ಅಂತಾರಾಷ್ಟ್ರೀಯ ಅಸ್ಟೆರಾಯ್ಡ್‌ ದಿನ | ಭೂಮಿಯ ಮೇಲಿನ ಉಲ್ಕಾಘಾತದ ಕುರುಹುಗಳ ಕುತೂಹಲಕರ ವಿಶ್ಲೇಷಣೆ

Date:

ಆಕಾಶದಿಂದ ಬಿದ್ದ ಒಂದು ಕಲ್ಲು ಲಕ್ಷಾಂತರ ವರ್ಷಗಳ ನಂತರವೂ ಭೂಮಿಯ ಮೇಲೆ ಗಾಯದ ಗುರುತು ಬಿಟ್ಟಿರಬಹುದು. ಅದನ್ನು ಭೂಮಿ ತನ್ನ ಕಲ್ಲುಗಳಲ್ಲಿ, ಪದರಗಳಲ್ಲಿ ನೆನಪಿಟ್ಟುಕೊಳ್ಳುತ್ತದೆ. ಆಕಾಶದಿಂದ ಬೀಳುವ ಕ್ಷುದ್ರಗಳ ಅಥವಾ ಉಲ್ಕೆಗಳ ಅರಿಯುವ ಅಂತಾರಾಷ್ಟ್ರೀಯ ಅಸ್ಟೆರಾಯ್ಡ್‌ ದಿನ ಇಂದು...  

ಸುಮಾರು 85 ದಶಲಕ್ಷ ವರ್ಷಗಳ ಹಿಂದೆ 1000 ಅಡಿಗಳಷ್ಟು ಅಗಲವಾದ ಒಂದು ಬೃಹತ್‌ ಉಲ್ಕೆಯು ಉಂಟುಮಾಡಿದ ಕುಳಿಯನ್ನು ಕಣ್ಣಾರೆ ಕಂಡು, ಅದರ ಒಳಗೆಲ್ಲಾ ಓಡಾಡಿ ನೋಡಿದ ಮೇಲೆ ಹಾಗೆ ಹೇಳಬೇಕು ಅನ್ನಿಸಿತು. ಅಂತಾರಾಷ್ಟ್ರೀಯ ಅಸ್ಟೆರಾಯ್ಡ್‌ ದಿನದ ಹಿನ್ನೆಲೆಯಲ್ಲಿ ಅಮೆರಿಕದ ಅಲಬಾಮ ರಾಜ್ಯದ ರಾಜಧಾನಿ ಮಂಟ್ಗಾಮರಿಯ ನಗರದ ಹತ್ತಿರದ ವಿಟಂಪ್ಕದಲ್ಲಿರುವ ಸರಾಸರಿ 7.6 ಕಿ.ಮೀ ವ್ಯಾಸದ ಉಲ್ಕೆಯ ಕುಳಿಯನ್ನು ಪರಿಚಯಿಸುತ್ತಾ, ಈ ಕ್ಷುದ್ರಗ್ರಹಗಳ ಅಥವಾ ಉಲ್ಕೆಗಳ ಜಗತ್ತನ್ನು ತೆರೆದಿಡುವ ವಿವರಗಳತ್ತ ನೋಡೋಣ.

- Advertisement -

ಪ್ರತೀ ವರ್ಷ ಜೂನ್‌ 30ರಂದು ಅಂತಾರಾಷ್ಟ್ರೀಯ ಅಸ್ಟೆರಾಯ್ಡ್‌ ದಿನ ಎಂಬುದಾಗಿ ಆಚರಿಸಲಾಗುತ್ತದೆ. ರಷಿಯಾದ ಸೈಬಿರಿಯಾಲ್ಲಿರುವ ಟಂಗೂಸ್ಕಾ ಅರಣ್ಯ ಪ್ರದೇಶದಲ್ಲಿ ಕಳೆದ ಶತಮಾನದ 1908ರ ಜೂನ್‌ 30ರ ಮುಂಜಾನೆ ಅಲ್ಲಿನ ಸ್ಥಳೀಯ ಸಮಯ 7.17ರ ಸುಮಾರಿಗೆ ಉಲ್ಕೆಯೊಂದು ಅಪ್ಪಳಿಸಿತ್ತು. ಆಗಸದಲ್ಲಿ ಅದು ಉರಿಯುತ್ತಾ ಪ್ರತೀ ಸೆಕೆಂಡಿಗೆ 27 ಕಿ.ಮೀ ವೇಗದಲ್ಲಿ ಬಿದ್ದ ರಭಸಕ್ಕೆ ಸುಮಾರು 2,150 ಚದರ ಕಿ.ಮೀ ವಿಸ್ತೀರ್ಣದಲ್ಲಿ ಆಘಾತವಾಗಿತ್ತು. ಅರಣ್ಯ ಪ್ರದೇಶವಾದ್ದರಿಂದ ಸಮೀಪದಲ್ಲಿದ್ದ ಕೇವಲ ಮೂವರು ಮಾತ್ರವೇ ಮೃತ ಪಟ್ಟಿದ್ದರು. ಮಾನವ ಇತಿಹಾಸದಲ್ಲಿ ಆ ಪ್ರಮಾಣದ ಉಲ್ಕೆಯೊಂದು ಬಿದ್ದಿದ್ದು ಕಂಡುಬಂದಿರಲಿಲ್ಲ. ಈ ಹಿಂದೆ ಬಿದ್ದವುಗಳೆಲ್ಲಾ ಇತಿಹಾಸ ಪೂರ್ವದವು. ಅಂತಹ ಇತಿಹಾಸದ ಪೂರ್ವದಲ್ಲಿ ಬಿದ್ದವುಗಳಲ್ಲಿ ಒಂದರ ಪರಿಣಾಮವಾದ ವಿಟಂಪ್ಕಾ ಉಲ್ಕಾಕುಳಿಯ ಪರಿಚಯವನ್ನು ಮತ್ತು ಭಾರತದಲ್ಲಿಯೂ ಅಂತಹ ಒಂದೆರಡರ ಬಗ್ಗೆಯೂ ಕಡೆಯಲ್ಲಿ ತಿಳಿಯೋಣ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಮುಂದೆ 1908ರ ನಂತರ,  ಮತ್ತೊಮ್ಮೆ ರಷಿಯಾದಲ್ಲಿಯೇ 2013ರ ಫೆಬ್ರವರಿ 15ರಂದು ಸುಮಾರು 10,000 ಟನ್ನುಗಳ ಭಾರದ ಉಲ್ಕೆಯೊಂದು ಪ್ರತೀ ಸೆಕೆಂಡಿಗೆ 19.2 ಕಿ.ಮೀ ವೇಗದಲ್ಲಿ ಅಪ್ಪಳಿಸಿದಾಗ ಸಾವಿರಾರು ಜನರು ತೊಂದರೆಗೆ ಒಳಗಾಗಿ, ನೂರಾರು ಜನರು ಕಣ್ಣುಗಳನ್ನು ಕಳೆದುಕೊಂಡಿದ್ದರು. ಇದರಿಂದಾಗಿ ಸಾವಿರಾರು ಮನೆ, ಶಾಲಾ ಕಾಲೇಜುಗಳ ಅಂಗಡಿ ಮುಗ್ಗಟ್ಟುಗಳ ಕಟ್ಟಡಗಳು ಪ್ರತಿಶತ 90ಕ್ಕೂ ಹೆಚ್ಚಿನ ಮಟ್ಟದಲ್ಲಿ ಹಾನಿಯಾಗಿದ್ದವು.

ಈ ಆಘಾತದ ನಂತರ 2014ರಲ್ಲಿ ಖ್ಯಾತ ವಿಜ್ಞಾನಿ ಸ್ಟೀಫನ್‌ ಹಾಕಿಂಗ್‌ ಸಮೇತ ಅನೇಕರ ಸಾರ್ವಜನಿಕ ಒತ್ತಾಯದಿಂದ ಉಲ್ಕೆಗಳ ಕುರಿತಂತೆ ಮನವರಿಕೆ ಮಾಡಿಕೊಡುವಂತಹ ದಿನಕ್ಕೆ ಮೊದಲಾಯಿತು. ವಿಶ್ವಸಂಸ್ಥೆಯು ಮೊಟ್ಟ ಮೊದಲ ಉಲ್ಕಾಘಾತದ ದಿನವಾದ ಜೂನ್‌ 30 ಅನ್ನು ಅಂತಾರಾಷ್ಟ್ರೀಯ ಆಸ್ಟೆರಾಯ್ಡ್‌ ದಿನವೆಂದು ನಿಗದಿ ಪಡಿಸಿ, 2016ರಿಂದ ಆಚರಿಸಲು ಆರಂಭಿಸಿತು. ಅಲ್ಲಿಂದ ಮುಂದೆ ಪ್ರತೀ ವರ್ಷ ಜೂನ್‌ 30ರಂದು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಆಸ್ಟೆರಾಯ್ಡ್‌ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದೊಂದು ಸಾರ್ವಜನಿಕವಾಗಿ ಅಸ್ಟೆರಾಯ್ಡ್‌ ಅಥವಾ ಕ್ಷುದ್ರಗಳ ಅಥವಾ ಉಲ್ಕೆಗಳ ಕುರಿತಂತೆ ಜನಸಾಮಾನ್ಯರಿಗೂ ಅರಿವು ನೀಡುವ ಆಚರಣೆಯಾಗಿದೆ. ಏಕೆಂದರೆ ನಮ್ಮ ಸೌರಮಂಡಲದಲ್ಲಿ ಈ ಕ್ಷುದ್ರಗ್ರಹಗಳ ದೊಡ್ಡ ಜಗತ್ತೇ ಇದೆ. ಸಾಲದಕ್ಕೆ ಸರಿಯಾದ ದಿಕ್ಕು ದೆಸೆಯಿಲ್ಲದ ಅವುಗಳ ಹಾರಾಟ ಎಂದೋ ಅಪರೂಪಕ್ಕೆ ಒಮ್ಮೆಯಾದರೂ ನೆಲದ ಕಡೆ ಪಯಣಿಸುವ ಸಾಧ್ಯತೆಗಳಿವೆ. 

