ಡಿಎಂಕೆ ಆಡಳಿತವಿದ್ದಾಗ ಮಸೂದೆಗಳು, ವಿಶ್ವವಿದ್ಯಾಲಯಗಳು ಹಾಗೂ ರಾಜ್ಯಪಾಲರ ಅಧಿಕಾರದ ವಿಚಾರದಲ್ಲಿ ನಿರಂತರ ಸಂಘರ್ಷಗಳನ್ನು ತಮಿಳುನಾಡು ಕಂಡಿತ್ತು. ಈಗ, ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಚಿತ್ರಣ ಬದಲಾಗಿದೆ. ವಿಧಾನಸಭೆ ಅಂಗೀಕರಿಸಿದ 13 ಮಸೂದೆಗಳ ಪೈಕಿ 12ಕ್ಕೆ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅತೀ ಕಡಿಮೆ ಅವಧಿಯಲ್ಲಿ ಒಪ್ಪಿಗೆ ನೀಡಿದ್ದಾರೆ.
ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲರ ಕಚೇರಿ ನಡುವೆ ಹಲವು ವರ್ಷಗಳಿಂದ ಕಾಣಿಸಿಕೊಂಡಿದ್ದ ಸಂಘರ್ಷದ ವಾತಾವರಣ ಈಗ ತೆಳುವಾಗುತ್ತಿರುವಂತೆ ತೋರುತ್ತಿದೆ. ಹೊಸ ಟಿವಿಕೆ ಸರ್ಕಾರದ ಅವಧಿಯಲ್ಲಿ ಎರಡೂ ಸಂವಿಧಾನಿಕ ಸಂಸ್ಥೆಗಳ ನಡುವಿನ ಸಂಬಂಧ ಹೆಚ್ಚು ಸಹಕಾರದ ಹಾದಿಯಲ್ಲಿ ಸಾಗುತ್ತಿರುವ ಸೂಚನೆಗಳು ಕಾಣಿಸುತ್ತಿವೆ. ರಾಜ್ಯ ವಿಧಾನಸಭೆ ಇತ್ತೀಚಿನ ಬಜೆಟ್ ಅಧಿವೇಶನದಲ್ಲಿ ಅಂಗೀಕರಿಸಿದ್ದ 13 ಮಸೂದೆಗಳ ಪೈಕಿ 12ಕ್ಕೆ ರಾಜ್ಯಪಾಲ ಆರ್.ವಿ ಅರ್ಲೇಕರ್ ಒಪ್ಪಿಗೆ ನೀಡಿದ್ದಾರೆ.
ವರದಿಗಳ ಪ್ರಕಾರ, ವಿಧಾನಸಭೆ ಅಂಗೀಕರಿಸಿದ್ದ ಹಲವು ಮಸೂದೆಗಳಿಗೆ ಕೇವಲ ನಾಲ್ಕು-ಐದು ದಿನಗಳಲ್ಲೇ ರಾಜ್ಯಪಾಲರ ಅಂಕಿತ ದೊರೆತಿದೆ. ಹಿಂದಿನ ವರ್ಷಗಳಲ್ಲಿ ಮಸೂದೆಗಳು ತಿಂಗಳುಗಟ್ಟಲೆ, ಕೆಲವೊಮ್ಮೆ ವರ್ಷಗಳವರೆಗೂ ರಾಜ್ಯಪಾಲರ ಕಚೇರಿಯಲ್ಲಿ ಬಾಕಿ ಉಳಿಯುತ್ತಿದ್ದವು. ಅದಕ್ಕೆ ವಿರುದ್ಧವಾಗಿ, ಈಗಿನ ವೇಗ ಗಮನ ಸೆಳೆದಿದೆ.
