ಸೆಷೆಲ್ಸ್‌ನ ರಾಜಧಾನಿ ವಿಕ್ಟೋರಿಯಾದಲ್ಲಿರುವ ‘ಅರುಳ್ಮಿಗು ನವಶಕ್ತಿ ವಿನಾಯಕರ್ ದೇವಾಲಯ’ವು ದೇಶದ ಮೊದಲ ಮತ್ತು ಏಕೈಕ ಹಿಂದೂ ದೇವಾಲಯ. ಇಲ್ಲಿ ಗಣಪತಿಯನ್ನು ಪ್ರಧಾನವಾಗಿ ಪೂಜಿಸಲಾಗುತ್ತದೆ. ಜೊತೆಗೆ, ದೇವಾಲಯದ ಒಳ ಮಂಟಪದಲ್ಲಿ ಮುರುಗನ್, ನಟರಾಜ, ದುರ್ಗಾ, ಶ್ರೀನಿವಾಸ ಪೆರುಮಾಳ್, ಭೈರವ ಮತ್ತು ಚಂಡಿಕೇಶ್ವರರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ವಿಶೇಷ ಸಂದರ್ಭಗಳಲ್ಲಿ ವಿವಿಧ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ.
ಹಿಂದೂ ಮಹಾಸಾಗರದಲ್ಲಿ ನೆಲೆಗೊಂಡಿರುವ ಒಂದು ಸುಂದರ ದ್ವೀಪರಾಷ್ಟ್ರ ʼಸೆಷಲ್ಸ್ʼ (Seychelles). ಇದು ಆಫ್ರಿಕಾ ಖಂಡದ ಪೂರ್ವ ಕರಾವಳಿ ದಿಕ್ಕಿನಲ್ಲಿ (ಮಡಗಾಸ್ಕರ್‌ನ ಉತ್ತರಕ್ಕೆ) ಬಹು ದೂರದಲ್ಲಿರುವ 115 ದ್ವೀಪಗಳ ಗುಚ್ಛ. ಪ್ರವಾಸಿಗರ ಪಾಲಿಗೆ ಸೆಷಲ್ಸ್ ಭೂಮಿಯ ಮೇಲಿನ ಸ್ವರ್ಗ. ಅದರ ಸಹಜ ಸೌಂದರ್ಯಕ್ಕೆ ಮಾರುಹೋಗದವರಿಲ್ಲ. ಸ್ಫಟಿಕದಂತೆ ಸ್ವಚ್ಛವಾದ ನೀಲಿ ಸಾಗರ, ದ್ವೀಪವನ್ನು ಆವರಿಸಿದ ಕಾಡು, ವಿಶಿಷ್ಟವಾದ ತಾಳೆ ಮರಗಳು, ಅಪರೂಪದ ಪ್ರಾಣಿ-ಪಕ್ಷಿಗಳು, ಕಡಲತೀರಗಳಲ್ಲಿ ಕಂಡುಬರುವ ದೊಡ್ಡ ಗಾತ್ರದ ಗ್ರಾನೈಟ್ ಬಂಡೆಗಳು.. ಒಂದೇ ಎರಡೇ? ಈ ಅಪ್ರತಿಮ ಸೌಂದರ್ಯದ ಗಣಿಗೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 3 ದಿನ (ಜೂನ್ 27 ರಿಂದ ಜೂನ್ 29 ರವರೆಗೆ)ಗಳ ಪ್ರವಾಸ ಕೈಗೊಂಡಿದ್ದಾರೆ.
