ಭಾರತದ ಸಂವಿಧಾನದ Article 51A(g) ಪ್ರಕಾರ ಕಾಡು, ನದಿ, ಕೆರೆ ಹಾಗೂ ವನ್ಯಜೀವಿಗಳನ್ನೊಳಗೊಂಡ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಕರ್ತವ್ಯವಾಗಿದೆ. ಇದು ಭಾರತದ ಸಂವಿಧಾನ ನಮ್ಮ ಉಳಿವಿಗಾಗಿ ಕೊಟ್ಟಿರುವ ಬಹು ದೊಡ್ಡ ಕೊಡುಗೆ. ಸರ್ಕಾರವು ಈಗಲಾದರೂ ಪರಿಸರ ಸಂರಕ್ಷಣೆಗೆ ಶಾಶ್ವತ ಹಾಗೂ ಸಮಗ್ರ ನೀತಿಯನ್ನು ಜಾರಿಗೊಳಿಸಬೇಕು ಮತ್ತು ಜನರಲ್ಲಿ ಜಾಗೃತಿ ಮೂಡಿಸಬೇಕು ಎನ್ನುವುದೇ ಈ ಸತ್ಯಾಗ್ರಹದ ಮುಖ್ಯ ಉದ್ದೇಶವಾಗಿದೆ.
ಇಂದು ನಮ್ಮ ಕರುನಾಡಿನ ಪರಿಸರ ತೀವ್ರ ಸ್ವರೂಪದ ಅಪಾಯವನ್ನು ಎದುರಿಸುತ್ತಿದ್ದು, ನಮ್ಮ ನೆಲ, ಜಲ, ಕಾಡು, ಕರಾವಳಿ, ಅಳಿವೆ ಹಾಗೂ ಸಮುದ್ರಗಳು ಅಭಿವೃದ್ಧಿಯ ಹೆಸರಿನಲ್ಲಿ ನಾಶವಾಗುತ್ತಿವೆ. ಪಶ್ಚಿಮಘಟ್ಟಗಳ ಸೂಕ್ಷ್ಮ ಪರಿಸರದ ಮೇಲೆ ಛಪ್ಪನ್ನಾರು ಯೋಜನೆಗಳನ್ನು ಬಲವಂತವಾಗಿ ಹೇರಲಾಗುತ್ತಿದೆ. ರಾಜ್ಯದ ಇತರೆ ಭಾಗಗಳಲ್ಲೂ ಅಳಿದುಳಿದ ಗುಡ್ಡಬೆಟ್ಟಗಳು, ನದಿಗಳು ಮತ್ತು ವನ್ಯಜೀವಿ ಆವಾಸಸ್ಥಾನಗಳು ಸರ್ಕಾರಿ ಕೃಪಾಪೋಷಿತ ಯೋಜನೆಗಳಿಗೆ ಬಲಿಯಾಗುತ್ತಿವೆ.
