ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಒಂಬತ್ತನೇ ತರಗತಿಯ ಸಾಮಾಜಿಕ ವಿಜ್ಞಾನ ಮತ್ತು ಭಾಷಾ ಪಠ್ಯಕ್ರಮದಲ್ಲಿ ಮತ್ತೆ ಕೇಸರೀಕರಣದ ಕುತಂತ್ರ ಕಂಡುಬಂದಿದೆ. ಹೊಸದಾಗಿ ಸೇರ್ಪಡೆಗೊಳಿಸಲಾದ ಪಠ್ಯದಲ್ಲಿ ಪ್ರಾಚೀನ ಭಾರತದ ಆಡಳಿತ ಶೈಲಿ ಮತ್ತು ರಾಮರಾಜ್ಯದ ಆದರ್ಶ ಮಾದರಿಯನ್ನು ಪ್ರಮುಖವಾಗಿ ಬಿಂಬಿಸಲಾಗಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳು, ಸಾಮಾಜಿಕ ನ್ಯಾಯ, ನೈತಿಕತೆ ಮತ್ತು ರಾಜಧರ್ಮದ ಸಂಕೇತವಾಗಿ ರಾಮರಾಜ್ಯದ ಆಡಳಿತ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಈ ಬದಲಾವಣೆಯ ಮುಖ್ಯ ಉದ್ದೇಶ ಎಂದು ಮಂಡಳಿ ತಿಳಿಸಿದೆ.
ಒಂಬತ್ತನೇ ತರಗತಿಯ ಹೊಸ ಪಠ್ಯದಲ್ಲಿ ರಾಮಾಯಣದ ಅಯೋಧ್ಯಾ ಕಾಂಡ ಮತ್ತು ಉತ್ತರ ಕಾಂಡಗಳ ಆಧಾರಿತ ಆಡಳಿತ ಸೂತ್ರಗಳನ್ನು ಸೇರಿಸಲಾಗಿದೆ. ರಾಜನು ಪ್ರಜೆಗಳ ಕ್ಷೇಮಕ್ಕಾಗಿ ಹೇಗೆ ಕಾರ್ಯನಿರ್ವಹಿಸಬೇಕು, ತೆರಿಗೆ ಸಂಗ್ರಹಣೆಯ ನಿಯಮಗಳು ಮತ್ತು ನ್ಯಾಯಸಮ್ಮತ ಆಡಳಿತದ ತತ್ವಗಳನ್ನು ರಾಮಾಯಣದ ಕಥಾನಕದ ಮೂಲಕ ವಿವರಿಸಲಾಗಿದೆ.
ಇದನ್ನೂ ಓದಿ: ಶಿಕ್ಷಣದಲ್ಲಿ RSS ಅಜೆಂಡಾಕ್ಕೆ ‘ಬ್ರೇಕ್’ – ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಹೊಸ ‘ಕಾರ್ಯಯೋಜನೆ’ ಅಳವಡಿಕೆಗೆ ನಿರ್ಧಾರ
ಪ್ರಜೆಗಳಲ್ಲಿ ಭೇದಭಾವವಿಲ್ಲದಿರುವುದು, ಭ್ರಷ್ಟಾಚಾರ ರಹಿತ ಆಡಳಿತ ಮತ್ತು ಸಾಮಾಜಿಕ ಸಾಮರಸ್ಯವನ್ನು ರಾಮರಾಜ್ಯದ ಮೂಲಾಧಾರಗಳಾಗಿ ಪಠ್ಯದಲ್ಲಿ ಚಿತ್ರಿಸಲಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಉತ್ತಮ ಆಡಳಿತದ ಕಲ್ಪನೆಗಳು ಪಾಶ್ಚಿಮಾತ್ಯ ಪ್ರಭಾವಕ್ಕಿಂತ ಮುಂಚೆಯೇ, ಪ್ರಾಚೀನ ಮಹಾಕಾವ್ಯಗಳ ಕಾಲದಲ್ಲೇ ಅಸ್ತಿತ್ವದಲ್ಲಿದ್ದವು ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸುವುದು ಈ ಪಾಠದ ಮುಖ್ಯ ಆಶಯವಾಗಿದೆ ಎಂದು ಮಂಡಳಿ ಹೇಳಿಕೊಂಡಿದೆ.
