ವರುಣಾದಲ್ಲಿ ಸ್ಪರ್ಧಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಹೇಳಿದೆ. ಕೋಲಾರದಲ್ಲಿಯೂ ಸ್ಪರ್ಧಿಸಲು ಮಾನಸಿಕವಾಗಿ ಸಿದ್ದನಿದ್ದೇನೆ. ಪಕ್ಷದ ಹೈಕಮಾಂಡ್ ಇಲ್ಲಿಯೂ ಸ್ಪರ್ಧಿಸಲು ಅವಕಾಶ ಕೊಟ್ಟರೆ ಸ್ಪರ್ಧಿಸುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕೋಲಾರದಲ್ಲಿ ಏಪ್ರಿಲ್ 9ರಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ‘ಜೈಭಾರತ್ ಸಮಾವೇಶ’ ನಡೆಯಲಿದೆ. ಅದರ ಪೂರ್ವಭಾವಿಯಾಗಿ ಇಂದು (ಏಪ್ರಿಲ್ 1) ಕೋಲಾರದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಸುರ್ಜೇವಾಲ್ ಭಾಷಣಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯಗೆ ಕೋಲಾರದಲ್ಲಿಯೂ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು. ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಸಿದ್ದರಾಮಯ್ಯ ಮಾತನಾಡಿದರು.
“ಏಪ್ರಿಲ್ 4ರಂದು ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ. ಕೋಲಾರದಲ್ಲಿ ಸ್ಪರ್ಧಿಸಲು ಹೈಕಮಾಂಡ್ ಅವಕಾಶ ಕೊಟ್ಟರೇ, ಖಂಡಿತಾ ಎರಡೂ ಕಡೆ ಸ್ಪರ್ಧಿಸುತ್ತೇನೆ” ಎಂದರು.
“ನನ್ನ ಹುಟ್ಟೂರು ಇರುವುದು ವರುಣಾ ಕ್ಷೇತ್ರದಲ್ಲಿ. ನನ್ನ ರಾಜಕೀಯ ಆರಂಭವಾಗಿದ್ದು ಅಲ್ಲಿಂದಲೇ. ನನ್ನ ಕೊನೆಯ ಚುನಾವಣೆಯಲ್ಲಿಯೂ ಅಲ್ಲಿಂದಲೇ ಸ್ಪರ್ಧಿಸುತ್ತೇನೆ. ಅವಕಾಶ ಸಿಕ್ಕರೆ ಕೋಲಾರದಲ್ಲೂ ಸ್ಪರ್ಧಿಸುತ್ತೇನೆ. ಕೋಲಾರ ಕ್ಷೇತ್ರದ ಜನರ ಪ್ರೀತಿಗೆ ಧನ್ಯವಾದಗಳು” ಎಂದರು.