ವಿಶ್ವದ ಅತ್ಯಂತ ಸುಂದರವಾದ ಮತ್ತು ಅತಿ ಹೆಚ್ಚು ಫೋಟೋ ತೆಗೆಯಲ್ಪಟ್ಟ ಕಡಲತೀರಗಳಲ್ಲಿ ಒಂದಾದ ‘ಅನ್ಸೆ ಸೋರ್ಸ್ ಡಿ’ಅರ್ಜೆಂಟ್’, ಪ್ರಪಂಚದ ಅತಿದೊಡ್ಡ ತೆಂಗಿನ ಮರಗಳನ್ನು ಹೊಂದಿರುವ ‘ವಾಲಿ ಡಿ ಮೇ’, ಸಮುದ್ರದೊಳಗಿನ ವೈವಿಧ್ಯಮಯ ಜೀವರಾಶಿಗಳಿಂದಾಗಿ ಮತ್ತು ಸ್ನಾರ್ಕ್ಲಿಂಗ್ ಮಾಡುವುದಕ್ಕಾಗಿ ಕೈಬೀಸಿ ಕರೆಯುವ ‘ಸೇಂಟ್ ಅನ್ನೆ ನ್ಯಾಷನಲ್ ಮರೈನ್ ಪಾರ್ಕ್’, ಕೆಂಪು ಮಣ್ಣಿನ ಭೂಮಿ ಮತ್ತು ಅಳಿವಿನಂಚಿನಲ್ಲಿರುವ ದೈತ್ಯ ಆಮೆಗಳನ್ನು ನೋಡಲು ಸಿಗುವ ‘ಕುರಿಯೂಸ್ ದ್ವೀಪ..’ ಇವೆಲ್ಲವೂ ಸೆಷೆಲ್ಸ್‌ನ ಸೊಬಗಿಗೆ ಪ್ರಕೃತಿ ತೊಡಿಸಿರುವ ಅಲಂಕಾರಗಳು. ಈ ಸುಂದರ ದ್ವೀಪಗುಚ್ಛಕ್ಕೂ ಭಾರತಕ್ಕೂ ಶತಮಾನಗಳ ನಂಟು. ಅದರಲ್ಲೂ ತಮಿಳಿಗರು ಮತ್ತು ಗುಜರಾತಿಗಳೊಂದಿಗೆ ಸೆಷೆಲ್ಸ್‌ಗೆ ಇರುವುದು ಬಿಡಿಸಲಾಗದ ಗಂಟು.
ಈ ದ್ವೀಪರಾಷ್ಟ್ರದ ಆರ್ಥಿಕತೆ, ಸಂಸ್ಕೃತಿ, ಪ್ರವಾಸೋದ್ಯಮಕ್ಕೆ ಭಾರತೀಯರ ಕೊಡುಗೆ ಅಪಾರ. ಇಲ್ಲಿ ಭಾರತೀಯರು ಅಲ್ಪಸಂಖ್ಯಾತರೆಂದು ಗುರುತಿಸಲ್ಪಟ್ಟಿದ್ದಾರೆ. ಹೀಗಾಗಿಯೇ ಪ್ರಧಾನಿಯವರು ಸೆಷೆಲ್ಸ್‌ಗೆ ಕೈಗೊಂಡ ಪ್ರವಾಸ ವಿಶೇಷವಾಗಿ ಗಮನ ಸೆಳೆಯಿತು. ಈ ಭೇಟಿಯು ಸೆಷೆಲ್ಸ್‌ನೊಂದಿಗೆ ಭಾರತ ಹೊಂದಿರುವ ಚಾರಿತ್ರಿಕ ಸಂಬಂಧವನ್ನು ಮತ್ತಷ್ಟು ವೃದ್ಧಿಸುವ ಉದ್ದೇಶ ಹೊಂದಿತ್ತು. ಯಾಕೆಂದರೆ ಈ ದ್ವೀಪರಾಷ್ಟ್ರದಲ್ಲಿ ಶೇ. 5ರಷ್ಟು ಭಾರತೀಯರು ನೆಲೆಸಿದ್ದಾರೆ.