ಕ್ಷುದ್ರಗ್ರಹಗಳ ಜಗತ್ತು
ಅಸ್ಟೆರಾಯ್ಡ್‌ (Asteroid) ಎಂಬ ಪದವು ಗ್ರೀಕ್‌ ಮೂಲದ ‘ನಕ್ಷತ್ರದ ತರಹ’ ಎಂಬರ್ಥದ್ದು. ಕಾರಣ ಸಹಜವಾಗಿ ಉರಿಯುವ ಉಲ್ಕೆಗಳನ್ನು ನಾವು ನೋಡಿಯೇ ಇರುತ್ತೇವೆ. ಅಲ್ಲದೆ ಪ್ರತೀ ಸೆಕೆಂಡಿಗೂ ಹತ್ತಾರು ಕಿ.ಮೀ ವೇಗದಲ್ಲಿ ಅವು ಬೀಳುವ ರಭಸಕ್ಕೆ ಭೂಮಿಯ ವಾತಾವರಣದಲ್ಲಿ ಉರಿದು ಪ್ರಕಾಶಮಾನವಾಗಿ ಬೆಂಕಿಯ ಉಂಡೆಗಳಂತೆ ಕಾಣುತ್ತವೆ. ಚಿಕ್ಕ –ಪುಟ್ಟವು ಆಗಸದಲ್ಲೇ ಸಂಪೂರ್ಣ ಉರಿದು ಹೋಗುತ್ತವೆ. ಭೂಮಿಯ ಇತಿಹಾಸದ ಆದಿಯಲ್ಲಿ ಬಿದ್ದವುಗಳೂ ಅಪರೂಪಕ್ಕೆ ಗುರುತುಗಳನ್ನು ಉಳಿಸಿರುತ್ತವೆ. ಅದಕ್ಕೆ ಆರಂಭದಲ್ಲೇ ನಾನು ಹೇಳಿದ್ದು, “ಆದಿಯಲ್ಲಿ ಭೂಮಿಯು ಅನುಭವಿಸಿದ ಗಾಯದ ಗುರುತುಗಳನ್ನು ನೆನಪಿಟ್ಟುಕೊಂಡಿರುತ್ತದೆ” ಅಂತ!

ಸೌರ ಮಂಡಲದಲ್ಲಿ ಮೂರನೆ ಸ್ಥಾನ ಭೂಮಿಯದು. ನಾಲ್ಕನೆಯ ಸ್ಥಾನ ಮಂಗಳ ಗ್ರಹದ್ದು. ಐದನೆಯ ಸ್ಥಾನ ಗುರು ಗ್ರಹದ್ದು. ಈ ಮಂಗಳ ಮತ್ತು ಗುರುವಿನ ಮಧ್ಯೆ ಇರುವ ಸುಮಾರು 55 ಕೋಟಿ ಕಿ.ಮೀಗಳ ಜಾಗದಲ್ಲಿ ಏನಿಲ್ಲವೆಂದರೂ 15 ಕೋಟಿ ಕಿ.ಮೀ ಅಗಲದಲ್ಲಿ, ಡೊನಟ್‌ (Doughnut) ಆಕಾರದ ಅಸ್ಟೆರಾಯ್ಡ್‌ ಬೆಲ್ಟ್‌ ಇದೆ. ಅದರಲ್ಲಿ ಈಗಾಗಲೆ ಗುರುತಿಸಿದಂತೆ ಹತ್ತಾರು ಲಕ್ಷಗಳಿಗೂ ಹೆಚ್ಚು ಕ್ಷುದ್ರಗ್ರಹಗಳಿವೆ. ಅವುಗಳಲ್ಲಿ ಸುಮಾರು 200ರಷ್ಟು 100 ಕಿ.ಮೀ.ಗೂ ಹೆಚ್ಚು ವ್ಯಾಸವುಳ್ಳವು. ಸುಮಾರು 7 ರಿಂದ 10 ಲಕ್ಷದಷ್ಟು ಒಂದು ಕಿ.ಮೀ ಅಥವಾ ಅದಕ್ಕಿಂತ ಹೆಚ್ಚಿನ ಗಾತ್ರದವು. ಇವೆಲ್ಲವೂ ಸೂರ್ಯನ ಸುತ್ತ ನಮ್ಮ ಭೂಮಿಯ ಹಾಗೆ ಸುತ್ತುತ್ತಲೇ ಇವೆ. ಜೊತೆಗೆ ಮಂಗಳ ಮತ್ತು ಗುರುಗ್ರಹಗಳ ಹಿಡಿತದಲ್ಲಿ ಮಧ್ಯೆ ಸುತ್ತುತ್ತಲಿವೆ. ಲಕ್ಷಾಂತರ ಸಂಖ್ಯೆಯಲ್ಲಿದ್ದರೂ ಅವುಗಳ ನಡುವೆಯ ದೂರವೂ ಕೂಡ ತುಂಬಾ ಹೆಚ್ಚು. ಪ್ರತಿಯೊಂದು ಕ್ಷುದ್ರಗ್ರಹಗಳ ನಡುವೆಯೂ ಕಡಿಮೆ ಎಂದರೂ ಎಂಟು–ಹತ್ತು ಲಕ್ಷ ಕಿ.ಮೀಗಳ ಅಂತರವಿದೆ. ಹಾಗಾಗಿ ಅವುಗಳ ಮಧ್ಯೆ ಯಾವುದಾದರೂ ವ್ಯೂಮ ನೌಕೆ ಹಾಯ್ದು ಹೋದರೆ, ಡಿಕ್ಕಿಯಾಗುವ ಸಾಧ್ಯತೆಯು ನೂರಾರು ಕೋಟಿಗಳಲ್ಲಿ ಒಂದು! ಆದರೂ ಅವುಗಳಲ್ಲಿ ಎಲ್ಲೋ ಲಕ್ಷಕ್ಕೊಮ್ಮೆಯಂತೆ ಆಯ ತಪ್ಪಿ ಬೀಳುವ ಒಂದೋ ಎರಡೋ ಸ್ವಲ್ಪ ದೊಡ್ಡವಾದರಂತೂ ಭೂಮಿಗೆ ಕಷ್ಟ–ನಷ್ಟ ತಪ್ಪಿದ್ದಲ್ಲ! ಆದರೂ ಹಾಗೆ ಬರುವ ದಾರಿಯಲ್ಲಿ ಮಂಗಳನ ಹಾದು ಬರಬೇಕು.

WhatsApp Image 2026 06 26 at 10.48.20 1
ಕ್ಷುದ್ರಗ್ರಹವೊಂದು ಆಗಸದ ಗಾಳಿಯಲ್ಲಿ ಸಿಡಿದು ಭೂಮಿಯನ್ನು ತಲುಪಿದ ಒಂದು ಚೂರು

ಈ ಕ್ಷುದ್ರಗ್ರಹಗಳ ಬೆಲ್ಟ್‌ನಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಇರುವ ಅವುಗಳ ನಡುವೆಯೂ ಡಿಕ್ಕಿಗಳಾಗುವುದುಂಟು. ಆಗ ಸಿಡಿದ ಸಣ್ಣ–ಪುಟ್ಟ ಚೂರುಗಳೂ ಬೆಲ್ಟ್‌ನಿಂದ ತಪ್ಪಿಸಿಕೊಂಡು ಭೂಮಿಯ ಕಡೆಗೆ ಬಂದೇ ಬರುತ್ತವೆ. ಅಂತಹ ಸಣ್ಣ–ಪುಟ್ಟ ಚೂರುಗಳೇ ಆಕಸ್ಮಿಕವಾಗಿ ಆಗಸದಲ್ಲಿ ನಾವು ಕಾಣುವ ‘ಶೂಟಿಂಗ್ ಸ್ಟಾರ್ಸ್‌’ ಎಂದು ಕರೆಯುವ ಉರಿದು ಬೀಳುವ ಉಲ್ಕೆಗಳು. ಈವರೆವಿಗೂ ನಮ್ಮ ಭೂಮಿಯ ಮೇಲೆ ಗುರುತಿಸಿರುವ 50,000ಕ್ಕೂ ಹೆಚ್ಚಿನ ಉಲ್ಕೆಯ ಚೂರುಗಳಲ್ಲಿ ಪ್ರತಿಶತ 99.8ರಷ್ಟು ಅಸ್ಟೆರಾಯ್ಡ್‌ ಬೆಲ್ಟ್‌ನಿಂದ ಬಂದವುಗಳೇ ಎಂದು ಅಂದಾಜಿಸಿ ತೀರ್ಮಾನಿಸಲಾಗಿದೆ.

ಇಡೀ ಕ್ಷುದ್ರಗ್ರಹಗಳ ಬೆಲ್ಟ್‌ನಲ್ಲಿ ಕೇಂದ್ರದ ಕಡೆಗೆ ಇರುವವು ಸಿಲಿಕಾನ್‌ ಮೂಲದವು. ಅಂದರೆ ನಮ್ಮ ಬೆಣಚುಕಲ್ಲುಗಳಂತೆ. ಬೆಲ್ಟ್‌ನ ಅಂಚಿನ ಕಡೆಯಲ್ಲಿ ಇರುವ ಕ್ಷುದ್ರಗ್ರಹಗಳು ಇಂಗಾಲದ ಮೂಲದವು. ಇವೆರಡರ ಒಳಗೂ ಕಬ್ಬಿಣ ಮುಂತಾದ ಲೋಹಗಳೂ ಇದ್ದಿರಬಹುದು. ಹೆಚ್ಚಿನ ಪಾಳು ಇರುವ ಮೂಲವಸ್ತುಗಳಿಂದ ಹಾಗೆ ಗುರುತಿಸಲಾಗಿದೆ.

