ಕೃತಿ: ANNIHILATION OF CASTE (ಜಾತಿ ನಿರ್ಮೂಲನೆ)
ಮೊದಲ ಪ್ರಕಟಣೆ: 1936 (ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರೇ ಸ್ವಂತ ಖರ್ಚಿನಲ್ಲಿ ಪ್ರಕಟಿಸಿದ್ದ ಕೃತಿ)
ಮಹಾರಾಷ್ಟ್ರ ಸರ್ಕಾರದ ಪ್ರಕಟಣೆ: 1979
ಇಂಗ್ಲಿಷ್ ಸಂಪುಟ– 1
ಕನ್ನಡ ಸಂಪುಟ– 1
Navayana Edition (‘ದಿ ಡಾಕ್ಟರ್ ಅಂಡ್ ದಿ ಸೇಂಟ್’ ಎಂಬ ದೀರ್ಘ ಮುನ್ನುಡಿಯೊಂದಿಗೆ ಪ್ರಕಟ)- 2014
‘ಜಾತ್ ಪಾತ್ ತೋಡಕ್ ಮಂಡಲ್’ನ ಸಮ್ಮೇಳನಕ್ಕಾಗಿ ಸಿದ್ಧಪಡಿಸಿದ ಭಾಷಣ, ಕೊನೆಗೂ ಮಂಡನೆ ಮಾಡಲಾಗದೆ ‘ಅನಾಇಲೇಷನ್ ಆಫ್ ಕಾಸ್ಟ್’ ಕೃತಿಯಾಗಿ ಪ್ರಕಟವಾದ ಮೇಲೆ ಭಾರೀ ಸಂಚಲನ ಮೂಡಿಸುತ್ತದೆ. ಮಂಡಲ್‌ನೊಂದಿಗೆ ಮಾಡಲಾದ ಪತ್ರ ವ್ಯವಹಾರಗಳನ್ನೆಲ್ಲ ಈ ಕೃತಿಯ ಮೂಲಕ ಬಾಬಾಸಾಹೇಬರು ಬಹಿರಂಗಪಡಿಸುತ್ತಾರೆ. ಒಂದೆಡೆ ಜಾತಿ ವ್ಯವಸ್ಥೆ ಮತ್ತು ವರ್ಣವ್ಯವಸ್ಥೆಗಳನ್ನು ಭದ್ರವಾಗಿ ಜೋಪಾನ ಮಾಡಿಕೊಂಡು ಮತ್ತೊಂದೆಡೆ ‘ಹಿಂದೂ ನಾವೆಲ್ಲ ಒಂದು’ ಎನ್ನುವ ಬೊಗಳೆಯನ್ನು ಬಾಬಾಸಾಹೇಬರು 1936ರಲ್ಲಿಯೇ ತಲೆ ಮೇಲೆ ಹೊಡೆದಂತೆ ಬಯಲು ಮಾಡಿದ್ದಾರೆ. ‘ಹಿಂದೂಗಳು ಈ ದೇಶದ ರೋಗಗ್ರಸ್ತರು, ಅವರ ಈ ವ್ಯಾಧಿಯು ಇತರೆ ಭಾರತೀಯರ ಆರೋಗ್ಯ ಮತ್ತು ಸಂತೋಷಗಳಿಗೆ ಅಪಾಯ ಒಡ್ಡುತ್ತಿದೆ ಎಂದು ಅವರಿಗೆ ಮನವರಿಕೆ ಮಾಡಿದರೆ ಅದುವೇ ನನ್ನ ಸಂತೃಪ್ತಿ’ ಎಂದು ಬರೆಯುತ್ತಾರೆ. ‘ಜಾತಿವ್ಯವಸ್ಥೆಯ ಮೂಲ ಚಾತುರ್ವರ್ಣ್ಯ ಪದ್ಧತಿ. ಚಾತುರ್ವರ್ಣ್ಯದ ಮೂಲ ವೇದ ಶಾಸ್ತ್ರಗಳು. ಜಾತಿಯನ್ನು ನಾಶ ಮಾಡಬೇಕಿದ್ದರೆ ಅವುಗಳ ಬೇರುಗಳಾದ ವೇದ ಶಾಸ್ತ್ರಗಳನ್ನು ಧಿಕ್ಕರಿಸಿ ಮೂಲೆಗೆಸೆಯಬೇಕು. ಅವುಗಳ ಅಧಿಕಾರವನ್ನು ನಾಶಗೊಳಿಸಬೇಕು. ಬುದ್ಧ ತೆಗೆದುಕೊಂಡ ನಿಲುವನ್ನು ತಳೆಯಬೇಕು ಮತ್ತು ನಾನಕ ತೆಗೆದುಕೊಂಡ ನಿಲುವು ತೆಗೆದುಕೊಳ್ಳಬೇಕು. ಬುದ್ಧ ಮತ್ತು ನಾನಕರಂತೆ ಶಾಸ್ತ್ರಗಳ ಅಧಿಕಾರವನ್ನು ತಿರಸ್ಕರಿಸಬೇಕು. ವೇದಗಳು ಶಾಸ್ತ್ರಗಳ ಅಧಿಕಾರವನ್ನು ನಾಶಗೊಳಿಸದೆ ಜಾತಿ ನಾಶವಾಗುವುದಿಲ್ಲ’ ಎಂಬುದು ಬಾಬಾ ಸಾಹೇಬರ ಪ್ರತಿಪಾದನೆಯಾಗಿದೆ. ಇಂತಹ ಕ್ರಾಂತಿಕಾರಿ ವಿಚಾರಗಳ ಕಾರಣಕ್ಕೆ ಈ ಕೃತಿ ಇಂದಿಗೂ ಬಹು ಆಯಾಮಗಳಲ್ಲಿ ಚರ್ಚೆಯಾಗುತ್ತಲೇ ಇದೆ.
ಜಾತಿ ವ್ಯವಸ್ಥೆಯು ಯಾವ ಧಾರ್ಮಿಕ ಭಾವನೆಗಳ ಆಧಾರದ ಮೇಲೆ ಸ್ಥಾಪಿತ ಆಗಿದೆಯೋ, ಅಂತಹ ಧಾರ್ಮಿಕ ಭಾವನೆಗಳನ್ನು ನಾಶ ಮಾಡುವ ತನಕ ಜಾತಿ ವ್ಯವಸ್ಥೆಯನ್ನು ಒಡೆಯುವುದು ಸಾಧ್ಯವಿಲ್ಲ ಎಂಬುದು ಡಾ. ಬಾಬಾಸಾಹೇಬ ಅಂಬೇಡ್ಕರ್ ಪ್ರತಿಪಾದನೆಯಾಗಿತ್ತು. ಈ ಪ್ರತಿಪಾದನೆಯನ್ನು 1936ರ ಲಾಹೋರ್‌ನ ವಾರ್ಷಿಕ ಸಮ್ಮೇಳನವೊಂದರಲ್ಲಿ ವಿವರವಾಗಿ ಮಂಡಿಸುವಂತೆ ಕೋರಲಾಗಿತ್ತು.
‘ಜಾತಿವ್ಯವಸ್ಥೆಯ ಮೂಲ ಚಾತುರ್ವರ್ಣ್ಯ ಪದ್ಧತಿ. ಚಾತುರ್ವರ್ಣ್ಯದ ಮೂಲ ವೇದ ಶಾಸ್ತ್ರಗಳು. ಜಾತಿಯನ್ನು ನಾಶ ಮಾಡಬೇಕಿದ್ದರೆ ಅವುಗಳ ಬೇರುಗಳಾದ ವೇದ ಶಾಸ್ತ್ರಗಳನ್ನು ಧಿಕ್ಕರಿಸಿ ಮೂಲೆಗೆಸೆಯಬೇಕು. ಅವುಗಳ ಅಧಿಕಾರವನ್ನು ನಾಶಗೊಳಿಸಬೇಕು’ ಎಂಬ ಸಿದ್ಧೌಷಧವನ್ನು ಬಾಬಾಸಾಹೇಬರು ನೀಡಿದ್ದರು.
ವೇದಗಳು ಮತ್ತು ಹಿಂದೂ ಧಾರ್ಮಿಕ ಶಾಸ್ತ್ರಗಳು- ಗ್ರಂಥಗಳನ್ನು ಕಠೋರ ಪ್ರಶ್ನೆಗಳಿಗೆ ಗುರಿ ಮಾಡಿದ್ದ ಅಂಬೇಡ್ಕರ್ ಅವರ ಭಾಷಣದ ವಿಚಾರಗಳು ಈ ಸಮ್ಮೇಳನವನ್ನು ಏರ್ಪಡಿಸಿದ್ದ ‘ಜಾತ್ ಪಾತ್ ತೋಡಕ್ ಮಂಡಲ್’ಗೆ ಹಿಡಿಸಲಿಲ್ಲ. ಸಮ್ಮೇಳನವನ್ನು ‘ಅನಿರ್ದಿಷ್ಟ ಕಾಲ ಮುಂದೂಡಿತು’ ಅರ್ಥಾತ್ ರದ್ದು ಮಾಡಿತು!