ರಾಜ್ಯಪಾಲರ ಅಂಕಿತ ಪಡೆದಿರುವ ಮಸೂದೆಗಳಲ್ಲಿ ತಮಿಳುನಾಡು ಹೂಡಿಕೆ ಉತ್ತೇಜನ ವ್ಯವಸ್ಥೆಗೆ ಸಂಬಂಧಿಸಿದ ತಿದ್ದುಪಡಿ, ನಗರ ಸ್ಥಳೀಯ ಸಂಸ್ಥೆಗಳ ನೇಮಕಾತಿಯನ್ನು ತಮಿಳುನಾಡು ಪಬ್ಲಿಕ್ ಸರ್ವಿಸ್ ಕಮಿಷನ್ ಮೂಲಕ ನಡೆಸುವ ವ್ಯವಸ್ಥೆ, ಮದ್ಯ ಮಾರಾಟದ ಮೇಲಿನ ತೆರಿಗೆಗೆ ಸಂಬಂಧಿಸಿದ ಬದಲಾವಣೆ, ಸ್ಥಳೀಯ ಸಂಸ್ಥೆಗಳ ವಿಶೇಷ ಅಧಿಕಾರಿಗಳ ಅವಧಿ ವಿಸ್ತರಣೆ, ಶಾಸಕರ ಭತ್ಯೆ ಮತ್ತು ಆಡಳಿತಾತ್ಮಕ ತಿದ್ದುಪಡಿಗಳಂತಹ ಹಲವು ವಿಷಯಗಳು ಸೇರಿವೆ.
ಆದರೆ, ಖಾಸಗಿ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ 13ನೇ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿಲ್ಲ. ಶಿಕ್ಷಣವು ಸಂವಿಧಾನದ ಸಮವರ್ತಿ ಪಟ್ಟಿಯ ವಿಷಯವಾಗಿರುವುದರಿಂದ ರಾಜ್ಯಪಾಲರು ಈ ಮಸೂದೆಯನ್ನು ರಾಷ್ಟ್ರಪತಿಯ ಪರಿಗಣನೆಗೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.
ಖಾಸಗಿ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆಯಲ್ಲಿ ಕೆಲವು ನಿಯಮಗಳನ್ನು ವಿಜಯ್ ಸರ್ಕಾರ ಸಡಿಲಿಸಿದೆ. ಈವರೆಗೆ ಇರುವ ಕಾನೂನಿನ ಪ್ರಕಾರ, ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ 100 ಎಕರೆ ವಿಸ್ತಾರ ಭೂಮಿ ಮತ್ತು 50 ಕೋಟಿ ರೂ. ಶಾಶ್ವತ ನಿಧಿ ಅಗತ್ಯವಿದೆ. ಆದರೆ, ಸರ್ಕಾರದ ಹೊಸ ತಿದ್ದುಪಡಿಯು ಚೆನ್ನೈ ಮಹಾನಗರ ಪ್ರದೇಶದಲ್ಲಿ ಕನಿಷ್ಠ ಭೂಮಿಯನ್ನು 12 ಎಕರೆ, ಇತರ ಮಹಾನಗರ ಪಾಲಿಕೆ ಮತ್ತು ನಗರಸಭೆ ಪ್ರದೇಶಗಳಲ್ಲಿ 18 ಎಕರೆ ಹಾಗೂ ಇತರ ಪ್ರದೇಶಗಳಲ್ಲಿ 25 ಎಕರೆಗೆ ಇಳಿಸುವ ಪ್ರಸ್ತಾವ ಹೊಂದಿದೆ. ಶಾಶ್ವತ ನಿಧಿಯ ಪ್ರಮಾಣವನ್ನೂ 25 ಕೋಟಿ ರೂ.ಗೆ ಇಳಿಸಲು ಕೂಡ ಪ್ರಾಸ್ತಾಪಿಸಿದೆ.
ಈ ತಿದ್ದುಪಡಿ ಮಸೂದೆಗೆ ವಿಪಕ್ಷಗಳು ಆಕ್ಷೇಪ ಎತ್ತಿವೆ. ಇಂತಹ ಸಡಿಲಿಕೆಯಿಂದ ಉನ್ನತ ಶಿಕ್ಷಣದ ವಾಣಿಜ್ಯೀಕರಣ ಹೆಚ್ಚಬಹುದು ಎಂದು ವಿರೋಧಿಸಿವೆ. ಆದರೆ, ಸರ್ಕಾರವು ವಿಶ್ವಮಟ್ಟದ ಖಾಸಗಿ ವಿಶ್ವವಿದ್ಯಾಲಯಗಳನ್ನು ಆಕರ್ಷಿಸುವ ಉದ್ದೇಶವನ್ನು ಮಸೂದೆ ಹೊಂದಿದೆ ಎಂದು ಸಮರ್ಥಿಸಿಕೊಂಡಿದೆ.