ಸಾಮಾನ್ಯವಾಗಿ ದೊಡ್ಡ ಗಾತ್ರದವುಗಳನ್ನು ಅಸ್ಟೆರಾಯ್ಡ್‌ ಅಥವಾ ಕ್ಷುದ್ರಗ್ರಹಗಳು ಎಂದು ಕರೆಯುತ್ತಾರೆ. ಇನ್ನು ಮಿಟಿಯೊರಯ್ಡ್ ಅಂದರೆ ಉರಿದು ಬೀಳುವ ಉಲ್ಕೆಗಳು ಗಾತ್ರದಲ್ಲಿ ಚಿಕ್ಕವು. ಭೂಮಿಯ ವಿಕಾಸದ ಸಂದರ್ಭದಲ್ಲಿ ಇಂತಹ ದೊಡ್ಡ ದೊಡ್ಡ ಕ್ಷುದ್ರಗ್ರಹಗಳು ಉಲ್ಕೆಗಳಾಗಿ ನೆಲವನ್ನು ಅಪ್ಪಳಿಸಿವೆ. ಅಂತಹವುಗಳಲ್ಲಿ, ತುಂಬಾ ಜಾಗರೂಕವಾಗಿ ಇಂದಿಗೂ ಗುರುತುಗಳನ್ನು ಕಾಪಾಡಿಕೊಂಡು ಬಂದಿರುವ ಕುಳಿಯೇ ನಾನು ಓಡಾಡಿ ನೋಡಿದ ವಿಟಂಪ್ಕಾ ಕುಳಿ.

ಉಲ್ಕೆಯ ಕುಳಿಗಳನ್ನು ಗುರುತಿಸಿದ್ದು ಹೇಗೆ?
ಭೂಮಿಯ ಮೇಲೆ ಉಲ್ಕೆಯಿಂದಾದ ಕುಳಿಗಳಿರುವ ಬಗ್ಗೆ ಸಹಜವಾದ ಅಚ್ಚರಿ ಹಾಗೂ ಅನುಮಾನಗಳಿವೆ. ಇಡೀ ಭೂಮಿಯಲ್ಲಿ ನೂರಾರು ಕುಳಿಗಳು ಇರುವುದಲ್ಲದೆ ನಮ್ಮ ದೇಶದಲ್ಲೂ ಉಲ್ಕಾ ಕುಳಿಗಳಿವೆ. ಚಂದ್ರನ ಮೇಲಿನ ಕುಳಿಗಳಂತೂ ನಮಗೆಲ್ಲಾ ಸಾಮಾನ್ಯ ತಿಳಿವಳಿಕೆಯೇ ಸರಿ. ಒಂದು ಸಾಮಾನ್ಯ ದೂರದರ್ಶಕದಿಂದಲೂ ಚಂದ್ರನ ಮೇಲಿರುವ ಕುಳಿಗಳನ್ನು ಕಾಣಬಹುದು. ಭೂಮಿಯ ಮೇಲೆ ಜ್ವಾಲಾಮುಖಿಗಳಿಂದ ಆದ ಕುಳಿಗಳು (Volcanic Craters) ತುಂಬಾ ಸಹಜವಾದವು. ಉಲ್ಕೆಯಿಂದ ಡಿಕ್ಕಿಯಾಗಿ ಆದದ್ದಾದರೂ ಹೇಗೆ? ಅಲ್ಲದೆ ಎಂದೋ ಆಗಿರುವ ಉಲ್ಕೆಯ ಕುಳಿಗಳನ್ನು ಇತ್ತೀಚೆಗೆ ಗುರುತಿಸಿರುವುದಾದರೂ ಹೇಗೆ? ಜ್ವಾಲಾಮುಖಿ ಕುಳಿಗಳಿಂದ ಈ ಉಲ್ಕೆಯ ಡಿಕ್ಕಿಯಿಂದ ಆಗಿರುವ ಕುಳಿಗಳನ್ನು ಭಿನ್ನವಾಗಿ ಗುರುತಿಸುವುದಾದರೂ ಹೇಗೆ? ಇಂತಹ ಕುತೂಹಲದ ಪ್ರಶ್ನೆಗಳಿಗೆ ಉತ್ತರಗಳು ಇಲ್ಲಿವೆ. ಜೊತೆಗೆ ಭೂವಿಜ್ಞಾನದ ಇತಿಹಾಸದಲ್ಲಿ ಈ ಕುಳಿಗಳ ಅರಿವಿನ ಪ್ರಮುಖವಾದ ಹಾಗೂ ಗುರುತರವಾದ ಹಾದಿಯನ್ನೂ, ಜೊತೆಗೆ ನಮ್ಮ ದೇಶದಲ್ಲೂ ಇರುವ ಉಲ್ಕೆಯ ಕುಳಿಗಳನ್ನೂ ಪರಿಚಯಿಸುವ ಉದ್ದೇಶವೂ ಇಲ್ಲಿದೆ.

ಸಾಮಾನ್ಯವಾಗಿ ಜ್ವಾಲಾಮುಖಿಗಳ ಕುಳಿಗಳ (Volcanic Craters) ಬಗ್ಗೆ ಶಾಲಾ ವಿಜ್ಞಾನದ ಪಾಠಗಳಲ್ಲಿ ಅಥವಾ ಸುದ್ದಿಗಳಲ್ಲಿ ಓದಿರುತ್ತೇವೆ. ಆದರೆ ನೆಲದಲ್ಲೂ ಉಂಟಾಗಿರುವ ಉಲ್ಕಾಕುಳಿ(Impact Crater)ಗಳ ಬಗೆಗಿನ ಸುದ್ದಿಗಳು ಒಂದರ್ಥದಲ್ಲಿ ಹೊಸದಾದವು ಮತ್ತು ವಿಜ್ಞಾನದ ಚರ್ಚೆಯಲ್ಲೂ ತೀರಾ ತಡವಾಗಿ ಒಪ್ಪಿತವಾದಂತಹವು. ಜ್ಞಾಲಾಮುಖಿಗಳ ಚಟುವಟಿಕೆಗಳು ನಿರಂತರವಾದ ಕ್ರಿಯೆಗಳಾಗಿದ್ದು ಅವುಗಳು ಉಂಟುಮಾಡಿರುವ ಕುಳಿಗಳು ಹೆಚ್ಚು ಪರಿಚಿತವಾಗಿವೆ. ಆದರೆ ಉಲ್ಕಾಕುಳಿಗಳು ಅಪರೂಪದವು ಎಂದು ಅಂದುಕೊಂಡಿದ್ದೇವೆ ಅಷ್ಟೇ! ಇಡೀ ಭೂಜಗತ್ತಿನಲ್ಲಿ ಸುಮಾರು 190ಕ್ಕೂ ಹೆಚ್ಚು ಉಲ್ಕಾಕುಳಿ(Impact Crater)ಗಳು ಇವೆಯೆಂದು ಅಧ್ಯಯನಗಳಿಂದ ಅರಿಯಲಾಗಿದೆ. ನಮ್ಮ ದೇಶದಲ್ಲೂ ಸುಮಾರು ನಾಲ್ಕು ಉಲ್ಕಾ ಕುಳಿಗಳು ಇರುವುದನ್ನು ದಾಖಲಿಸಲಾಗಿದೆ. ಇಡೀ ಜಗತ್ತಿನಾದ್ಯಂತ ಹರಡಿಕೊಂಡಿರುವ ಇವುಗಳಲ್ಲಿ ಕೆಲವು 1 ಕಿಮೀಗಿಂತ ಕಡಿಮೆ ವ್ಯಾಸದವು ಕೆಲವು 1, 10, ಮತ್ತು 100 ಕಿಮೀಗಿಂತಲೂ ದೊಡ್ಡದಾದ ವ್ಯಾಸದ ಕುಳಿಗಳಾಗಿವೆ. ಹೆಚ್ಚೂ ಕಡಿಮೆ ಎಲ್ಲಾ ಖಂಡಗಳಲ್ಲೂ ಈ ಉಲ್ಕಾಕುಳಿಗಳನ್ನು ಕಾಣಬಹುದಾಗಿದೆ. ಅವುಗಳ ಭೌಗೋಳಿಕ ಹರಹು ನಕ್ಷೆ ಈ ಮುಂದಿನದು.