ಭಾಷಣದಲ್ಲಿನ ಕೆಲ ಸಂಗತಿಗಳನ್ನು ಬದಲಾಯಿಸುವಂತೆ ಮತ್ತು ಕೈ ಬಿಡುವಂತೆ ಷರತ್ತು ಹಾಕಲಾಗುತ್ತದೆ. ಆದರೆ, ಭಾಷಣದಲ್ಲಿನ ಒಂದೇ ಒಂದು ಅಲ್ಪವಿರಾಮ ಚಿಹ್ನೆಯನ್ನು ಕೂಡ ಬದಲಾಯಿಸುವುದಿಲ್ಲ ಎಂದ ಅಂಬೇಡ್ಕರ್, ಭಾಷಣವನ್ನು ತಾವೇ ಪುಸ್ತಕ ರೂಪದಲ್ಲಿ ಅಚ್ಚು ಹಾಕಿಸಿದರು. ಮಾಡಲಾಗದೆ ಉಳಿದ ಈ ಭಾಷಣ- ‘ಅನಾಇಲೇಷನ್ ಆಫ್ ಕಾಸ್ಟ್’ (ಜಾತಿವಿನಾಶ) ಅಂಬೇಡ್ಕರ್ ಅವರ ಮಹಾನ್ ಕೃತಿ ಎನಿಸಿಕೊಂಡಿತು. ಸಾಮಾಜಿಕ ವಿಮೋಚನೆಯ ಪ್ರಣಾಳಿಕೆ ಎಂದೇ ಹೆಸರಾಯಿತು.
‘ಜಾತ್ ಪಾತ್ ತೋಡಕ್ ಮಂಡಲ್’ (ಜಾತಿಗೀತಿಯನ್ನು ಅಳಿಸಿ ಹಾಕುವ ವೇದಿಕೆ) ಎಂಬುದು ಹಿಂದೂ ಸುಧಾರಣವಾದಿ ಸಂಘಟನೆಯಾದ ಆರ್ಯಸಮಾಜದಿಂದ ಟಿಸಿಲೊಡೆದ ‘ತೀವ್ರವಾದಿ’ ಬಣ. ‘ಉಚ್ಚ’ ಜಾತಿಗಳವರೇ ತುಂಬಿದ್ದ ಸಂಸ್ಥೆ. 1922ರಲ್ಲಿ ಹುಟ್ಟಿದ್ದ ಈ ಮಂಡಲ ವಾರ್ಷಿಕ ಸಮ್ಮೇಳನಗಳನ್ನು ನಡೆಸುತ್ತಿತ್ತು. ಈ ಸಮ್ಮೇಳನಗಳನ್ನು ಉದ್ದೇಶಿಸಿ ಮಾತಾಡಿದ್ದವರೆಲ್ಲ ‘ಉಚ್ಚ’ ಕುಲದವರು. ಸ್ವಾಮಿ ಶ್ರದ್ಧಾನಂದ, ಮೋತಿಲಾಲ್ ನೆಹರೂ, ಭಾಯಿ ಪರಮಾನಂದ, ರಾಮೇಶ್ವರಿ ನೆಹರೂ, ರಮಾನಂದ ಚಟರ್ಜಿ, ಸತ್ಯಾನಂದ ಸ್ಟೋಕ್ಸ್ ಇತ್ಯಾದಿ.
ಮೊದಲ ಸಲ ದಲಿತ ಅಂಬೇಡ್ಕರ್ ಅವರನ್ನು 1936ರ ಲಾಹೋರ್ ಸಮ್ಮೇಳನದ ಅಧ್ಯಕ್ಷ ಭಾಷಣಕ್ಕೆ ಆಹ್ವಾನಿಸಲಾಗುತ್ತದೆ. ಆ ವೇಳೆಗಾಗಲೇ ಬಾಬಾಸಾಹೇಬರು ಹಿಂದೂ ಧರ್ಮದ ವಿರುದ್ಧ ಆಧ್ಯಾತ್ಮಿಕ ಯುದ್ಧವನ್ನೇ ಸಾರಿದ್ದರು. ‘ಅಸ್ಪೃಶ್ಯನೆಂಬ ಕಳಂಕ ಹೊತ್ತು ಹುಟ್ಟಿದ್ದೇನೆ, ಅದು ನನ್ನ ತಪ್ಪಲ್ಲ, ಆದರೆ ನಾನು ಹಿಂದುವಾಗಿ ಸಾಯುವುದಿಲ್ಲ’ ಎಂದು ಘೋಷಿಸಿದ್ದರು. ಈ ಹೇಳಿಕೆ ಸವರ್ಣೀಯ ಸಮಾಜದಲ್ಲಿ ಕೋಲಾಹಲವನ್ನೇ ಎಬ್ಬಿಸಿರುತ್ತದೆ.
ಇದನ್ನೂ ಓದಿರಿ: ವರ್ತಮಾನದ ಬಿಕ್ಕಟ್ಟಿಗೆ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ಯ ಮದ್ದು
ಸಮ್ಮೇಳನದ ಅಧ್ಯಕ್ಷತೆ ವಹಿಸಿ ಭಾಷಣ ಮಾಡಲು ಬಾಬಾಸಾಹೇಬರು ಆರಂಭದಲ್ಲಿ ಒಪ್ಪುವುದಿಲ್ಲ. ಆನಂತರದ ಒತ್ತಾಯಕ್ಕೆ ಮಣಿಯುತ್ತಾರೆ.
ಸಮ್ಮೇಳನದ ಅಧ್ಯಕ್ಷತೆಗೆ ದಲಿತರೂ, ಜಾತಿ-ವರ್ಣವಿರೋಧಿ ಬಾಬಾಸಾಹೇಬರಿಗೆ ಆಹ್ವಾನ ನೀಡಿದ್ದನ್ನು ಪ್ರತಿಭಟಿಸಿ ಬಹುತೇಕ ಹಿಂದೂ ನಾಯಕರು ‘ಜಾತ್ ಪಾತ್ ತೋಡಕ್ ಮಂಡಲ’ದಿಂದ ದೂರಾಗುತ್ತಾರೆ. ಪಂಜಾಬಿನ (ಲಾಹೋರನ್ನು ಹೊಂದಿದ್ದ ಅಂದಿನ ಅವಿಭಜಿತ ಪಂಜಾಬ್) ಬಹುತೇಕ ಹಿಂದೂಗಳು ಈ ಸಂಘಟನೆಯನ್ನು ಕಟುವಾಗಿ ಟೀಕಿಸುತ್ತಾರೆ. ಅಚ್ಚು ಹಾಕಲು ಬಾರದಷ್ಟು ಕೆಟ್ಟ ಬೈಗುಳಗಳನ್ನು ಬೈಯುತ್ತಾರೆ. ‘ಮಂಡಲಕ್ಕೆ ಕೆಟ್ಟ ಹೆಸರು ಬಂದಿದೆ. ಆದರೂ ನಿಮ್ಮ ಅಧ್ಯಕ್ಷತೆಯ ಸಮ್ಮೇಳನದಿಂದ ನಾವು ಹಿಂತೆಗೆಯುತ್ತಿಲ್ಲ’ ಎಂದು ಮಂಡಲ್ ಬಾಬಾಸಾಹೇಬರಿಗೆ ಪತ್ರ ಬರೆಯುತ್ತದೆ.
ಒಂದೆಡೆ ಜಾತಿ ವ್ಯವಸ್ಥೆ ಮತ್ತು ವರ್ಣವ್ಯವಸ್ಥೆಗಳನ್ನು ಭದ್ರವಾಗಿ ಜೋಪಾನ ಮಾಡಿಕೊಂಡು ಮತ್ತೊಂದೆಡೆ ‘ಹಿಂದೂ ನಾವೆಲ್ಲ ಒಂದು’ ಎನ್ನುವ ಬೊಗಳೆಯನ್ನು ಬಾಬಾಸಾಹೇಬರು 1936ರಲ್ಲಿಯೇ ‘ಅನಾಇಲೇಷನ್ ಆಫ್ ಕಾಸ್ಟ್’ನಲ್ಲಿ ತಲೆ ಮೇಲೆ ಹೊಡೆದಂತೆ ಬಯಲು ಮಾಡಿದ್ದಾರೆ.
‘ಅನಾಇಲೇಷನ್ ಆಫ್ ಕಾಸ್ಟ್’ನಂತಹ ಮಹತ್ತರ ಕೃತಿಯು ಹೊರಬರಲು ಕಾರಣವಾದ ‘ಜಾತ್ ಪಾತ್ ತೋಡಕ್ ಮಂಡಲ್’ ಜೊತೆ ಬಾಬಾಸಾಹೇಬರು ನಡೆಸಿದ ಪತ್ರ ವ್ಯವಹಾರ ಅಂದಿನ ಹಿಂದೂ ಮನಸ್ಥಿತಿಗೆ ಮಾತ್ರವಲ್ಲದೆ ಸುಧಾರಣಾವಾದಿ ಹಿಂದೂ ಮನಸ್ಸುಗಳ ಆಷಾಢಭೂತಿತನಕ್ಕೂ ಹಿಡಿದ ಕನ್ನಡಿಯಾಗಿರುತ್ತದೆ.

1936ರ ಮೇ 15ರಂದು ಈ ಭಾಷಣ ಪುಸ್ತಕರೂಪದಲ್ಲಿ ಹೊರಬರುತ್ತದೆ. 1,500 ಪ್ರತಿಗಳು ಎರಡೇ ತಿಂಗಳಲ್ಲಿ ಮಾರಾಟವಾಗುತ್ತವೆ. ಹಲವು ಭಾಷೆಗಳಿಗೆ ಅನುವಾದಗೊಂಡರೂ ಇಂಗ್ಲಿಷ್ ಆವೃತ್ತಿಯ ಬೇಡಿಕೆ ತಗ್ಗುತ್ತಿಲ್ಲ ಎಂಬ ಸಂಗತಿಯನ್ನು ಬಾಬಾಸಾಹೇಬರು ಎರಡನೆಯ ಆವೃತ್ತಿಗೆ ಬರೆದ ಮುನ್ನುಡಿಯಲ್ಲಿ ಹೇಳುತ್ತಾರೆ. ಈ ಕೃತಿಯ ಕುರಿತು ‘ಹರಿಜನ್’ ಪತ್ರಿಕೆಯಲ್ಲಿ ಗಾಂಧೀಜಿ ವಿಮರ್ಶೆ ಬರೆದಿರುತ್ತಾರೆ, ಜಾತ್ ಪಾತ್ ತೋಡಕ್ ಮಂಡಲ್‌ನ ಸ್ಥಾಪಕ ಸಂತರಾಮ್ ಅವರನ್ನು ಉದ್ದೇಶಿಸಿದ ಪತ್ರವೊಂದನ್ನು ಕೂಡ ಬರೆದಿರುತ್ತಾರೆ. ವಿಮರ್ಶೆ ಮತ್ತು ಪತ್ರವನ್ನು ಬಾಬಾಸಾಹೇಬರು ಎರಡನೆಯ ಆವೃತ್ತಿಯಲ್ಲಿ ಸೇರಿಸುತ್ತಾರೆ. ಗಾಂಧಿ ವಿಮರ್ಶೆಗೆ ತಮ್ಮ ನೇರ ನಿಷ್ಠುರ ಕಟು ಉತ್ತರವನ್ನೂ ಬರೆಯುತ್ತಾರೆ.
