ಸ್ನೇಹಿತನೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿರುವಾಗಲೇ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಆತ್ಮಹತ್ಯೆಗೆ ತುತ್ತಾದ ಯುವತಿಯನ್ನು ರೇಣುಕಾ ಎಂದು ಗುರುತಿಸಲಾಗಿದೆ. ಆಕೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಾ, ‘ಇದು ಹುಟ್ಟುಹಬ್ಬದ ಉಡುಗೊರೆ’ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಪೊಲೀಸ್ ತನಿಖೆಯ ಪ್ರಕಾರ, ರೇಣುಕಾ ಅವರು ಬುಧವಾರ ಮುಂಜಾನೆ 3 ಗಂಟೆ ಸುಮಾರಿಗೆ ತನ್ನ ಸ್ನೇಹಿತನೊಂದಿಗೆ ಹೋಟೆಲ್‌ಗೆ ಬಂದಿದ್ದರು. ಹೋಟೆಲ್ ರೂಮ್‌ನಲ್ಲಿ ಉಳಿದುಕೊಂಡಿದ್ದರು. ಗುರುವಾರ ಆಕೆಯ ಸ್ನೇಹಿತ ಹೋಟೆಲ್‌ನಿಂದ ಹೊರಹೋಗಿದ್ದರು. ರೇಣುಕಾವೊಬ್ಬರೇ ಹೋಟೆಲ್‌ನಲ್ಲಿ ಉಳಿದಿದ್ದರು ಎಂದು ತಿಳಿದುಬಂದಿದೆ.
ಹೋಟೆಲ್ ದಾಖಲೆಗಳ ಪ್ರಕಾರ, ರೇಣುಕಾ ಅವರು ರಾತ್ರಿ 11:56ರ ಸುಮಾರಿಗೆ ಊಟವನ್ನು ಆರ್ಡರ್ ಮಾಡಿದ್ದರು. ಬಳಿಕ ಮಧ್ಯರಾತ್ರಿ 12:18ರ ಸುಮಾರಿಗೆ ರೇಣುಕಾ ತನ್ನ ಸ್ನೇಹಿತ ಸತ್ಯ ಎಂಬಾತನಿಗೆ ವಿಡಿಯೋ ಕಾಲ್ ಮಾಡಿದ್ದಾರೆ. ಈ ವೇಳೆ ಸತ್ಯ ಅವರು ಮದ್ಯಪಾನ ಮಾಡದಂತೆ ಮತ್ತು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ರೇಣುಕಾಗೆ ಸಲಹೆ ನೀಡಿದ್ದರು ಎನ್ನಲಾಗಿದೆ.
ಆದರೆ ರೇಣುಕಾ, ತಾನು ಜೀವನ ಕೊನೆಗಾಣಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಲ್ಲದೆ, ಜುಲೈ 4 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಸತ್ಯನಿಗೆ ಇದು ತನ್ನ ಕಡೆಯಿಂದ ‘ಬರ್ತ್‌ಡೇ ಗಿಫ್ಟ್’ ಎಂದು ಹೇಳಿದ್ದಾರೆ. ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿರುವಾಗಲೇ ರೇಣುಕಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದರಿಂದ, ತೀವ್ರ ಗಾಬರಿಗೊಂಡ ಸತ್ಯ ತಕ್ಷಣವೇ ಇತರರಿಗೆ ವಿಷಯ ಮುಟ್ಟಿಸಿ ಹೋಟೆಲ್‌ಗೆ ಧಾವಿಸಿದ್ದಾರೆ. ಆದರೆ, ಅವರು ಹೋಟೆಲ್ ತಲುಪುವಷ್ಟರಲ್ಲೇ ರೇಣುಕಾ ಮೃತಪಟ್ಟಿದ್ದರು.
ಘಟನೆ ಕುರಿತು ಮಾಹಿತಿ ನೀಡಿರುವ ಲಂಗರ್ ಹೌಸ್ ಸಬ್ ಇನ್ಸ್‌ಪೆಕ್ಟರ್ ಸೈಯದ್ ಮುನವರ್ ಅಲಿ, “ರೇಣುಕಾ ಅವರು ಮಧ್ಯರಾತ್ರಿ 12:24ರ ಸುಮಾರಿಗೆ ಸ್ನೇಹಿತನೊಂದಿಗೆ ವಿಡಿಯೋ ಕಾಲ್‌ನಲ್ಲಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣವನ್ನು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.