ಹೆಚ್ಚಿನ ಇಂಡೋ-ಸೆಷೆಲ್ಲೋಯಿಸ್‌ಗಳು ಇಂದಿನ ತಮಿಳುನಾಡು ಮತ್ತು ಗುಜರಾತ್‌ನ ಕಚ್ ಪ್ರದೇಶದಿಂದ ಬಂದ ಹಿಂದೂಗಳಾಗಿದ್ದಾರೆ (ಶೇ.60) ಎನ್ನುತ್ತವೆ ವರದಿಗಳು. ಜತೆಗೆ ಜೈನರು, ಮುಸ್ಲಿಮರು, ಕ್ರೈಸ್ತರು ಮತ್ತು ಇತರರು ಇಲ್ಲಿ ನೆಲೆಸಿದ್ದಾರೆ. ಇವರು ಸೆಷೆಲ್ಲೋಯಿಸ್ ಕ್ರಿಯೋಲ್, ತಮಿಳು, ಗುಜರಾತಿ ಮತ್ತು ಹಿಂದಿ ಭಾಷೆಗಳನ್ನು ಮಾತನಾಡುತ್ತಾರೆ. ಸಾಮಾನ್ಯವಾಗಿ ಕೃಷಿ, ಉತ್ಪಾದನಾ ಉದ್ಯಮ, ನಿರ್ಮಾಣ ಕ್ಷೇತ್ರ, ಸಗಟು ವ್ಯಾಪಾರ ಸಮುದಾಯಕ್ಕೆ ಸೇರಿರುವ ಇವರು, ಹೆಚ್ಚಾಗಿ ಮಾಹೆ ದ್ವೀಪದಲ್ಲಿ ನೆಲೆಸಿದ್ದಾರೆ. ಕೆಲವರು ಪ್ರಸ್ಲಿನ್ ಮತ್ತು ಲಾ ಡಿಗ್ ದ್ವೀಪಗಳಲ್ಲಿ ವಾಸಿಸುತ್ತಿದ್ದಾರೆ. ರಾಜಧಾನಿ ವಿಕ್ಟೋರಿಯಾದಲ್ಲಿ ಇಂಡೋ-ಸೆಷೆಲ್ಲೋಯಿಸ್‌ಗಳ ಸಂಖ್ಯೆ ಹೆಚ್ಚಾಗಿದೆ. ಅನೇಕ ಇಂಡೋ-ಸೆಷೆಲ್ಲೋಯಿಸ್‌ಗಳು ಭಾರತೀಯೇತರ ಜನಾಂಗದವರೊಂದಿಗೆ ವಿವಾಹವಾಗಿದ್ದಾರೆ. ಅವರ ಮಕ್ಕಳನ್ನು ಸಾಮಾನ್ಯವಾಗಿ ಕ್ರಿಯೋಲ್ ಬಹುಸಂಖ್ಯಾತರೆಂದು ಪರಿಗಣಿಸಲಾಗುತ್ತದೆ.
ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಸೆಷೆಲ್ಸ್‌ನ ಜನಸಂಖ್ಯೆಯ 82% ಕ್ಕಿಂತ ಹೆಚ್ಚು ಜನರು ಭಾರತೀಯ ಮೂಲದ ಬೇರುಗಳನ್ನು ಹೊಂದಿದ್ದಾರೆ ಎಂದು ನಂಬಲಾಗಿದೆ. ಅನೇಕ ಸ್ಥಳೀಯ ಅಂಗಡಿಗಳು ಭಾರತೀಯ ಗ್ರಾಹಕ ವಸ್ತುಗಳನ್ನು ಸಂಗ್ರಹಿಸುವ ಮೂಲಕ ವಲಸಿಗರ ಅಗತ್ಯತೆಗಳನ್ನು ಪೂರೈಸುತ್ತವೆ. ಈ ಸಮುದಾಯವು ‘ಹಿಂದೂ ಕೋವಿಲ್ ಸಂಗಮ’ದಿಂದ ನಡೆಸಲ್ಪಡುವ ಹಿಂದೂ ದೇವಾಲಯವನ್ನು ಸ್ಥಾಪಿಸಿ ಗಮನ ಸೆಳೆದಿದೆ. ಈ ಕೋವಿಲ್ ಸಂಗಮವನ್ನು 1984 ರಲ್ಲಿ ಸ್ಥಾಪಿಸಲಾಗಿತ್ತು. ಇಲ್ಲಿ ‘ಇಂಡೋ-ಸೆಷೆಲ್ಸ್ ಫ್ರೆಂಡ್‌ಶಿಪ್ ಅಸೋಸಿಯೇಷನ್’ ಮತ್ತು ‘ಹಿಂದೂ ಕೌನ್ಸಿಲ್ ಆಫ್ ಸೆಶೆಲ್ಸ್’ ಕೂಡ ಇವೆ.