ಪ್ಲ್ಯಾಸ್ಟಿಕ್ ಮಾಲಿನ್ಯ, ರಾಸಾಯನಿಕ ಕೃಷಿ, ಸ್ಪಷ್ಟ ವಲಸೆ ನೀತಿಯ ಕೊರತೆ ಹಾಗೂ ಪರಿಸರ ಕಾನೂನುಗಳ ಸಡಿಲ ಅನುಷ್ಠಾನದಿಂದಾಗಿ ಮುಂದಿನ ಪೀಳಿಗೆಗೆ ಸಲ್ಲಬೇಕಾದ ನ್ಯಾಯಯುತ ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಿದೆ. ಜತೆಗೆ ಮಣ್ಣು, ಗಾಳಿ, ನೀರು ಕಲುಷಿತಗೊಂಡು, ಬಿಸಿ ಅಲೆಗಳು, ಅತಿವೃಷ್ಟಿ-ಅನಾವೃಷ್ಟಿ, ಕಾಡ್ಗಿಚ್ಚು ಹಾಗೂ ಸಮುದ್ರದ ಆಮ್ಲೀಯತೆ ಹೆಚ್ಚಾಗುತ್ತಿದೆ. ಹಿಮಪರ್ವತಗಳು ಕರಗುತ್ತಿವೆ. ಜಾಗತಿಕ ಹವಾಮಾನ ಬದಲಾವಣೆಯ ದುಷ್ಪರಿಣಾಮ ಮತ್ತು ನೀರಿಲ್ಲದೆ ಕೃಷಿ ಭೂಮಿ ಅಕಾಲಿಕ ಬರಕ್ಕೆ ತುತ್ತಾಗಿ ಬಂಜರಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಶೇ. 68ರಷ್ಟು ಕೃಷಿ ಭೂಮಿ ಬಂಜರಾಗುವ ಭೀತಿ ಎದುರಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
2030-2050ರ ಮಧ್ಯೆ ಬಿಸಿಗಾಳಿ, ಅತಿವೃಷ್ಟಿ-ಅನಾವೃಷ್ಟಿ, ಬಿಸಿಲಿನ ತೀವ್ರತೆಯಂತಹ ಹಲವು ಕಾರಣಗಳಿಂದ ಹಾಗೂ ಅಪೌಷ್ಟಿಕತೆ ಮತ್ತು ಸಾಂಕ್ರಾಮಿಕ ರೋಗಗಳಿಂದ ಪ್ರತಿವರ್ಷವೂ 2.5 ರಿಂದ 3 ಲಕ್ಷ ಜನರು ಸಾವನ್ನಪ್ಪಬಹುದು. ಪ್ರತಿವರ್ಷವೂ ಸರಿಸುಮಾರು 500 ಲಕ್ಷ ಕೋಟಿಗೂ ಅಧಿಕ ಪ್ರಮಾಣದಲ್ಲಿ ಈ ಜಗತ್ತಿಗೆ ಆರ್ಥಿಕ ನಷ್ಟ ಆಗಬಹುದೆಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಐ.ಪಿ.ಸಿ.ಸಿ (Intergovernmental Panel on Climate Change) ವರದಿಯ ಪ್ರಕಾರ, ನಮ್ಮ ಜೊತೆಯೇ ಜೀವಿಸುತ್ತಿದ್ದ ಸುಮಾರು 42,100 ವಿವಿಧ ಪ್ರಭೇದದ ಜೀವಸಂಕುಲವೂ ನಶಿಸಿರುವುದಾಗಿ ತಿಳಿದುಬಂದಿದೆ. ಇದರಲ್ಲಿ ನದಿಗಳು, ಕೆರೆಕಟ್ಟೆಗಳು ಮುಂತಾದ ಸಿಹಿನೀರಿನ ಪ್ರದೇಶಗಳಲ್ಲಿ ಜೀವಿಸುವ ಜೀವಸಂಕುಲ, ಹಾವು, ಬೆಕ್ಕು, ಇಲಿ, ಹೆಗ್ಗಣ, ಇರುವೆ, ಕಪ್ಪೆ, ಎರೆಹುಳು, ಜಿಂಕೆಯಂತಹ ನೆಲವಾಸಿ ಜೀವಿಗಳು, ಪೊಲರ್ ಬೇರ್, ಕರಡಿ, ಹಿಮಕರಡಿಯಂತಹ ಜೀವಿಗಳೂ ಸೇರಿವೆ. ಅದರಲ್ಲೂ ಮುಖ್ಯವಾಗಿ ಪರಾಗಸ್ಪರ್ಶ ಕ್ರಿಯೆಗೆ ಸಹಕಾರಿಯಾಗುವ ಜೇನು, ಚಿಟ್ಟೆಯಂತಹ ಜೀವಿಗಳು ಸರಿಸುಮಾರು 40 ಪ್ರತಿಶತದಷ್ಟು ನಶಿಸಿವೆ ಎನ್ನುವಂತಹ ವರದಿಗಳು ನಮ್ಮ ಅಳಿವು-ಉಳಿವಿನ ಪ್ರಶ್ನೆಯನ್ನು ಎತ್ತುತ್ತಿವೆ.