‘ಹಿಂದೂಗಳು ಈ ದೇಶದ ರೋಗಗ್ರಸ್ತರು, ಅವರ ಈ ವ್ಯಾಧಿಯು ಇತರೆ ಭಾರತೀಯರ ಆರೋಗ್ಯ ಮತ್ತು ಸಂತೋಷಗಳಿಗೆ ಅಪಾಯ ಒಡ್ಡುತ್ತಿದೆ ಎಂದು ಅವರಿಗೆ ಮನವರಿಕೆ ಮಾಡಿದರೆ ಅದುವೇ ನನ್ನ ಸಂತೃಪ್ತಿ’ ಎಂಬ ಮಾತನ್ನೂ ಅವರು ಮುನ್ನುಡಿಯಲ್ಲಿ ಆಡಿದ್ದಾರೆ.
ತಾವು ಗಾಂಧಿ ಅವರಿಗೆ ಉತ್ತರ ನೀಡಿರುವುದು ‘ಅವರು ತೂಕದ ವ್ಯಕ್ತಿತ್ವ ಉಳ್ಳವರಾಗಿದ್ದು ನನ್ನ ಉತ್ತರ ಪಡೆಯಲು ಅರ್ಹರು ಎಂದೇನೂ ಅಲ್ಲ, ಬದಲಾಗಿ ಬಹಳಷ್ಟು ಹಿಂದೂಗಳ ಪಾಲಿಗೆ ಅವರೊಂದು ದಿವ್ಯವಾಣಿ. ಎಷ್ಟು ದೊಡ್ಡವರೆಂದರೆ ಅವರು ತುಟಿ ಬಿಚ್ಚಿದ ಆ ಕ್ಷಣದಲ್ಲಿ ಅವರದೇ ಕಡೆಯ ಮಾತಾಗಬೇಕು, ಚರ್ಚೆಗಳು ವಾದಗಳು ಮುಗಿದೇ ಹೋಗಬೇಕು, ಯಾವ ನಾಯಿ ಕೂಡ ಬೊಗಳುವಂತಿಲ್ಲ, ಬಾಯಿ ಮುಚ್ಚಿಕೊಂಡು ಬಿದ್ದಿರಬೇಕು’ ಎಂದು ಕಟುವಾಗಿ ವಿವರಿಸುತ್ತಾರೆ.
ಇದನ್ನೂ ಓದಿರಿ: ‘ಹಿಂದೂಧರ್ಮದ ಒಗಟುಗಳು’: ಉತ್ತರ ಸಿಗದ ಪ್ರಶ್ನೆಗಳ ಬೆನ್ನೇರಿ
ಎರಡನೆಯ ಆವೃತ್ತಿಯನ್ನೇ ಯಾವ ಬದಲಾವಣೆಯೂ ಇಲ್ಲದೆ ಮೂರನೆಯ ಆವೃತ್ತಿಯನ್ನಾಗಿ 1944ರ ಡಿಸೆಂಬರ್‌ನಲ್ಲಿ ಹೊರತರುತ್ತಾರೆ.
ಜಾತ್ ಪಾತ್ ತೋಡಕ್ ಮಂಡಲ್ ಕೋರಿಕೆಯಂತೆ ಬಾಬಾಸಾಹೇಬರು ಸಮ್ಮೇಳನಕ್ಕಾಗಿ ತಾವು ಸಿದ್ಧಪಡಿಸಿದ್ದ ಭಾಷಣವನ್ನು ಮುಂದಾಗಿಯೇ ಒಪ್ಪಿಸುತ್ತಾರೆ. ಭಾಷಣದ ಹಲವು ಭಾಗಗಳು ಜಾತ್ ಪಾತ್ ತೋಡಕ್ ಮಂಡಲಕ್ಕೆ ಹಿಡಿಸುವುದಿಲ್ಲ. ‘ವೇದಗಳು ಮತ್ತಿತರೆ ಹಿಂದೂ ಧಾರ್ಮಿಕ ಗ್ರಂಥಗಳ ನೈತಿಕತೆ ಮತ್ತು ವಿವೇಕದ ಮೇಲೆ ಅನಗತ್ಯ ದಾಳಿ ನಡೆಸಿದ್ದೀರಿ. ವೇದ ಪದವನ್ನು ನಿಮ್ಮ ಭಾಷಣದಿಂದ ಕೈಬಿಡಬೇಕು’ ಎಂದು ಮಂಡಲ್ ಸಲಹೆ ನೀಡಿತು. ‘ಹಿಂದೂವಾಗಿ ಪ್ರಾಯಶಃ ಇದೇ ನನ್ನ ಕಡೆಯ ಭಾಷಣ’ ಎಂಬುದಾಗಿ ಅವರು ಭಾಷಣದಲ್ಲಿ ಬರೆದಿದ್ದಕ್ಕೂ ‘ಜಾತ್ ಪಾತ್ ತೋಡಕ್ ಮಂಡಲ್’ ತಕರಾರು ಎತ್ತುತ್ತದೆ. ‘ಹಿಂದೂ ಧರ್ಮದ ಮೂಲ ಅಚ್ಚನ್ನು ಉಳಿಸಿಕೊಂಡು ಜಾತಿವಿನಾಶದಂತಹ ಸುಧಾರಣೆಗಳನ್ನು ತರುವುದೇ ಸರಿ, ಭಾಷಣದ ಅಪ್ರಸ್ತುತ ಭಾಗಗಳನ್ನು ಕೈಬಿಡಬೇಕಾಗುತ್ತದೆ. ಪೂರ್ಣಭಾಷಣವನ್ನು ಉಳಿಸಿಕೊಳ್ಳಬೇಕೆಂದು ನೀವು ಒತ್ತಾಯಿಸಿದರೆ ಸಮ್ಮೇಳನವನ್ನು ರದ್ದು ಮಾಡದೆ ವಿಧಿಯಿಲ್ಲ’ ಎನ್ನುತ್ತದೆ.
ಇಂತಹ ಪ್ರತಿಕ್ರಿಯೆ ಬಾಬಾಸಾಹೇಬರಿಗೆ ಅನಿರೀಕ್ಷಿತವೇನೂ ಆಗಿರಲಿಲ್ಲ. ಅವರ ಕಡು ನಿಷ್ಠುರ ಮಾರುತ್ತರ ಹೀಗಿತ್ತು-….‘ಒಂದೇ ಒಂದು ಅಲ್ಪವಿರಾಮವನ್ನು ಕೂಡ ಬದಲಾಯಿಸುವುದಿಲ್ಲ, ನನ್ನ ಭಾಷಣದ ಯಾವುದೇ ಸೆನ್ಸಾರ್ಶಿಪ್‌ಗೆ ಅವಕಾಶ ಕೊಡಲಾರೆ. ನಾನು ಕಳಿಸಿರುವ ಭಾಷಣವನ್ನು ಯಥಾವತ್ ಒಪ್ಪಿಕೊಳ್ಳಬೇಕು. ಭಾಷಣದಲ್ಲಿ ವ್ಯಕ್ತಪಡಿಸಿರುವ ಎಲ್ಲ ಅನಿಸಿಕೆಗಳು ಸಂಪೂರ್ಣವಾಗಿ ನನ್ನವೇ ಎಂಬ ಜವಾಬ್ದಾರಿಯನ್ನು ನಾನು ಹೊತ್ತುಕೊಳ್ಳುವೆ. ಈ ಮಾತನ್ನು ಈಗಾಗಲೆ ನಿಮಗೆ ತಿಳಿಸಿದ್ದೆ. ನನ್ನ ಭಾಷಣ ಹಿಡಿಸದೆ ಹೋದರೆ, ಸಮ್ಮೇಳನ ಅದನ್ನು ಖಂಡಿಸಿ ನಿರ್ಣಯ ಅಂಗೀಕರಿಸಿದರೂ ತೊಂದರೆಯಿಲ್ಲ…(ಆದರೆ ಹೊಸದಾಗಿ ಉದ್ಭವಿಸಿರುವ ಈ ಸನ್ನಿವೇಶದಲ್ಲಿ) ಸಮ್ಮೇಳನವನ್ನು ರದ್ದು ಮಾಡುವುದೇ ಸೂಕ್ತ ಎಂಬುದು ನನ್ನ ನಿಲುವೂ ಆಗಿದೆ.’