ತಮಿಳು-ಸೆಷೆಲ್ಲೋಯಿಸ್ ಎಂದರೆ ಸೆಷೆಲ್ಸ್ ದ್ವೀಪ ರಾಷ್ಟ್ರದಲ್ಲಿ ವಾಸಿಸುವ, ತಮಿಳು ಹಿನ್ನೆಲೆಯ ದಕ್ಷಿಣ ಭಾರತೀಯರು. ಇವರ ಜನಸಂಖ್ಯೆಯೇ ಸುಮಾರು 4,000 ಇದ್ದು, ದೇಶದ ಗಮನಾರ್ಹ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದ್ದಾರೆ. ತಮಿಳು ವಲಸಿಗರು 1770ರ ಹಿಂದೆಯೇ ಸೆಷೆಲ್ಸ್‌ಗೆ ಆಗಮಿಸಿದ್ದರು. ಜನವಸತಿ ವಿರಳವಾಗಿದ್ದ ಆ ದ್ವೀಪರಾಷ್ಟ್ರಕ್ಕೆ ಮೊದಲ ಬಾರಿಗೆ ಬಂದು ನೆಲೆಸಿದವರಲ್ಲಿ ಇವರೂ ಸೇರಿದ್ದಾರೆ. ಫ್ರೆಂಚ್ ವಸಾಹತು ಪ್ರದೇಶವಾದ ಪುದುಚೆರಿಯ ವ್ಯಾಪಾರಿಗಳು ಮತ್ತು ನಂತರ ಇಂದಿನ ತಮಿಳುನಾಡಿನ ವ್ಯಾಪಾರಿಗಳು ಮರದ ವ್ಯವಹಾರಕ್ಕಾಗಿ ಈ ದ್ವೀಪಗಳಿಗೆ ಭೇಟಿ ನೀಡುತ್ತಿದ್ದರು. ವ್ಯಾಪಾರಿ ಸಮುದಾಯವೊಂದು ಅಲ್ಲಿ ನೆಲೆಗೊಂಡಿದ್ದು ಹೀಗೆ. 1901ರಲ್ಲಿ, ಸೆಷೆಲ್ಸ್ ದೇಶದ ಒಟ್ಟು ಜನಸಂಖ್ಯೆ 19,237 ಇತ್ತು, ಅದರಲ್ಲಿ ಸುಮಾರು 3,500 ಜನರು ತಮಿಳು ಭಾಷಿಕರಿದ್ದರು!
ಬ್ರಿಟಿಷ್ ವಸಾಹತುಶಾಹಿ ಅವಧಿಯಲ್ಲಿ ಸೆಷೆಲ್ಸ್ ಅನ್ನು ಸ್ವಲ್ಪ ಸಮಯದವರೆಗೆ ‘ಬಾಂಬೆ ಪ್ರೆಸಿಡೆನ್ಸಿ’ಯಿಂದ ಆಡಳಿತ ನಡೆಸಲಾಗುತ್ತಿತ್ತು. ಆ ಸಮಯದಲ್ಲಿ ಭಾರತದಿಂದ ಹಡಗುಗಳ ಮೂಲಕ ಸರಕುಗಳ ಸಾಗಣೆ ನಿಯಮಿತವಾಗಿ ನಡೆಯುತ್ತಿತ್ತು. ಪೂರ್ವ ಆಫ್ರಿಕಾದಲ್ಲಿ ವ್ಯಾಪಾರ ಮಾರುಕಟ್ಟೆ ಮಿತಿಮೀರಿದ ನಂತರ ಉತ್ತಮ ಅವಕಾಶಗಳನ್ನು ಹುಡುಕುತ್ತಿದ್ದ ಭಾರತೀಯ ವ್ಯಾಪಾರಿ ಸಮುದಾಯದ ವಲಸೆಗೆ ಈ ವ್ಯಾಪಾರ ಸಂಪರ್ಕಗಳು ಸುಲಭವಾಗಿಸಿದವು.
