ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಕೀಲರ ಸಂಘವೊಂದು ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಪರವಾಗಿ ನಿಂತಿದ್ದು, ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಉಚಿತವಾಗಿ ಕಾನೂನು ನೆರವು ನೀಡುವುದಾಗಿ ಘೋಷಿಸಿದೆ.
ಇಂದು ಮಹಾರಾಷ್ಟ್ರದ ಮುಂಬೈನಲ್ಲಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಪ್ರತಿಭಟನೆ ನಡೆಸಲಿದೆ. ಆದರೆ ಶಿವಾಜಿ ಪಾರ್ಕ್ ಬಳಿ ಪ್ರತಿಭಟನೆ ನಡೆಸುವುದಕ್ಕೆ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ. ಸಿಜೆಪಿ ಮಾತ್ರ ತಾವು ಅಲ್ಲೇ ಪ್ರತಿಭಟನೆ ನಡೆಸುವುದಾಗಿ, ಅಗತ್ಯ ಬಿದ್ದರೆ ಜೈಲ್ ಬರೋ ಆಂದೋಲನ ನಡೆಸುವುದಾಗಿ ಹೇಳಿದ್ದಾರೆ. ಸಿಜೆಪಿ ಹೋರಾಟಗಾರರು ಹಾಗೂ ಪ್ರತಿಭಟನಾಕಾರರ ವಿರುದ್ಧ ಪ್ರಕರಣಗಳು ದಾಖಲಾಗುತ್ತಿರುವ ಮತ್ತು ಬಂಧನದ ಸಾಧ್ಯತೆ ಎದುರಾಗುತ್ತಿರುವ ನಡುವೆ ಇದೀಗ ಪಾಲ್ಘರ್ ಜಿಲ್ಲೆಯ ವಕೀಲರ ಸಂಘ ಸಿಜೆಪಿ ಪರ ನಿಂತಿದೆ.
ಇದನ್ನೂ ಓದಿ: ಸಿಜೆಪಿ ಜೊತೆ ಗುರುತಿಸಿಕೊಂಡವರ ಚಟುವಟಿಕೆಗಳ ತನಿಖೆ ಕೋರಿ ಅರ್ಜಿ: ಕೇಂದ್ರ, ಸಿಬಿಐ ಪ್ರತಿಕ್ರಿಯೆ ಕೇಳಿದ ಸುಪ್ರೀಂ
ವಕೀಲರ ಸಂಘದ ಪದಾಧಿಕಾರಿಗಳು ಮಾತನಾಡಿ, “ಸಿಜೆಪಿ ಕಾರ್ಯಕರ್ತರ ವಿರುದ್ಧ ಯಾವುದೇ ದಮನಕಾರಿ ಕ್ರಮಗಳು ಜರುಗಿದರೆ ಅಥವಾ ಅನ್ಯಾಯದ ಪ್ರಕರಣಗಳು ದಾಖಲಾದರೆ, ಅವರ ಪರವಾಗಿ ನಾವು ನ್ಯಾಯಾಲಯಗಳಲ್ಲಿ ಯಾವುದೇ ಫೀಸ್ (ಶುಲ್ಕ) ಪಡೆಯದೆ ಉಚಿತವಾಗಿ ಕೇಸುಗಳನ್ನು ನಡೆಸಿಕೊಡುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಸಿಜೆಪಿ ಪಕ್ಷವು ದೇಶಾದ್ಯಂತ ತನ್ನ ಬೆಂಬಲಿಗರು ಮತ್ತು ವಕೀಲರನ್ನು ಜೋಡಿಸಲು ಉಚಿತ ಕಾನೂನು ನೆರವು ನೀಡುವ ಪ್ರತ್ಯೇಕ ಡಿಜಿಟಲ್ ವೇದಿಕೆಯನ್ನು (CJP Legal Aid Portal) ಆರಂಭಿಸಿತ್ತು. ಈ ಅಭಿಯಾನಕ್ಕೆ ಸ್ಪಂದಿಸಿರುವ ಪಾಲ್ಘರ್‌ನ ವಕೀಲರ ಬಳಗವು ಈಗ ಬಹಿರಂಗವಾಗಿ ಬೆಂಬಲ ಸೂಚಿಸಿದೆ. ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆ ಮತ್ತು ಕಾರ್ಯಕರ್ತರಿಗೆ ಕಾನೂನು ಭದ್ರತೆ ಒದಗಿಸುವ ನಿಟ್ಟಿನಲ್ಲಿ ವಕೀಲರು ಕೈಜೋಡಿಸಿರುವುದು ದೇಶಾದ್ಯಂತ ಗಮನ ಸೆಳೆದಿದೆ.