ಎನ್‌ಸಿಇಆರ್‌ಟಿಯ ಈ ನಡೆಯು ದೇಶಾದ್ಯಂತ ಶಿಕ್ಷಣ ತಜ್ಞರು, ವಿರೋಧ ಪಕ್ಷಗಳು ಮತ್ತು ಸಮಾಜಶಾಸ್ತ್ರಜ್ಞರ ನಡುವೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪಠ್ಯಕ್ರಮದಲ್ಲಿ ಜಾತ್ಯತೀತ ಮೌಲ್ಯಗಳನ್ನು ಬದಿಗೊತ್ತಿ, ನಿರ್ದಿಷ್ಟ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಿದ್ಧಾಂತಗಳನ್ನು ಬಲವಂತವಾಗಿ ಹೇರಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಇತಿಹಾಸ ಮತ್ತು ಪೌರನೀತಿಯ ಪಠ್ಯಗಳಲ್ಲಿ ವೈಜ್ಞಾನಿಕ ಮತ್ತು ಚಾರಿತ್ರಿಕ ಸತ್ಯಗಳಿಗಿಂತ ಹೆಚ್ಚಾಗಿ ಪೌರಾಣಿಕ ವಿಷಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಇದು ಶಿಕ್ಷಣ ಕ್ಷೇತ್ರದಲ್ಲಿ ‘ಕೇಸರೀಕರಣ’ (Saffronisation) ಪ್ರಕ್ರಿಯೆಯ ಒಂದು ಭಾಗವಾಗಿದೆ. ಅದರಲ್ಲೂ ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯು ಬಹುಸಂಸ್ಕೃತಿ ಮತ್ತು ವಿವಿಧ ಧರ್ಮಗಳ ಸಮಾನ ಪ್ರಾತಿನಿಧ್ಯವನ್ನು ಹೊಂದಿರಬೇಕು. ಆದರೆ, ಮಹಾಕಾವ್ಯಧಾರಿತ ಆಡಳಿತ ಮಾದರಿಯನ್ನು ಏಕೈಕ ‘ಆದರ್ಶ ಮಾದರಿ’ಯಾಗಿ ಪ್ರಸ್ತುತಪಡಿಸುವುದು ಪಠ್ಯಪುಸ್ತಕಗಳ ಜಾತ್ಯತೀತ ಸ್ವರೂಪಕ್ಕೆ ಧಕ್ಕೆ ತರುತ್ತದೆ ಎಂದು ಶಿಕ್ಷಣ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ವಾಜಪೇಯಿಯಿಂದ ಮೋದಿವರೆಗಿನ ಶಿಕ್ಷಣ ಕೇಸರೀಕರಣ
ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ, ಅಂದಿನ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಮುರಳಿ ಮನೋಹರ್ ಜೋಶಿ ಅವರ ನೇತೃತ್ವದಲ್ಲಿ ‘ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2000’ (NCF 2000) ಜಾರಿಗೆ ತರಲಾಯಿತು. ಆ ಸಂದರ್ಭದಲ್ಲೇ ಮೊದಲ ಬಾರಿಗೆ ‘ಪಠ್ಯಪುಸ್ತಕಗಳ ಕೇಸರೀಕರಣ’ ಎಂಬ ವಿಚಾರ ಸಾರ್ವಜನಿಕವಾಗಿ ವ್ಯಾಪಕ ಚರ್ಚೆಗೆ ಬಂದಿತು. ಆ ಸಂದರ್ಭದಲ್ಲಿ ಶಾಲಾ ಪಠ್ಯಗಳಲ್ಲಿ ವೈದಿಕ ಗಣಿತ (Vedic Mathematics) ಸೇರಿಸಲಾಗಿತ್ತು. ಮೊಘಲರ ಆಡಳಿತ, ಸುಲ್ತಾನರ ಕಾಲ ಮತ್ತು ಮುಸ್ಲಿಂ ರಾಜರ ಕೊಡುಗೆಗಳಿಗೆ ಸಂಬಂಧಿಸಿದ ಭಾಗಗಳನ್ನು ಕಡಿತಗೊಳಿಸಿ, ಪ್ರಾಚೀನ ಹಿಂದೂ ರಾಜವಂಶಗಳು (ಗುಪ್ತರು, ಮೌರ್ಯರು, ಚೋಳರು ಇತ್ಯಾದಿ) ಹಾಗೂ ವೇದ ಕಾಲದ ಸಂಸ್ಕೃತಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು.
ಅದಾದ ಬಳಿಕ 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದಾಗಿನಿಂದ ನಿರಂತರವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕೇಸರೀಕರಣ ನಡೆಸಲಾಗುತ್ತಿದೆ. 7ನೇ ತರಗತಿಯ ‘ಅವರ್ ಪಾಸ್ಟ್ಸ್-2’ ಮತ್ತು 12ನೇ ತರಗತಿಯ ಇತಿಹಾಸ ಪಠ್ಯಗಳಲ್ಲಿದ್ದ ಮೊಘಲ್ ಸಾಮ್ರಾಜ್ಯ, ದೆಹಲಿ ಸುಲ್ತಾನರು ಮತ್ತು ಮಮ್ಲೂಕ್ ಮನೆತನದ ಆಡಳಿತಾವಧಿಯ ಇಡೀ ಅಧ್ಯಾಯಗಳನ್ನು ಹಾಗೂ ವಂಶವೃಕ್ಷಗಳನ್ನು ಪಠ್ಯದಿಂದ ಸಂಪೂರ್ಣವಾಗಿ ಅಥವಾ ಭಾಗಶಃ ಕೈಬಿಡಲಾಗಿತ್ತು.