ಸೆಷೆಲ್ಸ್‌ನ 10% ಕ್ಕಿಂತ ಹೆಚ್ಚು ಜನರು ಭಾರತೀಯ ಬೇರುಗಳನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ. ತಮಿಳು-ಸೆಷೆಲ್ಲೋಯಿಸ್‌ಗಳಲ್ಲಿ ಹಿಂದೂ ಧರ್ಮವು ಪ್ರಧಾನವಾಗಿ ಆರಾಧನೆ ಮಾಡಲ್ಪಡುತ್ತಿದ್ದು, 2001ರ ಜನಗಣತಿಯ ಪ್ರಕಾರ ದೇಶದಲ್ಲಿ 1,600 ಹಿಂದೂಗಳಿದ್ದರು. ವಾರ್ಷಿಕವಾಗಿ ಆಚರಿಸಲ್ಪಡುವ ಕಾವಡಿ ಹಬ್ಬವು ಇಲ್ಲಿನ ಪ್ರಮುಖ ಕಾರ್ಯಕ್ರಮ. ಅಂದು ಎಲ್ಲಾ ಹಿಂದೂಗಳಿಗೆ ಸರ್ಕಾರಿ ರಜಾದಿನ ನೀಡಲಾಗುತ್ತದೆ. ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಯಾಗಿ ಇಟ್ಟುಕೊಳ್ಳಲು ಕಾಲಕಾಲಕ್ಕೆ ಸಾಂಸ್ಕೃತಿಕ ತಂಡಗಳನ್ನು ಭಾರತದಿಂದ ಆಹ್ವಾನಿಸಲಾಗುತ್ತದೆ. ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಸರ್ಕಾರದ ಬೆಂಬಲದೊಂದಿಗೆ ಸ್ಮಶಾನದ (ಕ್ರೆಮಟೋರಿಯಂ) ಸ್ಥಾಪನೆಯನ್ನೂ ಹಿಂದೂಗಳು ಮಾಡಿಕೊಂಡಿದ್ದಾರೆ.
ಸೆಷೆಲ್ಸ್‌ನ ರಾಜಧಾನಿ ವಿಕ್ಟೋರಿಯಾದಲ್ಲಿರುವ ‘ಅರುಳ್ಮಿಗು ನವಶಕ್ತಿ ವಿನಾಯಕರ್ ದೇವಾಲಯ’ವು ದೇಶದ ಮೊದಲ ಮತ್ತು ಏಕೈಕ ಹಿಂದೂ ದೇವಾಲಯ. ಇಲ್ಲಿ ಗಣಪತಿಯನ್ನು ಪ್ರಧಾನವಾಗಿ ಪೂಜಿಸಲಾಗುತ್ತದೆ. ಜೊತೆಗೆ, ದೇವಾಲಯದ ಒಳ ಮಂಟಪದಲ್ಲಿ ಮುರುಗನ್, ನಟರಾಜ, ದುರ್ಗಾ, ಶ್ರೀನಿವಾಸ ಪೆರುಮಾಳ್, ಭೈರವ ಮತ್ತು ಚಂಡಿಕೇಶ್ವರರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ವಿಶೇಷ ಸಂದರ್ಭಗಳಲ್ಲಿ ವಿವಿಧ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