‘ಜಾತ್ ಪಾತ್ ತೋಡಕ್ ಮಂಡಲ್’ ಜೊತೆಗೆ ಆರಂಭದಿಂದ ನಡೆದ ಪತ್ರ ವ್ಯವಹಾರದ ಎಲ್ಲ ವಿವರಗಳನ್ನು ಬಾಬಾಸಾಹೇಬರು ‘ಜಾತಿವಿನಾಶ’ ಕೃತಿಯಲ್ಲಿ ಬಹಿರಂಗಪಡಿಸಿದರು. ‘ಜಾತಿವಿನಾಶ ಆಗಬೇಕಿದ್ದರೆ ಹಿಂದೂ ಧರ್ಮದ ನಾಶವೇ ಆಗಬೇಕೆಂಬ ನನ್ನ ನಿಲುವು ಮಂಡಲ್‌ಗೆ ಇಷ್ಟೊಂದು ಅಸಮಾಧಾನ ಉಂಟು ಮಾಡುತ್ತದೆಂದು ನಿರೀಕ್ಷಿಸಿರಲಿಲ್ಲ. ಮೂರ್ಖರು ಮಾತ್ರವೇ ಶಬ್ದಗಳಿಗೆ ಅಂಜುತ್ತಾರೆಂದು ಭಾವಿಸಿದ್ದೆ. ಧರ್ಮ ಎಂದರೇನು ಮತ್ತು ಧರ್ಮದ ನಾಶ ಎಂದರೇನು ಎಂಬುದನ್ನು ಬಹಳ ಶ್ರಮಪಟ್ಟು ಇಲ್ಲಿ ವಿವರಿಸಿದ್ದೇನೆ. ಈ ವಿವರಣೆಯಿದ್ದಾಗ್ಯೂ, ಧರ್ಮದ ನಾಶ ಎಂಬ ಪದಗಳಿಗೇ ಈ ಪರಿ ಹೆದರುವ ಮಂಡಲ್ ಕುರಿತು ನನಗೆ ಹೆಚ್ಚು ಗೌರವ ಉಳಿದಿಲ್ಲ… ಮಂಡಲ್ ನನ್ನ ಭಾಷಣವನ್ನು ಈಗ ಒಂದು ವೇಳೆ ಇಡಿಯಾಗಿ ಒಪ್ಪಿದರೂ, ಸಮ್ಮೇಳನದ ಅಧ್ಯಕ್ಷತೆ ವಹಿಸಲು ನಾನು ಒಪ್ಪಲಾರೆ’ ಎಂದು ಬಾಬಾಸಾಹೇಬರು ಈ ವಿದ್ಯಮಾನವನ್ನು ಅಂತ್ಯಗಾಣಿಸುತ್ತಾರೆ.
ಹಿಂದೂ ಸಮ್ಮೇಳನವೊಂದರ ಅಧ್ಯಕ್ಷತೆ ವಹಿಸಲು ಮೊದಲ ಬಾರಿಗೆ ನನ್ನನ್ನು ಆಹ್ವಾನಿಸಲಾಯಿತು. ಆದರೆ ಈ ಆಹ್ವಾನವು ದುರಂತದಲ್ಲಿ ಕೊನೆಯಾಗಿದೆ ಎಂದು ಹೇಳಲು ವ್ಯಥೆಯೆನಿಸುತ್ತದೆ. ಸವರ್ಣೀಯ ಹಿಂದೂಗಳ ಸುಧಾರಣಾವಾದಿ ಪಂಥ ಮತ್ತು ಅಸ್ಪೃಶ್ಯರ ಸ್ವಾಭಿಮಾನಿ ಪಂಥದ ನಡುವಿನ ದುರಂತಮಯ ಸಂಬಂಧವಿದು ಎನ್ನುತ್ತಾರೆ.

ಈ ಪತ್ರವ್ಯವಹಾರ ಕೇವಲ ಒಂದು ಸಾಧಾರಣ ಪತ್ರವ್ಯವಹಾರಕ್ಕಿಂತ ಮಹತ್ತರವಾದದ್ದನ್ನು ಮತ್ತು ‘ಜಾತಿ ವಿನಾಶ’ ಕೃತಿಯ ಗಾಢ ಅಂತಸ್ಸತ್ವವನ್ನು ಪ್ರತಿಫಲಿಸುತ್ತದೆ.
‘ಜಾತಿವ್ಯವಸ್ಥೆಯ ಮೂಲ ಚಾತುರ್ವರ್ಣ್ಯ ಪದ್ಧತಿ. ಚಾತುರ್ವರ್ಣ್ಯದ ಮೂಲ ವೇದ ಶಾಸ್ತ್ರಗಳು. ಜಾತಿಯನ್ನು ನಾಶ ಮಾಡಬೇಕಿದ್ದರೆ ಅವುಗಳ ಬೇರುಗಳಾದ ವೇದ ಶಾಸ್ತ್ರಗಳನ್ನು ಧಿಕ್ಕರಿಸಿ ಮೂಲೆಗೆಸೆಯಬೇಕು. ಅವುಗಳ ಅಧಿಕಾರವನ್ನು ನಾಶಗೊಳಿಸಬೇಕು. ಬುದ್ಧ ತೆಗೆದುಕೊಂಡ ನಿಲುವನ್ನು ತಳೆಯಬೇಕು ಮತ್ತು ನಾನಕ ತೆಗೆದುಕೊಂಡ ನಿಲುವು ತೆಗೆದುಕೊಳ್ಳಬೇಕು. ಬುದ್ಧ ಮತ್ತು ನಾನಕರಂತೆ ಶಾಸ್ತ್ರಗಳ ಅಧಿಕಾರವನ್ನು ತಿರಸ್ಕರಿಸಬೇಕು. ವೇದಗಳು ಶಾಸ್ತ್ರಗಳ ಅಧಿಕಾರವನ್ನು ನಾಶಗೊಳಿಸದೆ ಜಾತಿ ನಾಶವಾಗುವುದಿಲ್ಲ’ ಎಂಬುದು ಬಾಬಾಸಾಹೇಬರ ಪ್ರತಿಪಾದನೆಯಾಗಿರುತ್ತದೆ.
‘ಚಾತುರ್ವರ್ಣ್ಯಕ್ಕಿಂತ ಅವಮಾನಕರ ನೀತಿಭ್ರಷ್ಟ ಸಾಮಾಜಿಕ ವ್ಯವಸ್ಥೆ ಮತ್ತೊಂದಿಲ್ಲ. ಜನರನ್ನು ಪರಸ್ಪರರ ನೆರವಿಗೆ ಧಾವಿಸದಂತೆ ನಿಶ್ಚೇಷ್ಟಗೊಳಿಸುತ್ತದೆ, ಲಕ್ವ ಬಡಿಸುತ್ತದೆ, ಊನಗೊಳಿಸುತ್ತದೆ’ ಎಂದು ಅವರು ಚಾತುರ್ವರ್ಣ್ಯದ ಮನುಷ್ಯವಿರೋಧಿ ಸಂಚನ್ನು ಹೊರಗೆಡವಿದ್ದಾರೆ.
ಇದನ್ನೂ ಓದಿರಿ: ಅಂಬೇಡ್ಕರ್ ಕನಸಿನ ದಲಿತ ಪತ್ರಿಕೋದ್ಯಮ ನನಸಾಗಲಿಲ್ಲ!
‘ಚಾತುರ್ವರ್ಣ್ಯದ ಉಲ್ಲಂಘನೆಗೆ ತಲೆದಂಡವೇ ಶಿಕ್ಷೆಯಾಗಿತ್ತು. ರಾಮಾಯಣದಲ್ಲಿ ಬರುವ ಶಂಬೂಕ ವಧೆ ಈ ಮಾತನ್ನು ರುಜುವಾತು ಮಾಡುತ್ತದೆ. ಶಂಬೂಕ ಸಂಹಾರಕ್ಕೆ ಕೆಲವರು ರಾಮನನ್ನು ದೂಷಿಸುತ್ತಾರೆ. ಶ್ರೀರಾಮ ಕಾರ್ಯಕಾರಣವೇ ಇಲ್ಲದೆ ಸ್ವೇಚ್ಛಾನುಸಾರ ಶಂಬೂಕನನ್ನು ಕೊಂದನೆನ್ನುತ್ತಾರೆ. ಆದರೆ ರಾಮನನ್ನು ದೂಷಿಸುವುದು ಇಡಿ ಸನ್ನಿವೇಶವನ್ನು ತಪ್ಪಾಗಿ ಅರ್ಥ ಮಾಡಿಕೊಂಡಂತೆ ಆಗುತ್ತದೆ. ರಾಮರಾಜ್ಯವು ಚಾತುರ್ವರ್ಣ್ಯವನ್ನು ಆಧರಿಸಿದ್ದಾಗಿರುತ್ತದೆ. ರಾಜನಾಗಿ ರಾಮನು ಚಾತುರ್ವರ್ಣ್ಯವನ್ನು ಪರಿಪಾಲಿಸಲೇಬೇಕಾಗಿರುತ್ತದೆ, ಹೀಗಾಗಿ ತನ್ನ ಶೂದ್ರ ವರ್ಗದ ಸೀಮಾರೇಖೆಯನ್ನು ಉಲ್ಲಂಘಿಸಿ ಬ್ರಾಹ್ಮಣನಾಗಲು ಬಯಸಿದ ಶಂಬೂಕ ಚಾತುರ್ವರ್ಣ್ಯ ವ್ಯವಸ್ಥೆಯನ್ನು ಉಲ್ಲಂಘಿಸಿರುತ್ತಾನೆ. ಹೀಗಾಗಿ ಅವನನ್ನು ಕೊಲ್ಲುವುದು ರಾಮನ ಕರ್ತವ್ಯವೇ ಆಗಿರುತ್ತದೆ. ಕೊಂದಾದರೂ ಚಾತುರ್ವರ್ಣ್ಯ ವ್ಯವಸ್ಥೆಯನ್ನು ಎತ್ತಿ ಹಿಡಿಯಬೇಕಾಗಿರುವ ಅಗತ್ಯವನ್ನು ಈ ಪ್ರಸಂಗವು ತೋರುತ್ತದೆ. ಹೀಗಾಗಿಯೇ ಮನುಸ್ಮೃತಿಯು ವೇದಗಳನ್ನು ಓದುವ ಶೂದ್ರನ ನಾಲಗೆಯನ್ನು ಕತ್ತರಿಸುವ ಮತ್ತು ವೇದಗಳನ್ನು ಆಲಿಸುವ ಶೂದ್ರನ ಕಿವಿಗಳಿಗೆ ಕುದಿಯುವ ಸೀಸವನ್ನು ಸುರಿಯುವ ಶಿಕ್ಷೆಯನ್ನು ವಿಧಿಸಿದೆ’ ಎಂದು ವಿಶದೀಕರಿಸಿದ್ದಾರೆ.