ಇದನ್ನೂ ಓದಿ: ʼಕೃಷ್ಣʼ ಹೆಸರೇಕೆ? ಪಠ್ಯಪುಸ್ತಕಗಳ ಕೇಸರೀಕರಣ ಆರೋಪಕ್ಕೆ NCERT ಉತ್ತರ
12ನೇ ತರಗತಿಯ ರಾಜಕೀಯ ವಿಜ್ಞಾನ ಪಠ್ಯಪುಸ್ತಕದಿಂದ ಮಹಾತ್ಮ ಗಾಂಧೀಜಿಯವರ ಹತ್ಯೆಯ ನಂತರ ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್) ನಿಷೇಧಿಸಿದ್ದ ಉಲ್ಲೇಖವನ್ನು ತೆಗೆದುಹಾಕಲಾಯಿತು. ಗಾಂಧೀಜಿಯವರ ‘ಹಿಂದೂ-ಮುಸ್ಲಿಂ ಏಕತೆಯ ಶ್ರಮ’ ಹಾಗೂ ‘ನಾಥೂರಾಮ್ ಗೋಡ್ಸೆ ಒಬ್ಬ ಬ್ರಾಹ್ಮಣ ಮತ್ತು ತೀವ್ರಗಾಮಿ ದಿನಪತ್ರಿಕೆಯ ಸಂಪಾದಕನಾಗಿದ್ದ’ ಎಂಬ ಸಾಲುಗಳನ್ನು ಪಠ್ಯದಿಂದ ಅಳಿಸಿಹಾಕಲಾಯಿತು.
12ನೇ ತರಗತಿಯ ‘ಸ್ವತಂತ್ರ ಭಾರತದಲ್ಲಿ ರಾಜಕೀಯ’ ಪಠ್ಯದಲ್ಲಿದ್ದ 2002ರ ಗುಜರಾತ್ ಗಲಭೆಯ ವಿವರಗಳು ಹಾಗೂ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ರಾಜಧರ್ಮ ಪಾಲಿಸುವಂತೆ ನೀಡಿದ್ದ ಸಲಹೆಯ ಭಾಗವನ್ನು ಸಂಪೂರ್ಣವಾಗಿ ಕೈಬಿಡಲಾಯಿತು. ಅಷ್ಟು ಮಾತ್ರವಲ್ಲದೆ ದಲಿತ ಚಳವಳಿಗಳು, ಸಿಪಿಐ (ಮಾರ್ಕ್ಸ್‌ವಾದಿ), ನರ್ಮದಾ ಬಚಾವೋ ಆಂದೋಲನ, ಸಿಖ್ ವಿರೋಧಿ ದಂಗೆಗಳು (1984) ಮತ್ತು ದಲಿತ ಪ್ಯಾಂಥರ್ಸ್ ಕುರಿತ ಅಧ್ಯಾಯಗಳನ್ನು ರದ್ದುಗೊಳಿಸಲಾಯಿತು. ಪೌರನೀತಿ ಪಠ್ಯಗಳಲ್ಲಿದ್ದ ‘ಜಾತಿ, ಧರ್ಮ ಮತ್ತು ಲಿಂಗ ಭೇದಭಾವ’ ಹಾಗೂ ‘ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಸವಾಲುಗಳು’ ಎಂಬ ವಿಷಯಗಳನ್ನು ಕಡಿತಗೊಳಿಸಲಾಯಿತು.
ಅದರಲ್ಲೂ ಇತ್ತೀಚೆಗೆ 10ನೇ ತರಗತಿಯ ಜೈವಿಕ ವಿಜ್ಞಾನ ಪಠ್ಯದಿಂದ ಚಾರ್ಲ್ಸ್ ಡಾರ್ವಿನ್ ಅವರ ‘ಜೀವ ವಿಕಾಸ ಸಿದ್ಧಾಂತ’ ಮತ್ತು ರಸಾಯನಶಾಸ್ತ್ರದಿಂದ ‘ಆವರ್ತಕ ಕೋಷ್ಟಕ’ ಭಾಗಗಳನ್ನು ತೆಗೆದುಹಾಕಿರುವುದಕ್ಕೆ ದೇಶ-ವಿದೇಶಗಳ ವಿಜ್ಞಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇವೆಲ್ಲವುದಕ್ಕೂ ಕೇಂದ್ರ ಸರ್ಕಾರವು ಪಠ್ಯದ ಹೊರೆ ಕಡಿಮೆ ಮಾಡುವ ನೆಪ ನೀಡುತ್ತಿದೆ. ಆದರೆ ಕೇಸರೀಕರಣದ ಸ್ಪಷ್ಟ ಹುನ್ನಾರ ಎದ್ದು ಕಾಣುತ್ತಿದೆ.