2002ರಲ್ಲಿ ‘ಸೆಷೆಲ್ಸ್ ತಮಿಳು ಮಂದ್ರಂ’ ಸಂಘಟನೆಯನ್ನು ನೋಂದಾಯಿಸಲಾಯಿತು. ಅಂದಿನಿಂದ, ತಮಿಳು ಸಮುದಾಯದ ಬೆಂಬಲ ಮತ್ತು ಸಮಿತಿಯ ಸದಸ್ಯರ ಶ್ರಮದಿಂದ ಸಂಘಟನೆ ಇಂದು ದೊಡ್ಡದಾಗಿ ಬೆಳೆದಿದೆ. ಈ ಸಂಘಟನೆಯು ತಮಿಳು ಸಮುದಾಯದವರ ನಡುವಿನ ಒಡನಾಟ, ತಮಿಳು ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಉತ್ತೇಜಿಸುತ್ತದೆ. ತಮಿಳು ಮಂದ್ರಂ ವತಿಯಿಂದ ವಾರ್ಷಿಕವಾಗಿ ಎರಡು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಜನವರಿಯಲ್ಲಿ ನಡೆಯುವ ಪೊಂಗಲ್ ಹಬ್ಬದ ಸಮಯದಲ್ಲಿ ತಮಿಳುನಾಡಿನಿಂದ ವಿದ್ವಾಂಸರನ್ನು ಕರೆಸಿ ಭಾಷಣ ಮಾಡಿಸಲಾಗುತ್ತದೆ, ಜೊತೆಗೆ ಸ್ಥಳೀಯ ಸಾಂಸ್ಕೃತಿಕ ಪ್ರದರ್ಶನ ನಡೆಸಲಾಗುತ್ತದೆ. ಕೃಷಿಗೆ ಮಹತ್ವದ ತಿಂಗಳಾದ ‘ಆಡಿ’ ಮಾಸವನ್ನು ಸ್ಮರಿಸಲು ಸೆಪ್ಟೆಂಬರ್‌ನಲ್ಲಿ ‘ಆಡಿ ತಿರುವಿಳಾ’ವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಚಿತ್ರಕಲೆ, ಪ್ರಬಂಧ, ಭಾಷಣ ಸ್ಪರ್ಧೆ ಹಾಗೂ ಸಾಂಪ್ರದಾಯಿಕ ಆಟಗಳನ್ನು ಏರ್ಪಡಿಸಲಾಗುತ್ತದೆ. ಅಲ್ಲದೆ ಕಳೆದ ಕೆಲವು ವರ್ಷಗಳಲ್ಲಿ ತಮಿಳು ತರಗತಿಗಳು, ಚರ್ಚಾಸ್ಪರ್ಧೆಗಳು, ನಾಟಕಗಳು ಮತ್ತು ತಮಿಳು ಪ್ರಕಟಣೆಗಳು ಹೆಚ್ಚಾಗಿದ್ದವೆಂಬುದನ್ನು ಇಲ್ಲಿ ಸ್ಮರಿಸಬಹುದು.
ಭಾರತದಿಂದ 4,000 ಕಿ.ಮೀ ದೂರದಲ್ಲಿರುವ ಈ ದೇಶವು ತಮಿಳುನಾಡು, ಪುದುಚೇರಿ ಹಾಗೂ ಗುಜರಾತ್ ರಾಜ್ಯಗಳೊಂದಿಗೆ ದೊಡ್ಡಮಟ್ಟದ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತದೆ. 20ನೇ ಶತಮಾನದಿಂದೀಚೆಗಂತೂ ಭಾರತೀಯರು ಸೆಷೆಲ್ಸ್‌ಗೆ ತೆರಳಿ ವ್ಯಾಪಾರಿಗಳಾಗಿ, ಕಾರ್ಮಿಕರಾಗಿ ಮತ್ತು ನಿರ್ಮಾಣ ಕಾರ್ಮಿಕರಾಗಿ ನೆಲೆಸಿದ್ದಾರೆ.
ಪ್ರಸ್ತುತ ಸೆಷೆಲ್ಸ್‌ನ ಸುಮಾರು 1.2 ಲಕ್ಷ ಜನಸಂಖ್ಯೆಯಲ್ಲಿ, ಸೆಷೆಲ್ಸ್ ಪೌರತ್ವ ಹೊಂದಿರುವ ಭಾರತೀಯ ಮೂಲದವರ ಸಂಖ್ಯೆ ಸುಮಾರು 6,000 ಎಂದು ಅಂದಾಜಿಸಲಾಗಿದೆ. ಇವರಲ್ಲಿ ಬಹುಪಾಲು ಗುಜರಾತಿ ಮತ್ತು ತಮಿಳು ಸಮುದಾಯದವರಾಗಿದ್ದಾರೆ.