ಜಾತಿಪದ್ಧತಿ ಮತ್ತು ವರ್ಣವ್ಯವಸ್ಥೆಯ ದುಷ್ಟತನ ಕುರಿತು ‘ಜಾತಿ ವಿನಾಶ’ ಕೃತಿಯಲ್ಲಿ ವ್ಯಕ್ತವಾಗಿರುವ ಬಾಬಾಸಾಹೇಬರ ಇತರೆ ಕ್ರಾಂತಿಕಾರಿ ವಿಚಾರಗಳು ಹೀಗಿವೆ-
‘ಮಾನವೀಯತೆಯನ್ನು ಅಳಿಸಿ ಹಾಕುವಲ್ಲಿ ಹಿಂದೂ ಧರ್ಮಶಾಸ್ತ್ರಗಳು ಉಂಟು ಮಾಡುವ ಪರಿಣಾಮಗಳನ್ನು ಎತ್ತಿ ಹೇಳುವ ಈ ಕೃತಿ, ಜಾತಿಯ ವೈಜ್ಞಾನಿಕ ನೆಲೆಯನ್ನು ಪ್ರಶ್ನಿಸುತ್ತದೆ. ಜಾತಿನಿಯತ್ತು ಅಥವಾ ಜಾತಿನಿಷ್ಠೆ ಎಂಬುದು ಉಳಿದೆಲ್ಲ ವಿಶಾಲ ನೈತಿಕ ಪರಿಗಣನೆಗಳು-ಪರ್ಯಾಲೋಚನೆಗಳನ್ನು ಅತಿಕ್ರಮಿಸಿ ಕೆಳಕ್ಕೆ ತುಳಿದು ಮೇಲೆದ್ದುಬಿಡುವ ನಿಷ್ಠುರ ಸತ್ಯವನ್ನು ಸಾರುತ್ತದೆ’.
‘ಜಾತಿಯ ತಳಪಾಯದ ಮೇಲೆ ಏನನ್ನೂ ಕಟ್ಟುವುದು ಸಾಧ್ಯವಿಲ್ಲ. ದೇಶವನ್ನು ಕಟ್ಟಲಾಗದು, ನೈತಿಕತೆಯನ್ನು ಕಟ್ಟಲಾಗದು. ಜಾತಿಯ ಅಡಿಪಾಯದ ಮೇಲೆ ಕಟ್ಟಿದ ಯಾವುದೇ ಸಂಗತಿಯಲ್ಲಿ ಬಿರುಕು ನಿಶ್ಚಿತ’. ‘ಜಾತಿ ವ್ಯವಸ್ಥೆಯು ಹಿಂದೂಗಳನ್ನು ಸಂಪೂರ್ಣವಾಗಿ ಹತವೀರ್ಯರನ್ನಾಗಿಯೂ ಅಸಂಘಟಿತರನ್ನಾಗಿಯೂ ಕುಗ್ಗಿಸಿಬಿಟ್ಟಿದೆ.. ಪ್ರತಿ ಜಾತಿಗೂ ತನ್ನದೇ ಅಸ್ತಿತ್ವದ ಪ್ರಜ್ಞೆ ಉಂಟು. ಅಳಿಯದೆ ಉಳಿದಿರುವುದೊಂದೇ ಪ್ರತಿ ಜಾತಿಯ ಅಸ್ತಿತ್ವದ ಗುರಿ- ಗಮ್ಯ ಎಲ್ಲವೂ…. ಹಿಂದೂ-ಮುಸ್ಲಿಮ್ ಕೋಮು ಗಲಭೆಯ ಸಂದರ್ಭಗಳನ್ನು ಬಿಟ್ಟರೆ ಉಳಿದಂತೆ ಜಾತಿಯೊಂದಕ್ಕೆ ತಾನು ಇತರೆ ಜಾತಿಗಳೊಂದಿಗೆ ಸೇರಿಕೊಂಡಿದ್ದೇನೆ ಎಂಬ ಭಾವನೆ ಇಲ್ಲವೇ ಇಲ್ಲ’.
ಹಾಗಾದರೆ ಹಿಂದೂ ಸಾಮಾಜಿಕ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಹೇಗೆ? ಜಾತಿ ವಿನಾಶ ಎಂತು?
‘ಜಾತಿ ಒಂದು ಮನಸ್ಥಿತಿ. ಹಿಂದೂಗಳು ಅಮಾನವೀಯರು- ತಲೆಕೆಟ್ಟವರು ಮತ್ತು ಈ ಕಾರಣಗಳಿಗಾಗಿ ಜಾತಿಯನ್ನು ಅನುಸರಿಸುತ್ತಾರೆ ಎಂಬುದು ಸರಿಯಲ್ಲ. ಅವರು ಆಳವಾಗಿ ಧಾರ್ಮಿಕರು ಎಂಬ ಕಾರಣಕ್ಕಾಗಿ ಜಾತಿಯನ್ನು ಪಾಲಿಸುತ್ತಾರೆ. ಜಾತಿಯನ್ನು ಅನುಸರಿಸುವುದು ತಪ್ಪಲ್ಲ. ನನ್ನ ದೃಷ್ಟಿಯಲ್ಲಿ ಜಾತಿಯ ಮನಸ್ಥಿತಿಯನ್ನು ತುಂಬಿರುವ ಧರ್ಮವೇ ತಪ್ಪು. ಹೀಗಾಗಿ ಜಾತಿಗ್ರಸ್ತ ಧರ್ಮವನ್ನು ಬೋಧಿಸುವ ಶಾಸ್ತ್ರಗಳೇ ನಿಜ ಶತ್ರುಗಳು. ಸಹಭೋಜನ, ಅಂತರ್ಜಾತೀಯ ಮದುವೆ, ಅಂತರ್ಜಾತಿ ಭೋಜನ ಅಥವಾ ಅಂತರ್ಜಾತಿ ಮದುವೆಗಳ ಉತ್ಸವಾಚರಣೆ ಮಾಡುವುದಿಲ್ಲವೆಂದು ಜನರನ್ನು ಜರೆಯುವುದು, ಟೀಕಿಸುವುದು ವ್ಯರ್ಥ. ಶಾಸ್ತ್ರಗಳ ಪಾವಿತ್ರ‍್ಯ ಕುರಿತ ನಂಬಿಕೆಯನ್ನು ನಾಶಪಡಿಸುವುದೇ ನಿಜವಾದ ಪರಿಹಾರ. ಮಹಾತ್ಮಾ ಗಾಂಧಿ ಸೇರಿದಂತೆ ಅಸ್ಪೃಶ್ಯತಾ ನಿವಾರಣೆಯಂತಹ ಸಾಮಾಜಿಕ ಸುಧಾರಣೆಗಳನ್ನು ಕೈಗೊಂಡವರಿಗೆ ಈ ಸಂಗತಿ ಅರ್ಥವಾಗುತ್ತಿಲ್ಲ. ಜನ ಹೇಗೆ ನಡೆದುಕೊಳ್ಳುತ್ತಿದ್ದಾರೋ ಹಾಗೆ ನಡೆದುಕೊಳ್ಳಬಾರದೆಂದರೆ ಅವರ ತಲೆಗಳಿಗೆ ತುಂಬಲಾಗಿರುವ ಶಾಸ್ತ್ರಗಳ ಕುರಿತ ಪಾವಿತ್ರ‍್ಯವನ್ನು ಗುರಿಯಾಗಿಸಬೇಕು. ಶಾಸ್ತ್ರಗಳ ಮಂಕುಬೂದಿಯ ಮೋಹದಿಂದ ಪ್ರತಿಯೊಬ್ಬ ಪುರುಷ ಮತ್ತು ಮಹಿಳೆಯನ್ನು ಮುಕ್ತಗೊಳಿಸಿ, ಅವರ ಮಿದುಳುಗಳನ್ನು ಸ್ವಚ್ಛಗೊಳಿಸಿದರೆ ಅವನು ಅಥವಾ ಅವಳು ತಂತಾನೇ ಅಂತರ್ಜಾತಿ ಮದುವೆಯಾಗುತ್ತಾರೆ, ಅಂತರ್ಜಾತಿ ಸಹಭೋಜನ ಮಾಡುತ್ತಾರೆ. ನೀವು ಪ್ರತ್ಯೇಕವಾಗಿ ಹೇಳಬೇಕಾದ ಪ್ರಸಂಗವೇ ಬರುವುದಿಲ್ಲ’.
