ಗಂಡನನ್ನು ತೊರೆದು ತಮ್ಮೊಂದಿಗೆ ಬರಲು ನಿರಾಕರಿಸಿದ 19 ವರ್ಷದ ಯುವತಿಯ ಮೇಲೆ ಆಕೆಯ ಪೋಷಕರು ಪೊಲೀಸ್ ಠಾಣೆಯ ಒಳಗೇ ಮಾರಣಾಂತಿಕ ದಾಳಿ ನಡೆಸಿದ್ದಾರೆ. ಯುವತಿಗೆ ಆಕೆಯ ದುರುಳ ತಂದೆ ಚಾಕುವಿನಿಂದ ಇರಿದಿದ್ದು, ಯುವತಿ ಸಾವನ್ನಪ್ಪಿದ್ದಾರೆ. ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ನಡೆದಿದೆ.
ಮೃತ ಯುವತಿಯನ್ನು ಶಿವಾನಿ (19) ಎಂದು ಗುರುತಿಸಲಾಗಿದೆ. ಶಿವಾನಿ ಅವರು ಲಲಿತ್ ವರ್ಮಾ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಮೇ 18 ರಂದು ಮನೆತೊರೆದು ಹೋಗಿ, ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರು. ಅಲ್ಲದೆ, ತಮ್ಮ ಮದುವೆಯನ್ನು ನೋಂದಣಿ ಮಾಡಿದ್ದರು.
ಆದರೆ, ಶಿವಾನಿ ಪೋಷಕರು ಲಲಿತ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಯುವ ಜೋಡಿಗಾಗಿ ಹುಡುಕಾಟ ನಡೆಸಿತ್ತು. ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿದ್ದ ಜೋಡಿಯನ್ನು ಪತ್ತೆಹಚ್ಚಿ, ಶುಕ್ರವಾರ ಪೊಲೀಸ್ ಠಾಣೆಗೆ ಕರೆತಂದಿದ್ದರು.
ಠಾಣೆಯಲ್ಲಿ ದಂಪತಿಗಳು ತಾವು ಸ್ವಇಚ್ಛೆಯಿಂದ ಮದುವೆಯಾಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲದೆ, ತಮ್ಮ ವಿವಾಹ ದಾಖಲೆಗಳನ್ನೂ ಹಾಜರುಪಡಿಸಿದ್ದರು.
ಪೊಲೀಸರು ಶಿವಾನಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾಗ, ಆಕೆಯ ಪೋಷಕರು ತಮ್ಮೊಂದಿಗೆ ಮನೆಗೆ ಮರಳುವಂತೆ ಒತ್ತಡ ಹೇರಿದ್ದಾರೆ. ಆದರೆ, ಶಿವಾನಿ ತನ್ನ ಪತಿ ಲಲಿತ್ ವರ್ಮಾ ಅವರೊಂದಿಗೇ ವಾಸಿಸುವುದಾಗಿ ಪಟ್ಟು ಹಿಡಿದಿದ್ದಾರೆ.
ಈ ಲೇಖನ ಓದಿದ್ದೀರಾ?: ರಾಮಮಂದಿರ ದೇಣಿಗೆ ದುರುಪಯೋಗ: ಬಿಜೆಪಿಯ ಬ್ರಿಜ್ ಭೂಷಣ್ ಆರೋಪಗಳ ಸುತ್ತ
ಈ ವೇಳೆ, ಮೊದಲೇ ಸಂಚು ಮಾಡಿಕೊಂಡು ಬಂದಿದ್ದವರಂತೆ ಶಿವಾನಿಯ ತಾಯಿ ರನ್ನೋ ಎಂಬಾಕೆ ಮಗಳನ್ನು ಹಿಂದಿನಿಂದ ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ. ತಕ್ಷಣವೇ, ಆರೋಪಿ ತಂದೆ ಚಾಕು ತೆಗೆದು ಮಗಳ ಮೇಲೆ ಮನಸೋಇಚ್ಛೆ ದಾಳಿ ನಡೆಸಿದ್ದಾನೆ. ದಾಳಿಯ ಪರಿಣಾಮವಾಗಿ ಶಿವಾನಿಯ ಹೊಟ್ಟೆ, ಕೈ ಮತ್ತು ಅಂಗೈಗೆ ಗಂಭೀರ ಗಾಯಗಳಾಗಿದ್ದವು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಆಕೆ ಕೊನೆಯುಸಿರೆಳೆದಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬಂದಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಪಲಾಶ್ ಬನ್ಸಾಲ್, “ಘಟನೆಗೆ ಸಂಬಂಧಿಸಿದಂತೆ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯುವತಿಯ ತಂದೆಯನ್ನು ಈಗಾಗಲೇ ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ.



