ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಸಂತ್ರಸ್ತೆಯ ತಾಯಿ ರತ್ನ ದೇಬ್ಬಾಥ್ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದ್ದು, ಉತ್ತರ 24 ಪರಗಣದ ಪಾಣಿಹತಿ ವಿಧಾನಸಭಾ ಕ್ಷೇತ್ರದಿದ ರತ್ನ ದೇಬ್ಬಾಥ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದು, ಆಡಳಿತರೂಢ ತೃಣಮೂಲ ಕಾಂಗ್ರೆಸ್‌ನ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಅವರಿಗೆ ಇದು ಬಿಜೆಪಿಯ ರಾಜಕೀಯ ಅಸ್ತ್ರ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ.
ಬಿಜೆಪಿಯಿಂದ ಟಿಕೆಟ್ ಘೋಷಣೆ ಮಾಡಿದ ಬಳಿಕ ಮಾಧ್ಯಮದವರಿಗೆ ಸ್ಪಂದಿಸಿ ಮಾತನಾಡಿದ ರತ್ನ ದೇಬ್ಬಾಥ್, “ಇದು ಕೂಡ ಒಂದು ಗೆಲುವು. ಈ ಗೆಲುವನ್ನು ಪಾಣಿಹತಿಯ ಜನರಿಗೆ ಅರ್ಪಿಸುತ್ತೇನೆ. ನಾನು ಚುನಾವಣೆಯಲ್ಲಿ ಗೆಲ್ಲುವುದಲ್ಲ, ಪಾಣಿಹತಿಯ ಜನರು ಗೆಲ್ಲುತ್ತಾರೆ. ಪಾಣಿಹತಿಯ ಜನರು ಪ್ರತಿಭಟಿಸಲು ಮರೆತಿದ್ದಾರೆ. ಸರ್ಕಾರ ಶಿಕ್ಷಣ, ಆರೋಗ್ಯ ಮತ್ತು ಜನರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡಿದೆ’ ಎಂದು ಹೇಳಿದ್ದಾರೆ.
”ಮಹಿಳೆಯರ ಸುರಕ್ಷತೆಯನ್ನು ನಾನು ಖಚಿತಪಡಿಸಿಕೊಳ್ಳಬೇಕು. ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಬೇಕು. ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನನ್ನ ಮಗಳು ಕರ್ತವ್ಯದಲ್ಲಿದ್ದಾಗಲೇ ಹತ್ಯೆಗೀಡಾಗಿದ್ದಾಳೆ. ಅಂದಿನಿಂದ, ಅನೇಕ ಘಟನೆಗಳು ನಡೆದಿವೆ. ನಾನು ಚುನಾವಣಾ ಅಭಿಯಾನವನ್ನು ಪ್ರಾರಂಭಿಸುತ್ತೇನೆ” ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.
ಇದನ್ನೂ ಓದಿ : ಹಾಸನ ಮಣ್ಣಿನ ಹೆಣ್ಣು ದನಿಗಳು | ಚಂದನವನದ ಬಾನಲ್ಲಿ ಹಾಸನದ ತಾರೆಯರು
ಮತದಾರರು ನನ್ನ ಬೆಂಬಲಕ್ಕೆ ನಿಲ್ಲುವಂತೆ ನಾನು ವಿನಂತಿಸುತ್ತೇನೆ. ಚುನಾವಣಾ ಹೋರಾಟ ಕಠಿನವಾಗುವುದಿಲ್ಲ. ನಾವು ಈಗಾಗಲೇ ಯುದ್ಧವನ್ನು ದಾಟಿದ್ದೇವೆ. ರಾಜ್ಯದ ಜನರಿಗೆ ಹೇಳುವುದೇನೆಂದರೆ ನೀವು ಕಳೆದ 15 ವರ್ಷಗಳಿಂದ ಸರ್ಕಾರವನ್ನು ನೋಡಿದ್ದೀರಿ. ಆದ್ದರಿಂದ, ಮುಂದಿನ 5 ವರ್ಷಗಳ ಕಾಲ ಬಿಜೆಪಿಗೆ ಅವಕಾಶ ನೀಡಿ ಎಂದು ಹೇಳುವ ಮೂಲಕ ತೃಣಮೂಲ ಕಾಂಗ್ರೆಸ್‌ಗೆ ಸವಾಲೆಸಿದಿದ್ದಾರೆ.