ಭಾರತವು 1976 ರಲ್ಲಿ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರು ಸೆಷೆಲ್ಸ್ ದೇಶವನ್ನು ಭಾರತದ ಕಡಲ ನೀತಿಯಾದ ‘ಮಹಾಸಾಗರ್’ (MAHASAGAR – Mutual and Holistic Advancement for Security and Growth Across Regions) ನ ಪ್ರಮುಖ ಭಾಗವೆಂದು ಬಣ್ಣಿಸಿದ್ದಾರೆ. ಭಾರತೀಯ ವಲಸಿಗರ ಸಂಖ್ಯೆ ಹೆಚ್ಚಾಗಿರುವುದರಿಂದ, ಸಾಂಸ್ಕೃತಿಕ ಸಂಪರ್ಕಗಳು ಮುಖ್ಯವಾಗಿ ಸಮುದಾಯದಿಂದಲೇ ನಡೆಸಲ್ಪಡುತ್ತವೆ. ಜೂನ್ 2022ರಲ್ಲಿ, ವಿಕ್ಟೋರಿಯಾದ ಶಾಂತಿ ಉದ್ಯಾನವನದಲ್ಲಿ (Peace Park) ಮಹಾತ್ಮಾ ಗಾಂಧಿಯವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಅಲ್ಲಿ ದಕ್ಷಿಣ ಆಫ್ರಿಕಾದ ಮೊದಲ ಅಧ್ಯಕ್ಷ ನೆಲ್ಸನ್ ಮಂಡೇಲಾ ಮತ್ತು ಸೆಷೆಲ್ಸ್‌ನ ಸ್ಥಾಪಕ ಅಧ್ಯಕ್ಷ ಸರ್ ಜೇಮ್ಸ್ ಮಂಚಮ್ ಅವರ ಪ್ರತಿಮೆಗಳೂ ಇವೆ. ಇಂದು ಭಾರತೀಯ ಮೂಲದ ಸಮುದಾಯವು ಅಲ್ಲಿನ ಎಲ್ಲಾ ಕ್ಷೇತ್ರಗಳಲ್ಲಿ ಕಾಣಸಿಗುತ್ತದೆ. ವ್ಯಾಪಾರ ಮತ್ತು ನಿರ್ಮಾಣ ವಲಯದಲ್ಲಿ ಅವರದ್ದೇ ಮೇಲುಗೈ ಇದೆ. ಅಲ್ಲದೆ, 9,000ಕ್ಕಿಂತ ಹೆಚ್ಚು ಅನಿವಾಸಿ ಭಾರತೀಯರು ಕೆಲಸದ ಅನುಮತಿ ಪಡೆದು ನಿರ್ಮಾಣ ವಲಯದಲ್ಲಿ, ಅಂಗಡಿಗಳಲ್ಲಿ ಮತ್ತು ವೃತ್ತಿಪರರಾಗಿ ಕೆಲಸ ಮಾಡುತ್ತಿದ್ದಾರೆ. 2015ರಲ್ಲಿ, ಸೆಷಲ್ಸ್, ಸುಪ್ರೀಂ ಕೋರ್ಟ್ ನ್ಯಾಯಾಧೀಶ ಡಿ. ಕರುಣಾಕರನ್ ಅವರಿಗೆ ‘ಪ್ರವಾಸಿ ಭಾರತೀಯ ಸಮ್ಮಾನ್’ ಪ್ರಶಸ್ತಿ ನೀಡಿ ಗೌರವಿಸಿದೆ. ಆ ದೇಶದ ಈ ಪ್ರಶಸ್ತಿ ಪಡೆದ ಎರಡನೇ ವ್ಯಕ್ತಿ ಇವರು. 2006ರಲ್ಲಿ ಉದ್ಯಮಿ ಮತ್ತು ಸೆಷೆಲ್ಸ್ ಅಧ್ಯಕ್ಷರ ವೈದ್ಯಕೀಯ ಸಲಹೆಗಾರರಾದ ವಿ. ರಾಮದಾಸ್ ಅವರು ಈ ಪ್ರಶಸ್ತಿ ಪಡೆದಿದ್ದರು.