‘ಜಾತಿಗೆ ಇಂದಿಗೂ ಸಮರ್ಥಕರಿದ್ದಾರೆ ಎನ್ನುವ ಸಂಗತಿಯೇ ಕರುಣಾಜನಕ. ಶ್ರಮ ವಿಭಜನೆಗೆ ಮತ್ತೊಂದು ಹೆಸರೇ ಜಾತಿ ವ್ಯವಸ್ಥೆಯಾಗಿದ್ದು, ಶ್ರಮವಿಭಜನೆಯು ನಾಗರಿಕ ಸಮಾಜದ ಹೆಗ್ಗುರುತಾಗಿದ್ದು, ಈ ವ್ಯವಸ್ಥೆಯಲ್ಲಿ ತಪ್ಪೇನೂ ಇಲ್ಲ ಎಂದು ವಾದಿಸಲಾಗುತ್ತದೆ. ವಾಸ್ತವದಲ್ಲಿ ಜಾತಿ ವ್ಯವಸ್ಥೆಯು ಶ್ರಮ ವಿಭಜನೆ ಮಾತ್ರವೇ ಅಲ್ಲ, ಶ್ರಮಿಕರ ವಿಭಜನೆಯೂ ಹೌದು. ಈ ಶ್ರಮವಿಭಜನೆಯಲ್ಲಿ ವ್ಯಕ್ತಿಯ ಆಯ್ಕೆಗೆ, ಭಾವನೆಗೆ, ಆದ್ಯತೆಗೆ ಅವಕಾಶವೇ ಇಲ್ಲ. ವಿಧಿವಾದವೇ ಈ ವಿಭಜನೆಯ ಆಧಾರ’.

‘ಜಾತಿಯ ಉದ್ದೇಶ ಜನಾಂಗೀಯ ಪರಿಶುದ್ಧತೆ ಮತ್ತು ರಕ್ತದ ಪರಿಶುದ್ಧತೆಯನ್ನು ಸಂರಕ್ಷಿಸುವುದು ಎಂಬ ಒಂದು ವಾದವಿದೆ. ಆದರೆ ಮಾನವ ವಂಶಶಾಸ್ತ್ರಜ್ಞರು ಹೇಳುವಂತೆ ಪರಿಶುದ್ಧ ಸಂತತಿಯ ಮನುಷ್ಯರೆಂಬುವವರು ಇಲ್ಲವೇ ಇಲ್ಲ. ಪ್ರಪಂಚದ ಎಲ್ಲ ಭಾಗಗಳಲ್ಲೂ ಎಲ್ಲ ಸಂತತಿಗಳ ಮಿಶ್ರಣವೇ ನೆಲೆಸಿದೆ. ಭಾರತದ ಜನರಿಗೆ ಈ ಮಾತು ವಿಶೇಷವಾಗಿ ಅನ್ವಯಿಸುತ್ತದೆ. ವಿದೇಶೀ ಎಳೆ ಇಲ್ಲದಿರುವ ಜಾತಿಯಾಗಲೀ, ವರ್ಗವೇ ಆಗಲಿ ಭಾರತದಲ್ಲಿ ಇಲ್ಲ. ಕೇವಲ ರಜಪೂತರು ಮತ್ತು ಮರಾಠರಂತಹ ಯೋಧ ವರ್ಗಗಳಲ್ಲಿ ಮಾತ್ರವೇ ಅಲ್ಲ, ಎಲ್ಲ ವಿದೇಶೀ ಮಿಶ್ರಣದಿಂದ ಮುಕ್ತರು ತಾವು ಎಂಬ ಭ್ರಮೆಯಲ್ಲಿ ಮುಳುಗಿರುವ ಬ್ರಾಹ್ಮಣರಲ್ಲೂ ಪರಕೀಯ ರಕ್ತ ಬೆರೆತಿದೆ ಎಂದು ಡಿ.ಆರ್. ಭಂಡಾರ್ಕರ್ ತಮ್ಮ ‘Foreign Elements in the Hindu Population’ ಕೃತಿಯಲ್ಲಿ ಹೇಳಿದ್ದಾರೆ.. .. ಪಂಜಾಬಿನ ಬ್ರಾಹ್ಮಣ ಮತ್ತು ಮದ್ರಾಸಿನ ಬ್ರಾಹ್ಮಣನ ನಡುವೆ ಯಾವ ಜನಾಂಗೀಯ ನಂಟು ಉಂಟು? ಬಂಗಾಳದ ಮತ್ತು ಮದ್ರಾಸಿನ ಅಸ್ಪೃಶ್ಯರ ನಡುವೆ ಜನಾಂಗೀಯ ಮೈತ್ರಿಯಾದರೂ ಏನಿದೆ? ಪಂಜಾಬಿನ ಚಮ್ಮಾರ ಮತ್ತು ಅದೇ ರಾಜ್ಯದ ಬ್ರಾಹ್ಮಣನ ನಡುವೆ ಜನಾಂಗೀಯ ವ್ಯತ್ಯಾಸ ಏನಿದೆ? ಮದ್ರಾಸಿನ ಬ್ರಾಹ್ಮಣ ಮತ್ತು ಅಸ್ಪೃಶ್ಯನ ನಡುವೆ ಯಾವ ಜನಾಂಗೀಯ ವ್ಯತ್ಯಾಸ ಕಂಡು ಬರುತ್ತದೆ? ಪಂಜಾಬಿನ ಬ್ರಾಹ್ಮಣ ಮತ್ತು ಅದೇ ರಾಜ್ಯದ ಚಮ್ಮಾರನ ಜನಾಂಗೀಯ ಮೂಲ ಒಂದೇ. ಮದ್ರಾಸಿನ ಬ್ರಾಹ್ಮಣ ಮತ್ತು ಅದೇ ರಾಜ್ಯದ ಅಸ್ಪೃಶ್ಯ ಒಂದೇ ಜನಾಂಗೀಯ ಮೂಲದಿಂದ ಬಂದವರು. ಜಾತಿ ವ್ಯವಸ್ಥೆ ಜನಾಂಗೀಯ ವಿಭಜನೆಯನ್ನು ಸೂಚಿಸುವುದಿಲ್ಲ. ಅದು ಒಂದೇ ಜನಾಂಗದ ಸಾಮಾಜಿಕ ವಿಭಜನೆ’.
ಇದನ್ನೂ ಓದಿರಿ: ಅಸ್ಪೃಶ್ಯರು- ಅವರು ಯಾರಾಗಿದ್ದರು ಮತ್ತು ಅವರು ಅಸ್ಪೃಶ್ಯರಾದದ್ದು ಏಕೆ?
‘ಪ್ರತಿಯೊಬ್ಬ ಹಿಂದೂವಿನಲ್ಲಿ ಇರುವ ಪ್ರಜ್ಞೆ ತನ್ನ ಜಾತಿಯ ಪ್ರಜ್ಞೆ. ಈ ಕಾರಣದಿಂದಾಗಿಯೇ ಹಿಂದೂಗಳು ಒಂದು ಸಮಾಜವಾಗಿ ಇಲ್ಲವೇ ಒಂದು ರಾಷ್ಟ್ರವಾಗಿ ಹೊಮ್ಮಲಾರರು. ಕೇವಲ ನಂಬಿಕೆಗಳು ಮತ್ತು ಆಲೋಚನೆಗಳಷ್ಟೇ ಮನುಷ್ಯರನ್ನು ಸಮಾಜದಲ್ಲಿ ಒಂದಾಗಿ ಬೆಸೆಯಲಾರವು. ವಸ್ತುಗಳು- ಸಂಗತಿಗಳು ಭೌತಿಕವಾಗಿ ಒಬ್ಬರಿಂದ ಮತ್ತೊಬ್ಬರ ಕೈಗೆ ಇಟ್ಟಿಗೆಗಳಂತೆ ‘ಪಾಸ್’ ಆಗಬಹುದು ಅಷ್ಟೇ. ಇದೇ ರೀತಿಯಲ್ಲಿ ಒಂದು ಗುಂಪಿನ ರೂಢಿಗಳು ಹವ್ಯಾಸಗಳು ಪದ್ಧತಿಗಳು, ನಂಬಿಕೆಗಳು ಹಾಗೂ ಆಲೋಚನೆಗಳನ್ನು ಇನ್ನೊಂದು ಗುಂಪು ಕೈಗೆತ್ತಿಕೊಳ್ಳಬಹುದು. ಭಾರತೀಯರು ಕೇವಲ ಒಂದು ಅಮೂರ್ತ ಜನಸಮೂಹವೇ ವಿನಾ ಒಂದು ರಾಷ್ಟ್ರ ಆಗಿಯೇ ಇಲ್ಲ. ಈ ಸಂಗತಿಯನ್ನು ಒಪ್ಪಿಕೊಳ್ಳಲು ಹಲವಾರು ಭಾರತೀಯರಿಗೆ ಅವರ ದೇಶಪ್ರೇಮ ಅನುಮತಿ ನೀಡುವುದಿಲ್ಲ. ಬಹುತ್ವದಲ್ಲಿ ಅಂತರ್ಗತವಾಗಿರುವ ಮೂಲಭೂತ ಏಕತೆಯ ಎಳೆಯೊಂದಿದೆ. ಹೀಗಾಗಿ ಹವ್ಯಾಸಗಳು, ರೂಢಿಗಳು ಆಚರಣೆಗಳು, ಪದ್ಧತಿಗಳು, ನಂಬಿಕೆಗಳ ಸಮಾನತೆಯನ್ನು ಭಾರತದಾದ್ಯಂತ ಕಾಣಬಹುದು ಎಂದು ಅವರು ವಾದಿಸುತ್ತಾರೆ. ಇಷ್ಟಿದ್ದ ಮಾತ್ರಕ್ಕೇ ಹಿಂದೂಗಳು ಒಂದು ಸಮಾಜ ಎನಿಸಿಬಿಡುತ್ತಾರೆಂಬ ತೀರ್ಮಾನವನ್ನು ಒಪ್ಪುವುದು ಸಾಧ್ಯವಿಲ್ಲ. ಒಪ್ಪಿಕೊಂಡೆವೆಂದರೆ ಸಮಾಜವೊಂದನ್ನು ರೂಪಿಸುವ ಅಗತ್ಯಾಂಶಗಳನ್ನು ಅಪಾರ್ಥ ಮಾಡಿಕೊಂಡಂತೆಯೇ ಸರಿ. ವ್ಯಕ್ತಿಯೊಬ್ಬ ತನ್ನ ಸಮಾಜದಿಂದ ಮೈಲುಗಟ್ಟಲೆ ದೂರದಲ್ಲಿ ವಾಸ ಮಾಡಿದ ಮಾತ್ರಕ್ಕೇ ಆ ಸಮಾಜದಿಂದ ಹೇಗೆ ದೂರ ಆಗುವುದಿಲ್ಲವೋ. ಅದೇ ರೀತಿ ಕೇವಲ ದೈಹಿಕ ಸಾಮೀಪ್ಯದಲ್ಲಿ ಜೀವಿಸುವುದರಿಂದ ಮಾತ್ರವೇ ಮನುಷ್ಯರು ಒಂದು ಸಮಾಜವಾಗಿ ರೂಪುಗೊಳ್ಳಲಾರರು. ಹವ್ಯಾಸ ಪದ್ಧತಿಗಳ ನಡುವಣ ಹೋಲಿಕೆಗಳು ಮತ್ತು ಸಾಂಸ್ಕೃತಿಕ ಹೋಲಿಕೆಗಳಿಗೆ ಅವುಗಳ ಪ್ರಸಾರ ಇಲ್ಲವೇ ಹರಡುವಿಕೆಯೇ ಕಾರಣ. ಹೀಗಾಗಿಯೇ ಸಮೀಪದಲ್ಲಿ ವಾಸ ಮಾಡದೆ ಹೋದರೂ ಹಲವು ಬಗೆಯ ಆದಿಮ ಬುಡಕಟ್ಟುಗಳ ಆಚರಣೆ, ಅಭ್ಯಾಸ, ರೂಢಿಗಳು ನಂಬಿಕೆಗಳು ಆಲೋಚನೆಗಳಲ್ಲಿ ಕಂಡು ಬರುವ ಹೋಲಿಕೆಗಳಿಗೂ ಅವುಗಳ ಹರಡುವಿಕೆಯೇ ಕಾರಣ. ಆದರೆ ಈ ಹೋಲಿಕೆಗಳನ್ನಷ್ಟೇ ಪರಿಗಣಿಸಿ ಈ ಎಲ್ಲ ಆದಿಮ ಬುಡಕಟ್ಟುಗಳನ್ನು ಒಂದು ಸಮಾಜವಾಗಿ ರೂಪುಗೊಳ್ಳುತ್ತವೆ ಎಂದು ಯಾರೂ ಹೇಳಲಾಗದು. ಸಮಾನ ಸಂಗತಿಗಳ ಆಧಾರದ ಮೇಲೆ ಸಮಾಜ ರೂಪುಗೊಳ್ಳುತ್ತದೆ. ಕೇವಲ ಹೋಲಿಕೆಗಳು ಸಮಾನ ಸಂಗತಿಗಳಾಗುವುದಿಲ್ಲ. ಮನುಷ್ಯರು ಸಮಾನ ಸಂಗತಿಗಳನ್ನು ಹೊಂದಿರುವ ಏಕೈಕ ಮಾರ್ಗ ಪರಸ್ಪರರೊಂದಿಗೆ ಸಂವಹನದಲ್ಲಿರುವುದು. ಇತರರ ನಡವಳಿಕೆಯನ್ನು ಒಪ್ಪಿದಂತೆ ನಡೆದುಕೊಂಡರೆ ಸಾಲದು. ಹೋಲಿಕೆ ಇದ್ದರೂ, ಮನುಷ್ಯರನ್ನು ಒಂದು ಸಮಾಜದಲ್ಲಿ ಬೆಸೆಯಲು ಸಮಾನಾಂತರ ಚಟುವಟಿಕೆಯೊಂದೇ ಸಾಕಾಗುವುದಿಲ್ಲ. ಹಿಂದೂಗಳಲ್ಲಿನ ನಾನಾ ಜಾತಿಗಳು ಒಂದೇ ಹಬ್ಬವನ್ನು ಆಚರಿಸುವ ಸಂಗತಿ ಈ ಮಾತಿಗೆ ರುಜುವಾತು. ಆದರೂ ನಾನಾ ಜಾತಿಗಳಿಂದ ಒಂದೇ ಹೋಲಿಕೆಯ ಹಬ್ಬಗಳ ಈ ಸಮಾನಾಂತರ ಆಚರಣೆ, ಈ ಜಾತಿಗಳನ್ನು ಇಡಿಯಾಗಿ ಹಿಡಿದಿಟ್ಟಿಲ್ಲ. ಇತರರ ಯಶಸ್ಸನ್ನು ತನ್ನ ಯಶಸ್ಸೆಂದೂ ಇತರರ ವೈಫಲ್ಯಗಳನ್ನು ತನ್ನ ವೈಫಲ್ಯವೆಂದೂ ಭಾವನಾತ್ಮಕವಾಗಿ ಅನುಭವಿಸಿ ಹಂಚಿಕೊಳ್ಳುವ ಚಟುವಟಿಕೆ ಮನುಷ್ಯರನ್ನು ಒಂದು ಸಮಾಜವಾಗಿ ಬೆಸೆಯುತ್ತದೆ. ಜಾತಿ ವ್ಯವಸ್ಥೆಯು ಸಮಾನ ಚಟುವಟಿಕೆಯನ್ನು ತಡೆ ಹಿಡಿಯುತ್ತದೆ ಮತ್ತು ಹೀಗೆ ತಡೆ ಹಿಡಿಯುವ ಕ್ರಿಯೆಯೇ ಹಿಂದೂಗಳನ್ನು ಒಂದು ಸಮಾಜವಾಗಿ ರೂಪುಗೊಳ್ಳುವುದನ್ನು ತಡೆ ಹಿಡಿದಿದೆ’.
‘ವಿದ್ವಾಂಸನೊಬ್ಬನನ್ನು ಬ್ರಾಹ್ಮಣನೆಂಬ ಹಣೆಪಟ್ಟಿ ಹಚ್ಚದೆ ಗೌರವಿಸಬಹುದು, ಯೋಧನೊಬ್ಬನ ಕ್ಷತ್ರಿಯ ಪದವಿಯ ಆಚೆಗೂ ಸಮ್ಮಾನ ಗಳಿಸಬಲ್ಲ. ಐರೋಪ್ಯ ಸಮಾಜವು ತನ್ನ ಯೋಧರನ್ನು ಮತ್ತು ಸೇವಕರನ್ನು ಯಾವುದೇ ಶಾಶ್ವತ ಹಣೆಪಟ್ಟಿ ಹಚ್ಚದೆ ಗೌರವಿಸಬಹುದಾದರೆ, ಹಿಂದೂ ಸಮಾಜಕ್ಕೇಕೆ ಇಷ್ಟು ಕಷ್ಟವೆನಿಸಬೇಕು’ ಎಂಬ ಪ್ರಶ್ನೆಯನ್ನು ಆರ್ಯಸಮಾಜಗಳ ಮೂಲಕ ವಿಶಾಲ ಹಿಂದೂ ಸಮಾಜಕ್ಕೆ ಕೇಳುತ್ತಾರೆ ಅಂಬೇಡ್ಕರ್.
‘ಹಿಂದೂಗಳು ವೇದ, ಸ್ಮೃತಿ ಅಥವಾ ಸದಾಚಾರವನ್ನು ಪಾಲಿಸಬೇಕು. ಉಳಿದೆಲ್ಲವೂ ನಿಷಿದ್ಧ. ವೇದಗಳು ಮತ್ತು ಸ್ಮೃತಿಗಳ ಕುರಿತು ಸಂದೇಹ ಬಂದಾಗ ಅವುಗಳನ್ನು ಹೇಗೆ ವ್ಯಾಖ್ಯಾನ ಮಾಡಬೇಕು? ಈ ಕುರಿತು ಮನು ವಿಧಿಸಿರುವ ಕಟ್ಟಳೆಯಿದೆ. ಈ ಕಟ್ಟಳೆಯ ಪ್ರಕಾರ ವೇದಗಳು ಮತ್ತು ಸ್ಮೃತಿಗಳ ವ್ಯಾಖ್ಯಾನಕ್ಕೆ ವೈಚಾರಿಕತೆಯನ್ನು ಅನ್ವಯಿಸುವುದು ನಿಷಿದ್ಧ. ಅಷ್ಟೇ ಅಲ್ಲ, ತೀವ್ರ ಖಂಡನೀಯ ಕೂಡ. ಸ್ಮೃತಿ ಮತ್ತು ಶ್ರುತಿಗಳ ನಡುವೆ ಸಂಘರ್ಷ ಏರ್ಪಟ್ಟಾಗ ಶ್ರುತಿಯೇ ಅಂತಿಮ. ಎರಡರ ನಡುವೆ ಯಾವುದು ತರ್ಕಬದ್ಧ ಎಂದು ಕಂಡು ಹಿಡಿಯುವ ಪ್ರಯತ್ನ ಸಲ್ಲದು. ಸ್ಮೃತಿಗಳ ನಡುವೆ ಸಂಘರ್ಷ ಏರ್ಪಟ್ಟಾಗ ಮನುಸ್ಮೃತಿಯೇ ಅಂತಿಮ. ಎರಡರ ನಡುವೆ ಯಾವ ಸ್ಮೃತಿ ಮೇಲು ಎಂಬ ತರ್ಕವನ್ನು ಮಾಡಕೂಡದು ಎಂದಿದ್ದಾನೆ ಬೃಹಸ್ಪತಿ. ಜಾತಿ ಮತ್ತು ವರ್ಣಗಳ ಕುರಿತು ತರ್ಕ ಮತ್ತು ವಾದವನ್ನು ಬಳಸಕೂಡದು ಎನ್ನುತ್ತವೆ ಶಾಸ್ತ್ರಗಳು. ಜಾತಿ ಮತ್ತು ವರ್ಣದಲ್ಲಿ ಹಿಂದೂವಿನ ನಂಬಿಕೆಯ ಅಡಿಪಾಯದ ವಿಚಾರಬದ್ಧ ಅಥವಾ ತರ್ಕಬದ್ಧ ಶೋಧನೆ ಅಥವಾ ಪರಿಶೀಲನೆಗೆ ಶಾಸ್ತ್ರಗಳ ಅನುಮತಿಯಿಲ್ಲ. ಉಲ್ಲಂಘಿಸುವವರನ್ನು ಪಾಪ ಸುತ್ತಿಕೊಳ್ಳುತ್ತದೆಯಂತೆ’.
