ಆಮ್ ಜನತಾ ಉನ್ನಯನ್ ಪಾರ್ಟಿ ಹಾಗೂ ಎಐಎಂಐಎಂ ಪಕ್ಷ ತಮ್ಮ ಮೈತ್ರಿಯನ್ನು ಘೋಷಣೆ ಮಾಡಿವೆ.
ಆಮ್ ಜನತಾ ಉನ್ನಯನ್ ಪಾರ್ಟಿ ಮುಖ್ಯಸ್ಥ ಹುಮಾಯೂನ್ ಕಬೀರ್ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಜಂಟಿ ಸುದ್ದಿಗೋಷ್ಠಿಯನ್ನು ನಡೆಸಿ, ಈ ಬಾರಿಯ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಜೊತೆಗೂಡಿ ಕಣಕ್ಕಿಳಿಯಲಿದ್ದೇವೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹುಮಾಯೂನ್ ಕಬೀರ್, ಓವೈಸಿ ನನ್ನ ಹಿರಿಯ ಸಹೋದರ. ಈ ಬಾರಿಯ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ನಾವಿಬ್ಬರೂ ಜೊತೆಗೂಡಿ ಸ್ಪರ್ಧಿಸಲಿದ್ದೇವೆ. ಆಡಳಿತರೂಢ ತೃಣಮೂಲ ಕಾಂಗ್ರೆಸ್(ಟಿಎಂಸಿ)ಗೆ ಪಾಠ ಕಲಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಅಸ್ಸಾಂ ವಿಧಾನಸಭಾ ಚುನಾವಣೆ: ಪಕ್ಷಾಂತರಿಗಳಿಗೆ ಪಾಠ ಕಲಿಸುತ್ತಾರೆಯೇ ಮತದಾರರು?
ತೃಣಮೂಲ ಕಾಂಗ್ರೆಸ್ ಪಕ್ಷದಲಲ್ಲೇ ಇದ್ದು, ಭಿನ್ನಮತದ ಕಾರಣದಿಂದ ಉಚ್ಚಾಟನೆಗೊಂಡ ಬಳಿಕ ಹುಮಾಯೂನ್ ಕಬೀರ್, ಆಮ್ ಜನತಾ ಉನ್ನಯನ್ ಪಾರ್ಟಿ ಎಂಬ ಪಕ್ಷವನ್ನು ಕಟ್ಟಿಕೊಂಡಿದ್ದಾರೆ.
ಕಳೆದೆರಡು ವಿಧಾನಸಭಾ ಚುನಾವಣೆಗಳಲ್ಲಿ ಮಮತಾ ಬ್ಯಾನರ್ಜಿ ಅವರ ಆಪ್ತ ಬಳಗದಲ್ಲಿದ್ದುಕೊಂಡು ಅಲ್ಪ ಸಂಖ್ಯಾತರ ಮತಗಳನ್ನು ತೃಣಮೂಲ ಕಾಂಗ್ರೆಸ್ ಪಕ್ಷದ ಕಡೆಗೆ ಸೆಳೆಯಲು ಯಶಸ್ವಿಯಾಗಿದ್ದ ಹುಮಾಯೂನ್ ಕಬೀರ್, ಈ ಬಾರಿ ತಮ್ಮದೇ ಹೊಸ ಪಕ್ಷ ಕಟ್ಟಿಕೊಂಡಿದ್ದು, ಮಾತ್ರವಲ್ಲದೆ, ಓವೈಸಿ ಜೊತೆಗೂಡಿ ಸ್ಪರ್ಧಿಸುತ್ತಿದ್ದು, ಅಲ್ಪ ಸಂಖ್ಯಾತ ಮತಗಳ ಬಾಹುಳ್ಯ ಇರುವ ಕ್ಷೇತ್ರಗಳಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಸವಾಲೆಸೆಯಬಹುದು ಎಂದು ರಾಜಕೀಯ ವಿಶ್ಲೇಷಣೆ ಕೇಳಿ ಬರುತ್ತಿದೆ.