ಭಾರತದ ಸಂವಿಧಾನದ Article 51A(g) ಪ್ರಕಾರ ಕಾಡು, ನದಿ, ಕೆರೆ ಹಾಗೂ ವನ್ಯಜೀವಿಗಳನ್ನೊಳಗೊಂಡ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಕರ್ತವ್ಯವಾಗಿದೆ. ಇದು ಭಾರತದ ಸಂವಿಧಾನ ನಮ್ಮ ಉಳಿವಿಗಾಗಿ ಕೊಟ್ಟಿರುವ ಬಹು ದೊಡ್ಡ ಕೊಡುಗೆ. ಸರ್ಕಾರವು ಈಗಲಾದರೂ ಪರಿಸರ ಸಂರಕ್ಷಣೆಗೆ ಶಾಶ್ವತ ಹಾಗೂ ಸಮಗ್ರ ನೀತಿಯನ್ನು ಜಾರಿಗೊಳಿಸಬೇಕು ಮತ್ತು ಜನರಲ್ಲಿ ಜಾಗೃತಿ ಮೂಡಿಸಬೇಕು ಎನ್ನುವುದೇ ಈ ಸತ್ಯಾಗ್ರಹದ ಮುಖ್ಯ ಉದ್ದೇಶವಾಗಿದೆ.

ವಿಚಾರಗಳು ಹಾಗೂ ಹಕ್ಕೊತ್ತಾಯಗಳು
ಪಶ್ಚಿಮಘಟ್ಟಗಳ ರಕ್ಷಣೆ: ದಟ್ಟವಾದ ಕಾಡನ್ನು ಒಳಗೊಂಡಿರುವ ಪಶ್ಚಿಮ ಘಟ್ಟಗಳು ಜೀವಸಂಕುಲದ ಉಸಿರು. ಇದು ನಾಶವಾದರೆ ಮಾನವ ಪ್ರಭೇದವೂ ಸೇರಿದಂತೆ ಸಕಲ ಜೀವರಾಶಿಗಳು, ನದಿ, ಬೆಟ್ಟಗುಡ್ಡಗಳು ನಾಶವಾಗುತ್ತವೆ. ಹಾಗಾಗಿ ಪಶ್ಚಿಮಘಟ್ಟಗಳ ಜೀವವೈವಿಧ್ಯಕ್ಕೆ ಹಾನಿ ಮಾಡುವ ಯಾವುದೇ ಯೋಜನೆಗಳನ್ನು ಕೈಗೊಳ್ಳಬಾರದು.
ಗೋಮಾಳ ಹಾಗೂ ಕುರುಚಲು ಕಾಡುಗಳ ಸಂರಕ್ಷಣೆ: ರಾಜ್ಯದಲ್ಲಿ ಸುಮಾರು 2.5 ಲಕ್ಷ ಹೆಕ್ಟೇರ್‌ಗೂ ಅಧಿಕ ಜಾಗದಲ್ಲಿರುವ ಸಣ್ಣಸಣ್ಣ ಗೋಮಾಳಗಳು, ಕಾಡುಗಳು, ಬೆಡ್ಡಗುಡ್ಡಗಳಲ್ಲಿನ ಕುರುಚಲು ಕಾಡುಗಳು, ಕಾಡುಗಳು, ಪರಿಸರ ಪ್ರಕೃತಿಯನ್ನು ಸಮತೋಲನದಲ್ಲಿಡಲು ಸಹಕಾರಿಯಾಗಿವೆ. ಇಂತಹ ಜಾಗವನ್ನು ಸಂರಕ್ಷಿಸಬೇಕು ಮತ್ತು ಅಲ್ಲಿ ಯಾವುದೇ ಪರಿಸರ ಹಾನಿಕಾರಕ ಯೋಜನೆಗಳು ಜಾರಿಗೊಳ್ಳದ ಹಾಗೇ ಕಾನೂನನ್ನು ಗಟ್ಟಿಗೊಳಿಸಬೇಕು.
