ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕುವ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವ ನೆಪದಲ್ಲಿ, ಸಮಾಜಕ್ಕೆ ಅಪಾಯಕಾರಿ ಎಂದು ಅನುಮಾನ ಬಂದ ವ್ಯಕ್ತಿಯನ್ನ ಯಾವುದೇ ವಿಚಾರಣೆ ಇಲ್ಲದೆ ಒಂದು ವರ್ಷದವರೆಗೆ ಜೈಲಿನಲ್ಲಿರಿಸುವ ಅವಕಾಶ ಕಲ್ಪಿಸುವ ಮಸೂದೆಯೊಂದಕ್ಕೆ ಪಶ್ಚಿಮ ಬಂಗಾಳ ಅನುಮತಿಸಿದೆ.
ನಿನ್ನೆ (ಜೂನ್ 29) ವಿಧಾನಸಭೆಯಲ್ಲಿ ಅಂಗೀಕಾರಗೊಂಡಿರುವ ‘ಪಶ್ಚಿಮ ಬಂಗಾಳ ಸಾರ್ವಜನಿಕ ಸುರಕ್ಷತೆ ಮತ್ತು ಸಾಮಾಜಿಕ ಚಟುವಟಿಕೆಗಳ ನಿಯಂತ್ರಣ ಮಸೂದೆ-2026’ ರಾಜ್ಯದ ರಾಜಕೀಯ ಮತ್ತು ಕಾನೂನು ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ಅನ್ವಯ, ಸಮಾಜಕ್ಕೆ ಅಪಾಯಕಾರಿ ಎಂದು ಪರಿಗಣಿಸಲ್ಪಟ್ಟ ಯಾವುದೇ ವ್ಯಕ್ತಿಯನ್ನು, ಯಾವುದೇ ದೀರ್ಘಕಾಲಿಕ ವಿಚಾರಣೆಯಿಲ್ಲದೆ ಸುಮಾರು 12 ತಿಂಗಳುಗಳ ವರೆಗೆ ಕಸ್ಟಡಿಯಲ್ಲಿ ಇರಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಮಸೂದೆಯಡಿಯಲ್ಲಿ ಬಂಧಿತರಾದ ವ್ಯಕ್ತಿಗಳಿಗೆ ಕಾನೂನು ನೆರವು ಪಡೆಯುವ ಹಕ್ಕಿನ ಮೇಲೆ ನಿರ್ಬಂಧ ಹೇರಲಾಗಿದೆ. ಮಸೂದೆಯ ಸೆಕ್ಷನ್ 10(4) ರ ಪ್ರಕಾರ, ಬಂಧಿತ ವ್ಯಕ್ತಿಗೆ ಸಲಹಾ ಮಂಡಳಿಯ ಮುಂದೆ ವಕೀಲರ ಮೂಲಕ ವಾದ ಮಂಡಿಸಲು ಸಾಮಾನ್ಯವಾಗಿ ಅವಕಾಶವಿರುವುದಿಲ್ಲ. ಆದರೂ, ವಿಶೇಷ ಸಂದರ್ಭಗಳಲ್ಲಿ ಮಂಡಳಿಯು ಈ ನಿಷೇಧವನ್ನು ಹಿಂಪಡೆಯಲು ಅವಕಾಶವಿದ್ದರೂ, ಅದು ಲಿಖಿತ ಆದೇಶದ ಮೂಲಕವೇ ಆಗಬೇಕು ಎಂಬ ನಿಯಮವನ್ನು ವಿಧಿಸಲಾಗಿದೆ. ಈ ಪ್ರಕರಣಗಳನ್ನು ಪರಿಶೀಲಿಸಲು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಲಹಾ ಮಂಡಳಿಯೊಂದನ್ನು ರಚಿಸಲಾಗುತ್ತದೆ. ಈ ಕಾಯ್ದೆಯ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ.