WhatsApp Image 2026 06 26 at 10.48.21 2

ಉಲ್ಕಾಕುಳಿ(Impact Crater)ಗಳು ಗಟ್ಟಿಯಾದ ಮೇಲ್ಮೈಯನ್ನು ಹೊಂದಿದ ಗ್ರಹಗಳ ಮತ್ತು ಉಪಗ್ರಹಗಳ ಮೇಲೆ, ತುಂಬಾ ಭಾರವಾದ, ಅಗಲವಾದ ಉರಿಯುತ್ತಿರುವ ಉಲ್ಕೆಗಳು ತುಂಬಾ ಹೆಚ್ಚಿನ ವೇಗದಿಂದ ಅಪಾರ ಶಕ್ತಿಯಿಂದ ಅಪ್ಪಳಿಸುವುದರಿಂದ ಉಂಟಾಗಿವೆ. ಈ ಉಲ್ಕೆಗಳು, ತುಂಬಾ ಅಗಾಧವಾದವು ಮತ್ತು ಅಪಾರ ಶಕ್ತಿಯನ್ನು ಒಳಗೊಂಡಂತಹವು. ತುಂಬಾ ದೂರದಿಂದ ವಿಪರೀತ ಶಕ್ತಿಯಿಂದ ಅಪ್ಪಳಿಸುವುದರಿಂದ ದೊಡ್ಡ ಅಣು ಬಾಂಬು ಸ್ಪೋಟಿಸಿದಂತೆ ಪರಿಣಾಮ (Impact) ಉಂಟಾಗುವುದರಿಂದ ಅವುಗಳನ್ನು Impact Crater- ಉಲ್ಕೆಯ ಪರಿಣಾಮದ ಕುಳಿ- ಎಂದು ಕರೆಯುತ್ತಾರೆ. ಜೋರಾಗಿ ಅಪ್ಪಳಿಸುವುದರಿಂದ ಕುಳಿಯಾಗಿದ್ದಲ್ಲದೆ, ಕಂದಕದಿಂದೆದ್ದ ಕಲ್ಲು-ಮಣ್ಣು ಸುತ್ತಲೂ ಏರಿಯನ್ನು ಉಂಟುಮಾಡುತ್ತದೆ. ಈ ಏರಿ ಅಥವಾ ಕಂದಕ ಸುತ್ತಲಿನ ದಿಬ್ಬವು ಏರು ಮಣ್ಣಿನಿಂದಾದದ್ದು! ಆದರೆ ಜ್ವಾಲಾಮುಖಿಗಳ ಕುಳಿಗಳು ಸ್ಪೋಟದಿಂದ ಅಥವಾ ಒಳಗಿನ ಸೆಳೆತದಿಂದ ಉಂಟಾದವು. ಹಾಗಾಗಿ ಕುಳಿಗಳು ಸಾಮಾನ್ಯವಾಗಿ ಏರಿಯನ್ನು ಹೊಂದಿರುವುದಿಲ್ಲ. ಜೊತೆಗೆ ಆಳದ ಕುಳಿಗಳು ಸಮತಳವನ್ನು ಹೊಂದಿದ್ದು, ಸುತ್ತಲೂ ಅಂಚಿನಲ್ಲಿ ಏರಿಯನ್ನು ಹೊಂದಿರುತ್ತವೆ. ಭೂಮಿಗೆ ವಾತಾವರಣವು ಇರುವುದರಿಂದ ಅನೇಕ ಚಿಕ್ಕ-ಪುಟ್ಟ ಉಲ್ಕೆಗಳು ಬೀಳುತ್ತಿರುವಾಗಲೇ ಉರಿದು ಬೂದಿಯಾಗುತ್ತವೆ. ಹಾಗೆ ಬೀಳುತ್ತಿರುವ, ನೆಲವನ್ನೂ ತಲುಪದ ಅನೇಕ ಉಲ್ಕೆಗಳನ್ನು ನಾವು ನೋಡಿಯೇ ಇರುತ್ತೇವೆ. ನೆಲದ ಮೇಲೆ ಹಿಂದೆಂದೋ ಬಿದ್ದು ಕುಳಿಗಳನ್ನು ಮಾಡಿದ್ದರೂ ಮೇಲ್ಮೈಯ ವಾತಾವರಣದ ನಿರಂತರವಾದ ಚಟುವಟಿಕೆಗಳಿಂದ ಗುರುತಿಸುವುದೂ ಕಷ್ಟವಾಗುತ್ತದೆ.

ಇದನ್ನು ಓದಿದ್ದೀರಾ?: ಭವಿಷ್ಯದ ʼಸೂಪರ್‌ ಆಂಟಿಜೆನ್‌ʼ; ಇದು AI ರೂಪಿಸಿದ ವಿಶ್ವದ ಮೊದಲ ಲಸಿಕೆ!

ಅನೇಕ ಬಾರಿ ಈ ಕುಳಿಯ ಏರಿ ಮತ್ತು ತಳಗಳು ತಮ್ಮ ಗುರುತನ್ನು ನಷ್ಟ ಮಾಡಿಕೊಂಡೂ ಇರಬಹುದು. ಕಾರಣ ಭೂಮಿಯ ಮೇಲ್ಮೈಯು ಅತ್ಯಂತ ಹೆಚ್ಚು ಚಟುವಟಿಕೆಯಿಂದಿದ್ದು ಗಾಳಿ-ಮಳೆಯಿಂದ ಕೊರೆತ ಅಥವಾ ಸವೆತಗಳು ಉಂಟಾಗಿ ಮೇಲ್ಮೈಯು ಹಾಳಾಗಿ ಗುರುತು ಕೆಡಿಸಿಕೊಂಡಿರುತ್ತವೆ. ಆದರೂ ಇಂತಹ ನೆಲವನ್ನು ಭೂವೈಜ್ಞಾನಿಕ ಅಧ್ಯಯನಗಳಲ್ಲಿ ಒಳಪಟ್ಟಾಗ ನೆಲದ ಮೇಲ್ಮೈಯು ಹತ್ತಿರದ ಮೇಲ್ಮೈಗಿಂತ ಭಿನ್ನವಾದ ಖನಿಜ-ಶಿಲೆ ಪದರ ಅಥವಾ ಸಂಯೋಜನೆಯನ್ನು ಹೊಂದಿರುವು ತಿಳಿಯುತ್ತದೆ. ಈ ಭಿನ್ನವಾದ ಪದರಗಳ ಸಂಯೋಜನೆಯೇ ಉಲ್ಕೆಯ ಪರಿಣಾಮಗಳಿಗೆ (Impact of Meteorites) ಕಾರಣಗಳನ್ನು ಕೊಡುವುದು. ಹಾಗಾಗಿ ಭೌಗೋಳಿಕ ಸರ್ವೇಕ್ಷಣಾ ಅಧ್ಯಯನಗಳಲ್ಲಿ ಈ ಭಿನ್ನತೆಯನ್ನು ಮತ್ತು ಆಕಾರ ಇತ್ಯಾದಿಗಳನ್ನು ಗುರುತಿಸಿ ನಿಗದಿ ಪಡಿಸಲಾಗುತ್ತದೆ. ಅಲ್ಲದೆ ಶಿಲಾ ಪದರಗಳು ಹೊರಚಾಚುಗಳಿಂದ ಅವುಗಳ ಕಾಲಮಾನವನ್ನು ಗುರುತಿಸಲಾಗುತ್ತದೆ. ಇದು ನಿಜಕ್ಕೂ ತುಸು ಕಷ್ಟದ ಕೆಲಸವೇ! ಏಕೆಂದರೆ ಭೂಮಿಯ ಮೇಲ್ಮೈಯು ನಿರಂತರವಾಗಿ ವಾತಾವರಣದ ಪರಿಣಾಮಗಳಿಗೆ ತೆರೆದುಕೊಳ್ಳುತ್ತದೆ. ಕೆನಡಾದ ಒಟ್ಟಾವದಲ್ಲಿರುವ ಡೊಮಿನಿಯನ್‌ ವೀಕ್ಷಣಾಲಯ(Dominion Observatory)ದ ನಿರ್ದೇಶನದಂತೆ 1955ರಿಂದ ಗುರುತಿಸಿ ಭೂಮಿಯ ಉಲ್ಕಾಕುಳಿಗಳ ಡೇಟಾಬೇಸ್‌ (Earth Impact Database) ಅನ್ನು ರಚಿಸಲಾಗಿದೆ. ಇದರಿಂದ ಒಪ್ಪಿತವಾದಾಗ ಮಾತ್ರ ಯಾವುದೇ ಕುಳಿಯ ಬಗ್ಗೆ ವೈಜ್ಞಾನಿಕವಾಗಿ ಒಪ್ಪಿಗೆ ಅಥವಾ ಮೊಹರು ಪಡೆಯುತ್ತದೆ.

ಆದರೆ ಚಂದ್ರನಿಗಾಗಲಿ, ಹತ್ತಿರದ ಗ್ರಹಗಳಾದ ಬುಧ ಮತ್ತು ಮಂಗಳಗಳಿಗೆ ವಾತಾವರಣದ ಸಮಸ್ಯೆಗಳೇನೂ ಇಲ್ಲ. ಹಾಗಾಗಿಯೇ ಸಹಜವಾಗಿ ಗೋಚರವಾಗುವ ಕುಳಿಗಳನ್ನು ಈ ಮೂರೂ ಆಕಾಶಕಾಯಗಳಲ್ಲಿ ಕಾಣಬಹುದು. ಕುಳಿಗಳ ಪರಿಣಾಮವನ್ನು ಗುರುತಿಸಲು ಮೇಲ್ಮೈಯು ಗಟ್ಟಿಯಾಗಿರಬೇಕು, ಈ ಕಾರಣದಿಂದಲೇ ಗಟ್ಟಿ ಮೇಲ್ಮೈಯನ್ನು ಹೊಂದಿದ ಆಕಾಶಕಾಯಗಳಲ್ಲಿ ಮಾತ್ರವೇ ಕುಳಿಗಳಿವೆ. ಜೊತೆಗೆ ಗುರು ಗ್ರಹದ ಉಪಗ್ರಹಗಳಾದ ಕ್ಯಾಲಿಸ್ಟೊ ಮತ್ತು ಗ್ಯಾನಿಮೀಡ್‌(Callisto and Ganymede)ಗಳಲ್ಲೂ ಉಲ್ಕಾಕುಳಿಗಳನ್ನು ಗುರುತಿಸಲಾಗಿದೆ. ಬುಧ ಗ್ರಹದಲ್ಲಿ ಸುಮಾರು 31,000 ಕುಳಿಗಳನ್ನೂ, ಮಂಗಳ ಗ್ರಹದಲ್ಲಿ ಸುಮಾರು 3,00,000 ಕುಳಿಗಳನ್ನೂ ಮತ್ತು ಚಂದ್ರನಲ್ಲಿ 1,09,000 ಕುಳಿಗಳನ್ನೂ ಗುರುತಿಸಲಾಗಿದೆ. ಆದರೂ ಇನ್ನೂ ಹೆಚ್ಚು ಇರುವ ಅಂದಾಜೂ ಕೂಡ ಇದೆ.