ನದಿಗಳ ರಕ್ಷಣೆ ಹಾಗೂ ಒತ್ತುವರಿ ತಡೆ: ರಾಜ್ಯದಲ್ಲಿ ಹರಿಯುತ್ತಿರುವ ನದಿಮೂಲ ಬರಿದಾಗದಂತೆ ಹಾಗೂ ಅದು ಕಲುಷಿತವಾಗದಂತೆ ನೋಡಿಕೊಳ್ಳಬೇಕು. ನದಿ ಪಾತ್ರಗಳಲ್ಲಿ ಒತ್ತುವರಿಯಾಗಿರುವ ಭೂಮಿಯನ್ನು ತೆರವುಗೊಳಿಸಬೇಕು. ನದಿ ಪಾತ್ರದ ಒತ್ತುವರಿಯನ್ನು ‘ಕೊಲೆಯತ್ನ’ (Attempt to Murder) ಕೇಸ್‌ನಂತೆ ಪರಿಗಣಿಸಿ ಶಿಕ್ಷಾರ್ಹ ಅಪರಾಧವಾಗಿಸಬೇಕು. ಇದು ನದಿ ಜೀವದ ಉಳಿವಿಗಾಗಿ ಮಾತ್ರವಲ್ಲ; ಜೀವಸಂಕುಲದ ಉಳಿವಿಗೇ ಅನಿವಾರ್ಯವಾಗಿದೆ.
ಕೆರೆಗಳ ಪುನಶ್ಚೇತನ: ಸಾರ್ವಜನಿಕ ಜಮೀನು ನಿಗಮವು 2021ರಲ್ಲಿ ಪ್ರಕಟಿಸಿದ ಮಾಹಿತಿಯಂತೆ ರಾಜ್ಯದಲ್ಲಿ 40,483 ಕೆರೆಗಳಿವೆ ಎಂಬುದನ್ನು ತಿಳಿಸುತ್ತದೆ. ಈ ಕೆರೆಕಟ್ಟೆಗಳನ್ನು ಪುನಶ್ಚೇತನಗೊಳಿಸಿ, ಅಂತರ್ಜಲ ಮಟ್ಟ ಹೆಚ್ಚಿಸಲು ಒತ್ತುವರಿ ತಡೆಯುವ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಬೇಕು. ಇದರಿಂದ ಅಂತರ್ಜಲ ಮಟ್ಟದ ವೃದ್ದಿಗೆ ಸಹಕಾರಿಯಾಗುತ್ತದೆ.
ರಾಸಾಯನಿಕ ಮುಕ್ತ ಕೃಷಿ: ರಾಸಾಯನಿಕ ಮುಕ್ತ ಕೃಷಿಗೆ ಪ್ರತ್ಯೇಕ ವಿಶ್ವವಿದ್ಯಾನಿಲಯ ಹಾಗೂ ಕೃಷಿ ಪದ್ಧತಿಯನ್ನು ಉತ್ತೇಜಿಸುವ ಕಾರ್ಯಯೋಜನೆಗಳನ್ನು ಜಾರಿಗೆ ತರಬೇಕು. ಕೃಷಿ ಪದ್ಧತಿಗಾಗಿ ಇದರ ಪದ್ಧತಿಯನ್ನು ಪ್ರತ್ಯೇಕತೆಯ ಮೂಲಕ ಎಲ್ಲ ರೈತರಿಗೆ ಅಳವಡಿಸಿಕೊಳ್ಳಲು ಸಹಕಾರಿಯಾಗುವಂತಹ ಕಾರ್ಯಯೋಜನೆಗಳನ್ನು ಜಾರಿಗೊಳಿಸಬೇಕು. ಇದರಿಂದ ಅಪೌಷ್ಟಿಕತೆಯನ್ನು ದೂರಸರಿಸಲು ಅನುಕೂಲವಾಗುತ್ತದೆ.
