ಬಾಗಲಕೋಟೆ ಉಪಚುನಾವಣಾ ಕಣ ರಂಗೇರಿದ್ದು, ಸದ್ಯದ ಮಟ್ಟಿಗೆ ಪ್ರಚಾರ ಕಾರ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಒಂದು ಹೆಜ್ಜೆ ಮುಂದೆ ಇರುವಂತೆ ಕಾಣುತ್ತಿದೆ. ಉಪಚುನಾವಣೆಗೆ ದಿನಾಂಕ ಘೋಷಣೆಯಾಗುವ ಕೇವಲ ಒಂದು ದಿನದ ಮೊದಲು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಸೇರಿ ಅರ್ಧ ಡಜನ್ ಸಚಿವರು ಬಾಗಲಕೋಟೆಗೆ ಬಂದು ಸಹಸ್ರಾರು ಜನರ ಸಮ್ಮುಖದಲ್ಲಿ ಬಿಮ್ಸ್‌ಗೆ ಶಿಲಾನ್ಯಾಸ ನೆರವೇರಿಸಿ ಹೋಗಿದ್ದರು.
ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಸಿಎಂ ಅಧಿಕೃತವಾಗಿ ಚುನಾವಣೆ ರಣಕಹಳೆ ಊದಿದರು. ದಿ. ಎಚ್ ವೈ ಮೇಟಿ ಅವರ ಕನಸಿನ ಮತ್ತು ಬಾಗಲಕೋಟೆ ಜಿಲ್ಲೆಯ ಜನರ ಬಹುದಿನಗಳ ಆಸೆಯಾದ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡುವ ಮೂಲಕ ಈಡೇರಿಸಿದ್ದೇವೆ. ಮುಂಬರುವ ಮರುಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ನೀವು ಗೆಲ್ಲಿಸಬೇಕು ಎಂದು ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ ಮೇಟಿ ಅವರಿಗೆ ಜಯವಾಗಲಿ ಎಂದು ಸಭಿಕರಿಂದ ಜೈಕಾರ ಹಾಕಿಸಿದ್ದರು.
ಅಂದು ಸಿಎಂ ಡಿಸಿಎಂ ಇಬ್ಬರೂ ಕಳೆದ 2023ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಬಿಜೆಪಿ ಬುಟ್ಟಿಗೆ ಕೈಹಾಕಿ ಗಮನಾರ್ಹ ಮತಗಳನ್ನು ಗಳಿಸಿ ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಿದ್ದ ಮಲ್ಲಿಕಾರ್ಜುನ ಚರಂತಿಮಠ ಅವರ ಮನೆಗೆ ಹೋಗಿ ಭೋಜನ ಸವಿಯುವ ಮೂಲಕ ಕಾಂಗ್ರೆಸ್ ಮತಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುವ ತಂತ್ರಗಾರಿಕೆ ಪ್ರಯೋಗಿಸಿದರು. ಅದರ ಮರುದಿನವೇ ಬಾಗಲಕೋಟೆ ಕ್ಷೇತ್ರದ ಇನ್ನೊಬ್ಬ ಪ್ರಭಾವಿ ಲಿಂಗಾಯತ ಮುಖಂಡ ಪ್ರಕಾಶ್ ತಪಶೆಟ್ಟಿ ಅವರನ್ನು ಬಿಟಿಡಿಎ ಅಧ್ಯಕ್ಷರಾಗಿ ನೇಮಕ ಮಾಡಿದ ಆದೇಶ ಸರ್ಕಾರದಿಂದ ಪ್ರಕಟಿಸಲಾಯಿತು. ಮತ್ತೆ ಹತ್ತು ದಿನಗಳಲ್ಲೇ ಬಾಗಲಕೋಟೆಗೆ ಬಂದು ತಮ್ಮ ಪಕ್ಷದ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಯಲ್ಲಿ ಸಿಎಂ ಡಿಸಿಎಂ ಆದಿಯಾಗಿ ನಾಲ್ಕು ಪ್ರಭಾವಿ ಸಚಿವರು ಉಪಸ್ಥಿತರಿದ್ದು, ಸಾರ್ವಜನಿಕ ಸಮಾರಂಭದಲ್ಲಿ ಮತ್ತೊಮ್ಮೆ ಉಮೇಶ ಮೇಟಿ ಅವರ ಪರವಾಗಿ ಮತ ಯಾಚಿಸಿದರು.
ಇದನ್ನೂ ಓದಿ: ಬಾಗಲಕೋಟೆ | ಯುಕೆಪಿ-3ರ ಭೂಸ್ವಾಧೀನ ಜಮೀನುದಾರರಿಗೆ ಪರಿಹಾರ ವಿತರಣೆ
ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರು ಸೇರಿದಂತೆ ಹಲವು ಪ್ರಮುಖರು ಕಳೆದ ಎರಡು ವಾರಗಳಿಂದ ಬಾಗಲಕೋಟೆಗೆ ಬಂದು ಹೋಗುವ ಮೂಲಕ ತಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಲು ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಕೆಲಸ ಮಾಡಿದ್ದಾರೆ. ಶಿವಾಜಿ ಜಯಂತಿ ಸಮಾರಂಭ ವನ್ನು ಬಿಜೆಪಿ ಪರ ಪ್ರಚಾರಕ್ಕೆ ಬಳಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಬಿಜೆಪಿಯವರು ಕೂಡ ಪ್ರಚಾರ ಕಾರ್ಯದಲ್ಲಿ ಹಿಂದೆ ಬಿದ್ದಿಲ್ಲ. ಅವರು ಕೂಡ ಹಲವು ತಂತ್ರಗಾರಿಕೆಗಳನ್ನು ಇಲ್ಲಿ ಗೆಲುವಿಗಾಗಿ ಬಳಸಿಕೊಳ್ಳುತ್ತಿದ್ದಾರೆ.

ಮುತ್ತು ನಾಯ್ಕರ
ಹಿರಿಯ ಪತ್ರಕರ್ತರು, ಬಾಗಲಕೋಟೆ