ಈ ಮಸೂದೆಯನ್ನು ಮಂಡಿಸಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು, ರಾಜ್ಯದಲ್ಲಿ ರಾಜಕಾರಣದ ಅಪರಾಧೀಕರಣವನ್ನು ತಡೆಯಲು ಮತ್ತು ಕಳೆದ 15 ವರ್ಷಗಳ ಟಿಎಂಸಿ ಆಳ್ವಿಕೆಯಲ್ಲಿ ನಡೆದ ಅರಾಜಕತೆಯನ್ನು ಸರಿಪಡಿಸಲು ಈ ಕಠಿಣ ಕಾನೂನು ಅನಿವಾರ್ಯ ಎಂದು ಸಮರ್ಥಿಸಿಕೊಂಡಿದ್ದಾರೆ. ಮಹಾರಾಷ್ಟ್ರ, ದೆಹಲಿ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿಯೂ ಇಂತಹ ಕಾನೂನುಗಳು ಜಾರಿಯಲ್ಲಿರುವುದನ್ನು ಉಲ್ಲೇಖಿಸಿರುವ ಅವರು, ಈ ಕಾನೂನನ್ನು ರಾಜಕೀಯ ದ್ವೇಷ ಸಾಧಿಸಲು ಬಳಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದಿದ್ದಾರೆ.
ಈ ಮಸೂದೆಯನ್ನು ಟಿಎಂಸಿ ತೀವ್ರವಾಗಿ ಖಂಡಿಸಿದ್ದು, ಇದು ಪ್ರಜಾಪ್ರಭುತ್ವದ ಅಡಿಪಾಯವನ್ನೇ ಬುಡಮೇಲು ಮಾಡಲಿದೆ ಎಂದು ಆರೋಪಿಸಿದೆ.
ಇದನ್ನೂ ಓದಿ: ಹಿಂದೂ ಮಹಾಸಾಗರದ ಸ್ಫಟಿಕ ʼಸೆಷಲ್ಸ್ʼ: ಭಾರತದ ಸಂಸ್ಕೃತಿಯ ಕಂಪು ಹೊತ್ತ ಸ್ವರ್ಗ!
ಮಾಜಿ ಐಪಿಎಸ್ ಅಧಿಕಾರಿ ಪ್ರಸೂನ್ ಬ್ಯಾನರ್ಜಿ ಅವರ ಪ್ರಕಾರ, ಜಿಲ್ಲಾಧಿಕಾರಿಗಳಿಗೆ ಇಷ್ಟೊಂದು ಹೆಚ್ಚಿನ ಮಟ್ಟದ ಅಧಿಕಾರ ನೀಡುವುದು ರಾಜ್ಯದಲ್ಲಿ ಸರ್ವಾಧಿಕಾರಿ ಧೋರಣೆಗೆ ನಾಂದಿ ಹಾಡಲಿದೆ. ಇದು ರಾಜ್ಯದೊಳಗೆ ಮತ್ತೊಂದು ರಾಜ್ಯವನ್ನು ಸೃಷ್ಟಿಸುವ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಎಚ್ಚರಿಸಿದ್ದಾರೆ.
ವಿದ್ಯಾರ್ಥಿ ಸಂಘಟನೆಗಳು ಮತ್ತು ಶಾಂತಿಯುತ ಪ್ರತಿಭಟನಾಕಾರರನ್ನು ಗುರಿಯಾಗಿಸಿಕೊಳ್ಳಲು ಸರ್ಕಾರ ಈ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುವ ಭಯವನ್ನು ಅನೇಕ ಶಾಸಕರು ವ್ಯಕ್ತಪಡಿಸಿದ್ದು, ಈ ಕಾನೂನು ಮುಂದೆ ನ್ಯಾಯಾಲಯದ ಪರಿಶೀಲನೆಯಲ್ಲಿ ಉಳಿಯುವುದು ಕಷ್ಟ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಈ ಹೊಸ ಕಾನೂನು ಜಾರಿಯಾದ ನಂತರದ ದಿನಗಳಲ್ಲಿ ಪಶ್ಚಿಮ ಬಂಗಾಳದ ರಾಜಕೀಯ ಪರಿಸ್ಥಿತಿ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.