ಹವಾಮಾನ ಕ್ರಿಯಾ ಯೋಜನೆ ಅನುಷ್ಠಾನ: ರಾಷ್ಟ್ರೀಯ (NAPCC) ಹಾಗೂ ರಾಜ್ಯ ಹವಾಮಾನ ಬದಲಾವಣೆ ಕ್ರಿಯಾ ಯೋಜನೆ ಬಗ್ಗೆ ಜನಸಾಮಾನ್ಯರಿಗೆ ತಿಳಿಸಬೇಕು. ಹಾಗೂ ಈ ಯೋಜನೆಗಳಲ್ಲಿ ಉಲ್ಲೇಖಿಸಿರುವ ಎಲ್ಲಾ ಕೆಲಸಕಾರ್ಯಗಳನ್ನು ಮುಂದಿನ 10 ವರ್ಷಗಳಲ್ಲಿ ಕಡ್ಡಾಯವಾಗಿ ಪೂರ್ಣಗೊಳಿಸಬೇಕು.
ವಿಕೇಂದ್ರೀಕೃತ ವಿಪತ್ತು ನಿರ್ವಹಣೆ: ಕರ್ನಾಟಕ ಹವಾಮಾನ ಬದಲಾವಣೆಯ ಕ್ರಿಯಾ ಯೋಜನೆಯು ಸ್ಥಳೀಕರಣಗೊಳ್ಳಬೇಕು. ವಿಪತ್ತು ನಿರ್ವಹಣೆ ಪಂಚಾಯಿತಿ ಮಟ್ಟದಲ್ಲಿ ಸ್ಥಳೀಯವಾಗಬೇಕು. ಇದಕ್ಕಾಗಿ 5ನೇ ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು. ಇವು ಒಟ್ಟಾರೆ ರಾಜ್ಯದ ಹಿತದೃಷ್ಠಿಗೆ ಸಂಬಂಧಿಸಿದ ವಿಷಯಗಳಾಗಿವೆ. ಇವುಗಳ ಜತೆ ಆಯಾ ಪ್ರದೇಶದಲ್ಲಿ ಪರಿಸರವನ್ನು ಹಾನಿಗೊಳಿಸುವ ಅಥವಾ ಹಾನಿಗೊಳಿಸುತ್ತಿರುವಂತಹ ಹತ್ತಾರು ಯೋಜನೆಗಳನ್ನು ಸತ್ಯಾಗ್ರಹ ನಡೆಯುವ ಸಮಯದಲ್ಲಿ ಕ್ರೋಡೀಕರಿಸಿ ನಂತರ ಸಂಪೂರ್ಣವಾದ ಪಟ್ಟಿಯನ್ನು ಸಿದ್ದಪಡಿಸುವ ಆಲೋಚನೆ ಇದೆ.