ನನ್ನ ಮಗಳ ಸಾವಿಗೆ ನ್ಯಾಯ ಸಿಗುತ್ತದೆ, ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಎಲ್ಲಾ ಸಾಕ್ಷ್ಯಗಳನ್ನು ತೆಗೆದುಹಾಕಲಾಗಿದೆ ಎಂದು ಮಮತಾ ಬ್ಯಾನರ್ಜಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ,.
ಇನ್ನು, ಪಾಣಿಹತಿ ಕ್ಷೇತ್ರ ವನ್ನು ಕಳೆದ ಮೂರು ಅವಧಿಯಿಂದಲೂ ಟಿಎಂಸಿ ಜಯ ಸಾಧಿಸಿದೆ. ಈ ಬಾರಿ ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಸಂತ್ರಸ್ತೆಯ ತಾಯಿಯನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಮೂಲಕ ತನ್ನ ರಾಜಕೀಯ ತಂತ್ರಗಾರಿಕೆ ಹೆಣೆದಿದೆ. ಬಿಜೆಪಿಯ ಈ ನಡೆಯ ಬಗ್ಗೆಯೂ ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ.
ಕೋಲ್ಕತಾದ ಆರ್. ಜಿ. ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 2024ರ ಆಗಸ್ಟ್ 9 ರಂದು, 31 ವರ್ಷದ ಮಹಿಳಾ ಸ್ನಾತಕೋತ್ತರ ವೈದ್ಯೆಯನ್ನು ಕಾಲೇಜು ಕ್ಯಾಂಪಸ್‌ನಲ್ಲೇ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಆಕೆಯ ಶವ ಕ್ಯಾಂಪಸ್‌ನಲ್ಲಿರುವ ಸೆಮಿನಾರ್ ಕೋಣೆಯಲ್ಲಿ ಪತ್ತೆಯಾಗಿತ್ತು. ಕೋಲ್ಕತಾ ಪೊಲೀಸರು 2024 ಆಗಸ್ಟ್ 10 ರಂದು ಸಂಜಯ್ ರಾಯ್ ಎಂಬ ನಾಗರಿಕ ಸ್ವಯಂಸೇವಕನನ್ನು ಅಪರಾಧ ಎಸಗಿದ ಶಂಕೆಯ ಆಧಾರದ ಮೇಲೆ ಬಂಧಿಸಿದ್ದರು. ಬಳಿಕ, ಕೋಲ್ಕತಾ ಹೈಕೋರ್ಟ್ ತನಿಖೆಯನ್ನು ಸಿಬಿಐಗೆ ವರ್ಗಾವಣೆ ಮಾಡಿತ್ತು. ಘಟನೆಯ ಸಂಪೂರ್ಣ ತನಿಖೆ ಮತ್ತು ಆಸ್ಪತ್ರೆಗಳಲ್ಲಿ ಸಾಕಷ್ಟು ಭದ್ರತೆಯನ್ನು ಕೋರಿ ಪಶ್ಚಿಮ ಬಂಗಾಳದ ಕಿರಿಯ ವೈದ್ಯರು 42 ದಿನಗಳ ಕಾಲ ಮುಷ್ಕರ ನಡೆಸಿದ್ದರು. ರಾಷ್ಟ್ರ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿತ್ತು. 2025 ಜನವರಿ 18 ರಂದು, ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿ ಸಂಜಯ್ ರಾಯ್ ಗೆ ಕೋರ್ಟ್ ಶಿಕ್ಷೆ ವಿಧಿಸಿದೆ.