WhatsApp Image 2026 06 26 at 10.48.21 1
ಬುಧ, ಚಂದ್ರ, ಮಂಗಳ ಗ್ರಹಗಳ ಮೇಲಿನ ಉಲ್ಕಾ ಕುಳಿಗಳು

ಭೂಮಿ ಮೇಲಿನ ಕುಳಿಗಳನ್ನು ವೈಜ್ಞಾನಿಕವಾಗಿ ಗುರುತಿಸಿದ ಬಗೆ
ಡೇನಿಯಲ್‌ ಎಂ. ಬ್ಯಾರಿಂಗರ್‌ (Daniel M. Barringer, 1860–1929) ಎಂಬ ಓರ್ವ‌ ಭೂವಿಜ್ಞಾನಿಯು ಸುಮಾರು 1902ರಲ್ಲಿ ಅರಿಜೊನಾದಲ್ಲಿ ಒಂದು ಕುಳಿ ಇರುವುದನ್ನು ಮೊಟ್ಟಮೊದಲು ಊಹಿಸಿ ಅದನ್ನು ಉಲ್ಕೆಯಿಂದ ಆದದ್ದೆಂದು ಅರಿತರು. ಹಾಗಂತ ವಿಜ್ಞಾನಿಗಳೇನೂ ನಂಬಿರಲಿಲ್ಲ! ಆದರೂ ವೈಜ್ಞಾನಿಕ ಮತ್ತು ವೈಯಕ್ತಿಕ ಆಸಕ್ತಿಯ ಹಿನ್ನೆಲೆಯಲ್ಲಿ ಗಣಿಕಾರಿಕಾ ಕಂಪನಿಯೊಂದನ್ನು ಆರಂಭಿಸಿದ ಅವರು ಅದೇ ನೆಲದ ಮಾಲೀಕರೂ ಆಗುತ್ತಾರೆ. ಆ ಕುಳಿಯ ಸುತ್ತಲಿನ ಆಸುಪಾಸಿನಲ್ಲಿ ನಿಕ್ಕಲ್‌ ಮತ್ತು ಕಬ್ಬಿಣದ ಅದಿರಿನ ನಿಕ್ಷೇಪಕ್ಕೆ ಹುಡುಕಾಡಿ, ಇದೊಂದು ಅಗಾಧವಾದ ಭಯಾನಕ ಅಪ್ಪಳಿಸುವಿಕೆಯಿಂದಾದ ಕುಳಿಯೆಂದು 1903 ಮತ್ತು 1904ರ ಮಧ್ಯೆಯೇ ತೀರ್ಮಾನಕ್ಕೆ ಬಂದರು.

ಮುಂದೆ 1906ರಲ್ಲಿ ತಮ್ಮ ಗೆಳೆಯ ಗಣಿತಜ್ಞ ಮತ್ತು ಭೌತವಿಜ್ಞಾನಿ ಬೆಂಜಮಿನ್‌ ಟಿಲ್ಗ್‌ಮನ್‌ (Benjamin Tilghman) ಜೊತೆಗೂಡಿ ಅರಿಜೊನಾದ ತಮ್ಮ ಸುಪರ್ದಿಯಲ್ಲೇ ಇರುವ 1.5 ಕಿಮೀ ವ್ಯಾಸದ ಕುಳಿಯನ್ನು ಉಲ್ಕೆಯಿಂದಾದ ಕುಳಿಯೆಂದು ತೀರ್ಮಾನಿಸಿ ಅಮೆರಿಕದ ಭೂವೈಜ್ಞಾನಿಕ ಸರ್ವೆಯ (US Geological Survey) ತಮ್ಮ ಉಲ್ಕೆಯ ಪರಿಣಾಮದ ಸಿದ್ಧಾಂತವನ್ನು ಮೊಟ್ಟ ಮೊದಲ ಬಾರಿಗೆ ಮಂಡಿಸುತ್ತಾರೆ. ಮುಂದೆ ಅವರ ಸಂಶೋಧನಾ ಪ್ರಬಂಧವು Proceedings of the Academy of Natural Sciences ನಲ್ಲಿ ಪ್ರಕಟವಾಗುತ್ತದೆ. ಹಿರೊಶಿಮಾ ಮೇಲೆ ಬಿದ್ದ ಅಣುಬಾಂಬಿನ 150 ಪಟ್ಟು ಶಕ್ತಿಯುತವಾದ 3 ಲಕ್ಷ ಟನ್ನುಗಳ ಉಲ್ಕೆಯು ಸೆಕೆಂಡಿಗೆ 12 ಕಿಮೀ ವೇಗದಲ್ಲಿ ಅಪ್ಪಳಿಸಿದ್ದರಿಂದ ಉಂಟಾಗಿರುವ, ಅದೀಗ ಬ್ಯಾರಿಂಗರ್‌ ಉಲ್ಕಾಕುಳಿ (Barringer Crater) ಎಂದು ಜನಪ್ರಿಯವಾಗಿದೆ. ಅದನ್ನು ಅವರ ಕುಟುಂಬವೇ ಬ್ಯಾರಿಂಗರ್‌ ಕ್ರೆಟರ್‌ ಕಂಪನಿ(The Barringer Crater Company)ಯ ಮೂಲಕ ನಿರ್ವಹಿಸುತ್ತಿದೆ. ಸಾರ್ವಜನಿಕವಾಗಿ ಒಂದು ಮ್ಯೂಸಿಯಂ ರೀತಿಯಲ್ಲಿ ಅದು ಮುಕ್ತವಾದ ವಿಕ್ಷಣೆಗೆ ತೆರೆದುಕೊಂಡಿದೆ.

WhatsApp Image 2026 06 26 at 10.48.21 1 1

ಹಾಗಾಗಿ 1903ರಲ್ಲೇ ಡೇನಿಎಲ್‌ ಎಂ. ಬ್ಯಾರಿಂಗರ್‌ ಅವರು ಉಲ್ಕೆಯ ಪರಿಣಾಮವು ಭೂಮಿಯ ಮೇಲೂ ಇರುವ ಊಹೆಯನ್ನು ಹೊಂದಿದ್ದಲ್ಲದೆ, ಅರಿಜೊನಾದ ಕುಳಿಯ ಮಾಲೀಕರಾಗಿಯೂ, ಸುಮಾರು 1920ರ ವೇಳೆಗೆ ವಿಜ್ಞಾನ ಜಗತ್ತಿಗೆ ಬ್ಯಾರಿಂಗರ್‌ ತಮ್ಮ ಸೈದ್ಧಾಂತಿಕ ನಿಲುವಿನಿಂದ (Impact Theory) ಪರಿಚಿತರಾಗುತ್ತಾರೆ. ಮುಂದೆ 1960ರ ದಶಕದಲ್ಲಿ ಯೂಜೀನ್‌ ಶೂಮ್ಯಾಕರ್‌ ಅದೇ ಕುಳಿಯನ್ನು ಅಧ್ಯಯನ ಮಾಡಿ ಹ್ಯಾರಿ ಹೆಸ್‌ ಅವರ ಮಾರ್ಗದರ್ಶನದಲ್ಲಿ ಚಂದ್ರನ ಕುಳಿಗಳಿಗೂ ಅದಕ್ಕೂ ಸಮೀಕರಿಸಿ ಸಾಬೀತು ಮಾಡುತ್ತಾರೆ. ಹಾಗೆ ಸಾಬೀತು ಮಾಡಲು ನವಾಡದಲ್ಲಿ ಅಮೆರಿಕವು ನ್ಯೂಕ್ಲಿಯರ್‌ ಪರೀಕ್ಷೆಯಲ್ಲಿ ಉಂಟಾದ ಕುಳಿಯನ್ನೂ ಸಮೀಕರಿಸಿ ವೈಜ್ಞಾನಿಕವಾದ ವಿವರಗಳನ್ನು ನೀಡಿದ್ದಾರೆ. ಈ ಶೂಮ್ಯಾಕರ್‌ ಯಾರು ಎಂದರೆ, 1994ರಲ್ಲಿ ಗುರುಗ್ರಹವನ್ನು ಅಪ್ಪಳಿಸಿದ ಲೆವಿ-ಶೂಮ್ಯಾಕರ್‌ ಧೂಮಕೇತು(Shoemaker–Levy 9 -SL9)ವನ್ನು 1993ರಲ್ಲಿ ಡೇವಿಡ್‌ ಲೆವಿ ಮತ್ತು ತಮ್ಮ ಪತ್ನಿ ಕ್ಯಾರೊಲಿನ್‌ ಶೂಮ್ಯಾಕರ್‌ ಜೊತೆಗೆ ಕಂಡುಹಿಡಿದವರು. ಆ ಧೂಮಕೇತುವು ಅವರ ಅಧ್ಯಯನಗಳಿಂದಲೇ ಗುರು ಗ್ರಹದ ಹಿಡಿತಕ್ಕೆ ಸಿಕ್ಕ ಬಗ್ಗೆ ವಿಜ್ಞಾನದಲ್ಲಿ ತಿಳಿದು ಮುಂದೆ ಅದಕ್ಕೆ ಲೆವಿ-ಶೂಮ್ಯಾಕರ್‌ ಧೂಮಕೇತುವೆಂದು ಹೆಸರಾಗಿತ್ತು.

