ಮುಂಬರುವ 2026ರ ಐಪಿಎಲ್ ಆವೃತ್ತಿಯ ಹಿನ್ನೆಲೆಯಲ್ಲಿ ಕ್ಯಾಚ್ ಹಿಡಿಯುವಾಗ ಫೀಲ್ಡರ್‌ಗಳ ಚಲನೆಯ ಕುರಿತು ಬಿಸಿಸಿಐ ಐಪಿಎಲ್ ತಂಡಗಳ ನಾಯಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಇದರ ಜೊತೆಗೆ ಬಹುಚರ್ಚಿತ ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮದ ಕುರಿತು ಮಹತ್ವದ ಅಪ್‌ಡೇಟ್ ಅನ್ನು ಸಹ ಹಂಚಿಕೊಂಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಕ್ಯಾಚ್ ಹಿಡಿದ ಬಳಿಕ ಫೀಲ್ಡರ್ ಚೆಂಡು ಹಾಗೂ ತಮ್ಮ ದೇಹದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವವರೆಗೆ ಯಾವುದೇ ಸಂಭ್ರಮಾಚರಣೆ ಆರಂಭಿಸುವಂತಿಲ್ಲ. ನಿಯಂತ್ರಣ ಸಾಧಿಸಿದ ಬಳಿಕವಷ್ಟೇ ಆ ಕ್ಯಾಚ್ ಅನ್ನು ಮಾನ್ಯ ಮಾಡಲಾಗುವುದು ಎಂದು ತಂಡಗಳಿಗೆ ಸ್ಪಷ್ಟವಾಗಿ ಸೂಚಿಸಲಾಗಿದೆ.
ಕ್ಯಾಚ್ ನಿಯಮ (ಷರತ್ತು 33.3) ಏನು ಹೇಳುತ್ತದೆ?
ಆಟದ ಷರತ್ತುಗಳ ನಿಯಮ 33.3ರ ಪ್ರಕಾರ, “ಚೆಂಡು ಮೊದಲ ಬಾರಿಗೆ ಫೀಲ್ಡರ್‌ನ ಸಂಪರ್ಕಕ್ಕೆ ಬಂದ ಕ್ಷಣದಿಂದ ಕ್ಯಾಚ್ ಹಿಡಿಯುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಮತ್ತು ಆಟಗಾರನು ಚೆಂಡು ಹಾಗೂ ತನ್ನ ದೇಹದ ಚಲನೆಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದಾಗ ಮಾತ್ರ ಆ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತದೆ.”
ಈ ನಿಯಮ ಹೊಸದೇನಲ್ಲವಾದರೂ, ಬುಧವಾರ ನಡೆದ ಐಪಿಎಲ್ ನಾಯಕರ ಸಭೆಯಲ್ಲಿ ಬಿಸಿಸಿಐ ಇದರ ಪ್ರಾಮುಖ್ಯತೆಯನ್ನು ಮತ್ತೊಮ್ಮೆ ಒತ್ತಿಹೇಳಿದೆ. ಇತ್ತೀಚಿನ ಟಿ20 ವಿಶ್ವಕಪ್‌ನ ಕೆಲವು ವಿಡಿಯೊ ತುಣುಕುಗಳನ್ನು ಪ್ರದರ್ಶಿಸಿದ ಅಧಿಕಾರಿಗಳು, ಸಂಪೂರ್ಣ ನಿಯಂತ್ರಣದ ಕೊರತೆಯಿಂದಾಗಿ ಕ್ಯಾಚ್‌ಗಳನ್ನು ಅಮಾನ್ಯಗೊಳಿಸಿದ ಉದಾಹರಣೆಗಳನ್ನು ನಾಯಕರಿಗೆ ವಿವರಿಸಿದರು.
ಈ ನಿಯಮವನ್ನು ಮುಂಬರುವ ದಿನಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂಬ ಸ್ಪಷ್ಟ ಸಂದೇಶವನ್ನು ಸಭೆಯಲ್ಲಿ ನೀಡಲಾಯಿತು. ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಮತ್ತು ಎಲೈಟ್ ಅಂಪೈರ್ ನಿತಿನ್ ಮೆನನ್ ಅವರು 90 ನಿಮಿಷಗಳ ಈ ಸಭೆಯಲ್ಲಿ ಈ ವಿಷಯದ ಬಗ್ಗೆ ವಿಸ್ತೃತವಾಗಿ ಮಾತನಾಡಿದರು.