ಇದನ್ನೂ ಓದಿ: ʼಸರ್ವೈವಲ್ ಮೆಕ್ಯಾನಿಸಂʼ | ನೇರಳೆ ಫಸಲಿಗೂ ಬರಗಾಲಕ್ಕೂ ಎಲ್ಲಿಂದೆಲ್ಲಿಯ ನಂಟು?
ಪ್ರಧಾನಿ ಮೋದಿ ಅವರು ಈ ಹಿಂದೆ 2015ರಲ್ಲಿ ಸೆಷೆಲ್ಸ್ಗೆ ಭೇಟಿ ನೀಡಿದ್ದರು. 1981ರಲ್ಲಿ ಇಂದಿರಾ ಗಾಂಧಿಯವರು ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿಯಾಗಿದ್ದರು. ಸಾಂಸ್ಕೃತಿಕ ಸಂಬಂಧಗಳ ಹೊರತಾಗಿಯೂ ಭಾರತ ಮತ್ತು ಸೆಷೆಲ್ಸ್‌ನ ಸಂಬಂಧ ದೊಡ್ಡದಿದೆ. ಅನುದಾನ, ಸಾಲದ ಸೌಲಭ್ಯ ಮತ್ತು ಸಾಮರ್ಥ್ಯ ನಿರ್ಮಾಣ ಉಪಕ್ರಮಗಳ ಮೂಲಕ ಸೆಷೆಲ್ಸ್‌ನ ಅತ್ಯಂತ ವಿಶ್ವಾಸಾರ್ಹ ಅಭಿವೃದ್ಧಿ ಪಾಲುದಾರರಲ್ಲಿ ಭಾರತ ಒಂದಾಗಿ ಹೊರಹೊಮ್ಮಿದೆ.
ಕಳೆದ ಹಲವು ವರ್ಷಗಳಿಂದ, ಭಾರತವು ಮೂಲಸೌಕರ್ಯ, ಆರೋಗ್ಯ, ಶಿಕ್ಷಣ ಮತ್ತು ಸಾರ್ವಜನಿಕ ಸಾರಿಗೆಯನ್ನು ಬೆಂಬಲಿಸಲು ಗಮನಾರ್ಹ ಸಾಲದ ಸೌಲಭ್ಯ, ಅನುದಾನಗಳನ್ನು ಸೆಷೆಲ್ಸ್‌ಗೆ ನೀಡಿದೆ. ಭಾರತದ ‘ಗ್ಲೋಬಲ್ ಸೌತ್’ ಕಾರ್ಯತಂತ್ರದ ಪ್ರಮುಖ ದೇಶವಾಗಿಯೂ ಸೆಷೆಲ್ಸ್ ಗುರುತಿಸಲ್ಪಟ್ಟಿದೆ. ಇದು ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ಭಾರತದ ನಿರ್ಣಾಯಕ ಕಡಲ ಪಾಲುದಾರನಾಗಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ, ಈ ದ್ವೀಪ ರಾಷ್ಟ್ರವು ಕಡಲ ಭಯೋತ್ಪಾದನೆ, ಕಡಲ್ಗಳ್ಳತನ ಮತ್ತು ಅಕ್ರಮ ಮೀನುಗಾರಿಕೆಯನ್ನು ತಡೆಯಲು ಭಾರತಕ್ಕೆ ಸಹಾಯ ಮಾಡುತ್ತದೆ. ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಏಷ್ಯಾಕ್ಕೆ ಈ ದೇಶ ಹತ್ತಿರದಲ್ಲಿರುವುದರಿಂದ, ಹಿಂದೂ ಮಹಾಸಾಗರದಲ್ಲಿ ಚೀನಾದ ತಂತ್ರಗಳ ಮೇಲೆ ಭಾರತ ಒಂದು ಕಣ್ಣಿಡಲು ಸೆಷೆಲ್ಸ್ ಸೂಕ್ತ ಮತ್ತು ಅಗತ್ಯವಾದ ಕೇಂದ್ರವಾಗಿದೆ.