WhatsApp Image 2026 06 26 at 10.48.19 1
ಅಮೆರಿಕದ ವಿಟುಂಪ್ಕಾ ಕುಳಿ

ಅಮೆರಿಕದ ವಿಟುಂಪ್ಕಾ ಕುಳಿ
ಅಮೆರಿಕದ ಅಲಬಾಮಾ ರಾಜ್ಯದ ರಾಜಧಾನಿ ಮಾಂಟ್ಗಾಮರಿ ನಗರಕ್ಕೆ ಸುಮಾರು 25 ಕಿ.ಮೀ ದೂರದಲ್ಲಿ  ಇರುವ ಊರು ವಿಟಂಪ್ಕಾ. ಅಲ್ಲಿ ವೈಜ್ಞಾನಿಕವಾಗಿ ತುಂಬಾ ಜಾಗರೂಕವಾಗಿ ಸಂರಕ್ಷಿಸಿದ ಉಲ್ಕೆಯ ಕುಳಿಯಿದೆ. ಆ ಊರಿಗೆ ಹೊಂದಿಕೊಂಡಂತೆಯೇ ತೀರಾ ಹತ್ತಿರದಲ್ಲೇ ಉಲ್ಕೆಯ ಅಪ್ಪಳಿಸುವಿಕೆಯಿಂದ ಉಂಟಾದ ಒಂದು ಕುಳಿಯದು. ಕುಳಿಯ ಏರಿಯು ಊರಿನ ಬೆನ್ನ ಹಿಂದೆಯೇ ಕಾಣುತ್ತದೆ. ಸುಮಾರು 85 ದಶಲಕ್ಷ ವರ್ಷಗಳ ಹಿಂದೆ ಉಂಟಾಗಿರುವ ಕುಳಿಯ ಏರಿಯನ್ನು ಹಾಯ್ದು ಒಳಹೊಕ್ಕು ಹೆಚ್ಚೂ ಕಡಿಮೆ ಕುಳಿಯ ಕೇಂದ್ರವನ್ನು ತಲುಪಬಹುದು. ವಿಟಂಪ್ಕಾ ಉಲ್ಕಾಕುಳಿಯನ್ನು ಒಳಹೊಕ್ಕು ಅರಿತು ನೋಡಿ ಬರಲು ಸ್ವಂತ ತಿಳಿಯುವಂತಹ (View Point) ಸುಮಾರು ಏಳು ಕೇಂದ್ರಗಳನ್ನು ಗುರುತಿಸಿ ಅಲ್ಲಿ ಮಾಹಿತಿಯನ್ನು ಪ್ರದರ್ಶಿಸಿದ್ದಾರೆ. ಅಂತಹಾ View Point 5ರ ಚಿತ್ರ ಈ ಕೆಳಗಿನದು.

WhatsApp Image 2026 06 26 at 10.48.19

ವಿಟಂಪ್ಕಾ “ಪ್ರಕೃತಿ ಸೌಂದರ್ಯದ ನಗರ” ಎಂದು ಹೆಸರಾಗಿರುವ ನಗರ. ಈ ಊರಿಗೆ ವಿಟಂಪ್ಕಾ ಎಂಬ ಹೆಸರು ಅಲ್ಲಿನ ಸ್ಥಳೀಯ ಮೂಲ ನಿವಾಸಿಗಳ ಭಾಷೆ ಮಸ್ಕಗೀ ಕ್ರೀಕ್‌ (Muscogee Creek)ನ ಜುಮ್ಮೆನಿಸುವ ನೀರು (Rumbling Waters) ಎಂಬರ್ಥದ ವಿ-ವಯು-ಟಂ-ಕಾ (we-wautum-cau) ಎಂಬುದರಿಂದ ವಿಕಾಸವಾಗಿದೆ. ಊರನ್ನು ಬಳಸಿಕೊಂಡು ಒಳಗೇ ಹರಿದು ಹಾಯುತ್ತಿರುವ ಕೂಸಾ ನದಿಯ ಬೋರ್ಗೆರೆಯುವ ಸದ್ದಿನಿಂದ ಹಾಗೆ ಮೂಲ ನಿವಾಸಿಗಳು ಕರೆಯುತ್ತಿದ್ದರು. ಕಳೆದ ಶತಮಾನದ 1967ರಲ್ಲಿ ವಿಟಂಪ್ಕಾ ಹತ್ತಿರವೇ ಇದೇ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟುವವರೆಗೂ ಹಲವಾರು ಮೈಲಿಗಳವರೆಗೂ ನದಿಯ ನೀರಿನ ಹರಿವಿನ ಬೋರ್ಗರೆತ ಕೇಳುತ್ತಿತ್ತಂತೆ. ಕೂಸಾ ನದಿಯು ಅಲಬಾಮಾ ರಾಜ್ಯದ ಪ್ರಮುಖ ನದಿಯಾದ ಅಲಬಾಮಾ ನದಿಯ ಉಪನದಿ.

WhatsApp Image 2026 06 26 at 10.48.19 2
ವಿಟಂಪ್ಕಾ ಕುಳಿಯ ಅಂಚೂ, ಕಲ್ಲುಗಳ ರಚನೆಯಿಂದ ಗುರುತಿಸಲ್ಪಟ್ಟಿದೆ

ವಿಟಂಪ್ಕಾ ಕುಳಿಯ ಅಂಚೂ, ಕಲ್ಲುಗಳ ರಚನೆಯಿಂದ ಗುರುತಿಸಲ್ಪಟ್ಟಿದೆ
ಈ ಕುಳಿಯು ಉಂಟಾಗಲು ಸುಮಾರು 1,100 ಅಡಿಗಳಷ್ಟು ಅಗಲವಾದ ಉಲ್ಕೆಯು ಅಪ್ಪಳಿಸಿರಬಹುದೆಂದು ಅಂದಾಜಿಸಲಾಗಿದೆ. ಇದನ್ನು 1970ರಲ್ಲಿ ಗುರುತಿಸಲಾಗಿದ್ದು, 1976ರ ವೇಳೆಗೆ ವೈಜ್ಞಾನಿಕ ದಾಖಲೆಗಳನ್ನು ಪ್ರಕಟಿಸಲಾಯಿತು. ಅಲಬಾಮಾದ ಆಬರ್ನ್‌ ವಿಶ್ವವಿದ್ಯಾಲಯವು ಇದರ ಕೇಂದ್ರವನ್ನೂ ಗುರುತಿಸಿದ್ದು, ಅದರಿಂದ ತೆಗೆದ ಭೂಗರ್ಭದ ಮಾದರಿಗಳನ್ನು ವಿಶ್ಲೇಷಣೆ ನಡೆಸಿದ್ದಾರೆ. ಈ ಕುಳಿಯು ಉಂಟಾಗಲು ಹಿರೋಶಿಮಾದ ಮೇಲೆ ಹಾಕಿದ ಬಾಂಬಿನ ಸುಮಾರು 1.75 ಲಕ್ಷ ಪಟ್ಟು ಶಕ್ತಿಯುತವಾದ ಉಲ್ಕೆಯು ಅಪ್ಪಳಿಸಿರುವ ಬಗ್ಗೆ ಅಂದಾಜು ಮಾಡಲಾಗಿದೆ. 

ಭಾರತೀಯ ನೆಲದಲ್ಲಿ ಉಲ್ಕಾಕುಳಿಗಳು
ನಮ್ಮ ದೇಶದಲ್ಲೂ ಈವರೆಗೆ ಸುಮಾರು ನಾಲ್ಕು ಉಲ್ಕಾಕುಳಿಗಳನ್ನು ಗುರುತಿಸಲಾಗಿದೆ. ಮೊಟ್ಟ ಮೊದಲ ಉಲ್ಕಾಕುಳಿಯು ಮಹಾರಾಷ್ಟ್ರ ರಾಜ್ಯದ ಬುಲ್ಧಾನ್‌ ಪಟ್ಟಣದಿಂದ ಸುಮಾರು 70 ಕಿಮೀ ದೂರದಲ್ಲಿರುವ ಸರಾಸರಿ 1.2 ಕಿ.ಮೀ ವ್ಯಾಸದ ಉಲ್ಕೆಯ ಕುಳಿ, ಒಂದು ಸರೋವರ ಅಥವಾ ಕೆರೆಯಂತಿದೆ. ಲೊನಾರ್‌ ಸರೋವರ (Lonar Lake) ಲೊನಾರ್‌ ಕುಳಿ ಎಂದು ಕರೆಯುವ ಇದರಲ್ಲಿ ಉಪ್ಪು ನೀರಿದ್ದು, ಇದನ್ನು ರಾಷ್ಟ್ರೀಯ ಭೂ-ಪಾರಂಪರಿಕ ಸ್ಮಾರಕವೆಂದು ಘೋಷಿಸಲಾಗಿದೆ (National Geo-Heritage Monument). ಹಿಂದಿನ ಅಧ್ಯಯನಗಳು ಇದನ್ನು ಸುಮಾರು 60,000 ವರ್ಷಗಳ ಹಿಂದಿನದೆಂದು ಗುರುತಿಸಿದ್ದರೆ, ಇತ್ತೀಚೆಗಿನ ಸಂಶೋಧನೆಗಳು ಸುಮಾರು 5–6 ಲಕ್ಷ (57,600 ± 47,000 years) ವರ್ಷಗಳೆಂದು ತೀರ್ಮಾನಿಸಿವೆ. ಈ ಸರೋವರವು ಸುಮಾರು 450 ಅಡಿ ಸರಾಸರಿ ಆಳವಿದ್ದು, ಗರಿಷ್ಠ 490 ಅಡಿಗಳಷ್ಟು ಆಳವಿದೆ.

