ಪೂಜಾ ಸಾಮಗ್ರಿಗಳ ಅಂಗಡಿಯಲ್ಲಿ ಬೆಳಿಗ್ಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಅಂಗಡಿ ಸಂಪೂರ್ಣವಾಗಿ ಹೊತ್ತಿ ಉರಿದ ಘಟನೆ ರಾಯಚೂರು ನಗರದ ಭಂಗಿಕುಂಟಾ ರಸ್ತೆ ಬದಿಯಲ್ಲಿ ನಡೆದಿದೆ.
ಪೂಜಾ ಸಾಮಗ್ರಿಗಳ ಇರುವ ಟಿನ್ ಶೆಡ್ ಅಂಗಡಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಅಂಗಡಿಯನ್ನೆಲ್ಲ ಬೆಂಕಿ ಆವರಿಸಿಕೊಂಡು ಬೆಂಕಿಯ ತೀವ್ರತೆಗೆ ಅಂಗಡಿಯೊಳಗಿದ್ದ ಪೂಜಾ ಸಾಮಗ್ರಿಗಳು ಸುಟ್ಟು ಕರಕಲಾಗಿದ್ದು, ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿತ್ತು ಎನ್ನಲಾಗಿದೆ.
ಬೆಂಕಿಯಿಂದ ಉಂಟಾದ ದಟ್ಟ ಹೊಗೆ ಸಮೀಪದ ಅಪಾರ್ಟ್ಮೆಂಟ್‌ಗಳಿಗೂ ವ್ಯಾಪಿಸಿದ್ದರಿಂದ ನಿವಾಸಿಗಳು ಆತಂಕಗೊಂಡು ಹೊರಗೆ ಧಾವಿಸಿದರು. ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದು ನಂದಿಸಿದರು.
ತ್ವರಿತ ಕಾರ್ಯಾಚರಣೆಯಿಂದ ಬೆಂಕಿ ಪಕ್ಕದ ಅಂಗಡಿಗಳು ಹಾಗೂ ಕಟ್ಟಡಗಳಿಗೆ ವ್ಯಾಪಿಸುವುದನ್ನು ತಡೆದು ಹೆಚ್ಚಿನ ಅನಾಹುತವನ್ನು ತಪ್ಪಿಸಲಾಯಿತು. ಬೆಂಕಿಗಾಹುತಿಯಾದ ಅಂಗಡಿ ತಾಯಣ್ಣ ಎನ್ನುವವರಿಗೆ ಸೇರಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಅಂಗಡಿಯಲ್ಲಿದ್ದ ಪೂಜಾ ಸಾಮಗ್ರಿಗಳು, ಇತರೆ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿದ್ದು, 30 ಲಕ್ಷ ರೂಪಾಯಿ ಅಧಿಕ ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ.
ಪ್ರಾಥಮಿಕ ಮಾಹಿತಿಯಂತೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದ್ದರೂ, ಅಗ್ನಿ ಅವಘಡಕ್ಕೆ ನಿಖರ ಕಾರಣ ತನಿಖೆಯ ಬಳಿಕವೇ ತಿಳಿದುಬರಬೇಕಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ ಕೃಷಿ ಕೂಲಿಕಾರರ ಸಂಘದಿಂದ ಆಗ್ರಹ
ಈ ಸಂಬಂಧ ಸದರ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