ಇದನ್ನು ಓದಿದ್ದೀರಾ? ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ
ಕನಿಷ್ಠ 2027ರವರೆಗೆ ಇರಲಿದೆ ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮ
ಸಭೆಯಲ್ಲಿ ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮವನ್ನು ಕನಿಷ್ಠ ಇನ್ನೆರಡು ಆವೃತ್ತಿಗಳವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ ಮತ್ತು ತಕ್ಷಣಕ್ಕೆ ಅದನ್ನು ಮರುಪರಿಶೀಲಿಸುವ ಯಾವುದೇ ಯೋಜನೆಯಿಲ್ಲ ಎಂದು ಖಚಿತಪಡಿಸಲಾಗಿದೆ.
ಕೆಲವು ಆಟಗಾರರು ಕಳವಳ ವ್ಯಕ್ತಪಡಿಸಿದ್ದರೂ, ಕನಿಷ್ಠ 2027ರ ಆವೃತ್ತಿಯವರೆಗೆ ಈ ನಿಯಮ ಜಾರಿಯಲ್ಲಿರುತ್ತದೆ ಎಂದು ಬಿಸಿಸಿಐ ಮತ್ತು ಐಪಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಅಕ್ಷರ್ ಪಟೇಲ್ ಅಸಮಾಧಾನ
ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಈ ನಿಯಮದ ಕುರಿತು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನನಗೆ ಈ ನಿಯಮ ಇಷ್ಟವಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನೊಬ್ಬ ಆಲ್-ರೌಂಡರ್. ಮೊದಲೆಲ್ಲ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ನೆರವಾಗುವ ಆಲ್-ರೌಂಡರ್‌ಗಳನ್ನು ಆಯ್ಕೆ ಮಾಡಲಾಗುತ್ತಿತ್ತು. ಆದರೆ ಈ ನಿಯಮದಿಂದಾಗಿ, ತಂಡಗಳು ಈಗ ಕೇವಲ ಸ್ಪೆಷಲಿಸ್ಟ್ ಆಟಗಾರರಿಗೆ (ಬ್ಯಾಟರ್ ಅಥವಾ ಬೌಲರ್) ಮಾತ್ರ ಆದ್ಯತೆ ನೀಡುತ್ತಿವೆ” ಎಂದು ಅವರು ಹೇಳಿದ್ದಾರೆ.
ಈ ನಿಯಮವು ಆಲ್-ರೌಂಡರ್‌ಗಳ ಬೆಳವಣಿಗೆಗೆ ಅಡ್ಡಿಯಾಗಬಹುದು ಎಂಬ ಬಲವಾದ ನಂಬಿಕೆ ಕ್ರಿಕೆಟ್ ವಲಯದಲ್ಲಿದೆ. ಆದರೆ, 2027ರ ಆವೃತ್ತಿಯ ನಂತರವಷ್ಟೇ ಈ ನಿಯಮದ ಅಧಿಕೃತ ಮರುಪರಿಶೀಲನೆ ನಡೆಯಲಿದೆ ಎಂದು ಅಧಿಕಾರಿಗಳು ಸುಳಿವು ನೀಡಿದ್ದಾರೆ.
ಸಭೆಯಲ್ಲಿ ಪಾಲ್ಗೊಂಡಿದ್ದ ಫ್ರಾಂಚೈಸಿ ಪ್ರತಿನಿಧಿಯೊಬ್ಬರು ಮಾತನಾಡಿ, “ಈ ಬಗ್ಗೆ ಚರ್ಚೆ ನಡೆಯಿತು ಮತ್ತು ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಕನಿಷ್ಠ ಇನ್ನೆರಡು ವರ್ಷಗಳ ಕಾಲ ಇರಲಿದೆ ಎಂಬುದನ್ನು ಸಭೆಯಲ್ಲಿ ನಮ್ಮೆಲ್ಲರಿಗೂ ಸ್ಪಷ್ಟಪಡಿಸಲಾಯಿತು” ಎಂದು ದೃಢಪಡಿಸಿದ್ದಾರೆ.




