ಅಯೋಧ್ಯೆಯ ರಾಮಮಂದಿರದಲ್ಲಿ ದೇಣಿಗೆಗಳ ದುರುಪಯೋಗವನ್ನು ವಿರೋಧಿಸಿ ಜುಲೈ 5ರಿಂದ ಮಹಾರಾಷ್ಟ್ರದಲ್ಲಿ ‘ರಾಮ ರಕ್ಷಾ’ ಆಂದೋಲನವನ್ನು ನಡೆಸಲಾಗುವುದು ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಶುಕ್ರವಾರ ಘೋಷಿಸಿದ್ದಾರೆ. ಈ ಲೂಟಿಗೆ ಬಿಜೆಪಿಯೇ ಹೊಣೆಯಾಗಿದ್ದು, ಜನರು ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಠಾಕ್ರೆ ಮನವಿ ಮಾಡಿದ್ದಾರೆ.
ಭಾನುವಾರ ಜುಲೈ 5ರಂದು ಮಧ್ಯ ಮುಂಬೈನ ದಾದರ್‌ನಲ್ಲಿರುವ ಹನುಮಾನ್ ದೇವಾಲಯದಲ್ಲಿ ಸಭೆ ಸೇರಿ, ‘ಹನುಮಾನ್ ಸ್ತೋತ್ರ’ ಮತ್ತು ‘ಹನುಮಾನ್ ಚಾಲೀಸಾ’ ಪಠಿಸುತ್ತೇವೆ. ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ಕಳ್ಳತನದ ಜವಾಬ್ದಾರಿಯನ್ನು ಬಿಜೆಪಿ ವಹಿಸಿಕೊಳ್ಳುವಂತೆ ಒತ್ತಡ ಹೇರುತ್ತೇವೆ ಎಂದು ಠಾಕ್ರೆ ಹೇಳಿದ್ದಾರೆ.
ಇದನ್ನೂ ಓದಿ: ರಾಮಮಂದಿರ ಲೂಟಿ: ಆರೋಪಿಗಳ ನಿವಾಸಗಳ ಮೇಲೆ ಪೊಲೀಸ್ ದಾಳಿ; ದಾಖಲೆ ವಶ
ಅವಿಭಜಿತ ಶಿವಸೇನೆಯ ಸದಸ್ಯರು ಸೇರಿದಂತೆ ಅನೇಕ ಹಿಂದೂಗಳು ರಾಮ ಮಂದಿರ ಚಳವಳಿಯಲ್ಲಿ ಭಾಗವಹಿಸಿದ್ದರು. ಹಲವಾರು ಕಷ್ಟಗಳನ್ನು ಸಹಿಸಿಕೊಂಡರು. ಆದರೆ ಬಿಜೆಪಿ ಈ ಘಟನೆಗಳನ್ನು ರಾಜಕೀಯವಾಗಿ ಬಂಡವಾಳ ಮಾಡಿಕೊಂಡಿದೆ. ಈಗ ಅನಿಯಂತ್ರಿಕವಾಗಿ ಅಧಿಕಾರ ಅನುಭವಿಸುತ್ತದೆ ಎಂದು ಆರೋಪಿಸಿದರು.
ಅಯೋಧ್ಯೆ ದೇವಸ್ಥಾನದಲ್ಲಿ ದೇಣಿಗೆಗಳ ದುರುಪಯೋಗದ ಕುರಿತು ಸಾಮಾಜಿಕ ಮಾಧ್ಯಮ ಮತ್ತು ಸಾರ್ವಜನಿಕ ವಲಯದಲ್ಲಿ ಹರಡುತ್ತಿರುವ ಆರೋಪಗಳನ್ನು ಉಲ್ಲೇಖಿಸಿದ ಠಾಕ್ರೆ, “ರಾಮಮಂದಿರದಲ್ಲಿ ಕದ್ದ ಹಣವನ್ನು ವಿರೋಧ ಪಕ್ಷದ ನಾಯಕರನ್ನು ಬೇಟೆಯಾಡಲು ಬಳಸಲಾಗಿದೆಯೇ” ಎಂದು ಪ್ರಶ್ನಿಸಿದರು.
ಇನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಸಿದ್ಧ ಹೇಳಿಕೆ “ಅಬ್ ಹಿಂದೂ ಮಾರ್ ನಹಿ ಖಯೇಗಾ” (ಇನ್ಮುಂದೆ ಹಿಂದೂಗಳು ದೌರ್ಜನ್ಯಕ್ಕೆ ಒಳಗಾಗುವುದಿಲ್ಲ) ಅನ್ನು ಉಲ್ಲೇಖಿಸಿದ ಠಾಕ್ರೆ, “ಈಗ ನಾನು ‘ಅಬ್ ಹಿಂದೂ ಮಾಫ್ ನಹಿ ಕರೇಗಾ’ (ಈಗ ಹಿಂದೂಗಳು ಕ್ಷಮಿಸಲ್ಲ) ಎಂದು ಹೇಳಲು ಬಯಸುತ್ತೇನೆ” ಎಂದು ಹೇಳಿದರು. ಹಿಂದುತ್ವದ ಹೆಸರಿನಲ್ಲಿ ಲೂಟಿಯನ್ನು ನಾವು ಸಹಿಸಲಾಗುವುದಿಲ್ಲ ಎಂದು ಹೇಳಿದರು.