WhatsApp Image 2026 06 26 at 10.48.20 2

ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಭೊಂತ ಹಳ್ಳಿಯ ಸಮೀಪ ಸುಮಾರು 2.44 -2.24 ಬಿಲಿಯನ್‌ ವರ್ಷಗಳ ಹಿಂದೆಯೇ ಉಂಟಾಗಿರುವ ಕುಳಿಯಿದೆ. ಇದು ಸರಿ ಸುಮಾರು 11 ಕಿಮೀ ಅಗಲ ಇರುವ ಏಶಿಯಾದಲ್ಲೇ ಅತೀ ದೊಡ್ಡದಾದ ಧಾಲಾ ಉಲ್ಕೆಯ ಕುಳಿ (Dhala Crater). ಇದನ್ನು ಲೊನಾರ್‌ ಕುಳಿಯ ನಂತರದ ದಿನಗಳಲ್ಲಿ ಗುರುತಿಸಲಾಯಿತು. ಇದಲ್ಲದೆ ಅಲ್ಲಿಂದ ಸುಮಾರು ಕೇವಲ 200 ಕಿಮೀ ದೂರದ ರಾಜಸ್ತಾನದ ಮತ್ತೊಂದು ಕುಳಿಯಿದ್ದು ಅದನ್ನು ರಾಮಗರ್‌ ಕುಳಿ ಎಂದು ಕರೆಯುತ್ತಾರೆ. ಇದರ ಅಗಲ ಸುಮಾರು 3.5 ಕಿಮೀಗಳಾಗಿದೆ.

ಗುಜರಾತ್‌ ರಾಜ್ಯದ ಕಚ್‌ ಜಿಲ್ಲೆಯ ಭುಜ್‌ ತಾಲೂಕಿನ ಲುನಾ ಎಂಬ ಹಳ್ಳಿಯಲ್ಲಿ ಒಂದು 1.2 ಕಿಮೀ ಅಗಲ ಕುಳಿಯನ್ನು ಗುರುತಿಸಲಾಗಿದೆ. ಇದು ತೀರಾ ಇತ್ತೀಚೆಗೆ ಗುರುತಿಸಲಾಗಿರುವ ಕುಳಿಯಾಗಿದ್ದು ತುಂಬಾ ಪ್ರಕಾಶಮಾನವಾದ ಕಬ್ಬಿಣ ಹೊಂದಿರುವ ಉಲ್ಕೆಯಿಂದ ಸುಮಾರು 10,000 – 50,000 ವರ್ಷಗಳ ಹಿಂದೆ ಉಂಟಾಗಿರಬಹುದು ಎಂಬ ಅಂದಾಜಿಸಲಾಗಿದೆ.

ಆಧುನಿಕ ಸಂದರ್ಭದಲ್ಲಿ ದಾಖಲಾದ ಉಲ್ಕೆಗಳು
ಕಳೆದ ಶತಮಾನದಿಂದ ತೀರಾ ಇತ್ತೀಚೆಗಿನವರೆಗೂ ಹಲವಾರು ಉಲ್ಕೆಗಳು ಅಪ್ಪಳಿಸುವುದನ್ನು ದಾಖಲಿಸಲಾಗಿದೆ. ಅವುಗಳಲ್ಲಿ ಪ್ರಮುಖವಾದವು ಈ ಕೆಳಗಿನವು.

ಬ್ರೆಜಿಲ್‌ ದೇಶದ ಅಮೆಜಾನ್‌ ನದಿಯ ಹರಹಿನಲ್ಲಿ 1930ರಲ್ಲಿ ಎರಡು ಬೃಹತ್ತಾದ ಸಿಡಿತವನ್ನು ಒಳಗೊಂಡ ಉಲ್ಕೆಯು ಅಪ್ಪಳಿಸಿತ್ತು. ಅದರ ಶಬ್ದವು ನೂರಾರು ಕಿ.ಮೀ ದೂರದವರೆಗೂ ಕೇಳಿಸಿತ್ತು. ರಷಿಯಾದಲ್ಲಿಯೇ 1947ರಲ್ಲಿ ಸುಮಾರು 25 ಟನ್ನುಗಳ ತೂಕದ ಕಬ್ಬಿಣದ ಉಲ್ಕೆಯೊಂದು ಸೈಬೀರಿಯಾದ ಪರ್ವತವೊಂದರ ಮೇಲೆ ಅಪ್ಪಳಿಸಿತ್ತು.

ಅಮೆರಿಕದ ಅಲಬಾಮಾದ ಮಾಂಟ್ಗಾಮರಿಯ ಹತ್ತಿರವೇ 1954ರಲ್ಲಿ ಒಮ್ಮೆ ಸುಮಾರು 4 ಕಿಲೊ ತೂಕದ ಉಲ್ಕೆಯೊಂದು ಮನೆಯೊಂದರ ಮೇಲೆ ಅಪ್ಪಳಿಸಿತ್ತು. ಆಗ ಅದರಿಂದ ಅಪಾಯಕ್ಕೀಡಾದ ಆನಾ ಹಡ್ಜಅಸ್‌ ಎಂಬ ಮಹಿಳೆಯು ಮೊಟ್ಟ ಮೊದಲು ಆಗಸದಿಂದ ಬಿದ್ದ ಕಲ್ಲಿನ ಏಟು ತಿಂದಾಕೆ ಎಂದೇ ಹೆಸರಾಗಿದ್ದಳು. ನ್ಯೂರ್ಯಕ್‌ ನಗರದಲ್ಲಿ 1992ರ ಅಕ್ಬೊಬರ್‌ 9ರಂದು ಸುಮಾರು 12-13 ಕಿ.ಗ್ರಾಂ ತೂಕದ ಕಲ್ಲೊಂದು ಕಾರಿನ ಮೇಲೆ ಅಪ್ಪಳಿಸಿತ್ತು.

ಇದನ್ನು ಓದಿದ್ದೀರಾ?: ವಿಶ್ವ ಪರಿಸರ ದಿನ ವಿಶೇಷ | ಕಾಕ್ರೋಚ್‌ಗಳು ಇಲ್ಲದೇ ಇದ್ದರೆ ಏನಾಗುತ್ತಿತ್ತು? ಇಕಾಲಜಿಯ ಒಂದು ಪ್ರಶ್ನೆ

ಈ ಶತಮಾನದಲ್ಲೂ ಪ್ರಮುಖವಾದ ಘಟನೆಗಳನ್ನು ದಾಖಲು ಮಾಡಲಾಗಿದ್ದು 2013ರ ರಷಿಯಾದ ಉದಾಹರಣೆಯನ್ನು ಆರಂಭದಲ್ಲಿಯೇ ಅರಿತಿದ್ದೀರಿ. ಅನೇಕ ಗಾಳಿಯಲ್ಲಿ ಗುಂಡು ಹಾರಿಸಿದಂತಹ ಅನುಭವದ ನೂರಾರು ಉಲ್ಕೆಗಳನ್ನು ಗಮನಿಸಲಾಗಿದೆ.  ಕೆನಾಡದಲ್ಲಿ 2021ರಲ್ಲಿ ಬ್ರಿಟಿಷ್‌ ಕೊಲಂಬಿಯಾದ ಮನೆಯ ಮೇಲೊಂದರಲ್ಲಿ ಬಿದ್ದು ದಾಖಲಾದ ಉಲ್ಕೆಯ ದಾಳಿಯಲ್ಲಿ ಕೆಲವೇ ಇಂಚುಗಳಲ್ಲಿ ವ್ಯಕ್ತಿಯೊಬ್ಬರು ಬದುಕಿ ಉಳಿದಿದ್ದರು. ಈ ವರ್ಷ 2026ರಲ್ಲೂ ಅಮೆರಿಕದಲ್ಲಿ ಎರಡು ಉಲ್ಕೆಗಳ ಅಪ್ಪಳಿಸುವಿಕೆಯನ್ನು ದಾಖಲಿಸಲಾಗಿದೆ. ಅದರಲ್ಲಿ ಮಾರ್ಚ್‌ 21ರ ಒಹಾಯೋ ರಾಜ್ಯದಲ್ಲಿ ಸುಮಾರು 7 ಟನ್ನುಗಳ ತೂಕದ ಉಲ್ಕೆಯೊಂದು ಸುಮಾರು 75,000 ಕಿಮೀ ವೇಗದಿಂದ ಅಪ್ಪಳಿಸುತ್ತಾ ಗಾಳಿಯಲ್ಲಿ ಸಿಡಿದು ಭಯಂಕರವಾದ ಸದ್ದನ್ನು ಮಾಡಿ ಸುತ್ತಲಿನ ನಾಲ್ಕಾರು ರಾಜ್ಯಗಳಲ್ಲಿ ನಡುಕ ಹುಟ್ಟಿಸಿತ್ತು.

ಅಸ್ಟೆರಾಯ್ಡ್‌ ದಿನದ ಉದ್ದೇಶವೇ ಇಂತಹ ಆಘಾತಗಳ ಮುನ್ಸೂಚನೆ ಮುಂತಾದ ಅಧ್ಯಯನಗಳಿಂದ ಎಚ್ಚರ ವಹಿಸುವ ಸಾಧ್ಯತೆಗಳನ್ನು ಗುರುತಿಸುವುದಾಗಿದೆ. ಲಕ್ಷಾಂತರ ಕ್ಷುದ್ರಗ್ರಹಗಳು ನಮ್ಮ ತಲೆಯ ಮೇಲೆ ಸುತ್ತುತ್ತಲೇ ಇವೆ. ಭೂಮಿಯ ವಾತಾವರಣವೇ ಉಲ್ಕೆಗಳನ್ನು ಉರಿದು ಸಿಡಿಸುವ ಕೋಟೆಯಾಗಿದೆ. ಆದರೂ ಗಾತ್ರಕ್ಕೆ ಅನುಗುಣವಾಗಿ ಬೃಹತ್ತಾದ ಉಲ್ಕೆಯೊಂದು ಅಪ್ಪಳಿಸುವುದನ್ನು ತಡೆಯಲಾದರೂ ಅವುಗಳ ಅರಿವು ಬೇಕಿದೆ. ವಿಜ್ಞಾನದ ತಿಳಿವಿನಂತೆ ಇಡೀ ಅಸ್ಟೆರಾಯ್ಡ್‌ ಬೆಲ್ಟ್‌ನ ದ್ರವ್ಯರಾಶಿಯು ನಮ್ಮ ಚಂದಿರ ದ್ರವ್ಯರಾಶಿಯ ಕೇವಲ ಪ್ರತಿಶತ 3ರಷ್ಟು ಮಾತ್ರವೇ ಇದೆ. ಅದರಲ್ಲೂ ಲಕ್ಷಾಂತರ ತುಣುಕುಗಳು ಚಿಕ್ಕ-ಪುಟ್ಟವು. ಇರಲಿ ತಲೆಯ ಮೇಲಿನ ಚೂರು ಸೂಜಿ ಮೊನೆಯಾದರೂ ನಮ್ಮ ಅರಿವಿನಲ್ಲಿ ಇರಬೇಕಲ್ಲವೇ?

