸಚಿವರ ಈ ಪ್ರಸ್ತಾವನೆಗೆ ಅನುಮೋದನೆ ದೊರೆತರೆ, ಮಕ್ಕಳ ಪೌಷ್ಟಿಕಾಂಶ ಮತ್ತು ಶಾಲಾ ಹಾಜರಾತಿಯನ್ನು ಹೆಚ್ಚಿಸುವ ಕಲ್ಯಾಣ ಯೋಜನೆಗಳ ಸಾಲಿನಲ್ಲಿ ಚಿಕನ್ ಬಿರಿಯಾನಿ ಸೇರ್ಪಡೆಯು ಇತ್ತೀಚಿನ ವರ್ಷಗಳಲ್ಲಿನ ಅತಿ ದೊಡ್ಡ ಬದಲಾವಣೆಯಾಗಲಿದೆ. ಇದರ ಜೊತೆಗೆ ಪ್ರಸ್ತುತವಿರುವ ಶಾಲಾ ಉಪಾಹಾರದ ಮೆನುವನ್ನು ಬದಲಾಯಿಸುವ ಬಗ್ಗೆಯೂ ಸಚಿವರು ಒಲವು ತೋರಿದ್ದಾರೆ. ಪ್ರಸ್ತುತ ಪ್ರತಿ ವಿದ್ಯಾರ್ಥಿಗೆ ಅಂದಾಜು 15 ರೂ. ಮೀಸಲಿಡಲಾಗುತ್ತಿದೆ. ಹೀಗಾಗಿ, ಪ್ರತಿದಿನ ನೀಡಲಾಗುವ ಗೋಧಿ ಮತ್ತು ರವಾ ಉಪ್ಪಿಟ್ಟಿನಂತಹ ಪದಾರ್ಥಗಳ ಬದಲಿಗೆ, ಮಕ್ಕಳಿಗೆ ಹೆಚ್ಚು ಇಷ್ಟವಾಗುವ ಹಾಗೂ ಹೆಚ್ಚು ಪೌಷ್ಟಿಕಾಂಶಯುಕ್ತ ಪರ್ಯಾಯ ಆಹಾರವನ್ನು ನೀಡಲು ಸರ್ಕಾರ ಉದ್ದೇಶಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.