ಈ ಸತ್ಯಾಗ್ರಹಕ್ಕೆ ಎಲ್ಲಾ ಜಿಲ್ಲೆ, ತಾಲೂಕುಗಳಿಂದ ಆಸಕ್ತರು ಆಗಮಿಸಬಹುದು. ತಮ್ಮ ತಮ್ಮ ಭಾಗಗಳಲ್ಲಿ ಅಭಿವೃದ್ದಿಯ ಹೆಸರಿನಲ್ಲಿ ಪರಿಸರಕ್ಕಾಗುತ್ತಿರುವ ವಿಷಯಗಳನ್ನು ದಾಖಲೆ ಸಹಿತ ಪ್ರಸ್ತುತ ಪಡಿಸಬಹುದು(ಅಧಿಕೃತ ದಾಖಲೆ ಇದ್ದವರಿಗೆ ಮಾತ್ರ ಅವಕಾಶ ಇರುತ್ತದೆ). ಹಾಗೂ ಈ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಬಯಸುವ ಆಸಕ್ತರು ತಮ್ಮ ಹೆಸರನ್ನು ಮೊದಲೇ ನೋಂದಣಿ ಮಾಡಿಕೊಳ್ಳಬೇಕು. ಸಂಘ-ಸಂಸ್ಥೆಗಳಿಂದ ಒಂದು ತಂಡವಾಗಿ ಬರುವವರು ಎಷ್ಟು ಜನರು ಬರುತ್ತಾರೆಂದು ಕನಿಷ್ಠ 5 ದಿನಗಳ ಮುಂಚೆಯೇ ತಿಳಿಸಬೇಕು. ಇದರಿಂದ ನಮಗೆ ಮೂಲಸೌಕರ್ಯ ಒದಗಿಸಲು ಅನುಕೂಲವಾಗುತ್ತದೆ. ಈ ಶಾಂತಿಯುತ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವವರಿಗೆ ಊಟ-ತಿಂಡಿ ವ್ಯವಸ್ಥೆ ಮಾಡಲಾಗುತ್ತದೆ. ರಾತ್ರಿ ಅಲ್ಲಿಯೇ ತಂಗುವವರಿಗೆ ಫ್ರೀಡಂ ಪಾರ್ಕಿನಲ್ಲಿ ಅಥವಾ ಇತರೆ ಕಡೆ ತೀರ ಸರಳ ನೆಲಹಾಸಿನ ಅನುಕೂಲ ಮಾಡಲಾಗುತ್ತದೆ. ಹಾಗಾಗಿ ಸಾದಾ ಹಾಸು ಹೊದಿಕೆ, ಛತ್ರಿ ಇತ್ಯಾದಿಗಳನ್ನು ತರಬೇಕು. ಹೆಚ್ಚಿನ ಮಾಹಿತಿಗಾಗಿ 81978 56132(ಅವಿನಾಶ್ ಟಿ ಜಿ ಎಸ್) ಈ ಸಂಖ್ಯೆಗೆ ಸಂಪರ್ಕಿಸಬಹುದು.
ಇದನ್ನೂ ಓದಿದ್ದೀರಾ? ಉತ್ತರ ಕನ್ನಡ: ನಡುಮುರಿದ ಕಾಂಗ್ರೆಸ್ ಕಟ್ಟಬಲ್ಲರೆ ಹೊಸ ಅಧ್ಯಕ್ಷರು?
ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಸೆಪ್ಟೆಂಬರ್ 20ರಿಂದ 22 ರವರೆಗೆ 3 ದಿನಗಳು ಸತ್ಯಾಗ್ರಹ ನಡೆಯಲಿದ್ದು, ಇದು ಯಾವುದೇ ಒಂದು ಸಂಘಟನೆಗೆ ಸೀಮಿತವಾಗಿರುವ ಹೋರಾಟವಲ್ಲ. ಪರಿಸರ ಹೋರಾಟಗಾರರು, ಸಾಹಿತಿಗಳು, ವಿಜ್ಞಾನಿಗಳು, ರೈತ, ಕಾರ್ಮಿಕ, ಮಹಿಳಾ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ವಿದ್ಯಾರ್ಥಿಗಳು ಹಾಗೂ ಪರಿಸರ ಪ್ರೇಮಿಗಳನ್ನು ಒಳಗೊಳ್ಳುವ ವಿಶಾಲ ವೇದಿಕೆಯಾಗಿದೆ. ಇಲ್ಲಿ ಶಾಂತಿಯುತವಾದ ಸತ್ಯಾಗ್ರಹ ನಡೆಯುತ್ತದೆ. ಜತೆಗೆ ವಿಚಾರ ಮಂಥನವೂ ಇರುತ್ತದೆ.
ಬರಹ : ಅವಿನಾಶ್ ಟಿ ಜಿ ಎಸ್