(ಇಕಾಲಜಿಗೆ ಸಂಬಂಧಿಸಿದ ಇನ್ನಷ್ಟು ಲೇಖನಗಳಿಗಾಗಿ ಭೇಟಿ ನೀಡಿ: https://cfpus.org/leadership/)

TS Channesh
ಡಾ. ಟಿ.ಎಸ್. ಚನ್ನೇಶ್
+ posts

ಲೇಖಕರು ಕೃಷಿ ವಿಜ್ಞಾನಿ. ಮಣ್ಣು ವಿಜ್ಞಾನದಲ್ಲಿ ಸ್ನಾತಕೋತ್ತರ ಮತ್ತು ಪಿಎಚ್.ಡಿ ಪದವಿ ಪಡೆದವರು. ಆಸಕ್ತಿಯನ್ನು ಅಷ್ಟಕ್ಕೆ ಸೀಮಿತಗೊಳಿಸದೆ ವಿಜ್ಞಾನ ಮತ್ತು ಸಮಾಜದ ಸಮೀಕರಣದ ಚರ್ಚೆಗಳನ್ನು ರೂಪಿಸುವಲ್ಲಿ ತಮ್ಮನ್ನು ವಿಸ್ತರಿಸಿಕೊಂಡವರು. ಸಾರ್ವಜನಿಕರಿಗೆ ವಿಜ್ಞಾನದ ಸಾಮಾನ್ಯ ತಿಳಿವಳಿಕೆಯನ್ನು ನೀಡಲು "ಸೆಂಟರ್ ಫಾರ್ ಪಬ್ಲಿಕ್ ಅಂಡರ್ಸ್ಟಾಂಡಿಂಗ್ ಆಫ್ ಸೈನ್ಸ್" - CPUS ಎಂಬ ವಿನೂತನವಾದ ಸಂಸ್ಥೆಯನ್ನು ಆರಂಭಿಸಿ ಅಲ್ಲಿ ಸಂಶೋಧನೆ, ಪುಸ್ತಕ ಪ್ರಕಟಣೆ, ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ವಿಜ್ಞಾನದ ಸರಿಯಾದ ತಿಳಿವಳಿಕೆ ನೀಡಲು ಕಾರ್ಯಾಗಾರಗಳು, ಸಸ್ಯಗಳು ಮತ್ತು ನೊಬೆಲ್ ಪುರಸ್ಕಾರ ಪಡೆದ ವಿಜ್ಞಾನಿಗಳ ಬಗ್ಗೆ ಮಾಹಿತಿಯುಳ್ಳ ವೀಡಿಯೋಗಳನ್ನು ಮಾಡುತ್ತಿರುವುದು ಅವರ ವಿಶಿಷ್ಟ ಆಸಕ್ತಿಗಳನ್ನು ಪ್ರತಿಫಲಿಸುವಂತಿವೆ. 'ಸಸ್ಯಯಾನ', 'ಅನುರಣನ', 'ಪ್ರತಿಫಲನ', 'ನೊಬೆಲ್ 2017', 'ಮಣ್ಣು ಮತ್ತು ಮಾನವ', 'ಕೃಷಿ ಮತ್ತು ಪೇಟೆಂಟ್', 'ಬೆಳಕಿನ ಬೆನ್ನು ಹತ್ತಿ', 'ಉಳುವವರ ಪರ ವಕಾಲತ್ತು', 'ಅನ್ನದ ಬಟ್ಟಲು' ಮುಂತಾದ ಮೂಲ ಕೃತಿಗಳು ಅಲ್ಲದೆ 'ಆಲ್ಬರ್ಟ್ ಐನ್ಸ್ಟೈನ್' ಮತ್ತು 'ಅಲೆಕ್ಸಾಂಡರ್ ಗ್ರಹಾಂ ಬೆಲ್' ಕೃತಿಗಳನ್ನು ರಚಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಟಿ.ಎಸ್. ಚನ್ನೇಶ್
ಡಾ. ಟಿ.ಎಸ್. ಚನ್ನೇಶ್
ಲೇಖಕರು ಕೃಷಿ ವಿಜ್ಞಾನಿ. ಮಣ್ಣು ವಿಜ್ಞಾನದಲ್ಲಿ ಸ್ನಾತಕೋತ್ತರ ಮತ್ತು ಪಿಎಚ್.ಡಿ ಪದವಿ ಪಡೆದವರು. ಆಸಕ್ತಿಯನ್ನು ಅಷ್ಟಕ್ಕೆ ಸೀಮಿತಗೊಳಿಸದೆ ವಿಜ್ಞಾನ ಮತ್ತು ಸಮಾಜದ ಸಮೀಕರಣದ ಚರ್ಚೆಗಳನ್ನು ರೂಪಿಸುವಲ್ಲಿ ತಮ್ಮನ್ನು ವಿಸ್ತರಿಸಿಕೊಂಡವರು. ಸಾರ್ವಜನಿಕರಿಗೆ ವಿಜ್ಞಾನದ ಸಾಮಾನ್ಯ ತಿಳಿವಳಿಕೆಯನ್ನು ನೀಡಲು "ಸೆಂಟರ್ ಫಾರ್ ಪಬ್ಲಿಕ್ ಅಂಡರ್ಸ್ಟಾಂಡಿಂಗ್ ಆಫ್ ಸೈನ್ಸ್" - CPUS ಎಂಬ ವಿನೂತನವಾದ ಸಂಸ್ಥೆಯನ್ನು ಆರಂಭಿಸಿ ಅಲ್ಲಿ ಸಂಶೋಧನೆ, ಪುಸ್ತಕ ಪ್ರಕಟಣೆ, ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ವಿಜ್ಞಾನದ ಸರಿಯಾದ ತಿಳಿವಳಿಕೆ ನೀಡಲು ಕಾರ್ಯಾಗಾರಗಳು, ಸಸ್ಯಗಳು ಮತ್ತು ನೊಬೆಲ್ ಪುರಸ್ಕಾರ ಪಡೆದ ವಿಜ್ಞಾನಿಗಳ ಬಗ್ಗೆ ಮಾಹಿತಿಯುಳ್ಳ ವೀಡಿಯೋಗಳನ್ನು ಮಾಡುತ್ತಿರುವುದು ಅವರ ವಿಶಿಷ್ಟ ಆಸಕ್ತಿಗಳನ್ನು ಪ್ರತಿಫಲಿಸುವಂತಿವೆ. 'ಸಸ್ಯಯಾನ', 'ಅನುರಣನ', 'ಪ್ರತಿಫಲನ', 'ನೊಬೆಲ್ 2017', 'ಮಣ್ಣು ಮತ್ತು ಮಾನವ', 'ಕೃಷಿ ಮತ್ತು ಪೇಟೆಂಟ್', 'ಬೆಳಕಿನ ಬೆನ್ನು ಹತ್ತಿ', 'ಉಳುವವರ ಪರ ವಕಾಲತ್ತು', 'ಅನ್ನದ ಬಟ್ಟಲು' ಮುಂತಾದ ಮೂಲ ಕೃತಿಗಳು ಅಲ್ಲದೆ 'ಆಲ್ಬರ್ಟ್ ಐನ್ಸ್ಟೈನ್' ಮತ್ತು 'ಅಲೆಕ್ಸಾಂಡರ್ ಗ್ರಹಾಂ ಬೆಲ್' ಕೃತಿಗಳನ್ನು ರಚಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ ಕಡೇ ದಿನಗಳು’

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ...

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಗ್ಗೆ ದೂರಿದ್ದ ಎಎಪಿ ಶಾಸಕ ಅಮಾನತು

ತಮ್ಮ ಕ್ಷೇತ್ರದ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ಹೆಚ್ಚಿದೆ ಎಂದು ತಮ್ಮದೇ...

ಭಯೋತ್ಪಾದಕ ಸಂಘಟನೆಗಳ ಸದಸ್ಯರೊಂದಿಗೆ ಸಂಪರ್ಕ ಆರೋಪ: ಭಾಲ್ಕಿ ಮೂಲದ ಯುವಕನ ಬಂಧನ

ಇನ್‌ಸ್ಟಾಗ್ರಾಮ್ ಹಾಗೂ ವಾಟ್ಸಾಪ್‌ ಮೂಲಕ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಸದಸ್ಯರು ಮತ್ತು...

ಚುನಾವಣಾ ಆಯೋಗದ ಸಾಫ್ಟ್‌ವೇರ್ ದೋಷ: ಹೈಕೋರ್ಟ್ ಮೆಟ್ಟಿಲೇರಿದ ಗೋವಾದ ನಾಗರಿಕನ ಹೋರಾಟ

ಉತ್ತರ ಗೋವಾದ ಸಾಂತಾಕ್ರೂಜ್ ಕ್ಷೇತ್ರದ ನಿವಾಸಿ, 41 ವರ್ಷದ ಪರೇಶ್ ಸಾಲ್ಗಾಂವ್ಕರ್...