ಈ ಮಸೂದೆಗಳ ಮೇಲಿ ಚರ್ಚೆಗಳ ಹೊರತಾಗಿ ಅತೀ ಹೆಚ್ಚು ಗಮನ ಮತ್ತು ಮಹತ್ವ ಪಡೆದಿರುವುದು ರಾಜ್ಯಪಾಲರ ನಡೆ. 2021ರಿಂದ 2026ರವರೆಗಿನ ಡಿಎಂಕೆ ಸರ್ಕಾರದ ಅವಧಿಯಲ್ಲಿ ಆಗಿನ ರಾಜ್ಯಪಾಲ ಆರ್.ಎನ್ ರವಿ ಅವರು ಡಿಎಂಕೆ ಸರ್ಕಾರದ ವಿರುದ್ಧದ ನಿಲುವು ತಳೆದಿದ್ದರು ಎಂಬ ಗಂಭೀರ ಆರೋಪ ಎದುರಿಸಿದ್ದರು. ಡಿಎಂಕೆ ಸರ್ಕಾರ ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡುವಲ್ಲಿ ವಿಳಂಬ, ರಾಜ್ಯ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ನೇಮಕ, ಸರ್ಕಾರದ ನೀತಿಗಳು ಹಾಗೂ ವಿಧಾನಸಭೆಯ ರಾಜ್ಯಪಾಲರ ಭಾಷಣ ಸೇರಿದಂತೆ ಹಲವು ವಿಷಯಗಳಲ್ಲಿ ರಾಜ್ಯಪಾಲರ ನಡೆ ಆಕ್ಷೇಪಗಳಿಗೆ ಗುರಿಯಾಗಿತ್ತು.
ಮಾತ್ರವಲ್ಲದೆ, ಸುದೀರ್ಘ ಅವಧಿಗೆ ಮಸೂದೆಗಳನ್ನು ಬಾಕಿ ಇಟ್ಟಿದ್ದ ರಾಜ್ಯಪಾಲ ರವಿ ಅವರ ಧೋರಣೆ ವಿರುದ್ಧ ಡಿಎಂಕೆ ಸರ್ಕಾರ 2023ರಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. 2020ರಿಂದ 2023ರ ನಡುವೆ ವಿಧಾನಸಭೆ ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಿದ್ದ 12 ಮಸೂದೆಗಳ ಮೇಲೆ ದೀರ್ಘಕಾಲ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸರ್ಕಾರ ಆರೋಪಿಸಿತ್ತು. ಪ್ರಕರಣವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಂತರವೂ, 10 ಮಸೂದೆಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡಲು ನಿರಾಕರಿಸಿ ವಾಪಸ್ ಕಳಿಸಿದ್ದರು. ಅವುಗಳನ್ನು ವಿಧಾನಸಭೆ ಮರುಅಂಗೀಕರಿಸಿದ ಬಳಿಕವೂ ರಾಜ್ಯಪಾಲರು ಅಂಕಿತ ಹಾಕದೆ, ರಾಷ್ಟ್ರಪತಿಯ ಪರಿಗಣನೆಗೆ ಕಳುಹಿಸಿದ್ದರು.
