ಬೆಳಗಾವಿ ಜಿಲ್ಲೆಯ ಆಸ್ಪತ್ರೆಯಲ್ಲೇ ವ್ಯಕ್ತಿಯೊಬ್ಬನಿಗೆ ಸಲೈನ್‌ನಲ್ಲಿ ವಿಷ ಬೆರೆಸಿ ಕೊಲೆ ಮಾಡಿರುವ ಪ್ರಕರಣವನ್ನು ಪೊಲೀಸರು ಬಯಲಿಗೆಳೆದ ಬೆನ್ನಲ್ಲೇ, ಪ್ರಕರಣವನ್ನು ಮುಚ್ಚಿಹಾಕಲು ಎಫ್‌ಎಸ್‌ಎಲ್ ವರದಿಯನ್ನೇ ತಿರುಚಲು ಯತ್ನಿಸಿರುವದು ಬೆಳಕಿಗೆ ಬಂದಿದೆ.
ಈ ಸಂಬಂಧ ಪೊಲೀಸ್ ಕಮಿಷನರ್ ಕಚೇರಿಯ ಪ್ರಥಮ ದರ್ಜೆ ಗುಮಾಸ್ತ, ಎಫ್‌ಎಸ್‌ಎಲ್ ಕಚೇರಿಯ ಅಧಿಕಾರಿ ಹಾಗೂ ಕೆಲ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ.
ಬೆಳಗಾವಿ ಜಿಲ್ಲೆಯ ಘಟಪ್ರಭಾ ಠಾಣೆ ವ್ಯಾಪ್ತಿಯ ಈ ಪ್ರಕರಣದಲ್ಲಿ ಅಪಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಗೆ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ವಿಷ ನೀಡಿ ಹತ್ಯೆ ಮಾಡಿರುವ ಆರೋಪ ಕೇಳಿಬಂದಿತ್ತು. ಆರಂಭದಲ್ಲಿ ಅಪಘಾತವೇ ಸಾವಿಗೆ ಕಾರಣ ಎಂದು ನಂಬಲಾಗಿದ್ದರೂ, ತನಿಖೆ ವೇಳೆ ಇದು ಪೂರ್ವನಿಯೋಜಿತ ಕೊಲೆ ಎಂಬುದು ಬೆಳಕಿಗೆ ಬಂದಿತ್ತು.
ಪ್ರಕರಣದ ತನಿಖೆ ನಡೆಸಿದ ಯಮಕನಮರಡಿ ಠಾಣೆಯ ಇನ್ಸ್‌ಪೆಕ್ಟರ್ ಜಾವೀದ್ ಮುಶಾಪುರೆ ಅವರ ನೇತೃತ್ವದ ತಂಡ, ಮೃತನ ಪತ್ನಿ ಸುಮಾ ಹಾಗೂ ಆಕೆಯ ಪ್ರಿಯಕರ ಪುಂಡಲೀಕ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಆದರೆ ತನಿಖೆ ಮುಂದುವರಿದ ವೇಳೆ ಲ್ಯಾಬ್ ವರದಿಯನ್ನು ಬದಲಾಯಿಸುವ ಮೂಲಕ ಪ್ರಕರಣದ ದಿಕ್ಕು ತಪ್ಪಿಸಲು ಯತ್ನ ನಡೆದಿರುವ ಆರೋಪವೂ ಹೊರಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಕಚೇರಿ ಹಾಗೂ ಎಫ್‌ಎಸ್‌ಎಲ್ ಕಚೇರಿಯ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಒಂದರ ಹಿಂದೆ ಒಂದರಂತೆ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿರುವ ಈ ಪ್ರಕರಣ ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ತನಿಖೆಯಲ್ಲಿ ಇನ್ನಷ್ಟು ಮಹತ್ವದ ಮಾಹಿತಿ ಹೊರಬರುವ ಸಾಧ್ಯತೆ ಇದೆ.