ಹಿಂದೂ ಧರ್ಮ ಅಂದರೇನು?
‘ಅದೊಂದು ತತ್ವಗಳ ಸಂದಣಿಯೇ ಅಥವಾ ನಿಯಮಗಳ ಸಂಹಿತೆಯೇ? ವೇದಗಳು ಮತ್ತು ಸ್ಮೃತಿಗಳಲ್ಲಿರುವಂತೆ ಹಿಂದೂ ಧರ್ಮವು ಯಜ್ಞ ಸಂಬಂಧಿ ಬಲಿಯ ಕುರಿತ, ಸಾಮಾಜಿಕ, ರಾಜಕೀಯ ಹಾಗೂ ನೈರ್ಮಲ್ಯ ನಿಯಮಗಳು ಮತ್ತು ನಿಬಂಧನೆಗಳ ಮಿಶ್ರಣ. ಹಿಂದೂಗಳು ಧರ್ಮ ಎಂದು ಕರೆಯುವುದೆಲ್ಲ ಬಹುಸಂಖ್ಯೆಯ ಆಜ್ಞೆ ಆದೇಶಗಳು ಮತ್ತು ವಿಧಿ ನಿಷೇಧಗಳಷ್ಟೇ. ನಿಜವಾದ ಆಧ್ಯಾತ್ಮಿಕ ತತ್ವಗಳ ಅರ್ಥದಲ್ಲಿ ಧರ್ಮ ಎಂಬುದು ವಿಶ್ವಾತ್ಮಕವಾಗಿರಬೇಕು, ಎಲ್ಲ ಮನುಷ್ಯ ಜನಾಂಗಗಳಿಗೆ, ಎಲ್ಲ ದೇಶ ಕಾಲಗಳಿಗೆ ಅನ್ವಯ ಆಗಬೇಕು, ಆದರೆ ಹಿಂದೂವಿನ ಬದುಕಿನಲ್ಲಿ ಈ ಅಂಶಗಳಿಲ್ಲ. ಹೀಗಾಗಿ ವೇದ ಮತ್ತು ಸ್ಮೃತಿಗಳಲ್ಲಿ ಹಾಗೂ ಭಾಷ್ಯ ಬರೆದವರು ಅರ್ಥ ಮಾಡಿಕೊಂಡಿರುವಂತೆ, ಧರ್ಮ ಎಂದರೆ ವಿಧಿ ನಿಷೇಧಗಳೇ ಆಗಿದೆ. ಅಧ್ಯಾದೇಶಗಳ ದುಷ್ಟತನ ಅನ್ಯಾಯವನ್ನು ಒಳಗೊಂಡಿರುವ, ಬೇರೆ ಬೇರೆಯವರಿಗೆ, ಬೇರೆ ಬೇರೆಯಾದ ಭೇದಭಾವದ ಈ ಅನವರತ ಅಖೈರು ಸಂಹಿತೆಯನ್ನು ಧರ್ಮವೆಂದು ಕರೆಯಲು ನಾನು ಒಪ್ಪುವುದಿಲ್ಲ. ಮನುಷ್ಯತ್ವ -ಮಾನವೀಯತೆಯನ್ನು ಊನಗೊಳಿಸುವ ಧರ್ಮವನ್ನು ನಾಶಗೊಳಿಸಬೇಕು. ಇಂತಹ ಧರ್ಮವನ್ನು ನಾಶಗೊಳಿಸುವುದು ಅಧರ್ಮ ಆಗುವುದಿಲ್ಲ. ಈ ಮುಖವಾಡವನ್ನು ಹರಿದೊಗೆಯುವುದು ನಿಮ್ಮ ಪರಮ ಕರ್ತವ್ಯ ಆಗಬೇಕು’.

‘ನನ್ನ ದಾರಿಯಲ್ಲಿ ಅಲ್ಲವಾದರೂ ಸರಿ, ನಿಮ್ಮ ದಾರಿಯಲ್ಲಾದರೂ ಜಾತಿಯನ್ನು ಬುಡಮೇಲು ಮಾಡಿರಿ. ಕ್ಷಮಿಸಿ, ನಾನು ನಿಮ್ಮೊಡನೆ ಇರುವುದಿಲ್ಲ. ಬದಲಾಗಲು (ಹಿಂದೂ ಧರ್ಮದಿಂದ ಹೊರಬರಲು) ತೀರ್ಮಾನಿಸಿದ್ದೇನೆ. ಕಾರಣಗಳನ್ನು ಹೇಳುವ ಸ್ಥಳ ಇದಲ್ಲ. ಆದರೆ ನಿಮ್ಮ ಧರ್ಮದ ತೆಕ್ಕೆಯಿಂದ ಹೊರ ಹೋದಾಗಲೂ ನಿಮ್ಮ (ಜಾತ್ ಪಾತ್ ತೋಡಕ್ ಮಂಡಲ್) ಆಂದೋಲನವನ್ನು ಸಹಾನುಭೂತಿಯಿಂದ ನೋಡುತ್ತೇನೆ, ನನ್ನ ನೆರವೂ ನಿಮಗೆ ಸಿಗುತ್ತದೆ. ಜಾತಿ ಎಂಬುದು ಹಿಂದೂಗಳ ಪ್ರಾಣದುಸಿರು. ಆದರೆ ಹಿಂದೂಗಳು ಎಲ್ಲೆಡೆ ಗಾಳಿಯನ್ನು ಮಲಿನಗೊಳಿಸಿದ್ದಾರೆ. ಸಿಖ್ಖರು, ಮುಸಲ್ಮಾನರು ಮತ್ತು ಕ್ರೈಸ್ತರು ಎಲ್ಲರೂ ಮಲಿನ ಗಾಳಿಯ ಸೋಂಕಿಗೆ ತುತ್ತಾಗಿದ್ದಾರೆ. ಸೋಂಕಿಗೆ ತುತ್ತಾಗಿ ನರಳುತ್ತಿರುವ ಎಲ್ಲರಿಗೂ ನೀವು ನೆರವಾಗಬೇಕಿದೆ. ನಿಮ್ಮ ಕೆಲಸ ಸ್ವರಾಜ್‌ಗಿಂತ ದೊಡ್ಡದು. ಸ್ವರಾಜ್‌ಗಿಂತ ಹೆಚ್ಚು ಮುಖ್ಯವಾದದ್ದು’.
ಇದನ್ನೂ ಓದಿರಿ: ‘ಭಾರತದಲ್ಲಿ ಜಾತಿಗಳು’: ಅವುಗಳ ಉತ್ಪತ್ತಿ, ವಿಕಾಸ ಹೇಗಾಯಿತು?
‘ಹಿಂದೂ ಸಮಾಜವು ಜಾತಿಮುಕ್ತವಾದಾಗ ಮಾತ್ರ ತನ್ನನ್ನು ತಾನು ರಕ್ಷಿಸಿಕೊಳ್ಳುವ ಆಂತರಿಕ ಶಕ್ತಿಯನ್ನು ಗಳಿಸಿಕೊಳ್ಳುತ್ತದೆ. ಸ್ವರಾಜ್ ಎಂಬುದು ಹಿಂದೂಗಳ ಪಾಲಿಗೆ ಗುಲಾಮಗಿರಿಯತ್ತ ಇಡುವ ಹೆಜ್ಜೆಯಾಗಿಬಿಡುವ ಅಪಾಯವಿದೆ’.
‘ನಿಮ್ಮ್ ಕೆಲ್ಸ ಏನು’ ಅಂತ ಹಳ್ಳಿಪ್ರದೇಶದ ಪೊಲೀಸನನ್ನು ಕೇಳಿದರೆ, ‘ಶಾಂತಿಯನ್ನು ಕಾಪಾಡುವುದು’ ಎಂಬುದೇ ಆತನ ಉತ್ತರವಾಗಿರುತ್ತದೆ. ಬಹುತೇಕ ಸನ್ನಿವೇಶಗಳಲ್ಲಿ ಶಾಂತಿಯನ್ನು ಕಾಪಾಡುವುದು ಎಂಬುದರ ಅರ್ಥ ಜಾತಿವ್ಯವಸ್ಥೆಯನ್ನು ಎತ್ತಿ ಹಿಡಿಯುವುದು ಎಂದೇ ಆಗಿರುತ್ತದೆ. ದಲಿತರ ಆಶೋತ್ತರಗಳು ‘ಇಂತಹ ಶಾಂತಿ’ಯ ಭಂಗ ಎನಿಸಿಕೊಳ್ಳುತ್ತವೆ. ‘ಅನಾಇಲೇಷನ್ ಆಫ್ ಕಾಸ್ಟ್’ ಕೂಡ ಇಂತಹುದೇ ಒಂದು ಘನವಾದ ಶಾಂತಿಭಂಗ ಎಂದು ಬಣ್ಣಿಸುತ್ತಾರೆ ಬರೆಹಗಾರ್ತಿ ಅರುಂಧತಿ ರಾಯ್.

ಡಿ ಉಮಾಪತಿ
ಹಿರಿಯ ಪತ್ರಕರ್ತರು



