ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಸಿ.ಎಂ ಇಬ್ರಾಹಿಂ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜೆಡಿಎಸ್ ಪಕ್ಷದಿಂದ ಅಮಾನತು ಮಾಡಿ, ಆದೇಶ ಹೊರಡಿಸಿದ್ದಾರೆ.
ಬಿಜೆಪಿ, ಜೆಡಿಎಸ್ ಮೈತ್ರಿ ಮಾತುಕತೆಯನ್ನು ವಿರೋಧಿಸಿದ್ದ ಸಿ.ಎಂ ಇಬ್ರಾಹಿಂ ಅವರು ‘ಒರಿಜಿನಲ್ ಜೆಡಿಎಸ್ ಪಕ್ಷ ನಮ್ಮದೇ. ನಿಜವಾದ ಜಾತ್ಯಾತೀತ ಜನತಾ ದಳವನ್ನು ಕಟ್ಟುತ್ತೇನೆ’ ಎಂದು ಗುಡುಗಿದ್ದರು. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರನ್ನೇ ಪಕ್ಷದಿಂದ ಉಚ್ಛಾಟನೆ ಮಾಡಲು ಚಿಂತಿಸುವುದಾಗಿಯೂ ಮಾತನಾಡಿದ್ದರು.
ಸಿ.ಎಂ ಇಬ್ರಾಹಿಂ ಅವರ ಈ ರಾಜಕೀಯ ನಡೆಗೆ ಇದೀಗ ಹೆಚ್.ಡಿ ದೇವೇಗೌಡರೇ ಬ್ರೇಕ್ ಹಾಕಿದ್ದಾರೆ. ಕಳೆದ ನವೆಂಬರ್ 15ರಂದು ಕೇರಳದ ತಿರುವನಂತಪುರಂ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಭಾಗಿಯಾಗಿದ್ದರು. ಪಕ್ಷದ ವಿರೋಧಿ ಹೇಳಿಕೆಯನ್ನು ನೀಡಿದ್ದಾರೆ ಎಂಬ ಕಾರಣದಿಂದಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರು ಪಕ್ಷದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸಿ.ಎಂ. ಇಬ್ರಾಹಿಂರವರು ಸಾರ್ವಜನಿಕವಾಗಿ ಪಕ್ಷದ ರಾಷ್ಟ್ರಧ್ಯಕ್ಷ, ರಾಜ್ಯ ಶಾಸಕಾಂಗ ಪಕ್ಷದ ನಾಯಕರ ವಿರುದ್ಧ ಹಾಗೂ ರಾಜ್ಯದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದೊಂದಿಗೆ ಮಾಡಿಕೊಂಡ ಮೈತ್ರಿ ಬಗ್ಗೆ, ಪಕ್ಷದ ರಾಜ್ಯ ಪರಿಷತ್, ಶಾಸಕಾಂಗ ಪಕ್ಷದ ಸಭೆ, ಕೋಡ್ ಸಮಿತಿ ಮುಂತಾದ ಸಭೆಗಳಲ್ಲಿ ಒಮ್ಮತದ ನಿರ್ಣಯವಾಗಿದೆ. ಆದರೂ ಕೂಡ ಬಹಿರಂಗವಾಗಿ ಪಕ್ಷ ವಿರೋಧಿ ಹೇಳಿಕೆ ನೀಡಿ, ಪಕ್ಷದ ಹಿತಕ್ಕೆ ಧಕ್ಕೆ ತಂದಿರುತ್ತಾರೆ. ಇಂತಹ ನಡವಳಿಕೆ ಮತ್ತು ಹೇಳಿಕೆಗಳು ಪಕ್ಷದ ವಿರೋಧಿ ಚಟುವಟಿಕೆ. ಹಾಗಾಗಿ, ಸಿಎಂ ಇಬ್ರಾಹಿಂ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜೆಡಿಎಸ್ ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್ ಡಿ ದೇವೇಗೌಡರು ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.