ಈ ತಿಕ್ಕಾಟವನ್ನು ಗಮನಿಸಿದ್ದ ಸುಪ್ರೀಂ ಕೋರ್ಟ್, 2025ರ ಏಪ್ರಿಲ್ 8ರಂದು ಮಹತ್ವದ ತೀರ್ಪು ನೀಡಿತು. ಮರುಅಂಗೀಕರಿಸಲಾದ 10 ಮಸೂದೆಗಳನ್ನು ರಾಜ್ಯಪಾಲರು ರಾಷ್ಟ್ರಪತಿಗೆ ಕಳುಹಿಸಿದ ಕ್ರಮವನ್ನು ನ್ಯಾಯಾಲಯ ‘ತಪ್ಪು ಮತ್ತು ಕಾನೂನುಬಾಹಿರ’ ಎಂದು ಹೇಳಿತು. ಸಂವಿಧಾನದ 142ನೇ ವಿಧಿಯ ಅಧಿಕಾರವನ್ನು ಬಳಸಿದ ಕೋರ್ಟ್, ಆ ಮಸೂದೆಗಳನ್ನು ಅಂಗೀಕರಿಸಿತ್ತು. ಜೊತೆಗೆ, ಮಸೂದೆಗಳನ್ನು ವಿಲೇವಾರಿ ಮಾಡಲು ರಾಜ್ಯಪಾಲರಿಗೆ ಗರಿಷ್ಠ 3 ತಿಂಗಳ ಗಡುವು ನಿಗದಿ ಮಾಡಿತ್ತು.
ಈ ಲೇಖನ ಓದಿದ್ದೀರಾ?: ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ ಭವಿಷ್ಯ!
ಈ ಹಿನ್ನೆಲೆಯಲ್ಲೇ; ಈಗಿನ ಟಿವಿಕೆ ಸರ್ಕಾರ ಮತ್ತು ರಾಜ್ಯಪಾಲ ಅರ್ಲೇಕರ್ ನಡುವಿನ ಸಂಬಂಧ ಗಮನ ಸೆಳೆದಿದೆ. ಜೂನ್‌ನಲ್ಲಿ ನಡೆದ ಹೊಸ ವಿಧಾನಸಭೆಯ ಮೊದಲ ಅಧಿವೇಶನವೇ ಇದಕ್ಕೆ ಮೊದಲ ಸೂಚನೆ ನೀಡಿತ್ತು. ಅಧಿವೇಶನದ ಆರಂಭದಲ್ಲಿ ‘ತಮಿಳ್ ತಾಯಿ ವಾಳ್ತು’ ಹಾಡಿದ ನಂತರ ರಾಷ್ಟ್ರಗೀತೆ ನುಡಿಸಲಾಯಿತು; ಬಳಿಕ ರಾಜ್ಯಪಾಲರು ಸರ್ಕಾರ ಸಿದ್ಧಪಡಿಸಿದ್ದ ಪೂರ್ಣ ಭಾಷಣವನ್ನು ಯಾವುದೇ ಆಕ್ಷೇಪವಿಲ್ಲದೆ ಓದಿದರು.
ಆ ಸಂದರ್ಭದಲ್ಲಿ ಸ್ವತಃ ಅರ್ಲೇಕರ್ ಅವರೇ, ವಿಧಾನಸಭೆಯಲ್ಲಿ ಅಡೆತಡೆ ಇಲ್ಲದೆ ಭಾಷಣ ನಡೆದಿರುವುದು ‘ಹೊಸ ಯುಗದ ಆರಂಭ’ ಎಂದು ವರ್ಣಿಸಿದ್ದರು. ಸಂವಿಧಾನಿಕ ಸಂಸ್ಥೆಗಳ ನಡುವಿನ ಸಹಕಾರ ಮತ್ತು ಸಮನ್ವಯ ಆಡಳಿತಕ್ಕೆ ಮುಖ್ಯ ಎಂದು ಅವರು ಹೇಳಿದ್ದರು.
ಸದ್ಯದ ಮಟ್ಟಿಗೆ, ವಿಧಾನಸಭೆ ಅಂಗೀಕರಿಸಿದ 13 ಮಸೂದೆಗಳಲ್ಲಿ 12ಕ್ಕೆ ತ್ವರಿತವಾಗಿ ಒಪ್ಪಿಗೆ ಸಿಕ್ಕಿರುವುದು, ಡಿಎಂಕೆ ಆಡಳಿತದ ಕೊನೆಯ ವರ್ಷಗಳಲ್ಲಿ ಕಂಡಿದ್ದ ರಾಜಭವನ–ಸರ್ಕಾರ ಸಂಘರ್ಷಕ್ಕೆ ಹೋಲಿಸಿದರೆ ದೊಡ್ಡ ಆಡಳಿತಾತ್ಮಕ ಬದಲಾವಣೆಯನ್ನು ಸೂಚಿಸುತ್ತದೆ.



