ದ್ವೇಷ ಭಾಷಣ ಪ್ರಕರಣದಲ್ಲಿ ವಿಚಾರಣಾಧಿಕಾರಿಯ ಮುಂದೆ ಖುದ್ದಾಗಿ ಹಾಜರಾಗುವಂತೆ ಕಲ್ಕತ್ತಾ ಹೈಕೋರ್ಟ್ ನೀಡಿದ್ದ ನಿರ್ದೇಶನವನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. “ಸ್ವಾತಂತ್ರ್ಯ ಹೋರಾಟಗಾರರು ಎದೆಗೆ ಗುಂಡು ಹೊಡೆಸಿಕೊಂಡಿದ್ದಾರೆ. ನೀವು ರಾಜಕೀಯಕ್ಕೆ ಬಂದ ಮೇಲೆ ಮೊಟ್ಟೆ ಎಸೆಯುತ್ತಾರೆ ಎಂದು ಹೆದರುತ್ತೀರಾ” ಎಂದು ಮೊಯಿತ್ರಾ ಅವರನ್ನು ನ್ಯಾಯಪೀಠ ಪ್ರಶ್ನಿಸಿದೆ.
ಮೊಯಿತ್ರಾ ಅವರ ಅರ್ಜಿಯನ್ನು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಶೀಲ್ ನಾಗು ಅವರಿದ್ದ ಪೀಠವು ವಿಚಾರಣೆ ನಡೆಸಿದೆ. ಕಲ್ಕತ್ತಾ ಹೈಕೋರ್ಟ್ ನೀಡಿದ್ದ ಆದೇಶದಲ್ಲಿ ಮಧ್ಯಪ್ರವೇಶಿಸಲು ತಮಗೆ ಆಸಕ್ತಿ ಇಲ್ಲ ಎಂದು ಹೇಳಿದೆ.
ವಿಚಾರಣೆ ವೇಳೆ, ಮಹುವಾ ಮೊಯಿತ್ರಾ ಪರ ಹಾಜರಿದ್ದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, “ಪೊಲೀಸರು ನೀಡಿರುವ ನೋಟಿಸ್ ಪ್ರಕಾರ, ತಮ್ಮ ಲೋಕಸಭಾ ಕ್ಷೇತ್ರದಲ್ಲಿರುವ ಪೊಲೀಸ್ ಠಾಣೆಗೆ ಖುದ್ದಾಗಿ ಹಾಜರಾಗಬೇಕಾಗಿದೆ. ಆದರೆ, ಈ ಹಿಂದೆ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಬಿಜೆಪಿ ಕಾರ್ಯಕರ್ತರಿಂದ ಬೆದರಿಕೆ ಮತ್ತು ಮೊಟ್ಟೆ ಎಸೆಯುವ ಘಟನೆಗಳು ನಡೆದಿದ್ದವು. ಆದ್ದರಿಂದ, ಮೊಯಿತ್ರಾ ಅವರಿಗೆ ಭದ್ರತೆ ಆತಂಕವಿದೆ. ತನಿಖೆಗೆ ವರ್ಚುವಲ್ ಮೂಲಕ ಹಾಜರಾಗುವ ಹಕ್ಕು ಅವರಿಗಿದ್ದು, ಅದಕ್ಕೆ ಅವಕಾಶ ನೀಡಬೇಕು” ಎಂದು ವಾದಿಸಿದರು.
ಈ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, “ರಾಜಕೀಯ ಜೀವನದಲ್ಲಿ ಇಂತಹ ಘಟನೆಗಳನ್ನು ನೆಪವಾಗಿ ಮುಂದಿಡಲು ಸಾಧ್ಯವಿಲ್ಲ. ನೀವು (ಮೊಯಿತ್ರಾ) ಸಂಸದರು. ರಾಜಕೀಯಕ್ಕೆ ಬಂದ ಮೇಲೆ ಮೊಟ್ಟೆ ಎಸೆಯುತ್ತಾರೆ ಎಂದು ಹೆದರುತ್ತೀರಾ? ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಎದೆಗೆ ಗುಂಡು ಹೊಡೆಸಿಕೊಂಡಿದ್ದಾರೆ. ಇಂತಹ ಅರ್ಜಿಗಳು ಈ ನ್ಯಾಯಾಲಯದ ಮುಂದೆ ಬರಬಾರದು” ಎಂದು ಹೇಳಿದೆ.
ಅರ್ಜಿಯ ಹಿನ್ನೆಲೆ
ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು, ಅಧಿಕಾರಕ್ಕೇರಿದೆ. ಬಿಜೆಪಿ ಸರ್ಕಾರ ರಚನೆಯಾದ ಬಳಿಕ, ಟಿಎಂಸಿ ನಾಯಕರಾದ ಮಹುವಾ ಮೊಯಿತ್ರಾ ಮತ್ತು ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಹಲವು ನಾಯಕರ ಮೇಲೆ ಸಾರ್ವಜನಿಕ ಕಾರ್ಯಕ್ರಮಗಳ ವೇಳೆ ಬಿಜೆಪಿಗರು ಮೊಟ್ಟೆ ಎಸೆದ ಘಟನೆಗಳು ನಡೆದಿವೆ.
ಈ ನಡುವೆ, ನಾದಿಯಾ ಜಿಲ್ಲೆಯಲ್ಲಿ ದಾಖಲಾಗಿರುವ ದ್ವೇಷ ಭಾಷಣ ಪ್ರಕರಣ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಮೊಯಿತ್ರಾ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಆದರೆ, ಇದು ಸುಳ್ಳು ಆರೋಪಗಳ ಮೇಲೆ ದಾಖಲಾಗಿರುವ ಪ್ರಕರಣ ಎಂದು ಮೊಯಿತ್ರಾ ಆರೋಪಿಸಿದ್ದರು. ಅಲ್ಲದೆ, ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂಬುದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು.
ಜುಲೈ 21ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಅಕ್ಟೋಬರ್ 5ರವರೆಗೆ ಬಲವಂತದ ಕ್ರಮ ಕೈಗೊಳ್ಳದಂತೆ ಮೊಯಿತ್ರಾ ಅವರಿಗೆ ಮಧ್ಯಂತರ ರಕ್ಷಣೆ ನೀಡಿತ್ತು. ಆದರೆ, ಅವರು ತನಿಖೆಗೆ ಸಹಕರಿಸಬೇಕು ಮತ್ತು ವಿಚಾರಣಾಧಿಕಾರಿಯ ಮುಂದೆ ಖುದ್ದಾಗಿ ಹಾಜರಾಗಬೇಕು ಎಂದು ಷರತ್ತು ವಿಧಿಸಿತ್ತು.
ಅದೇ ನಿರ್ದೇಶನವನ್ನು ಪ್ರಶ್ನಿಸಿ ಮಹುವಾ ಮೊಯಿತ್ರಾ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.



